ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಮಹಿಳೆಯರು ಸೇರಿ ಮತ್ತೆ ನಾಲ್ವರ ಬಂಧನ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ರಾಷ್ಟ್ರ ರಾಜಧಾನಿ ದೆಹಲಿಗೂ ವಿಸ್ತರಿಸಿದ್ದು, ದೆಹಲಿ ಪೊಲೀಸರ ವಿಶೇಷ ಘಟಕವು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದೆ. ದಾಳಿಗೆ ಬಳಸಲಾದ ಶಸ್ತ್ರಾಸ್ತ್ರಗಳ ಖರೀದಿ, ಸಾಗಣೆ ಹಾಗೂ ಅವುಗಳನ್ನು ದಾಳಿಕೋರರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪದ ಮೇಲೆ ಕುನಾಲ್, ಸುಮಿತ್, ರಾಧಾ ಮತ್ತು ಬಬಿತಾ ಎಂಬವರನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ನಾಲ್ವರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಈ ಬಂಧನದೊಂದಿಗೆ ದಾಳಿಗೆ ಮುನ್ನ ಶಸ್ತ್ರಾಸ್ತ್ರಗಳನ್ನು ವ್ಯವಸ್ಥೆ ಮಾಡುವುದರಿಂದ ಹಿಡಿದು, ಅವುಗಳನ್ನು ಮುಂಬೈಗೆ ಸಾಗಿಸಿ ದಾಳಿಕೋರರಿಗೆ ತಲುಪಿಸುವವರೆಗೆ ಕಾರ್ಯನಿರ್ವಹಿಸಿದ್ದ ಜಾಲದ ಕುರಿತು ಮಹತ್ವದ ಸುಳಿವುಗಳು ಲಭ್ಯವಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಹಿಂದೆ ಎನ್ನಲಾದ ಅನಿಲ ಪಂಡಿತ್‌ನ ಪಾತ್ರ, ಹಣಕಾಸಿನ ವ್ಯವಹಾರಗಳು ಹಾಗೂ ಆರೋಪಿಗಳ ನಡುವಿನ ಸಂಪರ್ಕ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ.
ಜುಹುವಿನಲ್ಲಿ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ
ನಟ ಜಾಕಿ ಶ್ರಾಫ್ ಅವರ ಪುತ್ರ ಟೈಗರ್ ಶ್ರಾಫ್ ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಫುಟ್‌ಬಾಲ್ ಆಡಲು ತೆರಳಿದ್ದರು. ಅವರು ಮೈದಾನದಿಂದ ಹೊರಬರುವುದನ್ನು ನೋಡಲು ಅಭಿಮಾನಿಗಳು ಆವರಣದ ಗೇಟ್ ಬಳಿ ಜಮಾಯಿಸಿದ್ದರು. ಈ ವೇಳೆ ಅಭಿಮಾನಿಗಳ ಗುಂಪಿನ ನಡುವೆ ಸಾಗುತ್ತಿದ್ದ ಟೈಗರ್ ಶ್ರಾಫ್ ಅವರ ಬಿಎಂಡಬ್ಲ್ಯು ಕಾರಿನ ಮುಂಭಾಗದಿಂದ ಇಬ್ಬರು ವ್ಯಕ್ತಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು.
ದಾಳಿಕೋರರು ಕಾರಿನ ಮೇಲೆ ಸುಮಾರು ಆರರಿಂದ ಏಳು ಸುತ್ತು ಗುಂಡು ಹಾರಿಸಿದ್ದರು ಎನ್ನಲಾಗಿದೆ. ಅವರಲ್ಲಿ ಒಬ್ಬಾತ ನಟನಿಗೆ ಕೆಲವೇ ಇಂಚುಗಳ ಅಂತರದಲ್ಲಿದ್ದು, ನೇರವಾಗಿ ಅವರತ್ತ ಬಂದೂಕು ಗುರಿಯಿಟ್ಟಿದ್ದ. ಆದರೆ, ಬಂದೂಕು ಜಾಮ್ ಆದ ಕಾರಣ ಟೈಗರ್ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಟೈಗರ್‌ ಶ್ರಾಫ್‌ ಚಾಲಕ ಹಾಗೂ ಸ್ಥಳದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದರು.
ದೆಹಲಿಯಲ್ಲಿ ಇಬ್ಬರು ಮಹಿಳೆಯರು, ಸೋನಿಪತ್‌ನಲ್ಲಿ ಇಬ್ಬರ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕವು ರಾಧಾ ಮತ್ತು ಬಬಿತಾ ಅವರನ್ನು ಅಕ್ಟೋಬರ್ 20ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ಬಂಧಿಸಿದೆ. ಮತ್ತೊಂದೆಡೆ, ಹರಿಯಾಣದ ಸೋನಿಪತ್‌ನಲ್ಲಿ ಕುನಾಲ್ ಮತ್ತು ಸುಮಿತ್‌ನನ್ನು ವಶಕ್ಕೆ ಪಡೆಯಲಾಗಿದೆ.
ಕುನಾಲ್‌ಗೆ 21 ವರ್ಷ ಹಾಗೂ ಸುಮಿತ್‌ಗೆ 19 ವರ್ಷ ವಯಸ್ಸು. ಇಬ್ಬರೂ ಹರಿಯಾಣದ ಸೋನಿಪತ್ ನಿವಾಸಿಗಳು. ಬಬಿತಾ ಉತ್ತರ ಪ್ರದೇಶದ ಸೀತಾಪುರದವಳಾಗಿದ್ದು, ರಾಧಾ ಉತ್ತರ ಪ್ರದೇಶದ ಆಜಂಗಢ ಮೂಲದವಳು ಎಂದು ತಿಳಿದುಬಂದಿದೆ.
ಬಂಧಿತ ಕುನಾಲ್ ಇತ್ತೀಚೆಗಷ್ಟೇ ಮತ್ತೊಂದು ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಬಳಿಕ ಹರಿಯಾಣದ ಹರಸಾನಾ ಗ್ರಾಮದ ಪರಿಚಿತನೊಬ್ಬನ ಮೂಲಕ ಅನಿಲ ಪಂಡಿತ್ ಎಂಬಾತನ ಸಂಪರ್ಕಕ್ಕೆ ಬಂದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಟೈಗರ್ ಶ್ರಾಫ್ ಮೇಲಿನ ದಾಳಿಗೆ ಸೂಚನೆ ನೀಡಿದ್ದ ಎನ್ನಲಾದ ಅನಿಲ ಪಂಡಿತ್‌ ಜೊತೆ  ಕುನಾಲ್ ಸಂಪರ್ಕ ಬೆಳೆಸಿಕೊಂಡಿದ್ದ    ಕುನಾಲ್ ಆತನ ಸೂಚನೆಯಂತೆ ಅಮೃತಸರದಿಂದ ಒಂದು ಪಿಸ್ತೂಲ್ ಮತ್ತು 20 ಗುಂಡುಗಳನ್ನು ಸಂಗ್ರಹಿಸಿದ್ದ ಎಂಬುದು ಪೊಲೀಸರಿಗೆ ವಿಚಾರಣೆ ವೇಳೆ ಗೊತ್ತಾಗಿದೆ.
ಎನ್‌ಕ್ರಿಪ್ಟೆಡ್ ಆ್ಯಪ್ ಮೂಲಕ ಸಂಪರ್ಕ;
ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ ಬಳಿಕ ಕುನಾಲ್ ಸುಮಾರು ಎರಡು ತಿಂಗಳ ಹಿಂದೆ ರಾಧಾಳನ್ನು ಭೇಟಿಯಾಗಿದ್ದ ಎನ್ನಲಾಗಿದೆ. ತನ್ನ ಚಟುವಟಿಕೆಗಳ ಕುರಿತು ಆಕೆಗೆ ವಿವರಿಸಿ, ಪಿಸ್ತೂಲ್ ಅನ್ನು ಮುಂಬೈಗೆ ಸಾಗಿಸುವಂತೆ ಮನವೊಲಿಸಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.
ಅಕ್ಟೋಬರ್ 15ರಂದು, ಅಂದರೆ ಗುಂಡಿನ ದಾಳಿಗೆ ಮೂರು ದಿನಗಳ ಮೊದಲು, ರಾಧಾ ಮತ್ತು ಬಬಿತಾ ಅವರನ್ನು ದೆಹಲಿ ರೈಲು ನಿಲ್ದಾಣಕ್ಕೆ ಕರೆದೊಯ್ದಿದ್ದ ಕುನಾಲ್  ಅಲ್ಲಿಂದ ಇಬ್ಬರೂ ಮುಂಬೈಗೆ ತೆರಳುವ ರೈಲು ಹತ್ತಿಸಿದ್ದ. ಪಿಸ್ತೂಲ್ ಅನ್ನು ರಾಧಾಳ ಚೀಲದಲ್ಲಿ ಬಚ್ಚಿಟ್ಟು ಸಾಗಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಯಾಣದ ಅವಧಿಯಲ್ಲಿಯೂ ಕುನಾಲ್ ಇಬ್ಬರು ಮಹಿಳೆಯರ ಜೊತೆ ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಆ್ಯಪ್ ಮೂಲಕ ಸಂಪರ್ಕದಲ್ಲಿದ್ದ ಹಾಗೂ ಅನಿಲ ಪಂಡಿತ್ ನೀಡುತ್ತಿದ್ದ ಸೂಚನೆಗಳನ್ನು ಆತ ಮಹಿಳೆಯರಿಗೆ ರವಾನಿಸುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 17ರಂದು ರಾಧಾ ಮತ್ತು ಬಬಿತಾ ಮುಂಬೈನ ದಾದರ್ ರೈಲು ನಿಲ್ದಾಣ ತಲುಪಿ, ಅಲ್ಲಿನ ಹೋಟೆಲ್‌ನಲ್ಲಿ ತಂಗಿದ್ದರು. ಅಂದು ಬೆಳಗ್ಗೆ ಸುಮಾರು 11 ಗಂಟೆಗೆ ಅಪ್ರಾಪ್ತ ಬಾಲಕನೊಬ್ಬ ಹೋಟೆಲ್ ಸಮೀಪಕ್ಕೆ ಬಂದು, ರಾಧಾಳ ಬಳಿಯಿದ್ದ ಶಸ್ತ್ರಾಸ್ತ್ರಗಳ ಚೀಲವನ್ನು ಪಡೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಶಸ್ತ್ರಾಸ್ತ್ರಗಳನ್ನು ದಾಳಿಯಲ್ಲಿ ಭಾಗಿಯಾಗಿದ್ದವರಿಗೆ ತಲುಪಿಸುವಲ್ಲಿ ರಾಧಾ ಮತ್ತು ಬಬಿತಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಪೊಲೀಸರ ಬಲವಾದ ಶಂಕೆ. ಈ ಕುರಿತು ತನಿಖೆ ನಡೆಯುತ್ತಿದೆ.
ಅಕ್ಟೋಬರ್ 18ರಂದು ದಾಳಿ; ಅದೇ ದಿನ ಮಹಿಳೆಯರು ಮುಂಬೈನಿಂದ ವಾಪಸ್
ಅಕ್ಟೋಬರ್ 18ರಂದು ಸಂಜೆ ಸುಮಾರು 7 ಗಂಟೆಗೆ ಹೃತಿಕ್ ಅಲಿಯಾಸ್ ರೋಷನ್, ರೆಹಾನ್ ಮತ್ತು ಫೂಲ್ ಸಿಂಗ್ ಎಂಬ ಮೂವರು ಆರೋಪಿಗಳು ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ದಾಳಿಯ ಬಳಿಕ ರಾಧಾ ಮತ್ತು ಬಬಿತಾ ಅದೇ ದಿನ ದಾದರ್‌ನಿಂದ ಹರಿದ್ವಾರ ಎಕ್ಸ್‌ಪ್ರೆಸ್ ರೈಲಿನಲ್ಲಿ ದೆಹಲಿಗೆ ವಾಪಸಾಗಿದ್ದರು ಎನ್ನಲಾಗಿದೆ. ಬಳಿಕ ಅಕ್ಟೋಬರ್ 20ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ಇಬ್ಬರನ್ನೂ ಬಂಧಿಸಲಾಯಿತು. ಇದೇ ಪ್ರಕರಣದ ಶಸ್ತ್ರಾಸ್ತ್ರ ಪೂರೈಕೆ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕುನಾಲ್ ಮತ್ತು ಸುಮಿತ್‌ನನ್ನೂ ಹರಿಯಾಣದಸೋನಿಪತ್‌ನಲ್ಲಿ ಬಂಧಿಸಲಾಗಿದೆ.
ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ದಾಳಿಕೋರರು ಕೋಟಾದಲ್ಲಿ ಸೆರೆ
ಗುಂಡಿನ ದಾಳಿ ನಡೆಸಿದ ಆರೋಪಿಗಳಾದ ಹೃತಿಕ್ ಅಲಿಯಾಸ್ ರೋಷನ್ (22), ರೆಹಾನ್ (18) ಮತ್ತು ಫೂಲ್ ಸಿಂಗ್ (18) ಅವರನ್ನು ರಾಜಸ್ಥಾನದ ಕೋಟಾದಲ್ಲಿ ರೈಲಿನಲ್ಲಿ ಬಂಧಿಸಲಾಗಿತ್ತು. ನೇಪಾಳಕ್ಕೆ ಪರಾರಿಯಾಗಲು ಯೋಜಿಸುತ್ತಿದ್ದ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಹೃತಿಕ್ ಬಿಹಾರ ಮೂಲದವನಾಗಿದ್ದು, ರೆಹಾನ್ ಮತ್ತು ಫೂಲ್ ಸಿಂಗ್ ಹರಿಯಾಣದವರು ಎಂದು ತಿಳಿದುಬಂದಿದೆ.
ಟೈಗರ್ ಶ್ರಾಫ್ ಮೇಲಿನ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ ಎಂದು ವರದಿಯಾಗಿದೆ. ನಟ ಸಲ್ಮಾನ್ ಖಾನ್ ಅವರ ಜೊತೆ ಟೈಗರ್ ಶ್ರಾಫ್ ಹೊಂದಿರುವ ನಿಕಟತೆಯೇ ದಾಳಿಗೆ ಕಾರಣ ಎಂದು ಗ್ಯಾಂಗ್ ಹೇಳಿಕೊಂಡಿದೆ ಎನ್ನಲಾಗಿದೆ.
ಟೈಗರ್ ಶ್ರಾಫ್ ಆರಂಭಿಕ ಗುರಿಯಾಗಿರಲಿಲ್ಲವೇ?
ತನಿಖೆಗೆ ಸಂಬಂಧಿಸಿದ ಮೂಲಗಳನ್ನು ಉಲ್ಲೇಖಿಸಿ ಪ್ರಕಟವಾಗಿರುವ ವರದಿಗಳ ಪ್ರಕಾರ, ಟೈಗರ್ ಶ್ರಾಫ್ ದಾಳಿಕೋರರ ಆರಂಭಿಕ ಗುರಿಯಾಗಿರಲಿಲ್ಲ ಎನ್ನಲಾಗಿದೆ. ವಿಚಾರಣೆ ವೇಳೆ ಹೃತಿಕ್, ರೆಹಾನ್ ಮತ್ತು ಫೂಲ್ ಸಿಂಗ್ ತಾವು ಮುಂಬೈಗೆ ಬಂದಿದ್ದು ಮತ್ತೊಬ್ಬ ಪ್ರಭಾವಿ ವ್ಯಕ್ತಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಆ ವ್ಯಕ್ತಿ ಸಾಮಾನ್ಯವಾಗಿ ಭೇಟಿ ನೀಡುತ್ತಿದ್ದ ಪ್ರದೇಶಗಳನ್ನು ಪರಿಶೀಲಿಸಿದ ಬಳಿಕ, ಆತನನ್ನು ತಲುಪುವುದು ಸಾಧ್ಯವಾಗುವುದಿಲ್ಲ ಎಂಬ ನಿರ್ಧಾರಕ್ಕೆ ದಾಳಿಕೋರರು ಬಂದಿದ್ದರು ಎನ್ನಲಾಗಿದೆ. ಬಳಿಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ರೀಲ್ಸ್‌ಗಳ ಮೂಲಕ ಟೈಗರ್ ಶ್ರಾಫ್ ಅವರಿಗೆ ಪೊಲೀಸ್ ಭದ್ರತೆ ಇಲ್ಲ ಎಂಬ ಮಾಹಿತಿ ಪಡೆದ ಅವರು, ನಟನನ್ನು ಗುರಿಯಾಗಿಸಲು ನಿರ್ಧರಿಸಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ.
ಬಾಲಿವುಡ್‌ನಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಟೈಗರ್ ಶ್ರಾಫ್ ಅವರನ್ನು ಹತ್ಯೆ ಮಾಡಲು ಯೋಜಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಹೇಳಿಕೆಗಳ ಸತ್ಯಾಸತ್ಯತೆ ಹಾಗೂ ದಾಳಿಯ ಹಿಂದಿನ ನೈಜ ಉದ್ದೇಶದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.
ದಾಳಿಕೋರರಿಗೆ ₹50 ಸಾವಿರ ಮುಂಗಡ; ಉದ್ಯೋಗದ ಆಮಿಷ
ದಾಳಿಯಲ್ಲಿ ಭಾಗಿಯಾಗಿದ್ದ ಮೂವರಿಗೆ ₹50,000 ಮುಂಗಡ ಹಣ ನೀಡಲಾಗಿತ್ತು. ದಾಳಿ ಪೂರ್ಣಗೊಳಿಸಿದ ಬಳಿಕ ಹೆಚ್ಚುವರಿ ಹಣ ನೀಡುವುದರ ಜೊತೆಗೆ ಉದ್ಯೋಗದ ವ್ಯವಸ್ಥೆ ಮಾಡುವ ಭರವಸೆಯನ್ನೂ ನೀಡಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅನಿಲ ಪಂಡಿತ್ ಈ ಸಂಚಿನ ಪ್ರಮುಖ ವ್ಯಕ್ತಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತ ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲಿಂದಲೇ ಗ್ಯಾಂಗ್‌ನ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ದಾಳಿಯ ಹೊಣೆಯನ್ನು ಪಂಡಿತ್ ಆಡಿಯೊ ಸಂದೇಶವೊಂದರ ಮೂಲಕ ಹೊತ್ತುಕೊಂಡಿದ್ದ ಎಂದು ವರದಿಯಾಗಿದೆ.
ದಾಳಿಯ ಬಳಿಕವೂ ಮುಂದುವರಿದ ಸಂಪರ್ಕ; ಆರೋಪಿಗಳ ಪರಾರಿಗೆ ವ್ಯವಸ್ಥೆ?
ಗುಂಡಿನ ದಾಳಿಯ ಬಳಿಕ ದಾಳಿಕೋರರು ಮುಂಬೈನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅನಿಲ ಪಂಡಿತ್ ಕುನಾಲ್‌ಗೆ ತಿಳಿಸಿ ಆರೋಪಿಗಳನ್ನು ಮುಂಬೈನಿಂದ ಹೊರಗೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಕುನಾಲ್‌ಗೆ ಸೂಚನೆ ನೀಡಿದ್ದ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಈ ಬೆಳವಣಿಗೆಯಿಂದ ದಾಳಿಗೆ ಮುನ್ನ ಶಸ್ತ್ರಾಸ್ತ್ರಗಳನ್ನು ಪೂರೈಸುವುದು, ಅವುಗಳನ್ನು ಸಾಗಿಸಿ ದಾಳಿಕೋರರಿಗೆ ಹಸ್ತಾಂತರಿಸುವುದು ಹಾಗೂ ದಾಳಿಯ ಬಳಿಕ ಆರೋಪಿಗಳ ಪರಾರಿಗೆ ನೆರವು ನೀಡುವುದು ಸೇರಿದಂತೆ ಸಂಚಿನ ವಿವಿಧ ಹಂತಗಳಲ್ಲಿ ಸಮನ್ವಯ ನಡೆದಿರಬಹುದು ಎಂಬ ಅನುಮಾನ ಬಲಗೊಂಡಿದೆ.
ತನಿಖೆ ಚುರುಕು: ಶಸ್ತ್ರಾಸ್ತ್ರಗಳ ಮೂಲ, ಹಣಕಾಸಿನ ವ್ಯವಹಾರಗಳ ಪರಿಶೀಲನೆ
ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿರುವ ಕುನಾಲ್, ಸುಮಿತ್, ರಾಧಾ ಮತ್ತು ಬಬಿತಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮತ್ತೊಂದೆಡೆ, ರಾಜಸ್ಥಾನದ ಕೋಟಾದಲ್ಲಿ ಬಂಧಿತರಾಗಿರುವ ಹೃತಿಕ್, ರೆಹಾನ್ ಮತ್ತು ಫೂಲ್ ಸಿಂಗ್ ಅವರ ವಿಚಾರಣೆಯೂ ಪ್ರಕರಣದ ತನಿಖೆಯಲ್ಲಿ ಮಹತ್ವದ ಭಾಗವಾಗಿದೆ.
ದಾಳಿಗೆ ಬಳಸಲಾದ ಪಿಸ್ತೂಲ್ ಮತ್ತು ಗುಂಡುಗಳನ್ನು ಒದಗಿಸಿದವರು ಯಾರು, ಅವುಗಳನ್ನು ಅಮೃತಸರದಿಂದ ಮುಂಬೈಗೆ ಸಾಗಿಸುವಲ್ಲಿ ಯಾವ ಸಂಪರ್ಕ ಜಾಲ ಕಾರ್ಯನಿರ್ವಹಿಸಿತು, ಶಸ್ತ್ರಾಸ್ತ್ರಗಳನ್ನು ದಾಳಿಕೋರರಿಗೆ ತಲುಪಿಸಲು ಯಾರ ನೆರವು ಪಡೆಯಲಾಯಿತು ಹಾಗೂ ದಾಳಿಯ ಹಿಂದಿನ ಅಂತಿಮ ಉದ್ದೇಶವೇನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಅನಿಲ ಪಂಡಿತ್ ಸೇರಿದಂತೆ ಇತರ ಆರೋಪಿಗಳ ಪಾತ್ರ, ದಾಳಿಕೋರರಿಗೆ ಹಣ ಪಾವತಿಸಿದ ಮೂಲ, ಉದ್ಯೋಗದ ಆಮಿಷದ ಹಿಂದಿನ ಉದ್ದೇಶ ಮತ್ತು ದಾಳಿಯ ನಂತರ ಆರೋಪಿಗಳ ಪರಾರಿಗೆ ನಡೆದಿರಬಹುದಾದ ವ್ಯವಸ್ಥೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement