ವೀಡಿಯೊ..| ಪೆಟ್ರೋಲ್ ಹಣ ಕೊಡದೆ ಪರಾರಿಯಾಗುವ ಯತ್ನದಲ್ಲಿ ಬೈಕ್ ಅನ್ನು 7 ಕಿ.ಮೀ ಎಳೆದೊಯ್ದ ಥಾರ್ ಕಾರು….!

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹಣ ಪಾವತಿಸದೆ ಪರಾರಿಯಾಗಲು ಯತ್ನಿಸಿದ ಚಾಲಕನೊಬ್ಬ, ತನ್ನ ವಾಹನದ ಅಡಿಯಲ್ಲಿ ಸಿಲುಕಿದ ಮೋಟಾರ್ ಸೈಕಲ್ ಅನ್ನು ಹೆದ್ದಾರಿಯಲ್ಲಿ ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದೊಯ್ದ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಸಂಜೆ ಧೂಮ್ ಮಾಣಿಕ್ಪುರ ಪ್ರದೇಶದ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ಸಂಭವಿಸಿದೆ. ಸಿಕಂದರಾಬಾದ್ ಮೂಲದ 22 ವರ್ಷದ ಹರ್ಷ ಎಂಬಾತ ತನ್ನ ಕಪ್ಪು ಬಣ್ಣದ ಮಹೀಂದ್ರಾ ಥಾರ್ (Thar) ಎಸ್‌ಯುವಿಗೆ ಡೀಸೆಲ್ ಹಾಕಿಸಿಕೊಂಡಿದ್ದ. ಹಣ ಪಾವತಿಸುವಂತೆ ಕೇಳಿದಾಗ, ಆನ್‌ಲೈನ್‌ನಲ್ಲಿ ಹಣ ಕಳುಹಿಸುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.

ಪೆಟ್ರೋಲ್ ಬಂಕ್ ಉದ್ಯೋಗಿ ಕುಲದೀಪ ಶರ್ಮಾ ಕೂಡಲೇ ಮೋಟಾರ್ ಸೈಕಲ್‌ನಲ್ಲಿ ಜಿಟಿ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 91ರ ಉದ್ದಕ್ಕೂ ಆತನನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಥಾರ್ ವಾಹನವು ಶರ್ಮಾ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಕಾರಿನ ಮುಂಭಾಗದ ಅಡಿಯಲ್ಲಿ ಸಿಲುಕಿಕೊಂಡಿದೆ. ಆದರೂ ನಿಲ್ಲಿಸದ ಚಾಲಕ, ಸುಮಾರು 5 ರಿಂದ 7 ಕಿಲೋಮೀಟರ್‌ಗಳವರೆಗೆ ಬೈಕ್ ಸಮೇತ ವಾಹನವನ್ನು ಚಲಾಯಿಸಿದ್ದಾನೆ.
ಬೆಂಕಿ ಹೊತ್ತಿಕೊಂಡ ಬೈಕ್: ರಸ್ತೆಯ ಮೇಲೆ ಬೈಕ್ ಎಳೆದುಕೊಂಡು ಹೋದ ಘರ್ಷಣೆಯಿಂದಾಗಿ ಕಿಡಿ ಹೊತ್ತಿಕೊಂಡು, ಬೈಕ್ ಬೆಂಕಿಗೆ ಆಹುತಿಯಾಗಿದೆ. ಇದರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಲುಹಾರ್ಲಿ ಟೋಲ್ ಪ್ಲಾಜಾ ಬಳಿ ಥಾರ್ ವಾಹನವನ್ನು ತಡೆದು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ಉದ್ಯೋಗಿ ಕುಲದೀಪ ಶರ್ಮಾ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿ ಹರ್ಷ ವಿರುದ್ಧ ಇಂಧನ ಕಳ್ಳತನದ ಯತ್ನ, ಅಜಾಗರೂಕ ಚಾಲನೆ ಮತ್ತು ಜೀವ ಬೆದರಿಕೆಯಂತಹ ಗಂಭೀರ ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement