ಪತ್ನಿಗೆ ಗರ್ಭಪಾತ ; ದೈವ ಪ್ರಸನ್ನಗೊಳಿಸಲು ನೆರೆಮನೆಯವರ ತಲೆ ಕತ್ತರಿಸಿದ ವ್ಯಕ್ತಿ…!

ಭೋಪಾಲ್: ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಗುರುವಾರ ಬೆಳಗಿನ ಜಾವ ಧಾರ್ಮಿಕ ಆಚರಣೆಯೊಂದರಲ್ಲಿ 21 ವರ್ಷದ ವ್ಯಕ್ತಿಯೊಬ್ಬ ತನ್ನ ಇಬ್ಬರು ನೆರೆಹೊರೆಯವರ ಶಿರಚ್ಛೇದ ಮಾಡಿದ ಘಟನೆ ನಡೆದಿದೆ ಎಂದುವರದಿಯಾಗಿದೆ. ರಕ್ಷಣೆಗೆ ಬಂದ ಮತ್ತಿಬ್ಬರ ಮೇಲೆಯೂ ಹಲ್ಲೆ ನಡೆಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಆರೋಪಿಯನ್ನು ಛತ್ರಪತಿ ಸಿಂಗ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಗಳು ಈ ಹತ್ಯೆಗಳಿಗೆ ‘ಮಾಟಮಂತ್ರ’ಕ್ಕೆ ಸಂಬಂಧವಿರಬಹುದೆಂದು ಸೂಚಿಸುತ್ತವೆ. ಆರೋಪಿಯ ಪತ್ನಿಗೆ ಇತ್ತೀಚೆಗೆ ಗರ್ಭಪಾತವಾಗಿತ್ತು ಎಂಬುದನ್ನು ಪೊಲೀಸರು ಕಂಡುಕೊಂಡರು, ಇದರಿಂದಾಗಿ ದೈವವು “ಕೋಪಗೊಂಡಿದೆ” ಮತ್ತು ಅದನ್ನು ಸಮಾಧಾನಪಡಿಸಲು ಧಾರ್ಮಿಕ ಬಲಿದಾನದ ಅಗತ್ಯವಿದೆ ಎಂದು ಸಿಂಗ್ ನಂಬಿದ್ದ. ಅಲ್ಲದೆ, ತನಗೆ ಮಕ್ಕಳಾಗದಿರಲು ನೆರೆಹೊರೆಯವರ ಮಾಟಮಂತ್ರವೇ ಕಾರಣ ಎಂದು ಈತ ಬಲವಾಗಿ ನಂಬಿದ್ದ. ಇದೇ ಕಾರಣಕ್ಕೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂಜೆಯ ನೆಪದಲ್ಲಿ ಕರೆದು ಹತ್ಯೆ:
ಗುರುವಾರ ಛತ್ರಪತಿ ತನ್ನ ಮನೆಯಲ್ಲಿ ದೈವದ ಪೂಜೆಯನ್ನು ಆಯೋಜಿಸಿದ್ದ. ಇದಕ್ಕಾಗಿ ತನ್ನ ನೆರೆಮನೆಯವರಾದ ಫೂಲ್ ಕುಮಾರಿ ಸಿಂಗ್ (50) ಮತ್ತು ಕೇಮಲಾ ಸಿಂಗ್ (65)  ಅವರನ್ನು ಆಹ್ವಾನಿಸಿದ್ದ. ಪೂಜೆಗೆಂದು ದಂಪತಿ ಮನೆಗೆ ಬಂದ ತಕ್ಷಣ, ಛತ್ರಪತಿ ಏಕಾಏಕಿ ಕೊಡಲಿಯಿಂದ ಅವರ ಮೇಲೆ ದಾಳಿ ಮಾಡಿದ್ದಾನೆ. ತಡೆಯಲು ಬಂದ ಇತರರ ಮೇಲೂ ಹಲ್ಲೆ ನಡೆಸಲು ಯತ್ನಿಸಿದ ಆತ, ನಂತರ ಕೊಠಡಿಯೊಳಗೆ ಹೋಗಿ ಬೀಗ ಹಾಕಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಕೇವಲ್ ಸಿಂಗ್ ಮತ್ತು ಫುಲ್ಮತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಅಪರಾಧವು ಮಾಟಮಂತ್ರದ ನಂಬಿಕೆಗಳಿಗೆ ಸಂಬಂಧಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.  “ಪತ್ನಿಯ ಗರ್ಭಪಾತಕ್ಕೆ ನೆರೆಹೊರೆಯವರ ಮಾಟಮಂತ್ರವೇ ಕಾರಣ ಎಂದು ಆರೋಪಿ ಶಂಕಿಸಿದ್ದ. ಘಟನಾ ಸ್ಥಳದಲ್ಲಿ ಪೂಜೆಗೆ ಸಂಬಂಧಿಸಿದ ಕೆಲವು ವಸ್ತುಗಳು ಪತ್ತೆಯಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.  ಹೆಚ್ಚಿನ ತನಿಖೆ ನಡೆಯುತ್ತಿದೆ. ಪೂರ್ವನಿಯೋಜಿತ ಸಂಚಿನಂತೆ ಪೂಜೆಯ ನೆಪದಲ್ಲಿ ಅವರನ್ನು ಕರೆಸಿಕೊಂಡು ಈ ಭೀಕರ ಕೃತ್ಯ ಎಸಗಿದ್ದಾನೆ. ಮನೆಯ ಹೊರಗೆ ಪೂಜೆಗಾಗಿ ಮಣ್ಣಿನ ವೇದಿಕೆಯನ್ನು (ಚಬುತಾರಾ) ನಿರ್ಮಿಸಿರುವುದು ಕಂಡುಬಂದಿದೆ,” ಎಂದು ಸಿಂಗ್ರೌಲಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಪೂಜಾ ಸಾಮಗ್ರಿಗಳು ಪತ್ತೆಯಾಗಿದ್ದು, ಮೂಢನಂಬಿಕೆಯೇ ಕೊಲೆಗೆ ಪ್ರಚೋದನೆ ನೀಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ವಿಧಿವಿಜ್ಞಾನ ತಂಡ (Forensic Team) ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement