ತೆಹ್ರಾನ್ : ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಜುಲೈ 9ರಂದು ಪವಿತ್ರ ನಗರ ಮಶ್ಹದ್‌ನಲ್ಲಿರುವ ಇಮಾಮ್ ರೆಜಾ ದರ್ಗಾ ಸಮೀಪ ನಡೆಯಲಿದೆ. ಖಮೇನಿ ಅವರ ನಿಧನವಾಗಿ ನಾಲ್ಕು ತಿಂಗಳಿಗಿಂತ ಹೆಚ್ಚು ಸಮಯ ಕಳೆದ ಬಳಿಕ ಈಗ ಅಂತ್ಯಕ್ರಿಯೆ ನಡೆಯಲಿದೆ.
ಅಂತ್ಯಕ್ರಿಯೆಯ ಕಾರ್ಯಕ್ರಮಗಳು ಜುಲೈ 4ರಂದು ರಾಜಧಾನಿ ತೆಹ್ರಾನ್‌ನಲ್ಲಿ ಆರಂಭವಾಗಲಿದ್ದು, ಬಳಿಕ ಕ್ವೋಮ್ ನಗರ, ಇರಾಕ್‌ನ ಪವಿತ್ರ ಧಾರ್ಮಿಕ ತಾಣಗಳು ಹಾಗೂ ಕೊನೆಗೆ ಮಶ್ಹದ್‌ನಲ್ಲಿ ನಡೆಲಿದೆ. ಜುಲೈ 9ರಂದು ಅಲಿ ಖಮೇನಿ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು.
ಪಶ್ಚಿಮ ಏಷ್ಯಾದಲ್ಲಿ ಅತ್ಯಂತ ದೀರ್ಘಾವಧಿ ಅಧಿಕಾರದಲ್ಲಿದ್ದ ನಾಯಕರಲ್ಲಿ ಒಬ್ಬರಾಗಿದ್ದ 86 ವರ್ಷದ ಅಲಿ ಖಮೇನಿ ಅವರು ಫೆಬ್ರುವರಿ 28ರಂದು ಆರಂಭವಾದ ಯುದ್ಧದ ಮೊದಲ ದಿನ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದರು. ಆದರೆ ಈ ಅಂತ್ಯಕ್ರಿಯೆಯ ಪ್ರಮುಖ ಚರ್ಚೆಯ ವಿಷಯವೆಂದರೆ ಅವರ ಪುತ್ರ ಹಾಗೂ ಈಗ ಉತ್ತರಾಧಿಕಾರಿಯಾಗಿರುವ ಮೊಜ್ತಬಾ ಖಮೇನಿ ಅವರು ಸುಪ್ರೀಂ ನಾಯಕನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವರೇ ಎಂಬುದು. ಇದು ಈಗ ಎಲ್ಲರ ಗಮನ ಸೆಳೆದಿದೆ.
56 ವರ್ಷದ ಮೊಜ್ತಬಾ ಖಮೇನಿ ಕೂಡ ಫೆಬ್ರುವರಿ 28ರ ಅದೇ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹಲವಾರು ವರದಿಗಳ ಪ್ರಕಾರ, ಅವರಿಗೆ ಮುಖ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದವು.ಆ ದಾಳಿಯ ಬಳಿಕ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ, ದೂರದರ್ಶನದಲ್ಲಿ ಅಥವಾ ಧ್ವನಿ ಹಾಗೂ ವೀಡಿಯೊ ಸಂದೇಶಗಳ ಮೂಲಕವೂ ಕಾಣಿಸಿಕೊಂಡಿಲ್ಲ. ಅವರ ಹೆಸರಿನಲ್ಲಿ ಹೊರಬಂದಿರುವ ಎಲ್ಲ ಹೇಳಿಕೆಗಳನ್ನು ಸರ್ಕಾರಿ ದೂರದರ್ಶನದ ನಿರೂಪಕರು ಓದಿದ್ದಾರೆಅಥವಾ ಅಧಿಕೃತ ಮಾಧ್ಯಮಗಳ ಮೂಲಕ ಪ್ರಕಟಿಸಲಾಗಿದೆ.
ಈ ಹೇಳಿಕೆಗಳಲ್ಲಿ ಅವರು ಇರಾನ್‌ನ ಪ್ರಸ್ತುತ ನೀತಿಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದು, ಅಮೆರಿಕ ಹಾಗೂ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸಂಘರ್ಷದ ಸಂದರ್ಭದಲ್ಲಿ ರಾಷ್ಟ್ರೀಯ ಏಕತೆಯನ್ನು ಕಾಪಾಡಿಕೊಳ್ಳುವಂತೆ ಜನತೆಗೆ ಕರೆ ನೀಡಿದ್ದಾರೆ.
ರಾಷ್ಟ್ರೀಯ ನ್ಯಾಯಾಂಗ ವಾರದ ಅಂಗವಾಗಿ ಭಾನುವಾರ ಬಿಡುಗಡೆಗೊಂಡ ಅವರ ಇತ್ತೀಚಿನ ಸಂದೇಶದಲ್ಲಿ, ಇತ್ತೀಚಿನ ಯುದ್ಧಗಳ ವೇಳೆ ನಡೆದ ಅಪರಾಧಗಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೇಶದ ನ್ಯಾಯಾಂಗ ವ್ಯವಸ್ಥೆಗೆ ಸೂಚಿಸಿದ್ದಾರೆ. ಇದೇ ವೇಳೆ ತಮ್ಮ ತಂದೆಯ ಹತ್ಯೆಯನ್ನು ಉಲ್ಲೇಖಿಸಿ, ಅದರ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳು ಮೊಜ್ತಬಾ ಖಮೇನಿ ಮಾನಸಿಕವಾಗಿ ಸಂಪೂರ್ಣ ಆರೋಗ್ಯವಾಗಿದ್ದು, ದೇಶದ ಪ್ರಮುಖ ನಿರ್ಧಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಪದೇಪದೇ ಸ್ಪಷ್ಟನೆ ನೀಡಿದ್ದರೂ, ಅವರ ನಿರಂತರ ಗೈರುಹಾಜರಾತಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಅವರ ಬೆಂಬಲಿಗರ ಒಂದು ವರ್ಗ ಭದ್ರತಾ ಕಾರಣಗಳಿಂದಲೇ ಈ ರಹಸ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ ಎಂದು ವಾದಿಸುತ್ತಿದ್ದರೆ, ಮತ್ತೊಂದು ವರ್ಗ ಅವರ ಗಂಭೀರ ಗಾಯಗಳೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದಕ್ಕೆ ಕಾರಣವೆಂದು ನಂಬುತ್ತಿದೆ.
ಈ ಅಂತ್ಯಕ್ರಿಯೆ ಸಮಾರಂಭವು ಹೊಸ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ರಾಜಕೀಯ ಬದುಕಿನ ನಿರ್ಣಾಯಕ ಕ್ಷಣವಾಗುವ ಸಾಧ್ಯತೆ ಇದೆ.
ಇರಾನ್‌ನಲ್ಲಿ ಇಂತಹ ಪ್ರಮುಖ ಸರ್ಕಾರಿ ಸಮಾರಂಭಗಳನ್ನು ಸಾಮಾನ್ಯವಾಗಿ ರಾಷ್ಟ್ರೀಯ ಏಕತೆ ಮತ್ತು ಆಡಳಿತದ ಬಲವನ್ನು ಪ್ರದರ್ಶಿಸಲು ಬಳಸಲಾಗುತ್ತದೆ. ಅಲಿ ಖಮೇನಿ ಅವರು ತಮ್ಮ ಪೂರ್ವಾಧಿಕಾರಿ ರುಹೊಲ್ಲಾ ಖೊಮೇನಿ ಅವರ ಸ್ಮರಣಾ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದರು. ಇದೀಗ ಮೊಜ್ತಬಾ ಕೂಡ ಅದೇ ಸಂಪ್ರದಾಯವನ್ನು ಮುಂದುವರಿಸುತ್ತಾರೆಯೇ ಎಂಬುದನ್ನು ಎಲ್ಲರೂ ಕಾತರದಿಂದ ಗಮನಿಸುತ್ತಿದ್ದಾರೆ.
ಮೊಜ್ತಬಾ ಖಮೇನಿ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರೆ, ಅದು ಅವರ ಆರೋಗ್ಯದ ಬಗ್ಗೆ ಬೆಂಬಲಿಗರಲ್ಲಿ ವಿಶ್ವಾಸ ಮೂಡಿಸುವುದರ ಜೊತೆಗೆ ಅವರ ಅಧಿಕಾರವನ್ನು ಮತ್ತಷ್ಟು ಬಲಪಡಿಸಲಿದೆ. ಕಳೆದ ಹಲವು ತಿಂಗಳುಗಳಿಂದ ಮುಂದುವರಿದಿರುವ ಅನಿಶ್ಚಿತತೆಯ ನಡುವೆ ಆಡಳಿತದಲ್ಲಿ ನಿರಂತರತೆ ಇದೆ ಎಂಬ ಸಂದೇಶವನ್ನೂ ಅದು ನೀಡಲಿದೆ. ಆದರೆ ಅವರು ಮತ್ತೊಮ್ಮೆ ಸಾರ್ವಜನಿಕವಾಗಿ ಗೈರಾಗಿದ್ದರೆ, ಅವರ ಆರೋಗ್ಯ ಸ್ಥಿತಿ ಹಾಗೂ ಇರಾನ್‌ನ ನಾಯಕತ್ವದ ಭವಿಷ್ಯದ ಬಗ್ಗೆ ಕೇಳಿಬರುತ್ತಿರುವ ಪ್ರಶ್ನೆಗಳು ಇನ್ನಷ್ಟು ಬಲಗೊಳ್ಳುವ ಸಾಧ್ಯತೆ ಇದೆ.


ನಿಮ್ಮ ಕಾಮೆಂಟ್ ಬರೆಯಿರಿ