20 ಮಂದಿ ಸಾವಿಗೀಡಾದ ಆಂಧ್ರ ಬಸ್ ದುರಂತ ಹೇಗಾಯ್ತು..? ‘ಕುಡಿದು ಓಡಿಸಿದ ಬೈಕ್ ಸವಾರ…ಚಾಲಕನ ನಕಲಿ ಸರ್ಟಿಫಿಕೆಟ್‌…

ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ 20 ಅಮಾಯಕ ಜೀವಗಳು ಬಲಿಯಾಗಿದ್ದು, ಈ ಘಟನೆಯು ರಸ್ತೆ ಸುರಕ್ಷತಾ ಪ್ರಕ್ರಿಯೆಗಳಲ್ಲಿನ ಗಂಭೀರ ಲೋಪಗಳನ್ನು ಬಯಲು ಮಾಡಿದೆ.
ನಕಲಿ ಶೈಕ್ಷಣಿಕ ಪ್ರಮಾಣ ಪತ್ರದ ಆಧಾರದ ಮೇಲೆ ಚಾಲನಾ ಪರವಾನಗಿ ಪಡೆದ ಬಸ್ ಚಾಲಕ, ಕುಡಿದ ಮತ್ತಿನಲ್ಲಿ ಅಜಾಗರೂಕವಾಗಿ ವಾಹನ ಚಲಾಯಿಸಿದ ಬೈಕ್ ಸವಾರ ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬಸ್ ನವೀಕರಿಸಿದ ಟ್ರಾವೆಲ್ ಕಂಪನಿ – ಇವೆಲ್ಲವೂ ಈ ದುರಂತಕ್ಕೆ ಕಾರಣಗಳಾಗಿವೆ.
ನಕಲಿ ದಾಖಲೆ ಬಳಸಿದ ಬಸ್ ಚಾಲಕನ ಬಂಧನ
ಭೀಕರ ಅಪಘಾತಕ್ಕೆ ಒಳಗಾದ ಡಬಲ್ ಡೆಕ್ಕರ್ ಬಸ್‌ನ ಚಾಲಕ ಮಿರಿಯಾಲ ಲಕ್ಷ್ಮಯ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ 5ನೇ ತರಗತಿಯವರೆಗೆ ಓದಿದ್ದ ಲಕ್ಷ್ಮಯ್ಯ, 10ನೇ ತರಗತಿಯ ನಕಲಿ ಪ್ರಮಾಣಪತ್ರವನ್ನು ಬಳಸಿ ಹೆವಿ ವೆಹಿಕಲ್ ಚಾಲನಾ ಪರವಾನಗಿ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಸಾರಿಗೆ ವಾಹನಗಳ ಚಾಲಕರಿಗೆ ಕನಿಷ್ಠ 8ನೇ ತರಗತಿಯವರೆಗೆ ಓದಿರಬೇಕು ಎಂಬ ನಿಯಮವಿದ್ದರೂ, ಇಂತಹ ನಿಯಮಗಳು ಹಲವೆಡೆ ಉಲ್ಲಂಘನೆಯಾಗುತ್ತಿರುವುದು ಈ ಘಟನೆಯಿಂದ ಬೆಳಕಿಗೆ ಬರುವಂತಾಗಿದೆ.

ಕರ್ನೂಲ್  ಬಸ್‌  ದುರಂತ ಸಂಭವಿಸಿದ್ದು ಹೇಗೆ?
ಶುಕ್ರವಾರ ತಡರಾತ್ರಿ ಕರ್ನೂಲ್‌ನ ಚಿನ್ನ ತೇಕೂರು ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಅಪಘಾತಕ್ಕೀಡಾದರು. ರಸ್ತೆಯಿಂದ ಸ್ಕಿಡ್ ಆದ ದ್ವಿಚಕ್ರ ವಾಹನವು ಡಿವೈಡರ್‌ಗೆ ಅಪ್ಪಳಿಸಿತು. ಬೈಕ್ ಓಡಿಸುತ್ತಿದ್ದ ಶಿವಶಂಕರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಎರ್ರಿ ಸ್ವಾಮಿ ಗಾಯಗೊಂಡರು.
ಅಪಘಾತದ ನಂತರ, ಎರ್ರಿ ಸ್ವಾಮಿ ಅವರು ಶಿವಶಂಕರ ಅವರ ದೇಹವನ್ನು ರಸ್ತೆಯಿಂದ ಎಳೆದೊಯ್ದು, ಆತ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡರು. ಆದರೆ ಬೈಕ್ ಅನ್ನು ರಸ್ತೆಯಿಂದ ಸರಿಸುವ ಮುನ್ನವೇ, ವೇಗವಾಗಿ ಬಂದ ಡಬಲ್ ಡೆಕ್ಕರ್ ಬಸ್ಸು ಬೈಕ್‌ಗೆ ಡಿಕ್ಕಿ ಹೊಡೆದು, ಅದನ್ನು ತನ್ನಡಿಯಲ್ಲಿ ಎಳೆದುಕೊಂಡು ಹೋಯಿತು. ಘರ್ಷಣೆಯಿಂದಾಗಿ, ಬೈಕ್‌ನ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ. ಇದರಿಂದ ಬೆಂಕಿ ಹೊತ್ತಿಕೊಂಡು ಇಡೀ ಬಸ್ ಆವರಿಸಿದೆ. ದುರಂತದಲ್ಲಿ ಹತ್ತೊಂಬತ್ತು ಪ್ರಯಾಣಿಕರು ಸುಟ್ಟು ಕರಕಲಾಗಿದ್ದು, ಕೆಲವರು ಮಾತ್ರ ತುರ್ತು ಕಿಟಕಿಯ ಮೂಲಕ ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಬೈಕ್ ಸವಾರರು ಕುಡಿದಿದ್ದರು: ಪೊಲೀಸ್  
ಬೈಕ್‌ನಲ್ಲಿದ್ದ ಶಿವಶಂಕರ ಮತ್ತು ಸ್ವಾಮಿ ಇಬ್ಬರೂ ಮದ್ಯಪಾನ ಮಾಡಿದ್ದರು ಎಂದು ವಿಧಿವಿಜ್ಞಾನ ವರದಿಯಿಂದ ದೃಢಪಟ್ಟಿದೆ ಎಂದು ಕರ್ನೂಲ್ ಶ್ರೇಣಿಯ ಡಿಐಜಿ ತಿಳಿಸಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ಇಬ್ಬರೂ ಮನೆಗೆ ಹೊರಟಿದ್ದು, ಶಿವಶಂಕರ ಪೆಟ್ರೋಲ್ ಬಂಕ್‌ನಿಂದ ಹೊರಡುವಾಗ ಅಜಾಗರೂಕತೆಯಿಂದ ಬೈಕ್ ಓಡಿಸಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಅವರು “ಇದು ಕೇವಲ ರಸ್ತೆ ಅಪಘಾತವಲ್ಲ, ನಿರ್ಲಕ್ಷ್ಯದ ಕ್ರಿಮಿನಲ್ ಕೃತ್ಯ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕುಡಿದ ಚಾಲಕರು ರಸ್ತೆಗಳ ಮೇಲಿನ ಭಯೋತ್ಪಾದಕರು. 20 ಅಮಾಯಕರ ಜೀವ ತೆಗೆದ ಕರ್ನೂಲ್ ಬಸ್ ಅಪಘಾತವನ್ನು ನಿಜವಾದ ಅರ್ಥದಲ್ಲಿ ಅಪಘಾತ ಎನ್ನಲಾಗದು. ಇದು ಕುಡುಕ ಬೈಕರ್‌ನ ಬೇಜವಾಬ್ದಾರಿ ವರ್ತನೆಯಿಂದ ಉಂಟಾದ ತಡೆಯಬಹುದಾಗಿದ್ದ ಸಾಮೂಹಿಕ ಹತ್ಯೆ,” ಎಂದು ಅವರು ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಸ್ ಚಾಲಕನ ನಿರ್ಲಕ್ಷ್ಯವೇನು?
ಕುಡಿದ ಬೈಕರ್ ಅಪಘಾತಕ್ಕೆ ಕಾರಣವಾದರೂ, ಬಸ್ ಚಾಲಕನ ವಿರುದ್ಧವೂ ನಿರ್ಲಕ್ಷ್ಯದ ಪ್ರಕರಣ ಮುಂದುವರಿದಿದೆ ಎಂದು ಕರ್ನೂಲ್ ಪೊಲೀಸ್ ಮುಖ್ಯಸ್ಥ ವಿಕ್ರಾಂತ್ ಪಾಟೀಲ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಈ ಐಷಾರಾಮಿ ಬಸ್‌ ಡಿಕ್ಕಿ ಹೊಡೆಯುವ ಮೊದಲು, ಹೆದ್ದಾರಿಯಲ್ಲಿ ಬಂದ ಎರಡು ಬಸ್‌ಗಳು ಶಿವಶಂಕರನ ಮೋಟಾರ್‌ ಸೈಕಲ್ ಅನ್ನು ತಪ್ಪಿಸಿ ಸಾಗಿದ್ದವು. ರಸ್ತೆಯ ಮೇಲೆ ನಿಂತಿದ್ದ ಅಡೆತಡೆಯನ್ನು ನೋಡಲು ಚಾಲಕ ವಿಫಲನಾಗಿದ್ದು, ಇದು ಆತನ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಬಸ್‌ನ ಮಾಲೀಕರಾದ ಟ್ರಾವೆಲ್ ಕಂಪನಿಯ ವಿರುದ್ಧವೂ ತನಿಖೆ ನಡೆಯುತ್ತಿದೆ. ಬಸ್ಸನ್ನು ಸ್ಲೀಪರ್ ಕೋಚ್‌ಗೆ ಅಕ್ರಮವಾಗಿ ಪರಿವರ್ತಿಸಿದ್ದು, ಸುರಕ್ಷತಾ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಸಂದೇಹಾತ್ಮಕ ಮರು-ನೋಂದಣಿ ತಂತ್ರಗಳನ್ನು ಬಳಸಲಾಗಿದೆ ಮತ್ತು ಬಸ್ಸಿನಲ್ಲಿ ತುರ್ತು ಉಪಕರಣಗಳಾದ ಕಿಟಕಿ ಒಡೆಯುವ ಹ್ಯಾಮರ್‌ಗಳ ಕೊರತೆ ಇತ್ತು ಎಂಬ ಅಂಶಗಳು ಹೆಚ್ಚಿನ ಸಾವಿಗೆ ಕಾರಣವಾಗಿವೆ.
ಜೀವಕ್ಕೆ ಅಪಾಯ ತರುವ ಪ್ರಯಾಣ
ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಪ್ರಕ್ರಿಯೆಗಳನ್ನು ಹೇಗೆ ನಿಯಮಿತವಾಗಿ ಉಲ್ಲಂಘಿಸಲಾಗುತ್ತದೆ ಮತ್ತು ಪ್ರಯಾಣಿಕರನ್ನು ಅಪಾಯಕ್ಕೆ ತಳ್ಳಲಾಗುತ್ತದೆ ಎಂಬುದಕ್ಕೆ ಕರ್ನೂಲ್ ದುರಂತವು ಮತ್ತೊಂದು ಜ್ವಲಂತ ಉದಾಹರಣೆಯಾಗಿದೆ. ಚಾಲನಾ ಪರೀಕ್ಷೆ ಇಲ್ಲದೆ ಪರವಾನಗಿ ಪಡೆಯುವುದು ಆತಂಕಕಾರಿಯಾಗಿದೆ. ಕುಡಿದು ವಾಹನ ಚಲಾಯಿಸುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement