ಮುಂಬೈ: ಮುಂಬೈನ ವಸೈನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದ ನಂತರ ಸೇಡಿಗಾಗಿ ಅಟೋ ರಿಕ್ಷಾ ಚಾಲಕನೊಬ್ಬ ತಾನು ಜಗಳವಾಡಿದ ವ್ಯಕ್ತಿಯ ನಾಲ್ಕು ವರ್ಷದ ಪುಟ್ಟ ಮಗನ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಮಗುವನ್ನು ಕಾಲು ಹಿಡಿದು ಎತ್ತಿ ನೆಲಕ್ಕೆ ಅಪ್ಪಳಿಸಿ, ಕಬ್ಬಿಣದ ರಾಡ್ಗೆ ಆತನ ತಲೆ ಜಜ್ಜಿ ಭೀಕರವಾಗಿ ವರ್ತಿಸಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೋಮವಾರ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ವಸೈನ ವಸತಿ ಸಂಕೀರ್ಣವೊಂದರಲ್ಲಿ ಈ ಘಟನೆ ನಡೆದಿದೆ. ಆರೋಪಿ ಆಟೋ ಚಾಲಕ ಸಂದೀಪ ಪವಾರ್ ಮತ್ತು ಮಗುವಿನ ತಂದೆ ಅತುಲ್ ಕೊಂಡ್ಹಾರೆ ನಡುವೆ ಸಣ್ಣ ವಿಷಯಕ್ಕೆ ಮಾತಿನ ಚಕಮಕಿ ನಡೆದಿತ್ತು. ಈ ಸಿಟ್ಟನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಸಂದೀಪ, ಅತುಲ್ ಅವರ ನಾಲ್ಕು ವರ್ಷದ ಮಗನ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ.
ಮಗು ಇತರ ಮಕ್ಕಳೊಂದಿಗೆ ಪಾರ್ಕ್ ಮಾಡಲಾಗಿದ್ದ ಆಟೋ ರಿಕ್ಷಾದ ಬಳಿ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಸಂದೀಪ ಪವಾರ್ ಮಗುವಿನ ಕಾಲುಗಳನ್ನು ಹಿಡಿದು ಎತ್ತಿ ಜೋರಾಗಿ ನೆಲಕ್ಕೆ ಅಪ್ಪಳಿಸಿದ್ದಾನೆ.
ಅಷ್ಟಕ್ಕೇ ನಿಲ್ಲದ ಆತ, ಮಗುವನ್ನು ಎತ್ತಿಕೊಂಡು ಕಟ್ಟಡದ ಒಳಗೆ ಹೋಗಿ ಅಲ್ಲಿ ಮಗುವಿನ ತಲೆಯನ್ನು ಕಬ್ಬಿಣದ ರಾಡ್ಗೆ ಬಲವಾಗಿ ಜಜ್ಜಿ, ಪುನಃ ನೆಲಕ್ಕೆ ಎಸೆದಿದ್ದಾನೆ. ಈ ಅಮಾನವೀಯ ಕೃತ್ಯದ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಮಗುವಿನ ಸ್ಥಿತಿ ಗಂಭೀರ
ಈ ಭೀಕರ ಹಲ್ಲೆಯಿಂದಾಗಿ ಬಾಲಕನ ತಲೆಗೆ ತೀವ್ರವಾದ ಗಾಯಗಳಾಗಿವೆ. ಮಗುವನ್ನು ತಕ್ಷಣವೇ ಮೀರಾ ರೋಡ್ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯು (ICU) ನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸಂದೀಪ ಪವಾರ್ನನ್ನು ಬಂಧಿಸಿದ್ದಾರೆ.
“ಕೇವಲ ಹಳೆಯ ಜಗಳದ ಸೇಡಿಗಾಗಿ ಈ ಕೃತ್ಯ ಎಸಗಲಾಗಿದೆ. ಆರೋಪಿಯ ಮೇಲೆ ‘ಕೊಲೆ ಯತ್ನ’ (Attempt to Murder) ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸ್ಥಳೀಯ ನ್ಯಾಯಾಲಯವು ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಅಪ್ಪನ ಮೇಲಿನ ಸಿಟ್ಟಿಗೆ ಅಮಾಯಕ ಮಗುವನ್ನು ಬಲಿಪಶು ಮಾಡಲು ಯತ್ನಿಸಿದ ಈ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ