
ವಾಷಿಂಗ್ಟನ್: ಮೂರು ದಶಕಗಳಿಗಿಂತಲೂ ಹೆಚ್ಚು ಅವಧಿಯ ನಂತರ, ಅಮೆರಿಕವು ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಪುನರಾರಂಭಿಸುವ ಸೂಚನೆ ನೀಡಿದೆ. ಇದು ಶೀತಲ ಸಮರದ ನಂತರ ಜಗತ್ತು ಮತ್ತೊಮ್ಮೆ ಹೊಸ ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆಯತ್ತ ಜಾರಬಹುದೆಂಬ ಆತಂಕಕ್ಕೆ ಕಾರಣವಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೆಂಟಗನ್ಗೆ “ತಕ್ಷಣವೇ” ಪರೀಕ್ಷೆಯನ್ನು ಪುನಃ ಆರಂಭಿಸಲು ಸೂಚನೆ ನೀಡಿದ್ದಾರೆ. ರಷ್ಯಾ ಮತ್ತು ಚೀನಾದಂತಹ ಇತರ ಪರಮಾಣು ರಾಷ್ಟ್ರಗಳು ತಮ್ಮ ಪರಮಾಣು ಶಸ್ತ್ರಾಗಾರಗಳನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ನಿರ್ಧಾರಕ್ಕೆ ಕಾರಣವೇನು?
“ಇತರ ದೇಶಗಳ ಪರೀಕ್ಷಾ ಕಾರ್ಯಕ್ರಮಗಳ ಕಾರಣದಿಂದಾಗಿ, ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಸಮಾನ ಆಧಾರದ ಮೇಲೆ ಪರೀಕ್ಷಿಸಲು ನಾನು ಯುದ್ಧ ಇಲಾಖೆಗೆ ಸೂಚಿಸಿದ್ದೇನೆ,” ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ‘ಬ್ಯುರೆವೆಸ್ಟ್ನಿಕ್’ ಕ್ರೂಸ್ ಕ್ಷಿಪಣಿ ಮತ್ತು ‘ಪೋಸಿಡಾನ್’ ನೀರೊಳಗಿನ ಡ್ರೋನ್ ಸೇರಿದಂತೆ ಎರಡು ಪರಮಾಣು ಚಾಲಿತ ವಿತರಣಾ ವ್ಯವಸ್ಥೆಗಳ ಯಶಸ್ವಿ ಪ್ರಯೋಗಗಳನ್ನು ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಟ್ರಂಪ್ ಅವರು ರಷ್ಯಾ ಮತ್ತು ಚೀನಾ ರಹಸ್ಯವಾಗಿ ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.

33 ವರ್ಷಗಳ ವಿರಾಮ ಅಂತ್ಯ…
ಈ ನಿರ್ದೇಶನವು 1992 ರಿಂದ ಜಾರಿಯಲ್ಲಿದ್ದ ಅಮೆರಿಕದ 33 ವರ್ಷಗಳ ಪರಮಾಣು ಪರೀಕ್ಷೆಯ ಮೇಲಿನ ಸ್ವಯಂಪ್ರೇರಿತ ನಿಷೇಧವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿದೆ. ಅಮೆರಿಕದ ಈ ನಡೆ ಭಾರತಕ್ಕೆ ಹೊಸ ಕಾರ್ಯತಂತ್ರದ ಗೊಂದಲವನ್ನು ಸೃಷ್ಟಿಸಿದೆ. ಭಾರತವು ಕಳೆದ ಕಾಲು ಶತಮಾನದಿಂದ ಪರಮಾಣು ಪರೀಕ್ಷೆಯ ಮೇಲೆ ಸ್ವಯಂಪ್ರೇರಿತ ಮೊರಾಟೋರಿಯಂ (ನಿಷೇಧ) ಮತ್ತು ವಿಶ್ವಾಸಾರ್ಹ ಕನಿಷ್ಠ ಪ್ರತಿಬಂಧಕ (Credible Minimum Deterrence) ನೀತಿಗೆ ಬದ್ಧವಾಗಿದೆ. ಆದರೆ, ಪಾಕಿಸ್ತಾನ ಮತ್ತು ಚೀನಾ ತಮ್ಮ ಶಸ್ತ್ರಾಗಾರಗಳನ್ನು ಆಧುನೀಕರಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತವು ತನ್ನ ನಿಲುವನ್ನು ಮರುಪರಿಶೀಲಿಸುವ ಪ್ರಶ್ನೆಯನ್ನು ಎದುರಿಸಬೇಕಾಗಬಹುದು. ಭಾರತದ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜ ಶುಕ್ಲಾ (ನಿವೃತ್ತ) ಅವರು, “ಟ್ರಂಪ್ ಪರಮಾಣು ಪರೀಕ್ಷೆ ಮರು ಪ್ರಾರಂಭಿಸುವುದನ್ನು ಘೋಷಿಸಿದ್ದಾರೆ. ರಷ್ಯಾ ಪರಮಾಣು ಚಾಲಿತ ಕ್ಷಿಪಣಿಗಳನ್ನು ಉಡಾಯಿಸಿದೆ. ಭಾರತದ ಪರಮಾಣು ನಿಲುವಿಗೆ ಮರುಪರಿಶೀಲನೆ/ಪುನರ್ರಚನೆಯ ಅಗತ್ಯವಿದೆಯೇ?” ಎಂದು ಕೇಳಿದ್ದಾರೆ
ಭಾರತದ ಪರಮಾಣು ಶಸ್ತ್ರಾಗಾರವು ಸುಮಾರು 180 ಪರಮಾಣು ಸಿಡಿತಲೆಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಹೋಲಿಸಿದರೆ ಪಾಕಿಸ್ತಾನ 170 ಮತ್ತು ಚೀನಾ 600 ಪರಮಾಣು ಸಿಡಿತಲೆಗಳನ್ನು ಹೊಂದಿವೆ. ಜಾಗತಿಕ ಪರಮಾಣು ಶಸ್ತ್ರಾಗಾರ (2025ರಂತೆ)ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ (FAS) ಪ್ರಕಾರ, ಒಂಬತ್ತು ದೇಶಗಳು ಒಟ್ಟಾಗಿ ಸುಮಾರು 12,241 ಪರಮಾಣು ಅಸ್ತ್ರಗಳನ್ನು ಹೊಂದಿವೆ.
ರಷ್ಯಾ: ಒಟ್ಟು 5,459 ಪರಮಾಣು ಸಿಡಿತಲೆಗಳು (ಮಿಲಿಟರಿ ದಾಸ್ತಾನುಗಳಲ್ಲಿ 4,309)
ಅಮೆರಿಕ : 5,177 ಪರಮಾಣು ಸಿಡಿತಲೆಗಳು (3,700 ದಾಸ್ತಾನುಗಳು)
ಚೀನಾ: 600
ಫ್ರಾನ್ಸ್: 290
ಯುನೈಟೆಡ್ ಕಿಂಗ್ಡಮ್: 225
ಭಾರತ: 180
ಪಾಕಿಸ್ತಾನ: 170
ಇಸ್ರೇಲ್: 90
ಉತ್ತರ ಕೊರಿಯಾ: 50 ಪರಮಾಣು ಸಿಡಿತಲೆಗಳನ್ನು ಹೊಂದಿದೆ. ಅಮೆರಿಕ ಮತ್ತು ರಷ್ಯಾ ಒಟ್ಟಾಗಿ ಒಟ್ಟಾರೆ ಜಾಗತಿಕ ಪರಮಾಣು ಶಸ್ತ್ರಾಸ್ತ್ರಗಳಸುಮಾರು 87%ರಷ್ಟನ್ನು ಹೊಂದಿವೆ.
ಸಮಗ್ರ ಪರಮಾಣು ಪರೀಕ್ಷಾ-ನಿಷೇಧ ಒಪ್ಪಂದ (CTBT)ಪರಿಣಾಮಕಾರಿತ್ವ
1996ರಲ್ಲಿ ಅಳವಡಿಸಲಾದ ಈ ಒಪ್ಪಂದವು ಮಿಲಿಟರಿ ಮತ್ತು ನಾಗರಿಕ ಉದ್ದೇಶಗಳಿಗಾಗಿ ಎಲ್ಲಾ ಪರಮಾಣು ಸ್ಫೋಟಗಳನ್ನು ನಿಷೇಧಿಸುತ್ತದೆ. ಇದಕ್ಕೆ 187 ದೇಶಗಳು ಸಹಿ ಮಾಡಿವೆ, 178 ದೇಶಗಳು ಅದನ್ನು ಅನುಮೋದಿಸಿವೆ. ಆದರೆ ಒಪ್ಪಂದವು ಇನ್ನೂ ಜಾರಿಗೆ ಬಂದಿಲ್ಲ ಏಕೆಂದರೆ ಅಮೆರಿಕ, ಚೀನಾ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಎಂಟು ಪ್ರಮುಖ ರಾಷ್ಟ್ರಗಳು ಎರಡೂ ಹಂತಗಳನ್ನು ಪೂರ್ಣಗೊಳಿಸಿಲ್ಲ. ಅಮೆರಿಕ ಸಹಿ ಹಾಕಿದ್ದರೂ, ಅದನ್ನು ಎಂದಿಗೂ ಅನುಮೋದಿಸಿಲ್ಲ, ರಷ್ಯಾ 2023 ರಲ್ಲಿ ತನ್ನ ಅನುಮೋದನೆಯನ್ನು ಹಿಂತೆಗೆದುಕೊಂಡಿದೆ.
ಸ್ವರೂಪದ ಬಗ್ಗೆ ಅಸ್ಪಷ್ಟತೆ
ಆದರೆ 1990ರ ದಶಕದ ನಂತರ ಈವರೆಗೆ ಯಾರೂ ಅಣುಬಾಂಬ್ ಪರೀಕ್ಷೆ ನಡೆಸಿಲ್ಲ. 1990ರ ದಶಕದ ನಂತರ ಅಸಲಿಗೆ ಅಣುಬಾಂಬ್ ಪರೀಕ್ಷೆ ನಡೆಸಿದ ಏಕೈಕ ದೇಶ ಉತ್ತರ ಕೊರಿಯಾ ಮಾತ್ರ. ಅದು ಕೂಡ 2017ರ ನಂತರ ಅಂತಹ ಯಾವುದೇ ಪರೀಕ್ಷೆ ನಡೆಸಿಲ್ಲ. ಜಗತ್ತಿನ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಸಾಮಾನ್ಯವಾಗಿ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಕ್ಷಿಪಣಿಗಳಂತಹ ವ್ಯವಸ್ಥೆಗಳನ್ನು (delivery systems) ಮಾತ್ರ ಪರೀಕ್ಷಿಸುತ್ತವೆ.
ಟ್ರಂಪ್ ಅವರ ಘೋಷಣೆಗೆ ಶ್ವೇತಭವನದಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲ. ಹಾಗಾಗಿ, ಟ್ರಂಪ್ ಅವರು ಅಣ್ವಸ್ತ್ರ ಪೂರೈಕೆ ವ್ಯವಸ್ಥೆಗಳನ್ನು ಪರೀಕ್ಷಿಸುವ ಕುರಿತು ಮಾತನಾಡುತ್ತಿದ್ದಾರೆಯೇ ಅಥವಾ ಅಣುಬಾಂಬ್ನಂತಹ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನೇ ಪರೀಕ್ಷಿಸುವ ಕುರಿತು ಮಾತನಾಡುತ್ತಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತಮ್ಮ ಪೋಸ್ಟ್ ನಂತರ ನೀಡಿದ ಹೇಳಿಕೆಗಳಲ್ಲಿ, ಅಣು ಪರೀಕ್ಷಾ ಸ್ಥಳಗಳನ್ನು ನಂತರ ನಿರ್ಧರಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ