ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ನ್ಯೂಜಿಲೆಂಡ್ ತನ್ನ ದುರ್ಬಲ ಸ್ಥಳೀಯ ವನ್ಯಜೀವಿಗಳನ್ನು ರಕ್ಷಿಸುವ ಮಹತ್ವದ ಉದ್ದೇಶದಿಂದ 2050ರ ವೇಳೆಗೆ ದೇಶಾದ್ಯಂತ ಇರುವ ಎಲ್ಲ ಕಾಡು ಬೆಕ್ಕುಗಳನ್ನು (Feral Cats) ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಯೋಜನೆ ರೂಪಿಸಿದೆ.
ಈ ಕುರಿತು ಮಾತನಾಡಿರುವ ಸಂರಕ್ಷಣಾ ಸಚಿವ ತಾಮಾ ಪೊಟಾಕಾ (Tama Potaka) ಅವರು ಕಾಡು ಬೆಕ್ಕುಗಳನ್ನು “ಕಲ್ಲು ಹೃದಯದ ಕೊಲೆಗಡುಕರು (“stone cold killers)” ಎಂದು ಬಣ್ಣಿಸಿದ್ದಾರೆ. ಪಕ್ಷಿಗಳು, ಬಾವಲಿಗಳು, ಹಲ್ಲಿಗಳು ಮತ್ತು ಕೀಟಗಳಂತಹ ಸ್ಥಳೀಯ ಪ್ರಭೇದಗಳಿಗೆ ಅಪಾಯ ಒಡ್ಡುವ ಆಕ್ರಮಣಕಾರಿ ಜೀವಿಗಳನ್ನು ಗುರಿಯಾಗಿಸಲು 2016ರಲ್ಲಿ ಪ್ರಾರಂಭಿಸಲಾದ ‘ಪ್ರಿಡೇಟರ್ ಫ್ರೀ 2050’ (Predator Free 2050) ಪಟ್ಟಿಗೆ ಕಾಡು ಬೆಕ್ಕುಗಳನ್ನು ಸೇರಿಸಲಾಗುವುದು ಎಂದು ಅವರು ದೃಢಪಡಿಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಕಾಡು ಬೆಕ್ಕುಗಳು ಕಾಡು ಬೇಟೆಗಾರರು, ಅವು ಮನುಷ್ಯರಿಂದ ಸ್ವತಂತ್ರವಾಗಿ ವಾಸಿಸುತ್ತವೆ, ಸಾಕು ಬೆಕ್ಕುಗಳಿಗಿಂತ ಭಿನ್ನವಾಗಿ, ಬೇಟೆಯಾಡುವ ಮೂಲಕ ಸಂಪೂರ್ಣವಾಗಿ ಬದುಕುಳಿಯುತ್ತವೆ. ಭೂಮಿಯ ಮೇಲೆ ಬೇರೆಲ್ಲೂ ಕಾಣಸಿಗದ ಹಲವಾರು ವಿಶಿಷ್ಟ ಪ್ರಭೇದಗಳಿಗೆ ನೆಲೆಯಾಗಿರುವ ನ್ಯೂಜಿಲೆಂಡ್ನ ಜೀವವೈವಿಧ್ಯವನ್ನು ಉಳಿಸಲು, ಅವುಗಳ ಸಂಖ್ಯೆಯನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದೆ.
ಸ್ಥಳೀಯ ಪ್ರಭೇದಗಳಿಗೆ ತೀವ್ರ ಬೆದರಿಕೆ
ಈ ಕಾಡು ಬೆಕ್ಕುಗಳು ಸ್ಥಳೀಯ ಅಪರೂಪದ ಜೀವಿಗಳನ್ನು ಬೇಟೆಯಾಡುವುದರಿಂದ, ರಕಿಯುರಾ (ಸ್ಟೀವರ್ಟ್ ದ್ವೀಪ)ದಲ್ಲಿ ಕಂಡುಬರುತ್ತಿದ್ದ ಪುಕುನುಯಿ (ದಕ್ಷಿಣ ಡಾಟೆರೆಲ್) ಎಂಬ ಸ್ಥಳೀಯ ಹಕ್ಕಿಯು ಈಗ ಬಹುತೇಕ ಅಳಿವಿನ ಅಂಚಿಗೆ ತಲುಪಿದೆ ಎಂದು ಹೇಳಿದ್ದಾರೆ.
ಸಚಿವರು ನೀಡಿದ ಮತ್ತೊಂದು ಉದಾಹರಣೆ ಎಂದರೆ, ಉತ್ತರ ದ್ವೀಪದ ಓಹಾಕುನೆ ಸಮೀಪದಲ್ಲಿ ಕೇವಲ ಒಂದು ವಾರದಲ್ಲಿ 100ಕ್ಕೂ ಹೆಚ್ಚು ಸಣ್ಣ ಬಾಲದ ಬಾವಲಿಗಳನ್ನು (short-tailed bats) ಈ ಕಾಡು ಬೆಕ್ಕುಗಳು ಕೊಂದುಹಾಕಿವೆ.
ಪ್ರಸ್ತುತ, ನ್ಯೂಜಿಲೆಂಡ್ನ ಕಾಡುಗಳಲ್ಲಿ ಮತ್ತು ಕರಾವಳಿಯ ದ್ವೀಪಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಕಾಡು ಬೆಕ್ಕುಗಳು ವಾಸಿಸುತ್ತಿವೆ. ಇವು ಬಾಲ ಸಹಿತವಾಗಿ 1 ಮೀಟರ್ವರೆಗೆ ಬೆಳೆಯಬಹುದು ಮತ್ತು 7 ಕೆಜಿ ವರೆಗೆ ತೂಕವಿರಬಹುದು.
“ಈಗ ನ್ಯೂಜಿಲೆಂಡ್ನ ಆಟಿಯೊರೊವಾದಲ್ಲಿ ಕೃಷಿಭೂಮಿಗಳಿಂದ ಕಾಡುಗಳವರೆಗೆ ಈ ಕಾಡು ಬೆಕ್ಕುಗಳು ಎಲ್ಲೆಡೆ ಕಂಡುಬರುತ್ತವೆ. ಅವು ಸ್ಥಳೀಯ ಪಕ್ಷಿಗಳು, ಬಾವಲಿಗಳು, ಹಲ್ಲಿಗಳು ಮತ್ತು ಕೀಟಗಳ ಮೇಲೆ ಭಾರಿ ಒತ್ತಡವನ್ನು ಹೇರುತ್ತಿವೆ,” ಎಂದು ಪೊಟಾಕಾ ಹೇಳಿದ್ದಾರೆ.
ರೋಗಗಳ ಹರಡುವಿಕೆ ಮತ್ತು ಸಾಕುಪ್ರಾಣಿಗಳ ಮೇಲಿನ ಪ್ರಭಾವ
ಕಾಡು ಬೆಕ್ಕುಗಳು ಬೇಟೆಯಾಡುವುದರ ಜೊತೆಗೆ, ಟಾಕ್ಸೊಪ್ಲಾಸ್ಮೊಸಿಸ್ (toxoplasmosis) ನಂತಹ ರೋಗಗಳನ್ನು ಸಹ ಹರಡುತ್ತವೆ. ಇದು ಡಾಲ್ಫಿನ್ಗಳಿಗೆ ಹಾನಿ ಮಾಡಬಹುದು, ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಜಾನುವಾರುಗಳಿಗೆ ಸೋಂಕು ತಗುಲಿ ರೈತರಿಗೆ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು.
ಸಚಿವರು ಈ ಸಂದರ್ಭದಲ್ಲಿ ಒಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ. ನ್ಯೂಜಿಲೆಂಡ್ನಲ್ಲಿ ಬೆಕ್ಕುಗಳನ್ನು ಪ್ರೀತಿಯಿಂದ ಸಾಕುವ ಹೆಮ್ಮೆಯ ಮಾಲೀಕರಿದ್ದಾರೆ. ಈ ‘ಪ್ರಿಡೇಟರ್ ಫ್ರೀ’ ಗುರಿಯ ಅಡಿಯಲ್ಲಿ ಸಾಕು ಬೆಕ್ಕುಗಳನ್ನು ಸೇರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ನಿರ್ಮೂಲನೆಗೆ ಹೊಸ ವಿಧಾನದ ಪ್ರಯೋಗ
ಈ ಹಿಂದೆ ಮುಂಗುಸಿ, ಕೀಟಗಳು, ಇಲಿಗಳು ಮತ್ತು ಆಲ್ಗಂಜಿಗಳಂತಹ ಆಕ್ರಮಣಕಾರಿ ಜೀವಿಗಳನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದ ಸರ್ಕಾರದ ಈ ಕಾರ್ಯತಂತ್ರಕ್ಕೆ ಇದೀಗ ಮೊದಲ ಬಾರಿಗೆ ಒಂದು ಹೊಸ ಪರಭಕ್ಷಕ ಜೀವಿ (ಕಾಡು ಬೆಕ್ಕು) ಸೇರಿಕೊಂಡಿದೆ. ಕಾಡು ಬೆಕ್ಕುಗಳ ನಿರ್ಮೂಲನೆಯು ಜೀವವೈವಿಧ್ಯವನ್ನು ಹೆಚ್ಚಿಸಲು ಮತ್ತು ನ್ಯೂಜಿಲೆಂಡ್ನ ಪರಿಸರ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಸಂರಕ್ಷಣಾ ಇಲಾಖೆ (DOC) ಕಾಡು ಬೆಕ್ಕುಗಳನ್ನು ನಿಯಂತ್ರಿಸಲು ಮಾಂಸ ಆಧಾರಿತ ಹೊಸ ಬಲೆಗಳನ್ನು ಬಳಸಿ ಪ್ರಯೋಗ ನಡೆಸುತ್ತಿದೆ ಎಂದು ದಿ ಗಲ್ಫ್ ನ್ಯೂಸ್ ವರದಿ ಮಾಡಿದೆ. ಬೆಕ್ಕುಗಳನ್ನು ಆಕರ್ಷಿಸಲು ಮೊದಲು ಹಾನಿಯಾಗದ ಬಲೆ ಮತ್ತು ನಂತರ ವಿಷಪೂರಿತ 1080 ರಾಸಾಯನಿಕಯುಕ್ತ ಬಲೆಯನ್ನು ಬಳಸಲು ಇಲಾಖೆ ಯೋಜಿಸಿದೆ. ಆದರೆ, ಈ ರಾಸಾಯನಿಕವು ಇತರ ಪ್ರಾಣಿಗಳಿಗೆ ಹಾನಿ ಮಾಡಬಹುದು ಎಂಬ ವಿವಾದವಿದೆ.
ಸಂರಕ್ಷಣಾ ಇಲಾಖೆಯು ಕಾಡು ಬೆಕ್ಕುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ವಿವರವಾದ ಕಾರ್ಯತಂತ್ರವನ್ನು ರೂಪಿಸುತ್ತಿದ್ದು, ಮಾರ್ಚ್ 2026ರೊಳಗೆ ಅದನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ