ಕೊಲೊಂಬೊ: ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ (Neighbourhood First) ಮತ್ತು ʼಮಹಾಸಾಗರʼ (MAHASAGAR) ನೀತಿಗಳ ಅಡಿಯಲ್ಲಿ ಶ್ರೀಲಂಕಾ ಭಾರತಕ್ಕೆ ಅತ್ಯಂತ ಪ್ರಮುಖವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ‘ಡಿತ್ವಾ’ (Ditwah) ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರಕ್ಕೆ ನೆರವಾಗಲು ಭಾರತ ಮುಂದಡಿ ಇಟ್ಟಿರುವುದು ಸಹಜ ಪ್ರಕ್ರಿಯೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ಅವರನ್ನು ಭೇಟಿ ಮಾಡಿದ ಜೈಶಂಕರ, ಪ್ರಧಾನಿ ನರೇಂದ್ರ ಮೋದಿ ಅವರು ಬರೆದ ಪತ್ರವನ್ನು ಹಸ್ತಾಂತರಿಸಿದರು. ಈ ಪತ್ರದಲ್ಲಿ ಶ್ರೀಲಂಕಾದ ಪುನರ್ನಿರ್ಮಾಣಕ್ಕಾಗಿ ಭಾರತವು 450 ಮಿಲಿಯನ್ ಡಾಲರ್ (ಸುಮಾರು ₹4,000 ಕೋಟಿ) ಸಹಾಯ ಧನವನ್ನು ಘೋಷಿಸಿದೆ. ಈ ಪ್ಯಾಕೇಜ್‌ನಲ್ಲಿ 350 ಮಿಲಿಯನ್ ಡಾಲರ್ ಮೃದು ಸಾಲ (Concessional Lines of Credit) ಮತ್ತು 100 ಮಿಲಿಯನ್ ಡಾಲರ್ ಅನುದಾನ ಸೇರಿದೆ.
ಚಂಡಮಾರುತ ಅಪ್ಪಳಿಸಿದ ದಿನವೇ ಭಾರತವು ‘ಆಪರೇಷನ್ ಸಾಗರ ಬಂಧು’ ಮೂಲಕ ಪರಿಹಾರ ಕಾರ್ಯ ಆರಂಭಿಸಿದೆ. ಭಾರತೀಯ ನೌಕಾಪಡೆಯ ಐಎನ್ಎಸ್ ವಿಕ್ರಾಂತ ಮತ್ತು ಐಎನ್ಎಸ್ ಉದಯಗಿರಿ ಹಡಗುಗಳು ಕೊಲೊಂಬೊ ತಲುಪಿ ಪರಿಹಾರ ಸಾಮಗ್ರಿಗಳನ್ನು ವಿತರಿಸಿವೆ. ಅಲ್ಲದೆ, ವಾಯುಪಡೆಯ ಎಂಐ-17 ಹೆಲಿಕಾಪ್ಟರ್‌ಗಳು ಮತ್ತು ಎನ್‌ಡಿಆರ್‌ಎಫ್‌ನ 80 ಸದಸ್ಯರ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಕ್ಯಾಂಡಿ ಬಳಿ ಭಾರತೀಯ ಸೇನೆಯು 85 ವೈದ್ಯಕೀಯ ಸಿಬ್ಬಂದಿಗಳನ್ನೊಳಗೊಂಡ ತಾತ್ಕಾಲಿಕ ಆಸ್ಪತ್ರೆ ಸ್ಥಾಪಿಸಿ 8,000ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದೆ. ಎರಡು ‘ಭೀಷ್ಮ’ (BHISHM) ತುರ್ತು ಚಿಕಿತ್ಸಾ ಘಟಕಗಳನ್ನು ಏರ್‌ಲಿಫ್ಟ್ ಮಾಡಲಾಗಿದೆ.
“ಶ್ರೀಲಂಕಾ ಆರ್ಥಿಕ ಸಂಕಷ್ಟದಲ್ಲಿದ್ದಾಗಲೂ ಭಾರತ ಬೆಂಬಲವಾಗಿ ನಿಂತಿತ್ತು. ಈಗ ಚಂಡಮಾರುತದ ಸಂಕಷ್ಟದ ಸಮಯದಲ್ಲಿಯೂ ನಾವು ನಿಮ್ಮೊಂದಿಗಿದ್ದೇವೆ,” ಎಂದು ಜೈಶಂಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಪುನರುಚ್ಚರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ