ವಿಶ್ವಸಂಸ್ಥೆ: ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯ ಶನಿವಾರದ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರು ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾಕಿಸ್ತಾನವನ್ನು ‘ಭಯೋತ್ಪಾದನೆಯ ಸರಣಿ ಅಭ್ಯಾಸಿ’ (serial practitioner of terrorism) ಎಂದು ಬಣ್ಣಿಸಿದ ಅವರು, ಹಿಂದಿನ ದಿನ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿಶ್ವಸಂಸ್ಥೆ ವೇದಿಕೆಯಲ್ಲಿ ವಾಸ್ತವಾಂಶಗಳನ್ನು ತಪ್ಪಾಗಿ ಬಿಂಬಿಸಿದ್ದಾರೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಮಾತನಾಡಿದ ಜೈಶಂಕರ, “ನಿನ್ನೆ ಭಯೋತ್ಪಾದನೆಯ ಸರಣಿ ಅಭ್ಯಾಸಿಯೊಬ್ಬರು ಈ ಸಭೆಯ ಮುಂದೆ ವಾಸ್ತವಾಂಶಗಳನ್ನು ತಪ್ಪಾಗಿ ಬಿಂಬಿಸಿದ್ದಾರೆ. ಭಯೋತ್ಪಾದನೆಯನ್ನು ಸಾಮಾನ್ಯೀಕರಿಸುವ ಮತ್ತು ಅದರ ಪರಿಣಾಮಗಳಿಂದ ವಿನಾಯಿತಿ ಪಡೆಯಲು ವಾದಗಳನ್ನು ಮಂಡಿಸಲಾಗಿದೆ. ಅದಕ್ಕೆ ಅವಕಾಶ ನೀಡಲಾಗುವುದಿಲ್ಲ” ಎಂದು ಹೇಳಿದರು.
ಭಯೋತ್ಪಾದನೆಯ ವಿರುದ್ಧ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕನ್ನು ಭಾರತ ಬಳಸಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ ಅವರು, ಭಯೋತ್ಪಾದನೆ ಮತ್ತು ಸ್ನೇಹ, ಸೌಹಾರ್ದತೆ ಒಂದೇ ಸಮಯದಲ್ಲಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದರು. “ಭಯೋತ್ಪಾದನೆ ಜೊತೆ ಸ್ನೇಹ ಮತ್ತು ಸೌಹಾರ್ದತೆ ಇರಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯ ಮೇಲೆ ಆಧಾರಿತವಾಗಿರುವ ಯಾವುದೇ ತಿಳಿವಳಿಕೆ ಅಥವಾ ಸಂಬಂಧ ಸಹಜವಾಗಿಯೇ ಪ್ರಶ್ನೆಗೆ ಒಳಗಾಗುತ್ತದೆ. ಭಯೋತ್ಪಾದನೆ ನಡೆಸುತ್ತಿರುವವರೇ ತಮ್ಮ ನಡೆಯನ್ನು ಸರಿಪಡಿಸಿಕೊಳ್ಳಬೇಕು” ಎಂದು ಜೈಶಂಕರ ಹೇಳಿದರು.
ಜೈಶಂಕರ ಅವರ ಈ ಹೇಳಿಕೆಯು ಹಿಂದಿನ ದಿನ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮಾಡಿದ್ದ ಭಾಷಣಕ್ಕೆ ಪ್ರತಿಕ್ರಿಯೆಯಾಗಿತ್ತು. ಶುಕ್ರವಾರದ ಭಾಷಣದಲ್ಲಿ ಷರೀಫ್, ಮೇ ತಿಂಗಳಲ್ಲಿ ನಡೆದ ಭಾರತ–ಪಾಕಿಸ್ತಾನ ಸೇನಾ ಸಂಘರ್ಷವನ್ನು ಪ್ರಸ್ತಾಪಿಸಿದ್ದರು. ಭಾರತದ ‘ಆಪರೇಷನ್ ಸಿಂಧೂರ್’ ಅನ್ನು ‘ಸುಳ್ಳು ನೆಪದ ಆಧಾರದ ಮೇಲೆ ನಡೆಸಿದ ಬಾಹ್ಯ ಆಕ್ರಮಣ’ ಎಂದು ಅವರು ಬಣ್ಣಿಸಿದ್ದರು. ಅಲ್ಲದೆ, ಪಾಕಿಸ್ತಾನ ಕೈಗೊಂಡ ಕ್ರಮಗಳು ವಿಶ್ವಸಂಸ್ಥೆಯ ಚಾರ್ಟರ್‌ನ 51ನೇ ವಿಧಿಯಡಿ ತನ್ನ ಆತ್ಮರಕ್ಷಣೆಯ ಹಕ್ಕಿನಡಿ ನಡೆದಿವೆ ಎಂದು ಪ್ರತಿಪಾದಿಸಿದ್ದರು.
ಇದೇ ವೇಳೆ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹಾಗೂ ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ಷರೀಫ್ ಶ್ಲಾಘಿಸಿದ್ದರು. “ಅವರು ಶತ್ರುವನ್ನು ಮೌನಗೊಳಿಸಿದರು, ಅದರ ದಾಳಿಗಳನ್ನು ಹಿಮ್ಮೆಟ್ಟಿಸಿದರು ಮತ್ತು ಅದಕ್ಕೆ ಎಂದಿಗೂ ಮರೆಯಲಾಗದ ಪಾಠವನ್ನು ಕಲಿಸಿದರು” ಎಂದು ಅವರು ಹೇಳಿದ್ದರು.
ಆಪರೇಷನ್ ಸಿಂಧೂರ ನಿಲ್ಲಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ‘ಸಮಯೋಚಿತ ಮಧ್ಯಸ್ಥಿಕೆ’ಗೂ ಷರೀಫ್ ಧನ್ಯವಾದ ಅರ್ಪಿಸಿದ್ದರು. ಬಳಿಕ ಟ್ರಂಪ್ ಅವರು ಷರೀಫ್ ಅವರ ಭಾಷಣದ 87 ಸೆಕೆಂಡ್‌ಗಳ ವಿಡಿಯೊ ತುಣುಕನ್ನು ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಯಾವುದೇ ಟಿಪ್ಪಣಿ ಇಲ್ಲದೆ ಹಂಚಿಕೊಂಡಿದ್ದರು.
2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಭಾರತವು ಮೇ 7ರಂದು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಆರಂಭಿಸಿತ್ತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತ ಈ ಕಾರ್ಯಾಚರಣೆ ನಡೆಸಿತ್ತು.
ಆದರೆ, ಆಪರೇಷನ್ ಸಿಂಧೂರ ನಿಲ್ಲಲು ಟ್ರಂಪ್ ಅವರ ಮಧ್ಯಸ್ಥಿಕೆ ಕಾರಣ ಎಂಬ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಪಾಕಿಸ್ತಾನದ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ (DGMO) ಅವರು ಭಾರತೀಯ ಸೇನೆಯ ಸಹವರ್ತಿ ಅಧಿಕಾರಿಯನ್ನು ಸಂಪರ್ಕಿಸಿ ಮನವಿ ಮಾಡಿದ ಬಳಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಭಾರತ ಅನೇಕ ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ