ತ್ರಿಶೂರ್: ಕೇರಳದ ತ್ರಿಶೂರ್ ಸಮೀಪದ ಮುಂಡತಿಕೋಡ್‌ನಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಮಂಗಳವಾರ ಸಂಭವಿಸಿದ ಸರಣಿ ಸ್ಫೋಟ ಮತ್ತು ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 13 ಜನರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 40 ಕಾರ್ಮಿಕರು ಗಾಯಗೊಂಡಿದ್ದಾರೆ. ಇದು ಈ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ.
ವಿಶೇಷವೆಂದರೆ, ಕಳೆದ ಭಾನುವಾರ ತಮಿಳುನಾಡಿನ ವಿರುದ್‌ನಗರದ ಪಟಾಕಿ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 25 ಜನರು ಸಾವಿಗೀಡಾದ ಕೇವಲ ಎರಡು ದಿನಗಳಲ್ಲೇ ಈ ಘಟನೆ ನಡೆದಿದೆ.
ಸುಮಾರು ಐದು ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ಈ ಪಟಾಕಿ ತಯಾರಿಕಾ ಘಟಕವಿತ್ತು. ಪ್ರಸಿದ್ಧ ‘ತ್ರಿಶೂರ್ ಪೂರಂ’ ಉತ್ಸವದ ಆಯೋಜಕ ತಂಡಗಳಲ್ಲಿ ಒಂದಾದ ‘ತಿರುವಂಬಾಡಿ ದೇವಸ್ವಂ’ ಮಂಡಳಿಗಾಗಿ ಇಲ್ಲಿ ಪಟಾಕಿಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಏಪ್ರಿಲ್ 24 ರಂದು ನಡೆಯಲಿರುವ ಸ್ಯಾಂಪಲ್ ಪಟಾಕಿ ಪ್ರದರ್ಶನಕ್ಕಾಗಿ (Sample Fireworks) ಇಲ್ಲಿ ದಾಸ್ತಾನು ಮಾಡಲಾಗಿತ್ತು.
ಮಂಗಳವಾರ ಮಧ್ಯಾಹ್ನ ಸುಮಾರು 3:30ರ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿದ್ದು, ನಂತರ ಬೆಂಕಿ ಇಡೀ ಘಟಕಕ್ಕೆ ವ್ಯಾಪಿಸಿತು. ಅಲ್ಲಿ ಒಟ್ಟು ಎಂಟು ಶೆಡ್‌ಗಳಿದ್ದು, ಅವುಗಳಲ್ಲಿ ಐದು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಮೂರು ಶೆಡ್‌ಗಳಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು. ಸ್ಫೋಟದ ತೀವ್ರತೆಗೆ ಶೆಡ್‌ಗಳು ಛಿದ್ರಗೊಂಡಿದ್ದು, ಕಲ್ಲು ಮತ್ತು ಅವಶೇಷಗಳು ಸುತ್ತಮುತ್ತಲ ಗದ್ದೆಗಳಿಗೆ ಎಸೆಯಲ್ಪಟ್ಟಿವೆ. ಮೃತದೇಹದ ಭಾಗಗಳು ಘಟನಾ ಸ್ಥಳದಲ್ಲಿ ಹರಡಿಕೊಂಡಿದ್ದ ಭೀಕರ ದೃಶ್ಯ ಕಂಡುಬಂದಿದೆ.
ಗಾಯಾಳುಗಳ ಸ್ಥಿತಿ ಚಿಂತಾಜನಕ:
ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೂಲಗಳ ಪ್ರಕಾರ, ಗಾಯಾಳುಗಳಲ್ಲಿ ಐವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಒಬ್ಬ ಸಂತ್ರಸ್ತನಿಗೆ ಶೇ. 90ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿವೆ. ನಾಲ್ವರಿಗೆ ಶೇ. 70ರಷ್ಟು ಸುಟ್ಟ ಗಾಯಗಳಾಗಿವೆ. ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಿಲೋಮೀಟರ್‌ಗಳಷ್ಟು ದೂರದವರೆಗೆ ಕೇಳಿಸಿದ ಈ ಭೀಕರ ಸ್ಫೋಟದ ಸದ್ದಿನಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅನೇಕರು ಇದನ್ನು ಭೂಕಂಪ ಎಂದು ಭಾವಿಸಿ ಮನೆಯಿಂದ ಹೊರಬಂದಿದ್ದರು. ಆಕಾಶದೆತ್ತರಕ್ಕೆ ಚಿಮ್ಮಿದ ದಟ್ಟವಾದ ಹೊಗೆ ಇಡೀ ಪ್ರದೇಶವನ್ನು ಆವರಿಸಿಕೊಂಡಿತು ಮತ್ತು ಸಮೀಪದ ಮರಗಳಿಗೂ ಬೆಂಕಿ ಹೊತ್ತಿಕೊಂಡಿತು.ಘಟನೆಯ ಸಮಯದಲ್ಲಿ ಎಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.
ರಕ್ಷಣಾ ಕಾರ್ಯಕ್ಕೆ ಸರಣಿ ಸ್ಫೋಟಗಳು ದೊಡ್ಡ ಅಡ್ಡಿಯಾದವು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೂ ಮತ್ತೊಂದು ಸ್ಫೋಟ ಸಂಭವಿಸಿದ್ದರಿಂದ ಸಿಬ್ಬಂದಿ ಹಿಂತೆಗೆಯಬೇಕಾಯಿತು. ರಸ್ತೆಗಳು ಕಿರಿದಾಗಿದ್ದರಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಲು ಕಷ್ಟವಾಯಿತು, ಅಂತಿಮವಾಗಿ ಕಾಂಪೌಂಡ್ ಗೋಡೆಯನ್ನು ಒಡೆದು ಒಳಗೆ ಪ್ರವೇಶಿಸಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ