ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ ಒಮಾನಿ ಸಹಪೈಲಟ್ ಹಮಾಮ್ ಅಲ್-ಹಮ್ಮಾಮಿ, ಅಮೆರಿಕದ 9/11 ದಾಳಿಯ ಮಾದರಿಯಲ್ಲಿ ವಿಮಾನವನ್ನು ಇಸ್ರೇಲ್ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಅಪ್ಪಳಿಸುವ ಸಂಚು ರೂಪಿಸಿದ್ದ ಎಂದು ಯುಎಇ ತನಿಖಾಧಿಕಾರಿಗಳ ವಿಚಾರಣೆಯನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಬಂಧನದಲ್ಲಿರುವ ಹಮಾಮ್ ಅಲ್-ಹಮ್ಮಾಮಿ, ಕಾಕ್ಪಿಟ್ನಲ್ಲೇ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಹತ್ಯೆಗೈದು, ಬಳಿಕ ವಿಮಾನವನ್ನು ಸಾಮಾನ್ಯವಾಗಿ ಹಾರಿಸುತ್ತಲೇ ಅಗತ್ಯ ಲ್ಯಾಂಡಿಂಗ್ ಅನುಮತಿಗಳನ್ನು ಪಡೆದು, ಅಂತಿಮವಾಗಿ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿರುವ ಕಟ್ಟಡವೊಂದಕ್ಕೆ ಅಥವಾ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆಸುವ ಉದ್ದೇಶ ಹೊಂದಿದ್ದೆ ಎಂದು ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಇಸ್ರೇಲ್ನ ವೈನೆಟ್ (Ynet) ವರದಿ ತಿಳಿಸಿದೆ.
ಈ ದಾಳಿಯನ್ನು ಆರಂಭಿಸಲು ಆತ ವಿಮಾನ ಜೋರ್ಡಾನ್ ವಾಯುಪ್ರದೇಶ ತಲುಪುವವರೆಗೂ ಕಾಯುತ್ತಿದ್ದನೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಧಿಕಾರಿಗಳಿಗೆ ಸಂಚಿನ ಬಗ್ಗೆ ತಿಳಿದು ಅದನ್ನು ತಡೆಯಲು ಸಮಯ ಸಿಗದಂತೆ ಮಾಡಲು ಉದ್ದೇಶಪೂರ್ವಕವಾಗಿಯೇ ಆ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದೆ ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ.
ಬೆನ್ ಗುರಿಯನ್ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದಿದ್ದರೆ, ಟೆಲ್ ಅವೀವ್ನ ಗಗನಚುಂಬಿ ಕಟ್ಟಡವೊಂದಕ್ಕೆ ಅಥವಾ ಜೋರ್ಡಾನ್ನಲ್ಲಿರುವ ಅಮೆರಿಕದ ಸೇನಾ ನೆಲೆಗೆ ವಿಮಾನವನ್ನು ಅಪ್ಪಳಿಸುವ ಯೋಜನೆಯೂ ತನ್ನಲ್ಲಿತ್ತು ಎಂದು ಆತ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂದು ವರದಿಗಳು ಹೇಳಿವೆ.
ಟೆಲ್ ಅವೀವ್ಗೆ ಹಾರುವ ಕಾರಣಕ್ಕೆ ಫ್ಲೈದುಬೈ ಆಯ್ಕೆ
ಇನ್ನೊಂದು ಮಹತ್ವದ ಬಹಿರಂಗದಲ್ಲಿ, ಟೆಲ್ ಅವೀವ್ಗೆ ವಿಮಾನ ಸೇವೆ ನಡೆಸುತ್ತಿದ್ದ ಕಾರಣಕ್ಕಾಗಿಯೇ ಫ್ಲೈದುಬೈ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದೆ ಎಂದು ಹಮಾಮ್ ಅಲ್-ಹಮ್ಮಾಮಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಇಸ್ರೇಲ್ನ ಚಾನೆಲ್ 13 ವರದಿ ಮಾಡಿದೆ.
“ಯಾವ ವಿಮಾನಯಾನ ಸಂಸ್ಥೆ ಟೆಲ್ ಅವೀವ್ಗೆ ತನ್ನ ವಿಮಾನ ಹಾರಾಟ ನಡೆಸುತ್ತದೆ ಎಂಬುದನ್ನು ನಾನು ಪರಿಶೀಲಿಸಿದೆ. ಅದಕ್ಕಾಗಿಯೇ ಫ್ಲೈದುಬೈಯನ್ನು ಆಯ್ಕೆ ಮಾಡಿಕೊಂಡೆ. ಸಂಸ್ಥೆಯಲ್ಲಿ ಉದ್ಯೋಗ ದೊರಕುವ ಮೊದಲೇ ನಾನು ಈ ಯೋಜನೆ ರೂಪಿಸಿದ್ದೆ ” ಎಂದು ಆತ ಹೇಳಿದ್ದಾನೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಉಲ್ಲೇಖಿಸಿದೆ.
ಇದರಿಂದ ಸೆಪ್ಟೆಂಬರ್ 30ರ ವಿಮಾನಯಾನ ವೇಳೆ ಈ ಸಂಚು ಮಾಡಿದ್ದಲ್ಲ, ಬದಲಾಗಿ ಫ್ಲೈದುಬೈಗೆ ಸೇರುವುದಕ್ಕೂ ಮುನ್ನವೇ ಯೋಜನೆ ರೂಪಿಸಲಾಗಿತ್ತು ಎಂಬ ಅನುಮಾನ ಮತ್ತಷ್ಟು ಬಲಗೊಂಡಿದೆ. ದಾಳಿಗೆ ಮೊದಲು ಆತ ಹಲವು ಬಾರಿ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದನೆಂದು ವರದಿಗಳು ಹೇಳಿವೆ. ಜೂನ್ನಲ್ಲಿ ಇಸ್ರೇಲ್ಗೆ ಭೇಟಿ ನೀಡಿದ್ದಾಗ, ಸಂಚಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವುದು ಮತ್ತು ಯೋಜನೆಯನ್ನು ಮತ್ತಷ್ಟು ಪರಿಪಕ್ವಗೊಳಿಸುವ ಕೆಲಸ ನಡೆಸಿದ್ದಾನೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಚಾನೆಲ್ 12 ವರದಿಯ ಪ್ರಕಾರ, ಜುಲೈ ತಿಂಗಳಲ್ಲೇ ದಾಳಿ ನಡೆಸುವ ಉದ್ದೇಶ ಹೊಂದಿದ್ದ ಆತ, ವಿಮಾನದ ಸಿಬ್ಬಂದಿಯೊಬ್ಬರೊಂದಿಗೆ ಸ್ನೇಹ ಬೆಳೆದ ಕಾರಣ ಕೊನೆಯ ಕ್ಷಣದಲ್ಲಿ ಆ ಯೋಜನೆಯನ್ನು ಕೈಬಿಟ್ಟಿದ್ದಾನೆ ಎನ್ನಲಾಗಿದೆ.
ಕ್ಯಾಪ್ಟನ್ ಮಚ್ಚಾರ್ ಧೈರ್ಯದಿಂದ ವಿಫಲವಾದ ಸಂಚು
ಆದರೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಆರಂಭಿಕ ಹಲ್ಲೆಯಿಂದ ಪಾರಾಗಿ, ಗಂಭೀರ ಗಾಯಗಳ ನಡುವೆಯೂ ಕಾಕ್ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದ ಕಾರಣ ಸಂಚು ವಿಫಲವಾಯಿತು.
ವರದಿಗಳ ಪ್ರಕಾರ, ಪ್ರಾರ್ಥನೆ ಮಾಡಲು ಅನುಮತಿ ಕೇಳಿದ ಬಳಿಕ ಹಮಾಮ್ ಅಲ್-ಹಮ್ಮಾಮಿ ಕಾಕ್ಪಿಟ್ನಲ್ಲಿದ್ದ ಕ್ರ್ಯಾಶ್ ಕೊಡಲಿ (Crash Axe) ಬಳಸಿ ಭಾರತೀಯ ಕ್ಯಾಪ್ಟನ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ. ಗಾಯಗೊಂಡಿದ್ದರೂ ಮಚ್ಚಾರ್ ಕಾಕ್ಪಿಟ್ ಬಾಗಿಲು ತೆರೆಯಲು ಯಶಸ್ವಿಯಾದರು. ಇದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ಒಳಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ಆ ಬಳಿಕ ಕರ್ತವ್ಯದಲ್ಲಿರದ ಇಬ್ಬರು ಪೈಲಟ್ಗಳು ವಿಮಾನದ ನಿಯಂತ್ರಣ ವಹಿಸಿಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದರು. ನಂತರ ವಿಮಾನವು ಸೌದಿ ಅರೇಬಿಯಾದ ತಬುಕ್ನಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ 16,000 ಅಡಿ ಕೆಳಕ್ಕೆ ಕುಸಿದಿದ್ದ ವಿಮಾನ
ದಾಳಿಯ ವೇಳೆ ಹಮಾಮ್ ಅಲ್-ಹಮ್ಮಾಮಿ ವಿಮಾನದ ನಿಯಂತ್ರಣ ವ್ಯವಸ್ಥೆಯಲ್ಲಿ ತೊಂದರೆ ಮಾಡಿದ ಪರಿಣಾಮ ವಿಮಾನವು ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಸುಮಾರು 16,000 ಅಡಿ ಕೆಳಕ್ಕೆ ಒಮ್ಮೆಲೇ ಇಳಿದಿತ್ತು ಎಂದು ವರದಿಗಳು ತಿಳಿಸಿವೆ.
ಇಟಲಿಯ ಕೊರಿಯರೆ ಡೆಲ್ಲಾ ಸೆರಾ ಪತ್ರಿಕೆಯ ಪ್ರಕಾರ, ಆತ ವಿಮಾನದ ಎಂಜಿನ್ಗಳನ್ನು ಸ್ಥಗಿತಗೊಳಿಸಿ, ರಡ್ಡರ್ಗಳನ್ನು ಮುಂದಕ್ಕೆ ತಳ್ಳಿದ್ದರಿಂದ ವಿಮಾನವು ತೀವ್ರ ವೇಗದಲ್ಲಿ ಕೆಳಕ್ಕೆ ಇಳಿಯತೊಡಗಿತ್ತು.
ನಂತರ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ಈ ಘಟನೆ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ವಿವರ ನೀಡಿದ್ದರು. ಹಲ್ಲೆ ನಡೆಸುವ ಕೆಲವೇ ಕ್ಷಣಗಳ ಮೊದಲು ಸಹಪೈಲಟ್ ಪ್ರಾರ್ಥನೆ ಮಾಡಲು ಅನುಮತಿ ಕೇಳಿದ್ದ. ಆರಂಭದಲ್ಲಿ ವಿಮಾನಕ್ಕೆ ಹೊರಗಿನಿಂದ ಏನೋ ಹೊಡೆದಿರಬಹುದು ಎಂದು ತಾನು ಭಾವಿಸಿದ್ದೆ. ಬಳಿಕ ತನ್ನ ಮೇಲೆ ಸಹಪೈಲಟ್ನೇ ದಾಳಿ ಮಾಡುತ್ತಿದ್ದಾನೆ ಎಂಬುದು ಅರಿವಾಯಿತು ಎಂದು ಮಚ್ಚಾರ್ ವಿವರಿಸಿದ್ದಾರೆ.
ಪೈಲಟ್ ನೇಮಕಾತಿ ಪ್ರಕ್ರಿಯೆ ಬಗ್ಗೆ ಪ್ರಶ್ನೆಗಳು
ಈ ಹೊಸ ಬಹಿರಂಗಗಳ ಬಳಿಕ, ಹಮಾಮ್ ಅಲ್-ಹಮ್ಮಾಮಿ ವಾಣಿಜ್ಯ ವಿಮಾನ ಹಾರಾಟಕ್ಕೆ ಹೇಗೆ ಅನುಮೋದನೆ ಪಡೆದ ಎಂಬ ಪ್ರಶ್ನೆಗಳು ಉದ್ಭವಿಸಿವೆ. ವಿಶೇಷವಾಗಿ ಇಸ್ರೇಲ್ ಮಾರ್ಗದ ವಿಮಾನದಲ್ಲಿ ಸೇವೆ ಸಲ್ಲಿಸಲು ಆತ ಹೇಗೆ ಅರ್ಹತೆ ಪಡೆದ ಎಂಬ ವಿಚಾರವೂ ಚರ್ಚೆಗೆ ಬಂದಿದೆ.
29 ವರ್ಷದ ಹಮಾಮ್ ಅಲ್-ಹಮ್ಮಾಮಿಯನ್ನು, ಉಗ್ರಗಾಮಿ ಚಿಂತನೆಗಳ ಬಗ್ಗೆ ವ್ಯಕ್ತವಾಗಿದ್ದ ಆತಂಕಗಳ ಹಿನ್ನೆಲೆಯಲ್ಲಿ ಈ ಹಿಂದೆ ಒಮಾನ್ನಲ್ಲಿ ವಿಮಾನ ಹಾರಾಟ ನಡೆಸಲು ಆತನಿಗೆ ನಿರ್ಬಂಧಿಸಲಾಗಿತ್ತು ಎಂದು ವರದಿಗಳು ಹೇಳಿವೆ. ಆತ ಈ ಹಿಂದೆ ಒಮನ್ ಏರ್ ಜೊತೆ ಸಂಬಂಧ ಹೊಂದಿದ್ದ. ಬಳಿಕ ಬೇರೆ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ, ಆ ಆತಂಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹೇಗೆ ಆತ ಮರೆಮಾಚಿದ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರಕರಣವು ಒಮಾನ್, ಯುಎಇ ಮತ್ತು ಇಸ್ರೇಲ್ನ ವಿಮಾನಯಾನ ಹಾಗೂ ಭದ್ರತಾ ಸಂಸ್ಥೆಗಳ ನಡುವೆ ಮಾಹಿತಿ ಹಂಚಿಕೆ ವ್ಯವಸ್ಥೆಯ ಕುರಿತು ಕೂಡ ಪ್ರಶ್ನೆಗಳನ್ನು ಎತ್ತಿದೆ.
ಘಟನೆಯ ಬಳಿಕ ವಿದೇಶಿ ನಾಗರಿಕ ವಿಮಾನಯಾನ ಸಂಸ್ಥೆಗಳ ಭದ್ರತಾ ವ್ಯವಸ್ಥೆಗಳ ಸಮಗ್ರ ಪರಿಶೀಲನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶ ನೀಡಿದ್ದಾರೆ. ಈ ಸಂಚಿನಲ್ಲಿ ಇನ್ನಾರಾದರೂ ಭಾಗಿಯಾಗಿದ್ದರೇ ಎಂಬುದನ್ನೂ ಇಸ್ರೇಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ