ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್‌ ಆರಂಭ…! ದೇಶ ವಿಭಜನೆಯ ನಂತರ ಇದೇ ಮೊದಲು

ಲಾಹೋರ್: ಪಾಕಿಸ್ತಾನದಲ್ಲಿ ವಿಭಜನೆಯಾದ (Partition) ನಂತರ ಮೊದಲ ಬಾರಿಗೆ, ಸಂಸ್ಕೃತ ಭಾಷೆ ಕೋರ್ಸ್‌ ಆರಂಭಿಸಿದೆ. ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (LUMS) ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಶಾಸ್ತ್ರೀಯ ಭಾಷೆಯಾದ ಸಂಸ್ಕೃತಕ್ಕೆ ನಾಲ್ಕು ಕ್ರೆಡಿಟ್‌ಗಳ ಕೋರ್ಸ್ ಅನ್ನು ಪ್ರಾರಂಭಿಸಿದೆ.
ಈ ಉಪಕ್ರಮವು ವಿದ್ಯಾರ್ಥಿಗಳಿಂದ ಮತ್ತು ವಿದ್ವಾಂಸರಿಂದ ಬಂದ ಭಾರಿ ಪ್ರತಿಕ್ರಿಯೆಯಿಂದ ಬಂದಿದೆ. ಈ ಹಿಂದೆ ಮೂರು ತಿಂಗಳ ವಾರಾಂತ್ಯದ ಕಾರ್ಯಾಗಾರಕ್ಕೆ ಸಿಕ್ಕಿದ್ದ ಯಶಸ್ಸು ಈ ಕೋರ್ಸ್ ಆರಂಭಕ್ಕೆ ಕಾರಣವಾಗಿದೆ.
ಮಹಾಭಾರತದ ಪ್ರೇರಣೆ
ಕೋರ್ಸ್‌ನ ಭಾಗವಾಗಿ, ವಿದ್ಯಾರ್ಥಿಗಳಿಗೆ ದೂರದರ್ಶನದ ಜನಪ್ರಿಯ ಧಾರಾವಾಹಿ ‘ಮಹಾಭಾರತ’ದ ಶೀರ್ಷಿಕೆ ಗೀತೆಯಾದ ‘ಹೈ ಕಥಾ ಸಂಗ್ರಾಮ್ ಕೀ’ ಯ ಉರ್ದು ಅನುವಾದವನ್ನು ಸಹ ಪರಿಚಯಿಸಲಾಗುತ್ತಿದೆ.
ಗುರ್ಮಾನಿ ಕೇಂದ್ರದ ನಿರ್ದೇಶಕರಾದ ಡಾ. ಅಲಿ ಉಸ್ಮಾನ್ ಖಾಸ್ಮಿ ಅವರು ಮಾತನಾಡಿ, “ಪಾಕಿಸ್ತಾನದಲ್ಲಿ ಅತ್ಯಂತ ಶ್ರೀಮಂತ, ಆದರೆ ನಿರ್ಲಕ್ಷ್ಯಕ್ಕೆ ಒಳಗಾದ ಸಂಸ್ಕೃತ ಗ್ರಂಥಗಳ ಸಂಗ್ರಹ ಪಂಜಾಬ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿದೆ. 1930ರ ದಶಕದಲ್ಲಿ ವಿದ್ವಾಂಸ ಜೆಸಿಆರ್ ವೂಲ್ನರ್ ಅವರು ತಾಳೆಗರಿಗಳ ಮೇಲೆ ಸಂಸ್ಕೃತ ಹಸ್ತಪ್ರತಿಗಳ ಸಂಗ್ರಹವನ್ನು ಪಟ್ಟಿ ಮಾಡಿದ್ದರು. ಆದರೆ 1947 ರ ನಂತರ ಯಾವುದೇ ಪಾಕಿಸ್ತಾನಿ ವಿದ್ವಾಂಸರು ಈ ಸಂಗ್ರಹದೊಂದಿಗೆ ತೊಡಗಿಕೊಂಡಿಲ್ಲ. ವಿದೇಶಿ ಸಂಶೋಧಕರು ಮಾತ್ರ ಇದನ್ನು ಬಳಸುತ್ತಿದ್ದಾರೆ. ಸ್ಥಳೀಯ ವಿದ್ವಾಂಸರಿಗೆ ತರಬೇತಿ ನೀಡುವುದರಿಂದ ಈ ಪರಿಸ್ಥಿತಿ ಬದಲಾಗಲಿದೆ,” ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವಿಡಿಯೊ | ವಿಶ್ವಕಪ್ ವಿಜಯೋತ್ಸವ ಪೋಡಿಯಂನಲ್ಲಿ ಟ್ರಂಪ್ ವರ್ತನೆ ಚರ್ಚೆಗೆ ಗ್ರಾಸ ; ಪರಿಸ್ಥಿತಿ ನಿಭಾಯಿಸಿದ ಫಿಫಾ ಮುಖ್ಯಸ್ಥ

ಮುಂದಿನ ದಿನಗಳಲ್ಲಿ ಮಹಾಭಾರತ, ಭಗವದ್ಗೀತೆ ಕೋರ್ಸ್‌ಗಳು
ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (LUMS ವಿಶ್ವವಿದ್ಯಾಲಯವು ಮುಂಬರುವ ದಿನಗಳಲ್ಲಿ ಮಹಾಭಾರತ ಮತ್ತು ಭಗವದ್ಗೀತೆ ಯ ಕುರಿತ ಕೋರ್ಸ್‌ಗಳನ್ನು ಆರಂಭಿಸುವ ಗುರಿಯನ್ನು ಹೊಂದಿದೆ. ಡಾ. ಖಾಸ್ಮಿ ಅವರ ಪ್ರಕಾರ, “ಮುಂದಿನ 10-15 ವರ್ಷಗಳಲ್ಲಿ, ಪಾಕಿಸ್ತಾನ ಮೂಲದ ಗೀತೆ ಮತ್ತು ಮಹಾಭಾರತದ ವಿದ್ವಾಂಸರನ್ನು ನಾವು ನೋಡಬಹುದು,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಯತ್ನದ ಹಿಂದಿರುವ ವ್ಯಕ್ತಿ
ಫೋರ್ಮನ್ ಕ್ರಿಶ್ಚಿಯನ್ ಕಾಲೇಜಿನ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಾಹಿದ್ ರಶೀದ್ ಅವರ ಪ್ರಯತ್ನಗಳ ಮೂಲಕ ಈ ಬದಲಾವಣೆ ಸಾಧ್ಯವಾಗಿದೆ. “ಶಾಸ್ತ್ರೀಯ ಭಾಷೆಗಳು ಮಾನವ ಕುಲಕ್ಕೆ ಸಾಕಷ್ಟು ಜ್ಞಾನವನ್ನು ಹೊಂದಿವೆ. ನಾನು ಮೊದಲು ಅರೇಬಿಕ್ ಮತ್ತು ಪರ್ಷಿಯನ್ ಕಲಿಯಲು ಪ್ರಾರಂಭಿಸಿ, ನಂತರ ಸಂಸ್ಕೃತ ಅಧ್ಯಯನ ಮಾಡಿದೆ,” ಎಂದು ಡಾ. ರಶೀದ್ ಹೇಳಿದರು.

ಕೇಂಬ್ರಿಡ್ಜ್ ಸಂಸ್ಕೃತ ವಿದ್ವಾಂಸ ಆಂಟೋನಿಯಾ ರುಪ್ಪೆಲ್ ಮತ್ತು ಆಸ್ಟ್ರೇಲಿಯಾದ ಇಂಡೋಲಾಜಿಸ್ಟ್ ಮೆಕ್‌ಕಾಮಸ್ ಟೇಲರ್ ಅವರ ಅಡಿಯಲ್ಲಿ ಆನ್‌ಲೈನ್ ವೇದಿಕೆಗಳ ಮೂಲಕ ಅವರು ಕಲಿತಿದ್ದಾರೆ. “ಶಾಸ್ತ್ರೀಯ ಸಂಸ್ಕೃತ ವ್ಯಾಕರಣವನ್ನು ಕಲಿಯಲು ನನಗೆ ಸುಮಾರು ಒಂದು ವರ್ಷ ಬೇಕಾಯಿತು, ಮತ್ತು ನಾನು ಇನ್ನೂ ಕಲಿಯುತ್ತಿದ್ದೇನೆ,” ಎಂದರು.
ಸಂಸ್ಕೃತದ ಮಹತ್ವ ಮತ್ತು ಪ್ರಾದೇಶಿಕ ಸಾಮರಸ್ಯ
ಸಂಸ್ಕೃತವನ್ನು ಕಲಿಯುವ ತಮ್ಮ ಆಯ್ಕೆಯನ್ನು ಜನರು ಪ್ರಶ್ನಿಸಿದಾಗ, ಡಾ. ರಶೀದ್ ಅವರು, “ನಾವು ಅದನ್ನು ಏಕೆ ಕಲಿಯಬಾರದು? ಇದು ಇಡೀ ಪ್ರದೇಶವನ್ನು ಬಂಧಿಸುವ ಭಾಷೆ. ಸಂಸ್ಕೃತ ವ್ಯಾಕರಣಕಾರ ಪಾಣಿನಿಯ ಗ್ರಾಮ ನಮ್ಮ ಪ್ರದೇಶದಲ್ಲಿತ್ತು. ಸಿಂಧೂ ಕಣಿವೆ ನಾಗರಿಕತೆಯ ಸಮಯದಲ್ಲಿ ಇಲ್ಲಿ ಸಾಕಷ್ಟು ಬರವಣಿಗೆ ಮಾಡಲಾಗಿದೆ. ಸಂಸ್ಕೃತವು ಒಂದು ಪರ್ವತವಿದ್ದಂತೆ. ನಾವು ಅದನ್ನು ಸ್ವೀಕರಿಸಬೇಕು. ಇದು ನಮಗೂ ಸೇರಿದ್ದು; ಇದು ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅರ್ಜೆಂಟೀನಾ ಕನಸು ಭಗ್ನ; 107ನೇ ನಿಮಿಷದ ಗೋಲಿನಿಂದ 2026ರ ಫೀಫಾ ವಿಶ್ವಕಪ್ ಚಾಂಪಿಯನ್ ಆದ ಸ್ಪೇನ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement