
ಪ್ರತಾಪಗಢ (ಉತ್ತರ ಪ್ರದೇಶ): ಅಪ್ರಾಪ್ತ ವಯಸ್ಸಿನ ಗೆಳತಿಯೊಂದಿಗೆ ತನ್ನ ವಿವಾಹ ಮಾಡಿಸಬೇಕೆಂದು ಪಟ್ಟು ಹಿಡಿದ 15 ವರ್ಷದ ಬಾಲಕನೊಬ್ಬ ಹೈ-ಟೆನ್ಷನ್ ವಿದ್ಯುತ್ ಲೈನ್ ಏರಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಸುಮಾರು 35 ಅಡಿ ಎತ್ತರದ ವಿದ್ಯುತ್ ತಂತಿಯನ್ನು ಹಿಡಿದು ನೇತಾಡುತ್ತಿದ್ದ ಬಾಲಕನನ್ನು ಸುಮಾರು 40 ನಿಮಿಷಗಳ ಸತತ ಕಾರ್ಯಾಚರಣೆಯ ನಂತರ ಪೊಲೀಸರು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಜಿಲ್ಲೆಯ ದೇವ್‌ಸರಾ ಪೊಲೀಸ್ ಠಾಣಾ ವ್ಯಾಪ್ತಿಯ ಭೌಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಹೊರವಲಯದಲ್ಲಿರುವ 11,000 ವೋಲ್ಟ್ (11 ಕೆ.ವಿ) ವಿದ್ಯುತ್ ಲೈನ್ ಏರಿದ ಬಾಲಕ, ತಂತಿಯನ್ನು ಹಿಡಿದುಕೊಂಡು ನೇತಾಡಲಾರಂಭಿಸಿದ್ದ. ಇದನ್ನು ಗಮನಿಸಿದ ಗ್ರಾಮಸ್ಥರು ಆತಂಕಕ್ಕೀಡಾಗಿ ಸ್ಥಳದಲ್ಲಿ ಜಮಾಯಿಸಿದರು. ಸರಿಸುಮಾರು 50ಕ್ಕೂ ಹೆಚ್ಚು ಜನರು ಸ್ಥಳಕ್ಕೆ ಆಗಮಿಸಿ ಬಾಲಕನನ್ನು ಕೆಳಗಿಳಿಯುವಂತೆ ಮನವಿ ಮಾಡಿದರೂ ಆತ ಒಪ್ಪಲಿಲ್ಲ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಟೇಷನ್ ಹೌಸ್ ಆಫೀಸರ್ (SHO) ಅವರ ಮುಂದೆಯೂ ಬಾಲಕ ತನ್ನ ಪಟ್ಟನ್ನು ಮುಂದುವರಿಸಿದ್ದಾನೆ. “ನನ್ನ ಗೆಳತಿಯೊಂದಿಗೆ ಮದುವೆ ಮಾಡಿಸುವುದಾಗಿ ಭರವಸೆ ನೀಡಿದರೆ ಮಾತ್ರ ನಾನು ಕೆಳಗಿಳಿಯುತ್ತೇನೆ” ಎಂದು ಪಟ್ಟು ಹಿಡಿದಿದ್ದಾನೆ. ಕೊನೆಗೆ ಪೊಲೀಸರು ಆತನ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿ, ಸಮಾಧಾನಪಡಿಸಿದ ನಂತರ ಏಣಿಯ ಸಹಾಯದಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಕೆಳಗಿಳಿಯುತ್ತಿದ್ದಂತೆಯೇ ಬಾಲಕ ಭಾವುಕನಾಗಿ ಅಳತೊಡಗಿದ್ದಾನೆ.
ಅದೃಷ್ಟವಶಾತ್, ನಿರ್ವಹಣಾ ಕೆಲಸದ ಕಾರಣದಿಂದಾಗಿ ಆ ಸಮಯದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದರಿಂದ ಸಂಭವನೀಯ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
https://x.com/i/status/2019665404487254284
ಪ್ರೇಮ ಪ್ರಕರಣ ಮತ್ತು ಹಿನ್ನೆಲೆ:
ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರದಲ್ಲಿರುವ ಗ್ರಾಮದ ನಿವಾಸಿಯಾದ ಈ ಬಾಲಕ ಪೋಷಕರಿಗೆ ಒಬ್ಬನೇ ಮಗ. ಹೈಸ್ಕೂಲ್ ನಂತರ ವಿದ್ಯಾಭ್ಯಾಸ ಕೈಬಿಟ್ಟಿದ್ದ ಈತ, ಕಳೆದ ಒಂದು ವರ್ಷದಿಂದ ಪಕ್ಕದ ಪಟ್ಟಿ ಪ್ರದೇಶದ 13 ವರ್ಷದ ಬಾಲಕಿ ಜೊತೆ ಈತನಿಗೆ ಪ್ರೇಮಾಂಕರವಾಗಿತ್ತು.
ಗ್ರಾಮಸ್ಥರ ಪ್ರಕಾರ, ಎರಡು-ಮೂರು ತಿಂಗಳ ಹಿಂದೆ ಬಾಲಕ ತನ್ನ ಗೆಳತಿಯನ್ನು ಭೇಟಿಯಾಗಲು ಆಕೆಯ ಗ್ರಾಮಕ್ಕೆ ಹೋದಾಗ, ಬಾಲಕಿಯ ಕುಟುಂಬದವರು ಆತನನ್ನು ಹಿಡಿದು ಥಳಿಸಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತಾದರೂ, ನಂತರ ಉಭಯ ಕುಟುಂಬಗಳ ನಡುವೆ ರಾಜಿ ಸಂಧಾನ ನಡೆದು ದೂರು ವಾಪಸ್ ಪಡೆಯಲಾಗಿತ್ತು.
ಆದರೂ ಇಬ್ಬರೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಇದರಿಂದ ಕೋಪಗೊಂಡ ಬಾಲಕನ ಪೋಷಕರು ಆತನ ಮೊಬೈಲ್ ಕಿತ್ತುಕೊಂಡಿದ್ದರು, ಇದರಿಂದ ಬಾಲಕ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಲಕ ಮನೆಯಿಂದ 500 ಮೀಟರ್ ದೂರದಲ್ಲಿರುವ ವಿದ್ಯುತ್ ಕಂಬ ಏರಿದ್ದ. ವಿದ್ಯುತ್ ಪ್ರವಹಿಸುವ ಭೀತಿಯಿಂದ ಗ್ರಾಮಸ್ಥರು ಕಂಬ ಏರಲು ಧೈರ್ಯ ಮಾಡಲಿಲ್ಲ. ತಕ್ಷಣವೇ ವಿದ್ಯುತ್ ಉಪಕೇಂದ್ರಕ್ಕೆ ಮಾಹಿತಿ ನೀಡಿ ಲೈನ್ ಆಫ್ ಮಾಡಿಸಲಾಯಿತು. ಮಧ್ಯಾಹ್ನ 2:40ರ ಸುಮಾರಿಗೆ ಪೊಲೀಸರು ಬಾಲಕನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾದರು. ನಂತರ ಆತನಿಗೆ ಕೌನ್ಸೆಲಿಂಗ್ ನಡೆಸಿ ಪೋಷಕರಿಗೆ ಒಪ್ಪಿಸಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ