ನವದೆಹಲಿ: ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ವಕ್ತಾರ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮಿಳುನಾಡು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ (OSD) ಹುದ್ದೆಗೆ ನೇಮಿಸಿದ ಕೇವಲ 24 ಗಂಟೆಗಳಲ್ಲಿ ವಿಜಯ ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ. ಮೈತ್ರಿಕೂಟದ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಮೇ 12, 2026 ರಂದು ಹೊರಡಿಸಲಾಗಿದ್ದ ನೇಮಕಾತಿ ಆದೇಶವನ್ನು ರದ್ದುಗೊಳಿಸಿರುವ ಬಗ್ಗೆ ಸಾರ್ವಜನಿಕ (Estt-IV) ಇಲಾಖೆಯು ಮೇ 13 ರಂದು ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ರೀಟಾ ಹರೀಶ ಠಕ್ಕರ್ ಅವರು ಈ ಆದೇಶಕ್ಕೆ ಸಹಿ ಹಾಕಿದ್ದು, ಮುಖ್ಯಮಂತ್ರಿಯವರ ಕಚೇರಿಯ ಸೂಚನೆಯ ಮೇರೆಗೆ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಿವಾದಕ್ಕೆ ಕಾರಣವೇನು?
ನಟ ಹಾಗೂ ರಾಜಕಾರಣಿ ವಿಜಯ ಅವರು ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಯವರ ‘ರಾಜಕೀಯ ಸಲಹೆಗಾರ ಮತ್ತು ಸಮನ್ವಯಾಧಿಕಾರಿ’ (OSD-Political) ಆಗಿ ನೇಮಿಸಿದ್ದರು. ಆದರೆ, ವೆಟ್ರಿವೇಲ್ ಅವರು ರಾಜಕೀಯ ವಲಯದಲ್ಲಿ ಕೇವಲ ಪಕ್ಷದ ವಕ್ತಾರರಾಗಿ ಮಾತ್ರವಲ್ಲದೆ, ‘ಜ್ಯೋತಿಷಿ’ ಎಂದು ಗುರುತಿಸಿಕೊಂಡಿರುವುದು ವಿವಾದಕ್ಕೆ ನಾಂದಿ ಹಾಡಿತು.ಈ ನೇಮಕಾತಿಯನ್ನು ವಿರೋಧಿಸಿ ಮೈತ್ರಿಕೂಟದ ಹಲವು ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. “ನಮ್ಮ ಸರ್ಕಾರವು ವೈಜ್ಞಾನಿಕ ಚಿಂತನೆಗೆ ಆದ್ಯತೆ ನೀಡಬೇಕೇ ಹೊರತು ಜ್ಯೋತಿಷ್ಯ ಮತ್ತು ಮೂಢನಂಬಿಕೆಗಳಿಗಲ್ಲ,” ಎಂದು ವಿಸಿಕೆ ಶಾಸಕ ವಾಣಿ ಅರಸು ವಿಧಾನಸಭೆಯಲ್ಲಿ ಆಗ್ರಹಿಸಿದ್ದರು.
“ಒಬ್ಬ ಜ್ಯೋತಿಷಿ ಏನು ಮಾಡಲು ಸಾಧ್ಯ? ಅವರು ಕೇವಲ ಭವಿಷ್ಯವನ್ನಷ್ಟೇ ಹೇಳಬಲ್ಲರು,” ಎಂದು ಡಿಎಂಕೆ ವಕ್ತಾರ ಟಿ.ಕೆ.ಎಸ್ ಇಳಂಗೋವನ್ ಲೇವಡಿ ಮಾಡಿದ್ದರು. ಕಾಂಗ್ರೆಸ್, ಸಿಪಿಐ(ಎಂ), ಡಿಎಂಡಿಕೆ ಮತ್ತು ಎಂಜಿಕೆ (MJK) ಪಕ್ಷಗಳು ಸಹ ಈ ನಿರ್ಧಾರವನ್ನು ಟೀಕಿಸಿದ್ದವು.
ವಿಜಯ ಆಪ್ತ ವಲಯದಲ್ಲಿ ವೆಟ್ರಿವೇಲ್
ಕಳೆದ ಕೆಲವು ವರ್ಷಗಳಿಂದ ವೆಟ್ರಿವೇಲ್ ಅವರು ವಿಜಯ ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಅತ್ಯಂತ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಟಿವಿಕೆ (TVK) ಪಕ್ಷ ಸ್ಥಾಪನೆಯಾದ ನಂತರ ಅವರನ್ನು ಅಧಿಕೃತ ವಕ್ತಾರರನ್ನಾಗಿ ಮಾಡಲಾಗಿತ್ತು. ಪಕ್ಷದ ಪರವಾಗಿ ದೂರದರ್ಶನ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅವರು, ವಿಜಯ ಅವರ ಅತ್ಯಂತ ನಂಬಿಕಸ್ತ ಸಲಹೆಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.
ಮೈತ್ರಿಕೂಟದ ಬಲ ಪ್ರದರ್ಶನದ ಹೊತ್ತಿನಲ್ಲಿ ಯಾವುದೇ ಬಿರುಕು ಉಂಟಾಗಬಾರದು ಎಂಬ ದೃಷ್ಟಿಯಿಂದ ವಿಜಯ ಅವರು ಈ ನೇಮಕಾತಿಯನ್ನು ರದ್ದುಗೊಳಿಸುವ ಮೂಲಕ ಪರೋಕ್ಷವಾಗಿ ಮೈತ್ರಿಧರ್ಮಕ್ಕೆ ಗೌರವ ನೀಡಿದ್ದಾರೆ ಎನ್ನಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ