ಪಾಕಿಸ್ತಾನದಲ್ಲಿ ಈಗಲೂ ಭಾರತ ವಿರೋಧಿ ಭಯೋತ್ಪಾದನಾ ಸಂಘಟನೆಗಳು ಸಕ್ರಿಯ : ಅಮೆರಿಕ ವರದಿ

ವಾಷಿಂಗ್ಟನ್: ಭಾರತ ಮತ್ತು ಕಾಶ್ಮೀರದಲ್ಲಿ ಸಾಂತಿ ಉಂಟು ಮಾಡುವ ಭಯೋತ್ಪಾದನಾ ಸಂಘಟನೆಗಳು ಸೇರಿದಂತೆ ಹಲವಾರು ಭಯೋತ್ಪಾದನಾ ಗುಂಪುಗಳಿಗೆ ಪಾಕಿಸ್ತಾನವು ಇಂದಿಗೂ ಆಶ್ರಯ ನೀಡುತ್ತಲೇ ಇದೆ ಎಂದು ಅಮೆರಿಕದ ಕಾಂಗ್ರೆಸ್ ಸಂಶೋಧನಾ ಸಂಸ್ಥೆಯ (CRS) ವರದಿ ಬಹಿರಂಗಪಡಿಸಿದೆ. ಪಾಕಿಸ್ತಾನ ಸರ್ಕಾರವು ಹಲವು ವರ್ಷಗಳಿಂದ ಸೇನಾ ಕಾರ್ಯಾಚರಣೆ ಮತ್ತು ನೀತಿಗಳನ್ನು ಜಾರಿಗೊಳಿಸಿದ್ದರೂ, ಉಗ್ರಗಾಮಿ ಗುಂಪುಗಳು ಅಲ್ಲಿನ ಮಣ್ಣಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿ ಎಚ್ಚರಿಸಿದೆ.
ಅಮೆರಿಕದ ಸಂಸತ್ತಿನ ಈ ಸ್ವತಂತ್ರ ಸಂಶೋಧನಾ ವಿಭಾಗದ ಪ್ರಕಾರ, ಭಾರತವನ್ನು ಗುರಿಯಾಗಿಸಿಕೊಂಡಿರುವ ಉಗ್ರಗಾಮಿ ಸಂಘಟನೆಗಳು ಪಾಕಿಸ್ತಾನದಲ್ಲಿ ರಾಜಾರೋಷವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದೆ.
 2008ರ ಮುಂಬೈ ದಾಳಿಯ ಹೊಣೆ ಹೊತ್ತಿರುವಲಷ್ಕರ್-ಎ-ತೈಬಾ (LeT)  ಸಂಘಟನೆ ಇಂದಿಗೂ ಪಾಕ್ ನೆಲದಲ್ಲಿದೆ.
2001ರ ಭಾರತದ ಸಂಸತ್ ಭವನದ ಮೇಲಿನ ದಾಳಿಗೆ ಸಂಬಂಧಿಸಿದ ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದನಾ ಗುಂಪು ಕೂಡ ಪಾಕಿಸ್ತಾನದಿಂದಲೇ ಕಾರ್ಯಾಚರಿಸುತ್ತಿದೆ. ಪಾಕಿಸ್ತಾನವು ಈ ಉಗ್ರ ಸಂಘಟನೆಗಳಿಗೆ ಕೇವಲ ನೆಲೆ (Base) ಮಾತ್ರವಲ್ಲದೆ, ಅದೇ ಗುಂಪುಗಳಿಗೆ ಗುರಿಯಾಗಿಯೂ (Target) ಪರಿಣಮಿಸಿದೆ ಎಂದು ವರದಿ ವಿಶ್ಲೇಷಿಸಿದೆ.
11 ವರ್ಷಗಳಲ್ಲೇ ಗರಿಷ್ಠ
ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ಅಬ್ಬರ ತೀವ್ರಗೊಂಡಿದೆ.2019 ರಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಸಾವಿನ ಸಂಖ್ಯೆ 365 ಕ್ಕೆ ಇಳಿದಿತ್ತು. ಆದರೆ ಅಲ್ಲಿಂದ ಪ್ರತಿ ವರ್ಷ ಈ ಸಂಖ್ಯೆ ಏರುತ್ತಲೇ ಸಾಗಿ, 2025 ರಲ್ಲಿ 4,001 ಕ್ಕೆ ತಲುಪಿದೆ. ಇದು ಕಳೆದ 11 ವರ್ಷಗಳಲ್ಲಿ ದಾಖಲಾದ ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ. 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳು ಪುನರುಜ್ಜೀವನಗೊಂಡಿವೆ. ಇದರಿಂದಾಗಿ ಪಾಕಿಸ್ತಾನವು “ಭಯೋತ್ಪಾದನೆಯಿಂದ ಅತಿ ಹೆಚ್ಚು ಹಾನಿಗೊಳಗಾದ ದೇಶ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉಗ್ರ ಸಂಘಟನೆಗಳ ವರ್ಗೀಕರಣ
ಪಾಕಿಸ್ತಾನದಲ್ಲಿರುವ ಉಗ್ರಗಾಮಿ ಗುಂಪುಗಳು ಹೆಚ್ಚಾಗಿ’ಇಸ್ಲಾಮಿಕ್ ಉಗ್ರಗಾಮಿ ಸಿದ್ಧಾಂತ’ದಿಂದ ಪ್ರೇರಿತವಾಗಿವೆ. ಇವುಗಳನ್ನು ಐದು ಪ್ರಮುಖ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಅವೆಂದರೆ ಜಾಗತಿಕ ಮಟ್ಟದ ಗುಂಪುಗಳು, ಅಫ್ಘಾನಿಸ್ತಾನ ಕೇಂದ್ರಿತ ಗುಂಪುಗಳು, ಭಾರತ ಮತ್ತು ಕಾಶ್ಮೀರ ಕೇಂದ್ರಿತ ಗುಂಪುಗಳು, ಪಾಕಿಸ್ತಾನದ ಒಳಗಿನ ಆಂತರಿಕ ವಿಚಾರಗಳ ಮೇಲೆ ಗಮನಹರಿಸುವ ಗುಂಪುಗಳು ಹಾಗೂ ಪಂಥೀಯ (Sectarian) ಸಂಘಟನೆಗಳು ಎಂದು ವರಗೀಕರಿಸಲಾಗಿದೆ.
ಅಲ್ ಖೈದಾ ಶಕ್ತಿ ಕುಂದಿದ್ದರೂ, ಪ್ರದೇಶದಲ್ಲಿ ಇನ್ನೂ ಸಕ್ರಿಯವಾಗಿದ್ದು ಇತರ ಉಗ್ರ ಸಂಘಟನೆಗಳೊಂದಿಗೆ ಮೈತ್ರಿ ಹೊಂದಿದೆ. ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯ (ISKP) ಗುಂಪು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಾದ್ಯಂತ ಕಾರ್ಯಾಚರಿಸುತ್ತಿದ್ದು, ಸುಮಾರು 4,000 ರಿಂದ 6,000 ಹೋರಾಟಗಾರರನ್ನು ಹೊಂದಿದೆ. ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಪಾಕಿಸ್ತಾನದ ಅತ್ಯಂತ ಭೀಕರ ಉಗ್ರ ಸಂಘಟನೆಯಾಗಿದ್ದು, ಸುಮಾರು 2,500 ರಿಂದ 5,000 ಸದಸ್ಯರನ್ನು ಹೊಂದಿದೆ. ಪಾಕಿಸ್ತಾನ ಸರ್ಕಾರವನ್ನು ಉರುಳಿಸಿ ‘ಶರಿಯಾ ಕಾನೂನು’ ಜಾರಿಗೊಳಿಸುವುದು ಇದರ ಮುಖ್ಯ ಗುರಿಯಾಗಿದೆ.
ಕಾಂಗ್ರೆಸ್ ಸಂಶೋಧನಾ ಸಂಸ್ಥೆ (CRS) ಅಮೆರಿಕ ಸಂಸತ್ತಿನ ಸದಸ್ಯರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವಂತೆ ವರದಿಗಳನ್ನು ಸಿದ್ಧಪಡಿಸುತ್ತದೆ. ಆದರೆ ಈ ವರದಿಗಳನ್ನು ಅಮೆರಿಕ ಸಂಸತ್ತಿನ ಅಧಿಕೃತ ನಿಲುವು ಎಂದು ಪರಿಗಣಿಸಲಾಗುವುದಿಲ್ಲ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement