ದೆಹಲಿ ಸ್ಫೋಟ | ಹೊರಬಿದ್ದ ಮತ್ತೊಂದು ವೀಡಿಯೊ ; ಜನದಟ್ಟಣೆ ರಸ್ತೆಯಲ್ಲಿ ಕಾರು ಸ್ಫೋಟಗೊಂಡ ಕ್ಷಣ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ದೆಹಲಿಯ ಕೆಂಪು ಕೋಟೆ (Red Fort) ಬಳಿ ನಡೆದ ಭೀಕರ ಸ್ಫೋಟ ಸಂಭವಿಸಿದ ಎರಡು ದಿನಗಳ ನಂತರ, ಹೊಸದಾಗಿ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಗಳು ವೈಟ್ ಹ್ಯುಂಡೈ ಐ20 (White Hyundai i20) ಕಾರು ರಶ್-ಅವರ್ ಸಂಚಾರದ ಮಧ್ಯೆ ಸ್ಫೋಟಗೊಂಡ ಕ್ಷಣವನ್ನು ಸೆರೆಹಿಡಿದಿವೆ.
ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರ ಬಳಿ ಅಳವಡಿಸಲಾಗಿದ್ದ ಟ್ರಾಫಿಕ್‌ ಕ್ಯಾಮೆರಾದಿಂದ ಪಡೆದ ಈ ದೃಶ್ಯಾವಳಿಗಳಲ್ಲಿ, ಇ-ರಿಕ್ಷಾಗಳು, ಆಟೋಗಳು ಮತ್ತು ಇತರ ವಾಹನಗಳಿಂದ ಸುತ್ತುವರಿದ ಹಾಗೂ ನಿಧಾನವಾಗಿ ಚಲಿಸುತ್ತಿದ್ದ ಬಿಳಿ ಹ್ಯುಂಡೈ ಐ20 ಕಾರು, ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವುದನ್ನು ತೋರಿಸುತ್ತದೆ.

ಸೋಮವಾರ ಸಂಜೆ 6:52ರ ಸುಮಾರಿಗೆ ಸಂಭವಿಸಿದ ಈ ಸ್ಫೋಟವು ದಟ್ಟಣೆಯಿಂದ ಕೂಡಿದ್ದ ಹಳೆಯ ದೆಹಲಿ ಪ್ರದೇಶದಲ್ಲಿ ಸಾವು-ನೋವಿಗೆ ಕಾರಣವಾಗಿದ್ದು, ಜನಸಾಮಾನ್ಯರಿಗೆ ಆಘಾತವನ್ನು ಉಂಟುಮಾಡಿದೆ. ಭಾರೀ ಸ್ಫೋಟದಿಂದ, ಸಮೀಪದ ವಾಹನಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಕೇಂದ್ರವು ಇದನ್ನು “ಘೋರ ಭಯೋತ್ಪಾದಕ ಕೃತ್ಯ” ಎಂದು ಬಣ್ಣಿಸಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಔಪಚಾರಿಕವಾಗಿ ತನಿಖೆಯನ್ನು ವಹಿಸಿಕೊಂಡಿದೆ.

ಸಿಸಿಟಿವಿ ದೃಶ್ಯಾವಳಿ: ಜನಸಂದಣಿಯ ನಡುವೆ ಸ್ಫೋಟ
ಸಿಸಿಟಿವಿ ವಿಡಿಯೋದಲ್ಲಿ ಐ20 ಕಾರು ದಟ್ಟಣೆಯ ಮೂಲಕ ನಿಧಾನವಾಗಿ ಚಲಿಸುತ್ತಿರುವಾಗ, ಇದ್ದಕ್ಕಿದ್ದಂತೆ ಒಂದು ಭಾರಿ ಸ್ಫೋಟದಿಂದ ಕಾರು ಬೆಂಕಿಯಿಂದ ಆವರಿಸುವುದನ್ನು ತೋರಿಸುತ್ತದೆ. ತುರ್ತು ಸೇವೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದರೂ, ಅಷ್ಟರಾಗಲೇ ಕಾರು ಸುಟ್ಟು ಕರಕಲಾಗಿತ್ತು. ಈ ದುರಂತದಲ್ಲಿ ಒಂಬತ್ತು ಜನರು ಸಾವಿಗೀಡಾಗಿರುವುದು ದೃಢಪಟ್ಟಿದ್ದು, ಕನಿಷ್ಠ ಒಂದು ಡಜನ್ ಜನರು ಗಾಯಗೊಂಡಿದ್ದಾರೆ.
ತನಿಖಾಧಿಕಾರಿಗಳು ಈ ವಾಹನವನ್ನು HR 26CE7674 ನೋಂದಣಿ ಸಂಖ್ಯೆ ಹೊಂದಿರುವ ಬಿಳಿ ಹ್ಯುಂಡೈ ಐ20 ಎಂದು ಗುರುತಿಸಿದ್ದಾರೆ. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಗುಂಪಿನ ಶಂಕಿತ ಸದಸ್ಯ, ಡಾ. ಉಮರ್ ನಬಿ ಎಂಬ 32 ವರ್ಷದ ವೈದ್ಯ ಈ ಕಾರನ್ನು ಚಲಾಯಿಸುತ್ತಿದ್ದ ಎಂದು ಶಂಕಿಸಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement