ಮಹಾರಾಷ್ಟ್ರ: ಜಿಪ್ಲೈನ್ ಸಾಹಸ ಸವಾರಿಯಲ್ಲಿ ಗುರುವಾರ ತಾಂತ್ರಿಕ ದೋಷ ಉಂಟಾಗಿ ಪ್ರವಾಸಿಗರೊಬ್ಬರು ಸುಮಾರು 3,500 ಅಡಿ ಆಳದ ಕಂದಕದ ಮೇಲೆಯೇ ನೇತಾಡಿದ ಘಟನೆ ನಡೆದಿದೆ.
ಈ ಘಟನೆ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ತೋರಣಮಲ್ನಲ್ಲಿ ಇರುವ ಪ್ರಸಿದ್ಧ ಸೀತಾಖೈ ಪಾಯಿಂಟ್ನಲ್ಲಿ ಪ್ರವಾಸಿಗರಿಗಾಗಿ ಹೊಸದಾಗಿ ಆರಂಭಿಸಲಾಗಿರುವ ಜಿಪ್ಲೈನ್ ಸಾಹಸ ಸವಾರಿ ವೇಳೆ ಈ ಘಟನೆ ಸಂಭವಿಸಿದೆ. ಈ ಸಾಹಸಮಯ ಜಿಪ್ಲೈನ್ ಸವಾರಿಯನ್ನು ಆನಂದಿಸುತ್ತಿದ್ದ ವೇಳೆ, ತಾಂತ್ರಿಕ ದೋಷದಿಂದಾಗಿ ಪ್ರವಾಸಿಗರು ಮಧ್ಯದಲ್ಲೇ ನೇತಾಡುವ ಪರಿಸ್ಥಿತಿ ಎದುರಾಯಿತು. ಸುಮಾರು 3,500 ಅಡಿ ಆಳದ ಕಂದಕದ ಮೇಲೆ ಅವರು ಗಾಳಿಯಲ್ಲಿ ನೇತಾಡುತ್ತಿರುವ ದೃಶ್ಯವನ್ನು ಕಂಡ ಸ್ಥಳದಲ್ಲಿದ್ದವರು ಆತಂಕಕ್ಕೀಡಾದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಜಿಪ್ಲೈನ್ ಸಿಬ್ಬಂದಿ ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ತರಬೇತಿ ಪಡೆದ ಸಿಬ್ಬಂದಿಯೊಬ್ಬರು ಜಿಪ್ಲೈನ್ ಮೂಲಕವೇ ಸಿಲುಕಿದ್ದ ಪ್ರವಾಸಿಗರ ಬಳಿಗೆ ತಲುಪಿ, ಅತ್ಯಂತ ಎಚ್ಚರಿಕೆಯಿಂದ ಅವರನ್ನು ಸುರಕ್ಷಿತವಾಗಿ ಸುರಕ್ಷಿತವಾಗಿ ಕರೆತಂದರು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಪ್ರವಾಸಿಗರು ಮಧ್ಯ ಗಾಳಿಯಲ್ಲಿ ನೇತಾಡುತ್ತಿರುವುದು ಹಾಗೂ ರಕ್ಷಣಾ ಸಿಬ್ಬಂದಿ ಅವರ ಬಳಿಗೆ ತೆರಳಿ ಸುರಕ್ಷಿತವಾಗಿ ಕರೆತರುತ್ತಿರುವ ದೃಶ್ಯಗಳು ಕಾಣಿಸುತ್ತವೆ.
ದಾಂಡೇಲಿ ಘಟನೆ ಇನ್ನೂ ಹಸಿರಾಗಿರುವಾಗ ಮತ್ತೊಂದು ಅವಘಡ
ಈ ಘಟನೆ ನಡೆದ ಕೆಲವೇ ದಿನಗಳ ಹಿಂದೆ ಕರ್ನಾಟಕದ ದಾಂಡೇಲಿಯಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಸಂಭವಿಸಿದ ಜಿಪ್ಲೈನ್ ಅವಘಡ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ವಿಜಯಪುರ ಮೂಲದ ಕುಬೇರ ಸುರಪುರ ಎಂಬ ಪ್ರವಾಸಿಗರು ಜಿಪ್ಲೈನ್ ಸವಾರಿ ಮಾಡುತ್ತಿದ್ದ ವೇಳೆ ಸುರಕ್ಷತಾ ವ್ಯವಸ್ಥೆ ವಿಫಲಗೊಂಡು ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರು. ಪರಿಣಾಮ ಅವರ ಕೈ ಮತ್ತು ಕಾಲುಗಳಿಗೆ ಹಲವು ಮೂಳೆ ಮುರಿತಗಳಾಗಿದ್ದು, ನರಗಳಿಗೂ ಗಂಭೀರ ಹಾನಿಯಾಗಿತ್ತು.
ಈ ದಾಂಡೇಲಿ ಘಟನೆಯೂ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ಎರಡು ಘಟನೆಗಳು ಸಾಹಸ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಅನುಸರಿಸಲಾಗುತ್ತಿರುವ ಸುರಕ್ಷತಾ ಮಾನದಂಡಗಳ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.


ನಿಮ್ಮ ಕಾಮೆಂಟ್ ಬರೆಯಿರಿ