ವಾಷಿಂಗ್ಟನ್: ಇರಾನ್ನಲ್ಲಿರುವ ಜಲಾಂತರ್ಗಾಮಿ ನೌಕೆ ಹಾಗೂ ಹಡಗುಗಳ ನಿರ್ವಹಣಾ ಕೇಂದ್ರದ ಮೇಲೆ ಅಮೆರಿಕದ ಸೇನೆ ದಾಳಿ ನಡೆಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸೋಮವಾರ ತಿಳಿಸಿದೆ.
ಭಾನುವಾರ ಬಹುಸಂಖ್ಯೆಯ ಸಮುದ್ರ ಡ್ರೋನ್ಗಳನ್ನು (One-way Attack Surface Drones) ಬಳಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೆಂಟ್ಕಾಮ್ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
“ನಿನ್ನೆ ಬಹು ಸಂಖ್ಯೆಯ ಏಕಮುಖ ದಾಳಿ ನಡೆಸುವ ಸಮುದ್ರ ಡ್ರೋನ್ಗಳನ್ನು ಬಳಸಿ, ಇರಾನ್ನಲ್ಲಿರುವ ಜಲಾಂತರ್ಗಾಮಿ ನೌಕೆ ಹಾಗೂ ಹಡಗುಗಳ ನಿರ್ವಹಣಾ ಕೇಂದ್ರವನ್ನು ಸೆಂಟ್ಕಾಮ್ ಪಡೆಗಳು ಯಶಸ್ವಿಯಾಗಿ ಟಾರ್ಗೆಟ್ ಮಾಡಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆ ಪರಸ್ಪರ ದಾಳಿಗಳು ಮತ್ತೆ ತೀವ್ರಗೊಂಡಿರುವ ಸಂದರ್ಭದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಮೆರಿಕ ಇರಾನ್ನ ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದರೆ, ಪ್ರತಿಯಾಗಿ ಇರಾನ್ ಕತಾರ್, ಬಹ್ರೇನ್, ಜೋರ್ಡಾನ್ ಮತ್ತು ಓಮನ್ ಸೇರಿದಂತೆ ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.
ಇರಾನಿನ ಪ್ರಮುಖ ಬಂದರು ನಗರವಾದ ಬಂದರ್ ಅಬ್ಬಾಸ್ ಬಂದರಿನ ಮೇಲೆ ಮೂರು ಕಾರ್ಸೇರ್ (Corsair) ಮಾನವರಹಿತ ಸಮುದ್ರ ನೌಕೆಗಳನ್ನು (Unmanned Surface Vessels) ಬಳಸಿ ಈ ದಾಳಿ ನಡೆಸಲಾಗಿದೆ. ಸಮುದ್ರ ಡ್ರೋನ್ಗಳನ್ನು ಯುದ್ಧ ಕಾರ್ಯಾಚರಣೆಯಲ್ಲಿ ಅಮೆರಿಕ ಇದೇ ಮೊದಲ ಬಾರಿಗೆ ಬಳಸಿದೆ ಎಂದು ವರದಿಯಾಗಿದೆ.
“ಕಳೆದ ರಾತ್ರಿ ನಡೆದ ಈ ದಾಳಿಗಳು ವಾಣಿಜ್ಯ ಹಡಗುಗಳ ಮೇಲೆ ದಾಳಿ ಮುಂದುವರಿಸುವ ಇರಾನ್ನ ಸಾಮರ್ಥ್ಯವನ್ನು ಕುಗ್ಗಿಸಿವೆ” ಎಂದು ಅಮೆರಿಕದ ಸೇನೆ ತಿಳಿಸಿದೆ. ಇದಕ್ಕೂ ಕೆಲವೇ ಗಂಟೆಗಳ ಮೊದಲು, ಅಮೆರಿಕ ಸೇನೆ ಸೋಮವಾರ ಇರಾನ್ನಾದ್ಯಂತ ಡಜನ್ಗಟ್ಟಲೆ ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿತ್ತು. ಈ ದಾಳಿಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಕೇಂದ್ರಗಳು, ಕ್ಷಿಪಣಿ ಮತ್ತು ಡ್ರೋನ್ ಉಪಕರಣಗಳು ಹಾಗೂ ಸಣ್ಣ ದೋಣಿಗಳನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದೆ.
ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾವು ಈಗ ಹಾರ್ಮುಜ್ ಜಲಸಂಧಿಯ ನಿಯಂತ್ರಣವನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದೇವೆ” ಎಂದು ಸೋಮವಾರ ಹೇಳಿದ್ದಾರೆ. ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದ ಬಳಿಕ ತಮ್ಮ ಟ್ರೂತ್ ಸೋಷಿಯಲ್ (Truth Social) ಖಾತೆಯಲ್ಲಿ ಪ್ರಕಟಣೆ ನೀಡಿದ ಟ್ರಂಪ್, ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಎಲ್ಲಾ ಸರಕು ಸಾಗಣೆ ಹಡಗುಗಳ ಮೇಲೆ ಶೇ.20ರಷ್ಟು ಶುಲ್ಕ ವಿಧಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
“ಇನ್ನು ಮುಂದೆ ಅಮೆರಿಕವನ್ನು ‘ಹಾರ್ಮುಜ್ ಜಲಸಂಧಿಯ ರಕ್ಷಕ’ (THE GUARDIAN OF THE HORMUZ STRAIT) ಎಂದು ಕರೆಯಲಾಗುವುದು. ಈ ಅತ್ಯಂತ ಸೂಕ್ಷ್ಮ ಮತ್ತು ಅಸ್ಥಿರ ಸಮುದ್ರ ಮಾರ್ಗದಲ್ಲಿ ಭದ್ರತೆ ಒದಗಿಸಲು ಆಗುವ ಎಲ್ಲಾ ಖರ್ಚು-ವೆಚ್ಚಗಳ ಮರುಪಾವತಿಯಾಗಿ ಸಾಗಿಸಲ್ಪಡುವ ಪ್ರತಿಯೊಂದು ಸರಕುಗಳ ಮೇಲೂ ಶೇ.20ರಷ್ಟು ಶುಲ್ಕ ವಿಧಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಲಾಗುವುದು” ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಟ್ರಂಪ್, “ಹಾರ್ಮುಜ್ ಜಲಸಂಧಿ ತೆರೆದಿದೆ ಮತ್ತು ಇರಾನ್ ಸಹಕಾರ ನೀಡಲಿ ಅಥವಾ ನೀಡದಿರಲಿ, ಅದು ತೆರೆದೇ ಇರುತ್ತದೆ” ಎಂದು ಹೇಳಿದ್ದಾರೆ.
ಸೋಮವಾರ ಅಮೆರಿಕ ನಡೆಸಿದ ದಾಳಿಯಲ್ಲಿ ಕುವೈತ್ ಮತ್ತು ಇರಾಕ್ ಗಡಿಭಾಗದ ಸಮೀಪವಿರುವ ಇರಾನ್ನ ನೈಋತ್ಯ ಭಾಗದ ತೈಲ ಉತ್ಪಾದನಾ ಪ್ರದೇಶದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಇರಾನ್ನ ಫಾರ್ಸ್ (Fars) ಹಾಗೂ ತಸ್ನೀಮ್ (Tasnim) ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಯತ್ನಿಸುತ್ತಿದ್ದ ಎರಡು ಹಡಗುಗಳ ಮೇಲೆ ಇರಾನ್ “ಎಚ್ಚರಿಕೆ ಗುಂಡಿನ ದಾಳಿ” ನಡೆಸಿದೆ ಎಂದು ಅಲ್ಲಿನ ಸರ್ಕಾರಿ ದೂರದರ್ಶನ ವರದಿ ಮಾಡಿದೆ.
ಭಾನುವಾರ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಕಂಟೇನರ್ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಈ ಹೊಸ ಸುತ್ತಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ