
ಈ ಮೃಗಾಲಯಕ್ಕೆ ಈಗ ಜನಸಾಗರವೇ ಹರಿದುಬರುತ್ತಿದೆ. ಆದರೆ, ಈ ಜನಸಂದಣಿಗೆ ಕಾರಣ ಯಾವುದೋ ಅದ್ಭುತ ಪ್ರದರ್ಶನವಲ್ಲ, ಬದಲಾಗಿ ಒಂದು ಪುಟ್ಟ ಜೀವದ ಮೌನ ವೇದನೆ ಮತ್ತು ಅದು ಕಂಡುಕೊಂಡಿರುವ ಪುಟ್ಟ ಆಸರೆ.
ಇದು ಜಪಾನ್ನ ಇಚಿಕಾವಾ ನಗರದ ಮೃಗಾಲಯದ ಏಳು ತಿಂಗಳ ಮಕಾಕ್ ಕೋತಿ ಮರಿ ‘ಪಂಚ್-ಕುನ್’ (Punch-kun) ಅಲಿಯಾಸ್ ‘ಪಂಚ್’ನ ಕಥೆ. ತನ್ನ ತಾಯಿಯಿಂದಲೇ ದೂರವಾದ ಈ ಪುಟ್ಟ ಜೀವ, ಇಂದು ಒಂದು ಮೃದುವಾದ ‘ಆರೆಂಗುಟನ್’ ಬೊಂಬೆಯನ್ನೇ ತನ್ನ ಇಡೀ ಪ್ರಪಂಚವೆಂದು ನಂಬಿ ಅಪ್ಪಿ ಹಿಡಿದುಕೊಳ್ಳುವ ಪರಿಗಾಗಿ. ಗೊಂಬೆಯ ಜೊತೆಗಿನ ಅದರ ಮನಮಿಡಿಯುವ ದೃಶ್ಯಗಳು ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುತ್ತಿವೆ.
ಅನಾಥ ಮರಿಯ ಏಕಾಂಗಿ ಪಯಣ
ಪಂಚ್ ಜುಲೈ 2025ರಲ್ಲಿ ಜನಿಸಿತು. ಆದರೆ ವಿಧಿಯಾಟವೆಂಬಂತೆ ಜನಿಸಿದ ಕೆಲವೇ ದಿನಗಳಲ್ಲಿ ತಾಯಿಯು ತನ್ನ ಮರಿ ಪಂಚ್ನನ್ನು ಕೈಬಿಟ್ಟಿತು. ಕೋತಿ ಮರಿಗಳಿಗೆ ತಾಯಿಯ ಬೆಚ್ಚಗಿನ ಅಪ್ಪುಗೆ ಕೇವಲ ಪ್ರೀತಿಯಲ್ಲ, ಅದು ಅವುಗಳ ಬದುಕಿನ ಭದ್ರತೆ. ಉಷ್ಣತೆ, ಸುರಕ್ಷತೆ ಮತ್ತು ಭಾವನಾತ್ಮಕ ನಿಯಂತ್ರಣಕ್ಕಾಗಿ ಅವು ತಾಯಿಯ ಅಪ್ಪುಗೆಯನ್ನು ಅವಲಂಬಿಸಿವೆ. ಆರಂಭದಿಂದಲೂ ತಾಯಿಯ ಬಾಂಧವ್ಯದಿಂದ ವಂಚಿತವಾಗಿ ಕಂಗಾಲಾದ ಪಂಚ್ನನ್ನು ಮೃಗಾಲಯದ ಸಿಬ್ಬಂದಿ ದಿನದ 24 ಗಂಟೆಯೂ ಪೋಷಿಸಿದರು. ಈ ಮರಿಯ ಆತಂಕವನ್ನು ದೂರ ಮಾಡಲು ಸಿಬ್ಬಂದಿ ಮೃದುವಾದ ಹೊದಿಕೆ ಮತ್ತು ಬೊಂಬೆಗಳನ್ನು ನೀಡಿದರು. ಆಗ ಪಂಚ್ ಆರಿಸಿಕೊಂಡಿದ್ದು ಒಂದು ‘ಆರೆಂಗುಟನ್’ ಬೊಂಬೆಯನ್ನು. ಅಂದಿನಿಂದ ಆ ಬೊಂಬೆ ಈ ಮರಿಯ ಬದುಕಿನ ಅವಿಭಾಜ್ಯ ಅಂಗವಾಗಿದೆ.

ಇಂಟರ್ನೆಟ್ ಲೋಕದಲ್ಲಿ ಸಂಚಲನ
X (ಟ್ವಿಟರ್) ಮತ್ತು ಇನ್ಸ್ಟಾಗ್ರಾಮ್ನಲ್ಲಿ ಪಂಚ್ನ ವಿಡಿಯೋಗಳು ವೈರಲ್ ಆಗಿವೆ. ಈ ಮರಿ ಕೋತಿ ನಿದ್ರಿಸುವಾಗ ಬೊಂಬೆಯನ್ನು ಬಿಗಿಯಾಗಿ ಅಪ್ಪಿಕೊಳ್ಳುವುದು, ಎಲ್ಲಿಗೆ ಹೋದರೂ ಅದನ್ನು ಎಳೆದುಕೊಂಡು ಹೋಗುವುದು, ಮತ್ತು ಬೇರೆ ಕೋತಿಗಳು ದೂರ ತಳ್ಳಿದಾಗ ಆ ಬೊಂಬೆಯ ಹಿಂದೆ ಅಡಗಿಕೊಳ್ಳುವ ದೃಶ್ಯಗಳು ನೋಡುಗರ ಮನ ಕರಗಿಸುತ್ತಿವೆ.
“ಕೋತಿ ಮರಿಯು ಬೊಂಬೆಯನ್ನು ಎಳೆದುಕೊಂಡು ಹೋಗುವುದನ್ನು ನೋಡಲು ಮುದ್ದಾಗಿದ್ದರೂ, ಅಷ್ಟೇ ಸಂಕಟವಾಗುತ್ತದೆ” ಎಂದು ಒಬ್ಬರು ಬರೆದರೆ, ಮತ್ತೊಬ್ಬರು “ಪಂಚ್, ನೀನು ಒಂದು ದಿನ ಮಹಾನ್ ವೂಕಾಂಗ್ (Wukong) ಆಗುತ್ತೀಯಾ, ನಂಬಿಕೆ ಇರಲಿ” ಎಂದು ಹೇಳಿದ್ದಾರೆ.
ಮೃಗಾಲಯಕ್ಕೆ ಅನಿರೀಕ್ಷಿತ ಜನಸಾಗರ
ಪಂಚ್ನ ಈ ಮೌನ ಸಂಕಟದ ಕಥೆ ಕೇಳಿ ಜಪಾನ್ನಾದ್ಯಂತ ಜನ ಇಚಿಕಾವಾ ಮೃಗಾಲಯಕ್ಕೆ ಧಾವಿಸುತ್ತಿದ್ದಾರೆ. ಫೆಬ್ರವರಿ 15ರಂದು ಮೃಗಾಲಯದ ಆಡಳಿತ ಮಂಡಳಿಯು, “ಈ ಮಟ್ಟದ ಜನಸಂದಣಿಯನ್ನು ನಾವು ನಿರೀಕ್ಷಿಸಿರಲಿಲ್ಲ” ಎಂದು ಹೇಳಿಕೆ ನೀಡಿದೆ. ಗೇಟ್ನ ಮುಂದೆ ಸಾಲುಗಟ್ಟಿ ನಿಂತ ಪ್ರವಾಸಿಗರಿಗೆ ಕ್ಷಮೆ ಕೇಳಿರುವ ಮೃಗಾಲಯ, ಮುಂಬರುವ ರಜಾದಿನಗಳಲ್ಲಿ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.
ಹೊಸ ಜೀವನದತ್ತ ಪುಟ್ಟ ಹೆಜ್ಜೆ
ಜನವರಿ ಮಧ್ಯಭಾಗದಿಂದ ಪಂಚ್ನನ್ನು ಇತರ ಕೋತಿಗಳ ಗುಂಪಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಬೇರೆ ಕೋತಿಗಳು ಈ ಕೋತಿ ಮರಿಯನ್ನು ದೂರ ತಳ್ಳಿದಾಗ ಪಂಚ್ ಹೆದರಿ ಮತ್ತೆ ತನ್ನ ಬೊಂಬೆಯನ್ನೇ ಆಶ್ರಯಿಸುತ್ತಿತ್ತು. ಆದರೆ, ಫೆಬ್ರವರಿ 6ರ ಅಪ್ಡೇಟ್ ಪ್ರಕಾರ, ಪಂಚ್ ಈಗ ನಿಧಾನವಾಗಿ ಗುಂಪಿನೊಂದಿಗೆ ಬೆರೆಯುತ್ತಿದೆ.
“ಪಂಚ್ ಈಗ ಇತರ ಕೋತಿಗಳೊಂದಿಗೆ ಆಟವಾಡುತ್ತಿದೆ, ಅವುಗಳಿಂದ ಉಗುಳಿಸಿಕೊಳ್ಳುತ್ತಿದೆ(grooming), ಕೆಲವೊಮ್ಮೆ ಬೈಸಿಕೊಳ್ಳುತ್ತಿದೆ. ಒಬ್ಬಂಟಿ ಕೋತಿಯಾಗಿ ಬದುಕುವುದು ಹೇಗೆಂದು ನಿಧಾನವಾಗಿ ಕಲಿಯುತ್ತಿದೆ,” ಎಂದು ಮೃಗಾಲಯ ಹೇಳಿದೆ.
ಇತ್ತೀಚಿನ ವಿಡಿಯೋಗಳಲ್ಲಿ ಅದು ತನ್ನ ಬೊಂಬೆಯನ್ನು ಹಿಡಿದಿದ್ದರೂ, ಇತರ ಕೋತಿಗಳ ಬಳಿ ಹೋಗಲು ಧೈರ್ಯ ಮಾಡುತ್ತಿರುವುದು ಸಂತಸ ತಂದಿದೆ.
‘ಮೂ ಡೆಂಗ್’ ಮತ್ತು ‘ಪಂಚ್’ ನಡುವಿನ ವ್ಯತ್ಯಾಸ
ಕೆಲವು ದಿನಗಳ ಹಿಂದೆ ಥೈಲ್ಯಾಂಡ್ನ ‘ಮೂ ಡೆಂಗ್’ ಎಂಬ ಹಿಪೊಪೊಟಮಸ್ ಮರಿ ಇಂಟರ್ನೆಟ್ನಲ್ಲಿ ವೈರಲ್ ಆಗಿತ್ತು. ಆದರೆ ಅದಕ್ಕೂ ಪಂಚ್ಗೂ ವ್ಯತ್ಯಾಸವಿದೆ. ಮೂ ಡೆಂಗ್ ತನ್ನ ತುಂಟಾಟ ಮತ್ತು ತಮಾಷೆಯ ವರ್ತನೆಯಿಂದ ಜನರನ್ನ ನಗಿಸಿತ್ತು. ಆದರೆ ಪಂಚ್ ಎಲ್ಲರನ್ನೂ ಅಳುವಂತೆ ಮಾಡಿದೆ. ಈ ಮಂಗದ ಮರಿಯಲ್ಲಿ ತುಂಟಾಟವಿಲ್ಲ, ಬದಲಾಗಿ “ನನಗೊಂದು ಅಪ್ಪುಗೆ ಬೇಕು” ಎಂಬಂತಿರುವ ಅದರ ಮುಗ್ಧತೆ ಜನರ ಹೃದಯ ಗೆದ್ದಿದೆ.
ಪಂಚ್ ಇಂದಿಗೂ ತನ್ನ ಬೊಂಬೆಯನ್ನು ಬಿಟ್ಟಿಲ್ಲ. ಅದು ಇನ್ನೂ ಗುಂಪಿನಲ್ಲಿ ತನ್ನ ಸ್ಥಾನಕ್ಕಾಗಿ ಹುಡುಕಾಡುತ್ತಿದೆ. ಆದರೆ ಇಂದು ಜಪಾನ್ನಿಂದ ಹಿಡಿದು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಪುಟ್ಟ ಜೀವ ತನ್ನ ನೋವನ್ನು ಮರೆತು, ಹೊಸ ಸ್ನೇಹಿತರೊಂದಿಗೆ ಸುಖವಾಗಿ ಬಾಳಲಿ ಎಂದು ಹಾರೈಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ