ದೆಹಲಿ ಸ್ಫೋಟ | ಬಂಧಿತ ಫರೀದಾಬಾದ್ ವೈದ್ಯೆಗೆ ಪುಲ್ವಾಮಾ ದಾಳಿಯ ʼಮಾಸ್ಟರ್ ಮೈಂಡ್‌ʼ ಪತ್ನಿಯ ಜೊತೆ ಲಿಂಕ್‌ : ಮೂಲಗಳು

ನವದೆಹಲಿ: ದೆಹಲಿ ಕಾರ್‌ ಸ್ಫೋಟ ಪ್ರಕರಣ ಮತ್ತು ಫರೀದಾಬಾದ್‌ನಲ್ಲಿ ಸ್ಫೋಟಕಗಳ ವಶಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆಯಲ್ಲಿ ಮಹತ್ವದ ಅಂಶಗಳು ಬಯಲಾಗಿವೆ. ಬಂಧಿತ ವೈದ್ಯೆ ಡಾ. ಶಾಹೀನ್ ಸಯೀದ್ ಜೈಷ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಕಮಾಂಡರ್ ಮತ್ತು ಪುಲ್ವಾಮಾ ದಾಳಿಯ ಸೂತ್ರಧಾರ ಉಮರ್ ಫಾರೂಖ್‌ನ ಪತ್ನಿ ಅಫೀರಾ ಬಿಬಿ ಜೊತೆ ಸಂಪರ್ಕದಲ್ಲಿದ್ದಳು ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
2019ರ ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು. ಈ ದಾಳಿಯ ನಂತರ ನಡೆದ ಎನ್‌ಕೌಂಟರ್‌ನಲ್ಲಿ ಜೈಷ್ ಮುಖ್ಯಸ್ಥ ಮಸೂದ್ ಅಝರ್‌ನ ಸೋದರಳಿಯ ಉಮರ್ ಫಾರೂಖ್ ಹತನಾಗಿದ್ದ. ಹತನಾದ ಉಮರ್ ಫಾರೂಖ್‌ನ ಪತ್ನಿ ಅಫೀರಾ ಬಿಬಿ, ಜೈಷ್‌ನ ಹೊಸದಾಗಿ ಆರಂಭಿಸಲಾದ ಮಹಿಳಾ ಬ್ರಿಗೇಡ್ ‘ಜಮಾತ್-ಉಲ್-ಮೊಮಿನಾತ್’ನ ಪ್ರಮುಖ ಮುಖ ಎಂದು ತಿಳಿದು ಬಂದಿದೆ.
ದೆಹಲಿ ಸ್ಫೋಟಕ್ಕೂ ಕೆಲ ವಾರಗಳ ಮೊದಲು, ಅಫೀರಾ ಈ ಬ್ರಿಗೇಡ್‌ನ ಸಲಹಾ ಮಂಡಳಿಯಾದ ‘ಶೂರಾ’ಕ್ಕೆ ಸೇರ್ಪಡೆಯಾಗಿದ್ದಳು. ಅಫೀರಾ ಬಿಬಿ, ಘೋಷಿತ ಉಗ್ರ ಮಸೂದ್ ಅಜರ್‌ನ ಕಿರಿಯ ಸಹೋದರಿ ಸಾದಿಯಾ ಅಜರ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದ್ದು, ಈ ಇಬ್ಬರೂ ವೈದ್ಯೆ ಶಾಹೀನ್ ಸಯೀದ್ ಜೊತೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಭಾರತದಲ್ಲಿ ಮಹಿಳಾ ವಿಭಾಗ ಸ್ಥಾಪನೆಯ ಜವಾಬ್ದಾರಿ:
ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಹಿರಿಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ಡಾ. ಶಾಹೀನ್ ಸಯೀದ್ ಕಾರಿನಲ್ಲಿ ಅಸಾಲ್ಟ್ ರೈಫಲ್‌ಗಳು ಮತ್ತು ಇತರ ಸ್ಫೋಟಕಗಳು ಪತ್ತೆಯಾದ ನಂತರ ಅವಳನ್ನು ಬಂಧಿಸಲಾಗಿದೆ. ತನಿಖೆಯ ಪ್ರಕಾರ, ಭಾರತದಲ್ಲಿ ‘ಜಮಾತ್-ಉಲ್-ಮೊಮಿನಾತ್’ನ ವಿಭಾಗವನ್ನು ಸ್ಥಾಪಿಸಿ, ಉಗ್ರ ಚಟುವಟಿಕೆಗಳಿಗಾಗಿ ಮಹಿಳೆಯರನ್ನು ನೇಮಕ ಮಾಡುವ ಜವಾಬ್ದಾರಿಯನ್ನು ಶಾಹೀನ್ ಸಯೀದ್‌ಗೆ ವಹಿಸಲಾಗಿತ್ತು.
ಶಾಹೀನ್ ಹಿನ್ನೆಲೆ ಮತ್ತು ತನಿಖೆಯ ವಿವರಗಳು:
ಮೂಲತಃ ಲಕ್ನೋ ನಿವಾಸಿ ಶಾಹೀನ್ ಸಯೀದ್, ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲು ಹಲವು ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡಿದ್ದಳು. 2012ರ ಸೆಪ್ಟೆಂಬರ್‌ನಿಂದ 2013ರ ಡಿಸೆಂಬರ್‌ವರೆಗೆ ಕಾನ್ಪುರದ ವೈದ್ಯಕೀಯ ಕಾಲೇಜಿನಲ್ಲಿ ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥಳಾಗಿದ್ದಳು. ಪಾಸ್‌ಪೋರ್ಟ್ ವಿವರಗಳ ಪ್ರಕಾರ, ಅವರು 2016 ರಿಂದ 2018ರವರೆಗೆ ಎರಡು ವರ್ಷ ಯುಎಇಯಲ್ಲಿ ವಾಸಿಸಿದ್ದಳು.

ಶಾಹೀನ್ ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ ಮತ್ತು ರಜೆ ತೆಗೆದುಕೊಳ್ಳುವ ಬಗ್ಗೆಯೂ ಯಾರಿಗೆ ಮಾಹಿತಿ ನೀಡುತ್ತಿರಲಿಲ್ಲ ಎಂದು ಅವಳ ಸಹೋದ್ಯೋಗಿಗಳು ಹೇಳಿದ್ದಾರೆ. ವೈದ್ಯರಾದ ಡಾ. ಹಯಾತ್ ಜಾಫರ್ ಜೊತೆ 2012ರಲ್ಲಿ ಶಾಹೀನ್ ವಿಚ್ಛೇದನ ಪಡೆದಿದ್ದು, ಇವರಿಬ್ಬರ ಇಬ್ಬರು ಮಕ್ಕಳು ಡಾ. ಜಾಫರ್ ಅವರೊಂದಿಗಿದ್ದಾರೆ.
ರೆಡ್‌ಫೋರ್ಟ್ ಬಳಿ ಕಾರು ಸ್ಫೋಟಕ್ಕೆ ಕಾರಣನಾಗಿ 13 ಜನರು ಸಾವು ಮತ್ತು 20 ಜನರನ್ನು ಗಾಯಗೊಳ್ಳಲು ಕಾರಣನಾದ ಉಮರ್ ಎಂಬ ವ್ಯಕ್ತಿ ಈ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಶಾಹೀನ್ ಮತ್ತು ಮುಝಮ್ಮಿಲ್‌ ಜೊತೆ ಉಮರ್ ಸಹ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ.
ಶಾಹೀನ್ ತರಗತಿಗಳಿಗೆ ಗೈರು ಹಾಜರಾಗುತ್ತಿದ್ದಳು ಎಂಬ ದೂರುಗಳು ವಿಶ್ವವಿದ್ಯಾಲಯಕ್ಕೆ ಬಂದಿದ್ದವು. ಹೀಗಾಗಿ ಅವಳ ಹಾಜರಾತಿ ವಿವರಗಳನ್ನು ನೀಡುವಂತೆ ತನಿಖಾಧಿಕಾರಿಗಳು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement