ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಲೆಗೆ ಟಿಎಂಸಿ ಧೂಳೀಪಟ ; ತಮಿಳುನಾಡಲ್ಲಿ ʼವಿಜಯʼ ಕ್ರಾಂತಿ, ಕೇರಳದಲ್ಲಿ ʼಕೈʼಗೆ ಜೈ, ಅಸ್ಸಾಂನಲ್ಲಿ ಬಿಜೆಪಿಗೆ ಮತ್ತೆ ಮಣೆ

 ನವದೆಹಲಿ:  ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದ್ದು, ಕೆಲವೆಡೆ ದಶಕಗಳ ಕಾಲ ಆಳ್ವಿಕೆ ನಡೆಸಿದ ನಾಯಕರನ್ನು ಮತದಾರರು ತಿರಸ್ಕರಿಸಿದ್ದು, ಹೊಸ ನಾಯಕತ್ವಕ್ಕೆ ಮನ್ನಣೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತಿಮ ತೆರೆ ಬಿದ್ದಿದೆ. 294 ಕ್ಷೇತ್ರಗಳ ಪೈಕಿ ಬಿಜೆಪಿ 208 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಇತಿಹಾಸ ನಿರ್ಮಿಸಿದೆ. ಗ್ರಾಮೀಣ ಭಾಗದ ಅಸಮಾಧಾನ ಮತ್ತು ಮತದಾರರ ಪಟ್ಟಿಯ ವಿವಾದಗಳು ತೃಣಮೂಲ ಕಾಂಗ್ರೆಸ್‌ಗೆ (79 ಸ್ಥಾನ) ಭಾರೀ ಹೊಡೆತ ನೀಡಿವೆ. ಟಿಎಂಸಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಸುವೆಂದು ಅಧಿಕಾರಿ ವಿರುದ್ಧ 15ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದಾರೆ.  ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ತಲಾ 2 ಸ್ಥಾನಗಳಲ್ಲಿ ಜಯಗಳಿಸಿವೆ. ಪಶ್ಚಿಮ ಬಂಗಾಳದ ಮಣ್ಣಿನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ.
ತಮಿಳುನಾಡಿನಲ್ಲಿ ‘ದಳಪತಿ’ : ಸ್ಟಾಲಿನ್‌ಗೆ ಸೋಲು!
ತಮಿಳುನಾಡು ರಾಜಕೀಯದಲ್ಲಿ ಅಕ್ಷರಶಃ ಭೂಕಂಪ ಸಂಭವಿಸಿದೆ. ನಟ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ದಶಕಗಳ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ಟಿವಿಕೆ 108 ಸ್ಥಾನಗಳಲ್ಲಿ ಜಯಗಳಿಸಿದೆ ಅಥವಾ ಮುಂದಿದೆ.  ಆಡಳಿತಾರೂಢ ಡಿಎಂಕೆ ಮೈತ್ರಿಕೂಟವು 69 ಸ್ಥಾನಗಳಲ್ಲಿ ಜಯಗಳಿಸಿದೆ ಅಥವಾ ಮುಂದಿದೆ ಹಾಗೂ ಎಐಡಿಎಂಕೆ ಮೈತ್ರಿಕೂಟವು 57 ಸ್ಥಾನಗಳಲ್ಲಿ ಜಯಗಳಿಸಿದೆ ಅಥವಾ ಮುಂದಿದೆ.  ಕೊಳತ್ತೂರು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ 8,795 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಅಲ್ಲದೆ, ಸ್ಟಾಲಿನ್‌ ಸಚಿವ ಸಂಪುಟದ ಹಲವಾರು ಮಂತ್ರಿಗಳು ಪರಾಭವಗೊಂಡಿದ್ದಾರೆ. ಆದರೂ ಟಿಎಂಕೆ ಪಕ್ಷಕ್ಕೆ ಸರಳ ಬಹುಮತಗಳಿಸಲು ಇನ್ನೂ 10 ಸ್ಥಾನಗಳ ಅಗತ್ಯವಿದೆ.
ಅಸ್ಸಾಂನಲ್ಲಿ ಹಿಮಂತ ಮ್ಯಾಜಿಕ್: ಎರಡನೇ ಬಾರಿ ಅಧಿಕಾರಕ್ಕೆ
ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ನಾಯಕತ್ವಕ್ಕೆ ಜನಾಶೀರ್ವಾದ ಸಿಕ್ಕಿದೆ. ಎನ್‌ಡಿಎ ಮೈತ್ರಿಕೂಟ 126 ಕ್ಷೇತ್ರಗಳಲ್ಲಿ 102 ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ.   ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ 29 ಸ್ಥಾನಗಳನ್ನು ಹೆಚ್ಚಿಸಿಕೊಂಡಂತಾಗಿದೆ.  ಅಭಿವೃದ್ಧಿಯ ಮಂತ್ರ ಮತ್ತು ಹಿಂದೂ ಮತಗಳ ಏಕೀಕರಣದಿಂದಾಗಿ ಬಿಜೆಪಿ ತನ್ನ ಮತ ಹಂಚಿಕೆಯನ್ನು ಶೇ. 38.59ಕ್ಕೆ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್‌ ಹೀನಾಯವಾಗಿ ಸೋತಿದ್ದು ಕೇವಲ 21 ಸ್ಥಾನಗಳಲ್ಲಿ ಮಾತ್ರ ಮುಂದಿದ್ದು, ಇದು ಕಳೆದ ಸಲಕ್ಕೆ ಹೋಲಿಸಿದರೆ 9 ಸ್ಥಾನಗಳ ಕುಸಿತವಾಗಿದೆ. ಲೋಕಸಭೆ ವಿಪಕ್ಷದ ಉಪನಾಯಕ ಹಾಗೂ ಅಸ್ಸಾಂ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಪಕ್ಷದ ಸಿಎಂ ಅಭ್ಯರ್ಥಿ  ಗೌರವ ಗೊಗೊಯ್‌ ಸೋಲನುಭವಿಸಿದ್ದಾರೆ.  ಎಐಯುಡಿಎಫ್‌ ಕೇವಲ ಎರಡು ಸ್ಥಾನಗಳಿಗೆ ಕುಸಿದಿದ್ದು, ಕಳೆದ ಸಲಕ್ಕೆ ಹೋಲಿಸಿದರೆ ಇದು 14 ಸ್ಥಾನಗಳು ಕಡಿಮೆಯಾಗಿವೆ.
ಕೇರಳದಲ್ಲಿ ಎಡಪಕ್ಷಗಳ ಸೋಲು: ಖಾತೆ ತೆರೆದ ಬಿಜೆಪಿ!
ಕೇರಳದ ಜನರು ಈ ಬಾರಿ ಬದಲಾವಣೆ ಬಯಸಿದ್ದು, ಯುಡಿಎಫ್ (UDF) ಮೈತ್ರಿಕೂಟಕ್ಕೆ ಬಹುಮತ ನೀಡಿದ್ದಾರೆ. ಪಿಣರಾಯಿ ವಿಜಯನ್ ಅವರ ಮೂರನೇ ಅವಧಿಯ ಆಸೆಗೆ ಮತದಾರರು ತಣ್ಣೀರು ಸುರಿಸಿದ್ದಾರೆ.
ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ರಂಗ ಯುಡಿಎಫ್‌ 102 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ಮೈತ್ರಿಕೂಟವಾದ ಎಲ್‌ಡಿಎಫ್‌ 35 ಸ್ಥಾನಗಳನ್ನು ಗೆದ್ದಿದೆ. ಯುಡಿಎಫ್‌ ಕಳೆದ ಸಲಕ್ಕಿಂತ 60 ಸ್ಥಾನಗಳನ್ನು ಹೆಚ್ಚು ಗಳಿಸಿದರೆ ಆಡಳಿತಾರೂಢ ಎಲ್‌ಡಿಎಫ್‌ಗೆ 52 ಸ್ಥಾನಗಳು ಕಡಿಮೆಯಾಗಿವೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಸಂಪುಟದ ಅನೇಕ ಸಚಿವರು ಪರಾಭವಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕೇರಳ ವಿಧಾನಸಭೆಯಲ್ಲಿ ಮೂರು ಕ್ಷೇತ್ರಗಳಲ್ಲಿ  ಕಮಲ ಅರಳಿದೆ. ಚಾತಮಂಗಲಂನಲ್ಲಿ ಬಿ.ಬಿ. ಗೋಪಕುಮಾರ ಗೆಲುವು ಸಾಧಿಸಿದರೆ, ನೇಮಮ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ ಮತ್ತು ವಿ. ಮುರಳೀಧರನ್ ಅವರು ಕಜಕುಟ್ಟಂ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ಪುದುಚೇರಿಯಲ್ಲಿ ರಂಗಸ್ವಾಮಿ ಪಾರುಪತ್ಯ
ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಎನ್. ರಂಗಸ್ವಾಮಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಇದರೊಂದಿಗೆ ಜೂನ್ 15ರ ಒಳಗೆ ಹೊಸ ಸರ್ಕಾರ ರಚನೆಗೆ ಸಿದ್ಧತೆಗಳು ನಡೆದಿವೆ.
ತಮಿಳುನಾಡಿನಲ್ಲಿ ಸಿನಿಮಾ ನಟ ವಿಜಯ ಅವರ ಪಾರುಪಥ್ಯ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷದ ಭರ್ಜರಿ ಜಯವು 2026ರ ರಾಜಕೀಯದ ಹೊಸ ಸಮೀಕರಣಕ್ಕೆ ನಾಂದಿ ಹಾಡಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement