ಭಾರತಕ್ಕೆ ಕಚ್ಚಾ ತೈಲ ನೀಡಿ ಮತ್ತೆ ಭಾರತದಿಂದಲೇ ಪೆಟ್ರೋಲ್‌ ಖರೀದಿಸುತ್ತಿರುವ ರಷ್ಯಾ…! ಇದಕ್ಕೆ ಕಾರಣ…?

ನವದೆಹಲಿ : ಉಕ್ರೇನ್ ನಡೆಸುತ್ತಿರುವ ಡ್ರೋನ್ ದಾಳಿಗಳಿಂದ ತನ್ನ ಇಂಧನ ಉತ್ಪಾದನಾ ಘಟಕಕ್ಕೆ ಉಂಟಾದ ಹಾನಿಯ   ಪರಿಣಾಮವಾಗಿ ಎದುರಾಗಿರುವ ಪೆಟ್ರೋಲ್ ಕೊರತೆಯನ್ನು ನಿವಾರಿಸಲು ರಷ್ಯಾವು ಸಮುದ್ರ ಮಾರ್ಗದ ಮೂಲಕ ಭಾರತದಿಂದ ಪೆಟ್ರೋಲ್ (ಗ್ಯಾಸೋಲಿನ್) ಆಮದು ಮಾಡಿಕೊಳ್ಳಲು ಆರಂಭಿಸಿದೆ ಎಂದು ಕೈಗಾರಿಕಾ ವಲಯದ ಮೂಲಗಳನ್ನು ಉಲ್ಲೇಖಿಸಿಹಲವಾರು ವರದಿಗಳು ತಿಳಿಸಿವೆ.
ರಷ್ಯಾದ ಹಲವು ಪ್ರದೇಶಗಳಲ್ಲಿ ಇತ್ತೀಚೆಗೆ ಪೆಟ್ರೋಲ್ ಕೊರತೆ ತೀವ್ರಗೊಂಡಿದ್ದು, ಇದರ ಪರಿಣಾಮವಾಗಿ ಇಂಧನ ವಿತರಣೆಗೆ ಮಿತಿಗೊಳಿಸುವಿಕೆ (ರೇಷನಿಂಗ್), ಪೆಟ್ರೋಲ್ ಬಂಕ್‌ಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ, ಸ್ಪರ್ಧಾತ್ಮಕ ದರದಲ್ಲಿ ಇಂಧನವನ್ನು ಆಮದು ಮಾಡಿಕೊಳ್ಳಲು ಹಲವು ದೇಶಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ರಷ್ಯಾ ಮಂಗಳವಾರ ಅಧಿಕೃತವಾಗಿ ತಿಳಿಸಿತ್ತು.
ಭಾರತದಿಂದ ಈಗಾಗಲೇ 60 ಸಾವಿರ ಟನ್ ಪೆಟ್ರೋಲ್ ರವಾನೆ
ಕೈಗಾರಿಕಾ ಮೂಲಗಳ ಪ್ರಕಾರ, ಭಾರತದಿಂದ ಈಗಾಗಲೇ ಕನಿಷ್ಠ 60,000 ಮೆಟ್ರಿಕ್ ಟನ್ ಗ್ಯಾಸೋಲಿನ್ ಅನ್ನು ರಷ್ಯಾಕ್ಕೆ ಸಮುದ್ರ ಮಾರ್ಗದ ಮೂಲಕ ರವಾನಿಸಲಾಗಿದೆ.
30,000 ರಿಂದ 40,000 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಟ್ಯಾಂಕರ್ ಹಡಗುಗಳು ಈ ಸರಕುಗಳನ್ನು ಹೊತ್ತು ರಷ್ಯಾಕ್ಕೆ ತೆರಳಿವೆ ಎಂದು ತಿಳಿದುಬಂದಿದೆ. ಆದರೆ ಈ ಇಂಧನವನ್ನು ಪೂರೈಸಿದ ಭಾರತೀಯ ರಿಫೈನರಿ ಯಾವುದು ಎಂಬುದನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಮತ್ತೊಂದು ಕೈಗಾರಿಕಾ ಮೂಲದ ಪ್ರಕಾರ, ಬೆಲಾರಸ್ ಸೇರಿದಂತೆ ಹಲವು ದೇಶಗಳಿಂದ ಪ್ರತಿ ತಿಂಗಳು ಸುಮಾರು 4 ಲಕ್ಷ ಮೆಟ್ರಿಕ್ ಟನ್ ಗ್ಯಾಸೋಲಿನ್ ಆಮದು ಮಾಡಿಕೊಳ್ಳುವ ಯೋಜನೆಯನ್ನು ರಷ್ಯಾ ರೂಪಿಸಿದೆ. ಬೆಲಾರಸ್ ಈಗಾಗಲೇ ರಷ್ಯಾಕ್ಕೆ ಇಂಧನ ಪೂರೈಕೆ ಮಾಡುತ್ತಿದೆ.
ಬೇಸಿಗೆ ಅವಧಿಯಲ್ಲಿ ರಷ್ಯಾದ ದಿನನಿತ್ಯದ ಗ್ಯಾಸೋಲಿನ್ ಬಳಕೆ 1.10 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
ತೈಲ ಸಂಸ್ಕರಣಾ ಘಟಕಗಳ ಮೇಲಿನ ದಾಳಿಯಿಂದ ಇಂಧನ ಬಿಕ್ಕಟ್ಟು
ಉಕ್ರೇನ್ ನಡೆಸಿದ ಡ್ರೋನ್ ದಾಳಿಗಳಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳಿಗೆ ಹಾನಿಯಾಗಿದ್ದು, ಅದರ ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇತ್ತೀಚೆಗೆ ಒಪ್ಪಿಕೊಂಡಿದ್ದರು. ಆದರೆ ಪರಿಸ್ಥಿತಿಯನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.
ಇದೇ ವೇಳೆ, ಭಾರತದಿಂದ ಇಂಧನ ಆಮದು ಮಾಡುವ ವೆಚ್ಚ ಹಾಗೂ ಬೆಲೆಗಳನ್ನು ಆಧರಿಸಿ ಸಹಾಯಧನ (ಸಬ್ಸಿಡಿ) ನೀಡಲು ಅನುಕೂಲವಾಗುವಂತೆ ರಷ್ಯಾ ತನ್ನ ತೆರಿಗೆ ಸಂಹಿತೆಯಲ್ಲೂ ತಿದ್ದುಪಡಿ ಮಾಡಿದೆ.
 
ರಷ್ಯಾದಿಂದ ಭಾರತದ ಕಚ್ಚಾತೈಲ ಆಮದು ದಾಖಲೆ ಮಟ್ಟಕ್ಕೆ
ಈ ಬೆಳವಣಿಗೆಯ ನಡುವೆಯೇ ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾತೈಲದ ಪ್ರಮಾಣವೂ ದಾಖಲೆಯ ಮಟ್ಟ ತಲುಪಿದೆ.
ಹಡಗುಗಳ ಸಂಚಾರದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುವ Kpler ಮತ್ತು LSEG ಸಂಸ್ಥೆಗಳ ಅಂಕಿಅಂಶಗಳ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ತೈಲ ಹಡಗುಗಳ ಸಾಗಾಟದ ತೊಂದರೆಯಿಂದಾಗಿ ಪೂರೈಕೆ ಕೊರತೆಯನ್ನು ಸರಿದೂಗಿಸಲು ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲ ಖರೀದಿಸಿರುವುದರಿಂದ ಜೂನ್ ತಿಂಗಳಲ್ಲಿ ಆಮದು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ಜೂನ್ ತಿಂಗಳಲ್ಲಿ ಭಾರತದ ಒಟ್ಟು ಕಚ್ಚಾತೈಲ ಆಮದುಗಳಲ್ಲಿ ರಷ್ಯಾದ ಪಾಲು ಶೇಕಡಾ 50ಕ್ಕಿಂತ ಹೆಚ್ಚಾಗಿದ್ದು, ಮೇ ತಿಂಗಳಲ್ಲಿ ಇದು ಶೇಕಡಾ 36.5ರಷ್ಟಿತ್ತು.
ವಿಶ್ವದ ಮೂರನೇ ಅತಿದೊಡ್ಡ ಕಚ್ಚಾತೈಲ ಆಮದುದಾರ ರಾಷ್ಟ್ರವಾಗಿರುವ ಭಾರತವು ಜೂನ್ ತಿಂಗಳಲ್ಲಿ ದಿನಕ್ಕೆ ಸರಾಸರಿ ಸುಮಾರು 27 ಲಕ್ಷ ಬ್ಯಾರೆಲ್ ರಷ್ಯಾದ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ ಎಂದು ಪ್ರಾಥಮಿಕ ಅಂಕಿಅಂಶಗಳು ತಿಳಿಸಿವೆ.
ಭಾರತ ರಷ್ಯಾಕ್ಕೆ ನೇರವಾಗಿ ಇಂಧನ ರಫ್ತು ಮಾಡುತ್ತಿಲ್ಲ; ಸಚಿವ ಪುರಿ
ದೇಶೀಯ ಇಂಧನ ಕೊರತೆಯನ್ನು ನೀಗಿಸಲು ಮಾಸ್ಕೋ ಭಾರತದಿಂದ ಗ್ಯಾಸೋಲಿನ್ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ ಎಂಬ ವರದಿಗಳು ಹೊರಬಂದ ನಂತರ, ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಇಂಧನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಭಾರತೀಯ ಕಂಪನಿಗಳು ರಷ್ಯಾಕ್ಕೆ ನೇರವಾಗಿ ಸಂಸ್ಕರಿಸಿದ ಇಂಧನಗಳನ್ನು ಮಾರಾಟ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಭಾರತೀಯ ಮೂಲದ ಸಂಸ್ಕರಿಸಿದ ಇಂಧನವನ್ನು ವ್ಯಾಪಾರಿಗಳ ಮೂಲಕ ರಷ್ಯಾಕ್ಕೆ ಮಾರಾಟ ಮಾಡಿರುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ...| ಟೋಲ್ ಪ್ಲಾಜಾಕ್ಕೆ ಡಿಕ್ಕಿ ಹೊಡೆದು ಎಲ್‌ಪಿಜಿ ಟ್ಯಾಂಕರ್ ಸ್ಫೋಟ : ಐವರು ಸಾವು ; 2 ಕಿಮೀ ವರೆಗೆ ಗೋಚರಿಸಿದ ಬೆಂಕಿಯ ಜ್ವಾಲೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement