ಬಾಂಗ್ಲಾದೇಶ: ಪೆಟ್ರೋಲ್ ಹಣ ಕೇಳಿದ್ದಕ್ಕೆ ಹಿಂದೂ ಯುವಕನ ಮೇಲೆ ಕಾರು ಹರಿಸಿ ಹತ್ಯೆ

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗಲು ಯತ್ನಿಸಿದ ಎಸ್‌ಯುವಿ (SUV) ಕಾರನ್ನು ತಡೆಯಲು ಯತ್ನಿಸಿದ ಹಿಂದೂ ಯುವಕನನ್ನು ಕಾರು ಓಡಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮೃತ ಯುವಕನನ್ನು 30 ವರ್ಷದ ರಿಪಾನ್ ಸಹಾ ಎಂದು ಗುರುತಿಸಲಾಗಿದೆ. ಈತ ರಾಜಬರಿ ಜಿಲ್ಲೆಯ ಗೋವಾಲಂದ ಮೋರ್‌ನಲ್ಲಿರುವ ಕರೀಂ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಮುಂಜಾನೆ ಸುಮಾರು 4:30ರ ಸುಮಾರಿಗೆ ಕಪ್ಪು ಬಣ್ಣದ ಎಸ್‌ಯುವಿ ಕಾರೊಂದು ಈ ಪೆಟ್ರೋಲ್ ಬಂಕ್‌ಗೆ ಬಂದು 3,710 ರೂಪಾಯಿ ಮೌಲ್ಯದ ಪೆಟ್ರೋಲ್‌ ಹಾಕಿಸಿಕೊಂಡಿದೆ.ಬಳಿಕ ಹಣ ನೀಡದೆ ವಾಹನ ಚಲಾಯಿಸಿಕೊಂಡು ಹೋಗಲು ಮುಂದಾದಾಗ, ರಿಪಾನ್ ಸಹಾ ಕಾರನ್ನು ತಡೆಯಲು ಅದರ ಮುಂದೆ ನಿಂತಿದ್ದಾರೆ. ಈ ವೇಳೆ ಚಾಲಕ ರಿಪಾನ್ ಮೇಲೆ ಕಾರನ್ನು ಹರಿಸಿ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರಿಪಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
 ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಾಹನವನ್ನು ಜಪ್ತಿ ಮಾಡಿದ್ದು, ಅದರ ಮಾಲೀಕ ಅಬುಲ್ ಹಶೇಮ್ ಅಲಿಯಾಸ್ ಸುಜನ್ (55) ಮತ್ತು ಚಾಲಕ ಕಮಲ್ ಹೊಸೇನ್ (43) ಎಂಬುವವರನ್ನು ಬಂಧಿಸಿದ್ದಾರೆ. ಅಬುಲ್ ಹಶೇಮ್ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ (BNP) ರಾಜಬರಿ ಜಿಲ್ಲೆಯ ಮಾಜಿ ಖಜಾಂಚಿ ಮತ್ತು ಜಿಲ್ಲಾ ಯುವ ದಳದ ಮಾಜಿ ಅಧ್ಯಕ್ಷನಾಗಿದ್ದಾನೆ ಎಂದು ತಿಳಿದುಬಂದಿದೆ. “ಇದೊಂದು ಉದ್ದೇಶಪೂರ್ವಕ ಕೊಲೆಯಾಗಿದ್ದು, ನಾವು ಕೊಲೆ ಪ್ರಕರಣ ದಾಖಲಿಸುತ್ತೇವೆ,” ಎಂದು ಪೊಲೀಸ್ ಅಧಿಕಾರಿ ಖೊಂಡಕರ್ ಜಿಯಾವುರ್ ರೆಹಮಾನ್ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ಭಾಗವಾಗಿ ಈ ಘಟನೆಯನ್ನು ನೋಡಲಾಗುತ್ತಿದೆ. ‘ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್’ ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಡಿಸೆಂಬರ್ 2025ರಲ್ಲೇ ಸುಮಾರು 51 ಕೋಮು ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರು ಮತ ಚಲಾಯಿಸದಂತೆ ತಡೆಯಲು ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಸಂಘಟನೆ ಆರೋಪಿಸಿದೆ.
 ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಹತ್ತಿಕ್ಕುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗುತ್ತಿರುವುದನ್ನು ಭಾರತ ಈಗಾಗಲೇ ಟೀಕಿಸಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ‘ವೈಯಕ್ತಿಕ ದ್ವೇಷ’ ಎಂದು ಬಿಂಬಿಸಿ ವಿಷಯವನ್ನು ಹಳ್ಳ ಹಿಡಿಸುವ ಪ್ರವೃತ್ತಿಯು ಅಲ್ಲಿನ ಮೂಲಭೂತವಾದಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಿದೆ ಎಂದು ಭಾರತ ಎಚ್ಚರಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement