ನಾಗ್ಪುರ: ಬಾಲಿವುಡ್ನ ಖ್ಯಾತ ನಟ ರಣವೀರ ಸಿಂಗ್ ಅವರು ಶುಕ್ರವಾರ ನಾಗ್ಪುರದ ರೇಶಿಂಬಾಗ್ನಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪ್ರಮುಖ ಸ್ಥಳವಾದ ಹೆಡ್ಗೆವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಇತ್ತೀಚಿನ ಚಿತ್ರ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ರಣವೀರ್ ಅವರ ಈ ಭೇಟಿ ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ, ರಣವೀರ ಸಿಂಗ್ ಅವರು ನಾಗ್ಪುರದಲ್ಲಿರುವ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ಸಂಘದ ಮುಖ್ಯಸ್ಥರಾದ (ಸರ್ಸಂಘಚಾಲಕ) ಮೋಹನ ಭಾಗವತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಭೆಯ ನಿರ್ದಿಷ್ಟ ಉದ್ದೇಶ ಅಥವಾ ಚರ್ಚಿತ ವಿಷಯಗಳು ಬಹಿರಂಗವಾಗಿಲ್ಲದಿದ್ದರೂ, ರಣವೀರ ಅಂತಹ ಹೆಸರಾಂತ ನಟನ ಭೇಟಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿದೆ.
ಸ್ಮೃತಿ ಮಂದಿರದಲ್ಲಿ ಗೌರವ ಸಲ್ಲಿಕೆ
ಶುಕ್ರವಾರ ಸಂಜೆ ಸುಮಾರು 4 ಗಂಟೆಗೆ ಮುಂಬೈನಿಂದ ಚಾರ್ಟರ್ಡ್ ಫ್ಲೈಟ್ ಮೂಲಕ ನಾಗ್ಪುರಕ್ಕೆ ಬಂದಿಳಿದ ರಣವೀರ ಸಿಂಗ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಪದಾಧಿಕಾರಿಗಳೊಂದಿಗೆ ಅವರು ಸುದೀರ್ಘವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಭೇಟಿಯ ಬಗ್ಗೆ ಆರ್ಎಸ್ಎಸ್ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಇತ್ತೀಚೆಗಷ್ಟೇ ಜಾಮ್ನಗರದಲ್ಲಿ ನಡೆದ ಅನಂತ್ ಅಂಬಾನಿ ಅವರ ಅದ್ಧೂರಿ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿದ್ದ ರಣವೀರ ಸಿಂಗ್, ಈ ಕಾರ್ಯಕ್ರಮದ ಬೆನ್ನಲ್ಲೇ ಅವರು ನಾಗ್ಪುರಕ್ಕೆ ಭೇಟಿ ನೀಡಿರುವುದು ವಿಶೇಷವಾಗಿದೆ.
ಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್ 2’ ಅಬ್ಬರ
ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.
ಈ ಚಿತ್ರದಲ್ಲಿ ರಣವೀರ್ ಅವರೊಂದಿಗೆ ಅರ್ಜುನ ರಾಮಪಾಲ, ಆರ್. ಮಾಧವನ್, ಸಂಜಯ ದತ್, ರಾಕೇಶ ಬೇಡಿ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ನಿರ್ದೇಶಕ ಆದಿತ್ಯ ಧರ್ ಅವರ ಪತ್ನಿ ಯಾಮಿ ಗೌತಮ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ