ವೀಡಿಯೊ..| ಹೋಳಿ ಸಂಭ್ರದಲ್ಲಿ ಕುಣಿಯುತ್ತಿದ್ದ ಲಕ್ಷಾಂತರ ಜನರ ಮಧ್ಯೆ ಬಂದ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ರೀತಿಗೆ ಬೆರಗಾಗಲೇ ಬೇಕು | ವೀಕ್ಷಿಸಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ರಂಗಪಂಚಮಿ ಸಂದರ್ಭದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಎಲ್ಲರೂ ಹಾಡಿನ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುತ್ತಿದ್ದರು. ಜನಜಂಗುಳಿ ಎಷ್ಟಿತ್ತೆಂದರೆ ರಸ್ತೆಯಲ್ಲಿ ತಲೆ ಮಾತ್ರ ಕಾಣುತ್ತಿತ್ತು. ಆದರೆ, ಅಷ್ಟರಲ್ಲಿ ಒಬ್ಬ ರೋಗಿಯನ್ನು ಹೊತ್ತುಕೊಂಡು ಆಂಬುಲೆನ್ಸ್‌ ಅದೇ ಮಾರ್ಗದಲ್ಲಿ ಬಂದಿದ್ದು ಇದನ್ನು ನೋಡಿ   ಹೋಳಿ (Holi) ಆಚರಣೆಯಲ್ಲಿ ತೊಡಗಿದ್ದ ಸಾವಿರಾರು ಮಂದಿ ಆಂಬುಲೆನ್ಸ್‌ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಅವಕಾಶ ಮಾಡಿಕೊಡುವ ಮೂಲಕ ಮಾದರಿಯಾಗಿದ್ದಾರೆ. ಸಂಭ್ರಮಾಚರಣೆ ನಡುವೆಯೂ ಕರ್ತವ್ಯ ಪ್ರಜ್ಞೆ ಮರೆಯದ ಜನ ಸಮೂಹದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತದೆ. ಸದ್ಯ ಈ ಘಟನೆಯ ವೀಡಿಯೊ ವೈರಲ್‌ ಆಗಿದ್ದು, ಹಾಲಿ ಮುಖ್ಯಮಂತ್ರಿ ಮೋಹನ ಯಾದವ್ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌವಾಣ ಕೂಡ ಈ ವೀಡಿಯೊ ಶೇರ್ ಮಾಡಿ ಇಂದೋರ್ ಜನತೆಯನ್ನು ಶ್ಲಾಘಿಸಿದ್ದಾರೆ.

ಶನಿವಾರ (ಮಾರ್ಚ್‌ 30) ಮಧ್ಯ ಪ್ರದೇಶದ ಇಂದೋರ್‌ನ ರಾಜ್ವಾಡಾದಲ್ಲಿ ರಂಗಪಂಚಮಿ ಆಚರಿಸಲಾಯಿತು. ರಂಗಪಂಚಮಿಯನ್ನು ಹೋಳಿ ಹಬ್ಬ ನಡೆದು 5 ದಿನದ ಬಳಿಕ ಆಚರಿಸಲಾಗುತ್ತದೆ. ಅಂದು ಪರಸ್ಪರ ಬಣ್ಣ ಎರಚಿ ಜನರು ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅದರಂತೆ ಲಕ್ಷಾಂತರ ಮಂದಿ ನಗರದಲ್ಲಿ ಗುಂಪುಗೂಡಿದ್ದರು. ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯೂ ಭಾಗವಹಿಸಿದ್ದು, ಬಣ್ಣಗಳಲ್ಲಿ ಮುಳುಗೆದ್ದಿರುವುದು ಕಂಡುಬಂದಿದೆ. ಈ ವೇಳೆ ರೋಗಿಯನ್ನು ಕರೆದುಕೊಂಡು ಬಂದ ಆಂಬುಲೆನ್ಸ್‌ ರಾಜ್ವಾಡಾ ಪ್ರವೇಶಿಸಿದೆ. ಎಲ್ಲಿ ನೋಡಿದರೂ ಜನ ಸಾಗರ. ಎಲ್ಲ ರಸ್ತೆಗಳಲ್ಲಿಯೂ ಜನ ತುಂಬಿ ತುಳುಕುತ್ತಿದ್ದರು. ರಸ್ತೆಯಲ್ಲಿ ಕೇವಲ ತಲೆಗಳಷ್ಟೇ ಕಾಣುತ್ತಿದ್ದವು. ರಸ್ತೆಯಲ್ಲಿ ಸುಮಾರು ನಾಲ್ಕೈದು ಲಕ್ಷ ಜನ ಸೇರಿದ್ದರು. ಆಂಬುಲೆನ್ಸ್‌ಗೆ ಸಾಗಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇತ್ತು. ಆದರೆ ಜನರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಇದು ತಾಜಾ ನಿದರ್ಶನವಾಯಿತು. ಆಂಬುಲೆನ್ಸ್‌ನ ಸೈರನ್ ಕೇಳುತ್ತಿದ್ದಂತೆ ಅಲ್ಲಿ ನೆರೆದಿದ್ದವರು ಸ್ವಯಂ ಪ್ರೇರಿತರಾಗಿ ಅದಕ್ಕೆ ಜಾಗ ಬಿಟ್ಟುಕೊಟ್ಟರು. ಅಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡ ತಕ್ಷಣ ಧಾವಿಸಿ ಆಂಬುಲೆನ್ಸ್ ಸಹ ಕಿಕ್ಕಿರಿದು ಸೇರಿದ್ದ ಜನಸ್ತೋಮದ ನಡುವೆ ಹೋಗಲು ಸಹಾಯ ಮಾಡಿದರು. ಕೆಲವೇ ನಿಮಿಷಗಳಲ್ಲಿ ಆಂಬುಲೆನ್ಸ್‌ ತಾನು ತಲುಪಬೇಕಾದ ಆಸ್ಪತ್ರೆಯನ್ನು ತಲುಪಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜನರು ತಡಮಾಡದೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಏನಾಗುತ್ತಿದೆ ಎಂಬುದನ್ನು ಸ್ವತಃ ನೋಡಿದ ಮುಖ್ಯಮಂತ್ರಿ ಮೋಹನ ಯಾದವ್ ಅವರೇ ವಿಡಿಯೋವನ್ನು ಶೇರ್ ಮಾಡಿದ್ದು, ಇಂದೋರಿ ಸಹೋದರ ಸಹೋದರಿಯರ ಮೇಲೆ ನನ್ನ ಹೃದಯದಲ್ಲಿ ಪ್ರೀತಿ, ಭಕ್ತಿ ಇನ್ನಷ್ಟು ಹೆಚ್ಚಿದೆ. ನಿಮ್ಮೆಲ್ಲರ ಹೃದಯದಲ್ಲಿ ಇತರರಿಗಾಗಿ ಇರುವ ಪ್ರೀತಿ ಮತ್ತು ಸಹಕಾರದ ಅಪರಿಮಿತ ಭಾವನೆಗಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಸಹ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಇಂದೋರ್‌ನ ಶಿಸ್ತು ಮತ್ತು ಇಂದೋರ್‌ನ ಜಾಗರೂಕತೆ ಅದ್ಭುತವಾಗಿದೆ ಎಂದು ಬರೆದಿದ್ದಾರೆ.

ಐತಿಹಾಸಿಕ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಬಣ್ಣ ಎರಚುತ್ತಾ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ಹಬ್ಬ ಹರಿದಿನಗಳ ಸಂಭ್ರಮದ ನಡುವೆ ಈ ಸೂಕ್ಷ್ಮತೆಯನ್ನೇ ಮಾನವೀಯತೆ ಎನ್ನುತ್ತಾರೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಬರೆದುಕೊಂಡಿದ್ದಾರೆ.
ಮತ್ತೊಬ್ಬರು ವಾವ್ ಇಂದೋರ್ ಜನರೇ ಎಂದು ಬರೆದಿದ್ದಾರೆ. ಮನುಷ್ಯರಲ್ಲಿ ಮಾತ್ರ ಮಾನವೀಯತೆ ಇದೆ. ಇಂದೋರ್‌ನಲ್ಲಿ ನಡೆದ ರಂಗಪಂಚಮಿ ಆಚರಣೆಯಲ್ಲಿ ಲಕ್ಷಾಂತರ ಜನರ ಗುಂಪಿನ ನಡುವೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ಒಬ್ಬರ ಜೀವವನ್ನು ಉಳಿಸಿದ ರೀತಿಗಾಗಿ ಇಡೀ ಇಂದೋರ್ ನಗರವು ಅಭಿನಂದನೆಗೆ ಅರ್ಹವಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಇಂದೋರ್‌ನ ಜನರು ಅದ್ಭುತವಾದ ಶಿಸ್ತು ಹೊಂದಿದ್ದಾರೆ, ಕಡಿಮೆ ಸಮಯದಲ್ಲಿ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ದಾಖಲೆಯೂ ಅವರ ಹೆಸರಿನಲ್ಲಿ ಹೋಗಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement