ಲಕ್ನೋ: ಸಮಾಜವಾದಿ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ ಯಾದವ್ ಅವರ ಸಹೋದರ ಪ್ರತೀಕ ಯಾದವ್ (38) ಅವರು ಬುಧವಾರ ಲಕ್ನೋದಲ್ಲಿ ನಿಧನರಾಗಿದ್ದಾರೆ.
ಪ್ರತೀಕ್ ಅವರು ಬಿಜೆಪಿ ನಾಯಕಿ ಅಪರ್ಣಾ ಯಾದವ್ ಅವರ ಪತಿ.
ಮೂಲಗಳ ಪ್ರಕಾರ, ಪ್ರತೀಕ ಅವರನ್ನು ಬುಧವಾರ ಮುಂಜಾನೆ ಸುಮಾರು 6 ಗಂಟೆಗೆ ಚಿಕಿತ್ಸೆಗಾಗಿ ಲಕ್ನೋದ ಸಿವಿಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆತಂದಾಗ ಅವರಲ್ಲಿ ಜೀವಕಳೆ ಇರಲಿಲ್ಲ, ನಾಡಿಮಿಡಿತ ನಿಂತಿತ್ತು ಮತ್ತು ಕಣ್ಣಿನ ಪಾಪೆಗಳು ಸ್ಥಿರವಾಗಿದ್ದವು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತೀಕ ಯಾದವ್ ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ವಾರಗಳ ಹಿಂದೆ ಲಕ್ನೋದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದ ಅವರನ್ನು ಮನೆಗೆ ಕರೆತರಲಾಗಿತ್ತು.
ಸಕ್ರಿಯ ರಾಜಕೀಯದಿಂದ ದೂರ
ದೇಶದ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸೇರಿದವರಾಗಿದ್ದರೂ, ಪ್ರತೀಕ ಯಾದವ್ ಸಕ್ರಿಯ ರಾಜಕೀಯದಿಂದ ದೂರವಿದ್ದರು. ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ಅವರು, ರಿಯಲ್ ಎಸ್ಟೇಟ್ ಮತ್ತು ಫಿಟ್ನೆಸ್ ವ್ಯವಹಾರದಲ್ಲಿ ಗುರುತಿಸಿಕೊಂಡಿದ್ದರು. ಲಕ್ನೋದಲ್ಲಿ ‘ದಿ ಫಿಟ್ನೆಸ್ ಪ್ಲಾನೆಟ್’ ಎಂಬ ಜಿಮ್ ನಡೆಸುತ್ತಿದ್ದ ಅವರು ಫಿಟ್ನೆಸ್ ಉದ್ಯಮದಲ್ಲಿ ಸಕ್ರಿಯರಾಗಿದ್ದರು.
ಪ್ರಾಣಿ ಕಲ್ಯಾಣ ಮತ್ತು ಸಾಮಾಜಿಕ ಕಾರ್ಯ
ಪ್ರಾಣಿ ಕಲ್ಯಾಣ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ ಪ್ರತೀಕ, ‘ಜೀವ ಆಶ್ರಯ’ ಎಂಬ ಸಂಸ್ಥೆಯ ಮೂಲಕ ಬೀದಿ ನಾಯಿಗಳ ರಕ್ಷಣೆ, ಚಿಕಿತ್ಸೆ ಮತ್ತು ಆಹಾರ ನೀಡುವ ಕಾರ್ಯ ಮಾಡುತ್ತಿದ್ದರು. ಇತ್ತೀಚೆಗೆ ಪತ್ನಿ ಅಪರ್ಣಾ ಯಾದವ್ ಅವರೊಂದಿಗೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳು ಹರಡಿದಾಗ, ಕುಟುಂಬದೊಂದಿಗೆ ಪ್ರವಾಸ ಕೈಗೊಂಡಿದ್ದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ವದಂತಿಗಳಿಗೆ ತೆರೆ ಎಳೆದಿದ್ದರು. ಸದ್ಯ ಅಪರ್ಣಾ ಯಾದವ್ ಅವರು ಉತ್ತರ ಪ್ರದೇಶ ಮಹಿಳಾ ಆಯೋಗದ ಉಪಾಧ್ಯಕ್ಷೆಯಾಗಿದ್ದಾರೆ.
ಅಪರ್ಣಾ ಯಾದವ್ ಅವರ ಸಹೋದರ ಅಮನ್ ಬಿಸ್ತ್ ಮತ್ತು ಕುಟುಂಬ ಸದಸ್ಯರು ಸ್ಥಳಕ್ಕೆ ಆಗಮಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಶವಾಗಾರದ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಮಾಜವಾದಿ ಪಕ್ಷದ ಸಂತಾಪ
ಪ್ರತೀಕ ಯಾದವ್ ನಿಧನಕ್ಕೆ ಸಮಾಜವಾದಿ ಪಕ್ಷ ತೀವ್ರ ಸಂತಾಪ ಸೂಚಿಸಿದೆ. ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪಕ್ಷವು, “ಪ್ರತೀಕ ಯಾದವ್ ಅವರ ನಿಧನ ಅತ್ಯಂತ ದುಃಖದ ಸಂಗತಿ. ಮೃತರ ಆತ್ಮಕ್ಕೆ ದೇವರು ಶಾಂತಿ ನೀಡಲಿ” ಎಂದು ಸಂತಾಪ ಕೋರಿದೆ.


ನಿಮ್ಮ ಕಾಮೆಂಟ್ ಬರೆಯಿರಿ