ನೇಪಾಳದ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹ (Flash Flood) ಕೇವಲ ಕೆಲವೇ ನಿಮಿಷಗಳಲ್ಲಿ ಹೇಗೆ ಮಹಾವಿಪತ್ತಾಗಿ ರೂಪುಗೊಂಡಿತು ಎಂಬುದನ್ನು ವಿವರಿಸುವ ವಿಶ್ಲೇಷಣಾತ್ಮಕ ವಿಡಿಯೊ ಒಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ವಿಡಿಯೊ ಉಪಗ್ರಹ ಚಿತ್ರಗಳು, ಭೌಗೋಳಿಕ ಮಾಹಿತಿ, ಸಮಯದ ದಾಖಲೆಗಳು ಹಾಗೂ ವೈಜ್ಞಾನಿಕ ವಿಶ್ಲೇಷಣೆಗಳ ಆಧಾರದ ಮೇಲೆ ಘಟನೆ ಹೇಗೆ ನಡೆಯಿತು ಎಂಬುದನ್ನು ಹಂತ ಹಂತವಾಗಿ ವಿವರಿಸುತ್ತದೆ. ಹಿಮನದಿಯ ಕುಸಿತದಿಂದ ಆರಂಭವಾದ ಈ ದುರಂತವು ಕೇವಲ 7 ನಿಮಿಷ 40 ಸೆಕೆಂಡುಗಳಲ್ಲಿ ಚೀನಾ-ನೇಪಾಳ ಗಡಿಭಾಗವನ್ನು ತಲುಪಿದ್ದು, ಪ್ರಕೃತಿ ವಿಕೋಪಗಳ ವೇಗ ಮತ್ತು ತೀವ್ರತೆಯ ಬಗ್ಗೆ ಹೊಸ ಆತಂಕಕ್ಕೆ ಕಾರಣವಾಗಿದೆ.
ಯಾಲಾ ಹಿಮನದಿ ಕುಸಿತದಿಂದ ದುರಂತದ ಆರಂಭ
ನೇಪಾಳವು ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಎತ್ತರದ ಪರ್ವತ ಶ್ರೇಣಿಯಾದ ಹಿಮಾಲಯಕ್ಕೆ ನೆಲೆಯಾಗಿದ್ದು, 3000 ಕ್ಕೂ ಹೆಚ್ಚು ಹಿಮನದಿಗಳನ್ನು ಹೊಂದಿದೆ. ಹವಾಮಾನ ಬದಲಾವಣೆಯ ಪರಿಣಾಮವಾಗಿ ಈ ಹಿಮನದಿಗಳು ವೇಗವಾಗಿ ಕರಗುತ್ತಿದ್ದು, ಅವುಗಳ ಸ್ಥಿರತೆ ಕುಸಿಯುತ್ತಿದೆ.
ಈ ದುರಂತದ ಕೇಂದ್ರಬಿಂದುವಾಗಿದ್ದದ್ದು ಸುಮಾರು 16,700 ಅಡಿ ಎತ್ತರದಲ್ಲಿರುವ ಯಾಲಾ (Yala) ಹಿಮನದಿ. ವಿಡಿಯೊ ವಿಶ್ಲೇಷಣೆಯ ಪ್ರಕಾರ, ಕಳೆದ ಒಂದು ದಶಕದಲ್ಲಿ ಯಾಲಾ ಹಿಮನದಿ ಸುಮಾರು 33 ಅಡಿ ನೀರಿನ ಸಮತೂಲ್ಯ ಪ್ರಮಾಣದ ಹಿಮವನ್ನು ಕಳೆದುಕೊಂಡಿತ್ತು. ಇದು ಹಿಮನದಿಯ ಗಂಭೀರ ಕ್ಷೀಣತೆಯನ್ನು ಸೂಚಿಸುತ್ತದೆ.
ಹವಾಮಾನ ಬದಲಾವಣೆ ಮತ್ತು ‘ಅಲ್ಬೆಡೊ’ ಪರಿಣಾಮ
ದುರಂತಕ್ಕೆ ಕಾರಣವಾದ ಪ್ರಮುಖ ವೈಜ್ಞಾನಿಕ ಅಂಶಗಳಲ್ಲಿ ಒಂದು ಅಲ್ಬೆಡೊ (Albedo) ಪರಿಣಾಮವಾಗಿದೆ. ಹೊಸದಾಗಿ ಸುರಿದ ಬಿಳಿ ಹಿಮವು ಸೂರ್ಯನ ಬೆಳಕಿನ ಬಹುಪಾಲನ್ನು ಪ್ರತಿಫಲಿಸುತ್ತದೆ. ಇದರಿಂದ ಹಿಮನದಿಯ ಮೇಲ್ಮೈ ತಂಪಾಗಿರುತ್ತದೆ. ಆದರೆ ಬೇಸಿಗೆಯ ಉಷ್ಣಾಂಶ ಹೆಚ್ಚಾದಾಗ ಆ ಹಿಮ ಕರಗುತ್ತದೆ. ಆಗ ಅದರ ಕೆಳಗಿರುವ ಕಪ್ಪು ಬಂಡೆಗಳಿಂದ ಕೂಡಿದ ಹಿಮದ ಮೇಲ್ಮೈ ಹೊರಬರುತ್ತದೆ.
ಈ ಕಪ್ಪು ಮೇಲ್ಮೈ ಹೆಚ್ಚು ಸೌರಶಕ್ತಿಯನ್ನು ಹೀರಿಕೊಳ್ಳುತ್ತದೆ. ಪರಿಣಾಮವಾಗಿ ಕರಗುವಿಕೆ ಮತ್ತಷ್ಟು ವೇಗಗೊಳ್ಳುತ್ತದೆ. ವಿಜ್ಞಾನಿಗಳು ಇದನ್ನೇ ʼಅಲ್ಬೆಡೊ ಪರಿಣಾಮದ ಕುಸಿತʼ ಎಂದು ಕರೆಯುತ್ತಾರೆ. 2026ರ ಬೇಸಿಗೆಯಲ್ಲಿ ನೇಪಾಳದಲ್ಲಿ ಅಸಾಮಾನ್ಯ ಉಷ್ಣತೆ ದಾಖಲಾಗಿದ್ದ ಕಾರಣ ಯಾಲಾ ಹಿಮನದಿಯ ಮೇಲಿನ ಕರಗುವಿಕೆ ಹೆಚ್ಚಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
10:52:10ಕ್ಕೆ ದಾಖಲಾಗಿದ ಹಿಮನದಿ ಕುಸಿತ
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (USGS) ಯ ದಾಖಲೆಗಳ ಪ್ರಕಾರ, ಯಾಲಾ ಹಿಮನದಿಯ ಕುಸಿತ ಬೆಳಿಗ್ಗೆ 10:52:10ಕ್ಕೆ ಸಂಭವಿಸಿತು.
ಸುಮಾರು ಒಂದು ಮೈಲು ಅಗಲವಿದ್ದ ಈ ಹಿಮನದಿಯ ದೊಡ್ಡ ಭಾಗ ಏಕಾಏಕಿ ಕುಸಿಯಿತು. ಅದು ಸಮುದ್ರಮಟ್ಟದಿಂದ 16,000 ಅಡಿಗೂ ಹೆಚ್ಚು ಎತ್ತರದಲ್ಲಿತ್ತು. ಅಂದರೆ ಸುಮಾರು ಐದು ಕಿಮೀ ಎತ್ತರದಲ್ಲಿತ್ತು. ಈ ಬೃಹತ್ ಕುಸಿತದ ಬಳಿಕ ಹಿಮ, ನೀರು ಮತ್ತು ಕಲ್ಲುಮಣ್ಣುಗಳ ಮಿಶ್ರಣ ಕೆಳಭಾಗದ ಕಣಿವೆಯತ್ತ ವೇಗವಾಗಿ ಧಾವಿಸಲು ಆರಂಭಿಸಿದವು.
ಹಿಮಾಲಯದ ಭೌಗೋಳಿಕ ವಿನ್ಯಾಸವೇ ವೇಗಕ್ಕೆ ಕಾರಣ
ವಿಡಿಯೊ ಪ್ರಕಾರ, ಹಿಮನದಿಯ ಕೆಳಭಾಗದಲ್ಲಿ ಹಿಂದೆ ನಿರ್ಮಾಣವಾದ ಒಂದು ಆಳವಾದ ನೈಸರ್ಗಿಕ ಕಾಲುವೆ (Channel) ಇತ್ತು. ಸಾಮಾನ್ಯವಾಗಿ ಹಿಮನದಿ ಕುಸಿತದ ಅವಶೇಷಗಳು ಹಲವು ದಿಕ್ಕುಗಳಿಗೆ ಹರಡಬಹುದು. ಆದರೆ ಇಲ್ಲಿ ಆ ನೈಸರ್ಗಿಕ ಕಾಲುವೆಯು ಹಿಮ, ನೀರು ಮತ್ತು ಕಲ್ಲುಮಣ್ಣುಗಳ ಮಹಾಪ್ರಮಾಣದ ರಾಶಿಯನ್ನು ಕಿರಿದಾದ ಕಾಲುವೆಯ ದಾರಿಯಲ್ಲಿ ಕೇಂದ್ರೀಕರಿಸಿತು. ಯಾಲಾ ಹಿಮನದಿಯಿಂದ ಕೆಳಗಿನ ನದಿವರೆಗಿನ ಮಾರ್ಗದಲ್ಲಿ ಕೇವಲ 3.4 ಮೈಲುಗಳ ಅಂತರದಲ್ಲಿ ಸುಮಾರು 7,000 ಅಡಿ ಎತ್ತರದ ಇಳಿಜಾರು ಇತ್ತು. ಈ ತೀವ್ರ ಇಳಿಜಾರೇ ಪ್ರವಾಹಕ್ಕೆ ಅಪಾರ ವೇಗ ನೀಡಿತು.
ಹಿಮನದಿ ಭಾರೀ ಬಲದಿಂದ ಪರ್ವತದ ಇಳಿಜಾರಿನಲ್ಲಿ ಕುಸಿಯುತ್ತಿದ್ದಂತೆ, ಹಿಮದ ದೊಡ್ಡ ತುಂಡುಗಳು ಪುಡಿಪುಡಿಯಾಗಿ ಒಡೆದುಹೋಯಿತು. ಪರಿಣಾಮವಾಗಿ ಅದು ಕೇವಲ ಜಾರುತ್ತಿರುವ ಹಿಮದ ರಾಶಿಯಾಗಿ ಉಳಿಯದೆ, ನೀರು, ಹಿಮ, ಮಣ್ಣು, ಕಲ್ಲು ಹಾಗೂ ಇತರ ಅವಶೇಷಗಳ ಮಿಶ್ರಣವಾಗಿ ರೂಪುಗೊಂಡಿತು. ಇಂತಹ ಮಿಶ್ರಣವನ್ನು ವಿಜ್ಞಾನದಲ್ಲಿ ಡೆಬ್ರಿಸ್ ಫ್ಲೋ (Debris Flow) ಅಥವಾ ಗ್ಲೇಶಿಯಲ್ ಫ್ಲಡ್ ಸರ್ಜ್ ಎಂದು ಕರೆಯಲಾಗುತ್ತದೆ.
ಸುತ್ತಮುತ್ತಲಿನ ಕಿರಿದಾದ ಕಣಿವೆಗಳು ಮತ್ತು ಎತ್ತರದ ಪರ್ವತಗಳು ನೀರನ್ನು ಅಗಲವಾಗಿ ಹರಡಲು ಅವಕಾಶ ನೀಡಲಿಲ್ಲ. ಹೀಗಾಗಿ ಕಿರಿದಾದ ಕಣಿವೆಯಲ್ಲಿ ಪ್ರವಾಹದ ಅಲೆ ಎತ್ತರಕ್ಕೆ ಏರಿತು.
ಹೆಲಿಕಾಪ್ಟರ್ ಸಮೀಕ್ಷೆಗಳ ಪ್ರಕಾರ, ನೀರು, ಹಿಮ, ಮಣ್ಣು, ಕಲ್ಲು ಹಾಗೂ ಇತರ ಅವಶೇಷಗಳ ಮಿಶ್ರಣ ಪ್ರವಾಹದ ಗರಿಷ್ಠ ಎತ್ತರ ಸುಮಾರು 300 ಅಡಿ ವರೆಗೆ ತಲುಪಿತ್ತು. ಇದು ಸುಮಾರು 30 ಅಂತಸ್ತಿನ ಕಟ್ಟಡದ ಎತ್ತರಕ್ಕೆ ಸಮಾನವಾಗಿದೆ.
ಬದುಕುಳಿದವರ ಪ್ರಕಾರ ಇದು ‘ಹಿಮಾಲಯದ ಸುನಾಮಿ’
300 ಅಡಿ ಎತ್ತರದ ನೀರು ಮತ್ತು ಕಲ್ಲುಮಣ್ಣುಗಳ ಮಿಶ್ರಣದ ಪ್ರವಾಹ ಕಿರಿದಾದ ಕಣಿವೆಯಲ್ಲಿ ಸಾಗುವ ದೃಶ್ಯವನ್ನು ಊಹಿಸುವುದೇ ಕಷ್ಟ. ಈ ಪ್ರವಾಹದಿಂದ ಪಾರಾದವರು ಅದನ್ನು “ಸುನಾಮಿಯಂತೆ ಕಂಡಿತು” ಎಂದು ವಿವರಿಸಿದ್ದಾರೆ.
ಸಾಮಾನ್ಯ ಪ್ರವಾಹಗಳಿಗಿಂತ ಭಿನ್ನವಾಗಿ, ಇದು ಕೇವಲ ನೀರಲ್ಲ; ಅದರೊಳಗೆ ಹಿಮದ ಬಂಡೆಗಳು, ಕಲ್ಲುಗಳು, ಮಣ್ಣು ಮತ್ತು ಮರಗಳಂತಹ ಭಾರೀ ಅವಶೇಷಗಳೂ ಸೇರಿಕೊಂಡಿದ್ದವು. ಹೀಗಾಗಿ ಅದರ ವಿನಾಶಕಾರಿ ಶಕ್ತಿ ಹಲವಾರು ಪಟ್ಟು ಹೆಚ್ಚಾಗಿತ್ತು.
ಕೇವಲ 7 ನಿಮಿಷ 40 ಸೆಕೆಂಡುಗಳಲ್ಲಿ ಗಡಿಭಾಗ ತಲುಪಿದ ಪ್ರವಾಹ
ಈ ದುರಂತದ ಅತ್ಯಂತ ಆಘಾತಕಾರಿ ಅಂಶವೇ ಸಮಯ. ಯಾಲಾ ಹಿಮನದಿ ಕುಸಿತ ಸ್ಥಳದಿಂದ ಚೀನಾ-ನೇಪಾಳ ಗಡಿಯಲ್ಲಿರುವ ಕಟ್ಟಡದವರೆಗೆ ಸುಮಾರು 13.4 ಮೈಲು (21.5 ಕಿ.ಮೀ.) ದೂರವಿದೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ಗಡಿಭಾಗದ ಕಟ್ಟಡಕ್ಕೆ ಪ್ರವಾಹದ ಮೊದಲ ಅಪ್ಪಳಿಕೆ 10:59:50ಕ್ಕೆ ದಾಖಲಾಗಿದೆ. ಅಂದರೆ 10:52:10ಕ್ಕೆ ಆರಂಭವಾದ ಘಟನೆ ಕೇವಲ 7 ನಿಮಿಷ 40 ಸೆಕೆಂಡುಗಳಲ್ಲಿ ಗಡಿಭಾಗ ತಲುಪಿತ್ತು. ಈ ದೂರ ಮತ್ತು ಸಮಯದ ಆಧಾರದ ಮೇಲೆ ವಿಡಿಯೊ ಲೆಕ್ಕಾಚಾರ ಪ್ರಕಾರ, ಪ್ರವಾಹದ ಸರಾಸರಿ ವೇಗ ಸುಮಾರು 105 ಮೈಲು ಪ್ರತಿ ಗಂಟೆ (170 ಕಿ.ಮೀ./ಗಂಟೆ) ಆಗಿತ್ತು.
ನೀರಿನ ಹೊಡೆತದಿಂದ ಹಿಮ್ಮುಖ ಹರಿವು
ಗಡಿಭಾಗ ತಲುಪುವ ವೇಳೆಗೆ ಪ್ರವಾಹವು ಕೇವಲ ನೀರಲ್ಲ; ಅಪಾರ ಪ್ರಮಾಣದ ಹಿಮ, ಮಣ್ಣು ಮತ್ತು ಕಲ್ಲುಗಳನ್ನು ತನ್ನೊಂದಿಗೆ ಎಳೆದುಕೊಂಡು ಬರುತ್ತಿತ್ತು.
ಪ್ರವಾಹದ ಹೊಡೆತ ಎಷ್ಟು ಪ್ರಬಲವಾಗಿತ್ತೆಂದರೆ, ನದಿಯ ದಡಕ್ಕೆ ಅಪ್ಪಳಿಸಿದ ಬಳಿಕ ಅದರ ಒಂದು ಭಾಗ ಸುಮಾರು 1.5 ಮೈಲುಗಳಷ್ಟು ಮೇಲ್ದಿಕ್ಕಿಗೆ (Upstream) ಹಿಂದಕ್ಕೆ ಹರಿದಿದೆ ಎಂದು ವಿಡಿಯೊ ತಿಳಿಸುತ್ತದೆ. ಇದೇ ವೇಳೆ ಮುಖ್ಯ ಪ್ರವಾಹ ಕೆಳದಿಕ್ಕಿನತ್ತ ತನ್ನ ಪಯಣ ಮುಂದುವರಿಸಿತು.
32 ಮೈಲು ಕೆಳಭಾಗದಲ್ಲೂ ಮುಂದುವರಿದ ವಿನಾಶ
ಗಡಿಭಾಗದಲ್ಲೇ ಈ ದುರಂತ ನಿಲ್ಲಲಿಲ್ಲ. ಸುಮಾರು 32 ಮೈಲುಗಳಷ್ಟು ಕೆಳಭಾಗದಲ್ಲಿರುವ ತ್ರಿಶೂಲಿ ಬಜಾರ್ (Trishuli Bazaar) ಪ್ರದೇಶವನ್ನೂ ಈ ಭೀಕರ ಪ್ರವಾಹ ಅಪ್ಪಳಿಸಿತು.
ಈ ವೇಳೆಗೆ ಪ್ರವಾಹದ ಎತ್ತರ ಮತ್ತು ವೇಗ ಮೊದಲಿನಷ್ಟು ಇರಲಿಲ್ಲ. ಕಾರಣ, ನದಿ ಕಣಿವೆ ಅಗಲವಾಗುತ್ತಾ ಹೋಗಿದ್ದರಿಂದ ಪ್ರವಾಹದ ಶಕ್ತಿ ಕಡಿಮೆಯಾಗಿತ್ತು. ಆದರೂ ಅದರ ವೇಗ ವಿನಾಶಕಾರಿಯಾಗಿಯೇ ಮುಂದುವರಿದಿತ್ತು. ಇದರಿಂದಾಗಿಯೇ ಹಲವು ಪ್ರದೇಶಗಳು ಜಲಪ್ರಳಯದಿಂದ ನಾಶವಾದವು, ಸೇತುವೆಗಳು ಕೊಚ್ಚಿಹೋದವು ಮತ್ತು ಮೂಲಸೌಕರ್ಯಗಳಿಗೆ ಭಾರೀ ಹಾನಿಯಾದವು.
ಒಟ್ಟಾರೆ, ಹಿಮನದಿ ಕುಸಿತ ಆರಂಭವಾದ ಸ್ಥಳದಿಂದ ಸುಮಾರು 45 ಮೈಲುಗಳಷ್ಟು ದೂರ ಸುನಾಮಿ ಪ್ರವಾಹವಾಗಿ ಸಂಚರಿಸಿ ಭಾರೀ ವಿನಾಶ ಉಂಟುಮಾಡಿದೆ.
ವಿಜ್ಞಾನಿಗಳಿಗೆ ಎಚ್ಚರಿಕೆಯ ಗಂಟೆ
ಈ ಘಟನೆಯು ಕೇವಲ ಒಂದು ಪ್ರಕೃತಿ ವಿಕೋಪವಲ್ಲ; ಇದು ಹವಾಮಾನ ಬದಲಾವಣೆ, ಹಿಮನದಿಗಳ ಕರಗುವಿಕೆ ಮತ್ತು ಪರ್ವತ ಪ್ರದೇಶಗಳ ಭೌಗೋಳಿಕ ಅಪಾಯಗಳ ನಡುವೆ ಇರುವ ಸಂಬಂಧವನ್ನು ಸ್ಪಷ್ಟವಾಗಿ ತೋರಿಸಿದೆ.
ಯಾಲಾ ಹಿಮನದಿಯ ದಶಕದ ಹಿಮ ಕರಗುವಿಕೆ, ಹೆಚ್ಚಿದ ಉಷ್ಣಾಂಶ, ಅಲ್ಬೆಡೊ ಪರಿಣಾಮದ ಕುಸಿತ, ಕಿರಿದಾದ ಕಣಿವೆಗಳ ಭೌಗೋಳಿಕ ವಿನ್ಯಾಸ ಮತ್ತು ತೀವ್ರ ಇಳಿಜಾರು—ಇವೆಲ್ಲವೂ ಒಂದೇ ಸಮಯದಲ್ಲಿ ಸೇರಿ ಕೆಲವೇ ನಿಮಿಷಗಳಲ್ಲಿ ಮಹಾವಿಪತ್ತಿಗೆ ಕಾರಣವಾದವು.
ಏಕೆ ‘ಆ 7 ನಿಮಿಷ’ಗಳು ಮಹತ್ವದ್ದು ?
ಈ ದುರಂತದ ಅತ್ಯಂತ ಭಯಾನಕ ಅಂಶ 300 ಅಡಿ ಎತ್ತರದ ನೀರಿನ ಗೋಡೆ ಅಥವಾ 170 ಕಿ.ಮೀ. ವೇಗವಲ್ಲ; ಅದು ಕೇವಲ 7 ನಿಮಿಷ 40 ಸೆಕೆಂಡುಗಳ ಅವಧಿ.
ಹಿಮಾಲಯದ ಎತ್ತರದ ಪ್ರದೇಶದಲ್ಲಿ ಸಂಭವಿಸಿದ ಒಂದು ಹಿಮನದಿ ಕುಸಿತವು ಕೆಲವೇ ನಿಮಿಷಗಳಲ್ಲಿ 13 ಮೈಲುಗಳಷ್ಟು ದೂರದಲ್ಲಿರುವ ಜನವಸತಿ ಪ್ರದೇಶವನ್ನು ತಲುಪಬಹುದು ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.
ಇದು ಭವಿಷ್ಯದಲ್ಲಿ ಹಿಮಾಲಯದ ದೇಶಗಳಾದ ನೇಪಾಳ, ಭಾರತ, ಭೂತಾನ್ ಮತ್ತು ಚೀನಾಕ್ಕೆ ಅತ್ಯಂತ ಮಹತ್ವದ ಎಚ್ಚರಿಕೆಯಾಗಿದೆ. ಹಿಮನದಿಗಳ ನಿರಂತರ ಮೇಲ್ವಿಚಾರಣೆ, ಉಪಗ್ರಹ ಆಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆಗಳು ಮತ್ತು ತ್ವರಿತ ಎಚ್ಚರಿಕೆ ಜಾಲಗಳು ಇಲ್ಲದಿದ್ದರೆ, ಇಂತಹ ಹಠಾತ್ ಪ್ರವಾಹಗಳು ಸಾವಿರಾರು ಜನರ ಜೀವಕ್ಕೆ ಅಪಾಯ ಉಂಟುಮಾಡಬಹುದು ಎಂಬುದನ್ನು ಈ ದುರಂತ ಮತ್ತೊಮ್ಮೆ ನೆನಪಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ