‘ಸತ್ತಿದ್ದಾಳೆ’ ಎಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಿದ 18 ತಿಂಗಳ ನಂತರ ಮಹಿಳೆ ಪ್ರತ್ಯಕ್ಷ…! ಆಕೆ ಕೊಲೆ ಆರೋಪದಲ್ಲಿ ನಾಲ್ವರು ಇನ್ನೂ ಜೈಲಿನಲ್ಲಿ…!!

ಮಂದಸೌರ್ : ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾರೆಂದು ಭಾವಿಸಿ ಆಕೆಯ ಕುಟುಂಬವು ಅಂತ್ಯಕ್ರಿಯೆಯನ್ನೂ ನೆರವೇರಿಸಿದ 18 ತಿಂಗಳ ನಂತರ ಈಗ ಮಹಿಳೆ ಪ್ರತ್ಯಕ್ಷರಾಗಿದ್ದಾರೆ…!
ಲಲಿತಾ ಬಾಯಿ ಎಂದು ಗುರುತಿಸಲಾದ ಈ ಮಹಿಳೆ ಪೊಲೀಸ್ ಠಾಣೆಗೆ ಹಾಜರಾಗಿ ತಾನು ಬದುಕಿರುವುದನ್ನು ದೃಢಪಡಿಸಿದ್ದಾರೆ. ಆದರೆ ಆಕೆಯ ಆಪಾದಿತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ…!
ನವಲಿ ಗ್ರಾಮದ ನಿವಾಸಿ ಲಲಿತಾ ಬಾಯಿ (35) ಸೆಪ್ಟೆಂಬರ್ 2023 ರಲ್ಲಿ ನಾಪತ್ತೆಯಾಗಿದ್ದರು. ಗಾಂಧಿ ಸಾಗರ ಪೊಲೀಸ್ ಠಾಣೆಯಲ್ಲಿ ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ಕಾಣೆಯಾಗಿದ್ದಾಳೆ ಎಂದು ಪೊಲೀಸ್‌ ವರದಿಯಲ್ಲಿ ದಾಖಲಿಸಲಾಗಿತ್ತು. ಕೆಲವು ದಿನಗಳ ನಂತರ, ತಲೆ ಜಜ್ಜಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತ ದೇಹ ಸಿಕ್ಕಿತ್ತು. ಪೊಲೀಸರಿಂದ ಕುಟುಂಬದವರಿಗೆ ಮಾಹಿತಿ ಬಂದ ನಂತರ ಶವ ನೋಡಲು ಬಂದ ಆಕೆಯ ಕುಟುಂಬದವರು ಹಾಗೂ ಸಂಬಂಧಿಕರು ಅದು ಲಲಿತಾ ಮೃತದೇಹ ಎಂದು ಗುರುತಿಸಿದ್ದರು. ಲಲಿತಾ ಅವರ ತಂದೆಯ ಪ್ರಕಾರ ಲಲಿತಾ ಅವರ ಅಂತಿಮ ವಿಧಿ-ವಿಧಾನಗಳನ್ನೂ ನೆರವೇರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

“ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ ನಂತರ, ತಾಂಡ್ಲಾ ಪೊಲೀಸರು ತಲೆ ನುಜ್ಜುಗುಜ್ಜಾದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಬಗ್ಗೆ ನಮಗೆ ಮಾಹಿತಿ ನೀಡಿದರು. ನಾವು ಅಲ್ಲಿಗೆ ಹೋಗಿ ಾಕೆಯ ಮೈಮೇಲಿನ ಹಚ್ಚೆ ಮತ್ತು ಕಾಲಿಗೆ ಕಪ್ಪು ದಾರ ಕಟ್ಟಿದ್ದನ್ನು ನೋಡಿ ಇದು ನಮ್ಮ ಮಗಳು ಲಲಿತಾಬಾಯಿ ಶವ ಎಂದು ಗುರುತಿಸಿದೆವು. ನಾವು ಮೃತದೇಹಕ್ಕೆ ಅಂತ್ಯಕ್ರಿಯೆಯನ್ನೂ ಮಾಡಿದ್ದೇವೆ” ಎಂದು ಲಲಿತಾ ಅವರ ತಂದೆ ನಾನೂರಾಮ ಬಂಚದ ತಿಳಿಸಿದ್ದಾರೆ.
ಆದಾಗ್ಯೂ, ಸುಮಾರು 18 ತಿಂಗಳ ನಂತರ, ಲಲಿತಾ ತನ್ನ ಹಳ್ಳಿಗೆ ಮರಳಿದ ನಂತರ ಆಕೆ ಜೀವಂತವಾಗಿರುವುದನ್ನು ಕಂಡು ಬೆಚ್ಚಿಬಿದ್ದ ಆಕೆಯ ತಂದೆ ಕೂಡಲೇ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ರೈಲ್ವೆ ಹಳಿಯ ಸಮೀಪವೇ ಮರಿಗೆ ಜನ್ಮ ನೀಡಿದ ಕಾಡಾನೆ ; 2 ತಾಸು ನಿಂತ ರೈಲು | ಹೃದಯಸ್ಪರ್ಶಿ ವೀಡಿಯೊ ವೀಕ್ಷಿಸಿ

ಏತನ್ಮಧ್ಯೆ, ಲಲಿತಾ ಅವರು ತಾನು ಶಾರುಖ್ ಎಂಬ ವ್ಯಕ್ತಿಯೊಂದಿಗೆ ತಾನಾಗಿಯೇ ಮನೆ ತೊರೆದು ಸೆಪ್ಟೆಂಬರ್ 2023 ರಲ್ಲಿ ಭಾನಪುರಕ್ಕೆ ಹೋಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಎರಡು ದಿನ ಅಲ್ಲಿ ತಂಗಿದ್ದರು.
ನಂತರ ಆ ವ್ಯಕ್ತಿ ನಂತರ ಆಕೆಗೆ ತಿಳಿಯದೆ ಇನ್ನೊಬ್ಬ ಶಾರುಖ್‌ಗೆ 5 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದ. ಆಕೆಯನ್ನು ಖರೀದಿಸಿದ ವ್ಯಕ್ತಿ ಆಕೆಯನ್ನು ರಾಜಸ್ಥಾನದ ಕೋಟಾಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಲಲಿತಾ ಜೊತೆ ಸುಮಾರು 18 ತಿಂಗಳುಗಳ ಕಾಲ ಇದ್ದ. ಆದರೆ, ಅವಕಾಶ ಸಿಕ್ಕಾಗ ಅಲ್ಲಿಂದ ತಪ್ಪಿಸಿಕೊಂಡ ಲಲಿತಾ ಮನೆಗೆ ಮರಳಿದ್ದಾಳೆ ಎಂದು ಹೇಳಿದ್ದಾಳೆ.

“ನನಗೆ ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡ ಓಡಿ ಬಂದೆ. ನನ್ನ ಬಳಿ ಮೊಬೈಲ್ ಫೋನ್ ಇಲ್ಲ, ಹಾಗಾಗಿ ನನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ” ಎಂದು ಲಲಿತಾ ಪೊಲೀಸರಿಗೆ ತಿಳಿಸಿದ್ದಾರೆ.
ಲಲಿತಾಬಾಯಿ ತನ್ನ ಗುರುತನ್ನು ದೃಢೀಕರಿಸಲು ತನ್ನ ಆಧಾರ್ ಮತ್ತು ವೋಟರ್ ಐಡಿಯಂತಹ ದಾಖಲೆಗಳನ್ನು ಸಹ ಒದಗಿಸಿದ್ದಾರೆ. ಲಲಿತಾ ಅವರಿಗೂ ಇಬ್ಬರು ಮಕ್ಕಳಿದ್ದಾರೆ.
ಲಲಿತಾ ಅವರು ತಾನು ಬದುಕಿರುವ ಬಗ್ಗೆ ಮಾಹಿತಿ ನೀಡಲು ಕೆಲವು ದಿನಗಳ ಹಿಂದೆ ಠಾಣೆಗೆ ಭೇಟಿ ನೀಡಿದ್ದರು ಎಂದು ಗಾಂಧಿ ಸಾಗರ ಪೊಲೀಸ್ ಠಾಣೆ ಪ್ರಭಾರಿ ತರುಣಾ ಭಾರದ್ವಾಜ್ ಖಚಿತಪಡಿಸಿದ್ದಾರೆ. ಪೊಲೀಸರು ಅಕ್ಕಪಕ್ಕದವರು ಮತ್ತು ಕುಟುಂಬದ ಸದಸ್ಯರ ಮೂಲಕ ಆಕೆಯ ಗುರುತನ್ನು ಪರಿಶೀಲಿಸಿದ್ದಾರೆ ಹಾಗೂ ಅವರು ನಿಜವಾಗಿಯೂ ಅದೇ ಲಲಿತಾ ಎಂದು ಅವರೆಲ್ಲ ಪೊಲೀಸರಿಗೆ ಖಚಿತಪಡಿಸಿದ್ದಾರೆ. ಈ ಕುರಿತು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಪ್ರಮುಖ ಸುದ್ದಿ :-   ಹೇರ್‌ ಕಟ್‌ ಮಾಡಿಸಿಕೊಳ್ಳಲು ಹೇಳಿದ್ದಕ್ಕೆ ಗುರು ಪೂರ್ಣಿಮೆ ದಿನವೇ ಪ್ರಾಂಶುಪಾಲರನ್ನು ಇರಿದು ಕೊಂದ ಇಬ್ಬರು ವಿದ್ಯಾರ್ಥಿಗಳು...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement