2027ರ ಉತ್ತರ ಪ್ರದೇಶ ಚುನಾವಣೆ | ಯೋಗಿ-ಅಖಿಲೇಶ ಜನಪ್ರಿಯತೆ-ಕಾರ್ಯಕ್ಷಮತೆ ; ನ್ಯೂಸ್18 ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು ?

ನವದೆಹಲಿ: ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಅಖಾಡ ನಿಧಾನವಾಗಿ ಸಜ್ಜಾಗುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದ್ದರೆ, ಅದನ್ನು ಮಣಿಸಿ ಮತ್ತೆ ಅಧಿಕಾರಕ್ಕೇರಲು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ ಸಿದ್ಧತೆ ನಡೆಸುತ್ತಿವೆ. ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಬೇಕಿರುವ ಎಸ್‌ಪಿ–ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ಸ್ಥಾನ ಹೊಂದಾಣಿಕೆ ಮತ್ತು ಚುನಾವಣಾ ಕಾರ್ಯತಂತ್ರದ ಸವಾಲುಗಳಿವೆ.
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಿವ್ಯಾಲ್ಯೂ ಅನಾಲಿಟಿಕ್ಸ್‌ (Pvalue Analytics) ಸಹಯೋಗದಲ್ಲಿ ನ್ಯೂಸ್18 ನಡೆಸಿದ ಉತ್ತರ ಪ್ರದೇಶ ಮೆಗಾ ಸಮೀಕ್ಷೆ (Mega Survey), ಈಗಿನ ಪರಿಸ್ಥಿತಿಯಲ್ಲಿ ಜನಪ್ರಿಯತೆ ಮತ್ತು ಆಡಳಿತದ ಕಾರ್ಯಕ್ಷಮತೆ ಎರಡರಲ್ಲೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮುನ್ನಡೆ ಸಾಧಿಸಿರುವುದನ್ನು ಸೂಚಿಸಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2027ರ ಫೆಬ್ರವರಿ ಆಸುಪಾಸು ನಡೆಯುವ ನಿರೀಕ್ಷೆಯಿದೆ. ಕಳೆದ ಎರಡು ಅವಧಿಗಳಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಜನರ ಪ್ರಸ್ತುತ ಅಭಿಪ್ರಾಯವನ್ನು ತಿಳಿದುಕೊಳ್ಳಲು ಹಾಗೂ ಆಡಳಿತದ ಬಗ್ಗೆ ಮತದಾರರ ನಿಲುವನ್ನು ತಿಳಿದುಕೊಳ್ಳಲು ಈ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ಸಂಗ್ರಹ ನಡೆಸಲಾಗಿದೆ.
ಪ್ರತಿಕ್ರಿಯಿಸಿದವರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಡಳಿತದ ಬಗ್ಗೆ ಹೆಚ್ಚಿನ ಮತದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ನ್ಯೂಸ್18 ಉತ್ತರ ಪ್ರದೇಶ ಮೆಗಾ ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆಯು ಉತ್ತರ ಪ್ರದೇಶದ ಎಲ್ಲ 75 ಜಿಲ್ಲೆಗಳ ಒಟ್ಟು 30,925 ಜನರನ್ನು ಒಳಗೊಂಡಿದೆ. ಸಮೀಕ್ಷೆಯಲ್ಲಿ ಶೇ. 66.6ರಷ್ಟು ಮಂದಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಒಲವು ವ್ಯಕ್ತಪಡಿಸಿದ್ದಾರೆ. ಸಮಾಜವಾದಿ ಪಕ್ಷ (ಎಸ್‌ಪಿ)–ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಶೇ. 26.4ರಷ್ಟು ಜನರು ಒಲವು ವ್ಯಕ್ತಪಡಿಸಿದ್ದರೆ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪರವಾಗಿ ಶೇ. 5.4ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯಲ್ಲಿ ಸರ್ಕಾರದ ಆಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಏಳು ಪ್ರಮುಖ ಮಾನದಂಡಗಳನ್ನು ಪರಿಶೀಲಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ, ಮೂಲಸೌಕರ್ಯ, ಕಲ್ಯಾಣ ಯೋಜನೆಗಳ ಅನುಷ್ಠಾನ, ಆರೋಗ್ಯ ಮೂಲಸೌಕರ್ಯ, ಶಿಕ್ಷಣ ಮೂಲಸೌಕರ್ಯ, ಭ್ರಷ್ಟಾಚಾರ ಮತ್ತು ಉದ್ಯೋಗ ಇವು ಪ್ರಮುಖ ಮಾನದಂಡಗಳಾಗಿವೆ. ಇತ್ತೀಚಿನ ಜೆನ್‌-ಝಡ್‌ (Gen-Z) ವಿದ್ಯಾರ್ಥಿಗಳ ಪ್ರತಿಭಟನೆಗಳು ಹಾಗೂ ರಾಮಮಂದಿರಕ್ಕೆ ನೀಡಲಾದ ದೇಣಿಗೆಗಳ ಕಳ್ಳತನಕ್ಕೆ ಸಂಬಂಧಿಸಿದ ವಿಚಾರಗಳೂ ಸೇರಿದಂತೆ ಸಾರ್ವಜನಿಕ ಚರ್ಚೆಯಲ್ಲಿರುವ ಪ್ರಮುಖ ವಿಷಯಗಳ ಬಗ್ಗೆ ಜನರ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ.
ಈ ಸಮೀಕ್ಷೆಯು ಚುನಾವಣೆಯ ಫಲಿತಾಂಶವನ್ನು ಮುಂಚಿತವಾಗಿ ಊಹಿಸುವ ಅಥವಾ ಪಕ್ಷಗಳು ಪಡೆಯಬಹುದಾದ ಮತಗಳ ಪ್ರಮಾಣ ಹಾಗೂ ಚುನಾವಣಾ ಫಲಿತಾಂಶದ ಬಗ್ಗೆ ಭವಿಷ್ಯ ನುಡಿಯುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಯೋಗಿ ಸರ್ಕಾರದ ಕಾರ್ಯವೈಖರಿಗೆ ಶೇ. 77.1ರಷ್ಟು ಜನರ ತೃಪ್ತಿ
ಸಮೀಕ್ಷೆಯ ಪ್ರಮುಖ ಅಂಶಗಳ ಪ್ರಕಾರ, ಯೋಗಿ ಆದಿತ್ಯನಾಥ ಸರ್ಕಾರದ ಕಾರ್ಯವೈಖರಿಗೆ ಶೇ. 77.1ರಷ್ಟು ಮಂದಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಶೇ. 52.8ರಷ್ಟು ಜನರು ಸರ್ಕಾರದ ಕಾರ್ಯವೈಖರಿಯಿಂದ ‘ಪೂರ್ಣ ತೃಪ್ತಿ’ ಹೊಂದಿದ್ದರೆ, ಶೇ. 24.3ರಷ್ಟು ಮಂದಿ ‘ತೃಪ್ತಿ’ ವ್ಯಕ್ತಪಡಿಸಿದ್ದಾರೆ. ಕೇವಲ ಶೇ. 13.5ರಷ್ಟು ಜನರು ಅತೃಪ್ತಿ ಸೂಚಿಸಿದ್ದಾರೆ.
ಮುಂದಿನ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಅವರೇ ಮುಂದುವರಿಯಬೇಕು ಎಂದು ಶೇ. 66.2ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ್‌ ಅವರು ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಶೇ. 24.4ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಶೇ. 5ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ.
ಯೋಗಿ ಆದಿತ್ಯನಾಥ ಅವರ ಜನಪ್ರಿಯತೆ ಕೇವಲ ಬಿಜೆಪಿ ಬೆಂಬಲಿಗರಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಬೆಂಬಲಿಗರ ಪೈಕಿ ಶೇ. 11.7ರಷ್ಟು ಮಂದಿ ಯೋಗಿ ಅವರು ತಮ್ಮ ಆದ್ಯತೆಯ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಬಿಎಸ್‌ಪಿ ಬೆಂಬಲಿಗರಲ್ಲಿ ಈ ಪ್ರಮಾಣ ಶೇ. 10.2ರಷ್ಟಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲಿಗರ ಪೈಕಿ ಶೇ. 93.3ರಷ್ಟು ಮಂದಿ ಮುಂದಿನ ಅವಧಿಗೂ ಯೋಗಿ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದಾರೆ.
ಇನ್ನೊಂದೆಡೆ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಬೆಂಬಲಿಗರ ಪೈಕಿ ಶೇ. 81.6ರಷ್ಟು ಜನರು ಅಖಿಲೇಶ ಯಾದವ್‌ ಅವರು ಮುಖ್ಯಮಂತ್ರಿಯ ಆದ್ಯತೆ ಅಭ್ಯರ್ಥಿ ಎಂದು ಹೇಳಿದ್ದಾರೆ. ಆದಾಗ್ಯೂ, ಒಟ್ಟಾರೆ ಜನಪ್ರಿಯತೆಯ ವಿಚಾರದಲ್ಲಿ ಅಖಿಲೇಶ ಯಾದವ್‌ ಅವರು ಯೋಗಿ ಆದಿತ್ಯನಾಥ ಅವರಿಗಿಂತ ಬಹಳ ಹಿಂದೆ ಉಳಿದಿರುವುದು ಕಂಡುಬಂದಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ ತೊರೆದವರನ್ನು 'ಹೇಡಿಗಳು' ಎಂದು ಕರೆದ ರಾಹುಲ್ ಗಾಂಧಿ ; ಅವರೆಲ್ಲ ನಿಮ್ಮ ಸ್ನೇಹಿತರಾಗಿದ್ರು ಎಂದು ಕಾಲೆಳೆದ ಖರ್ಗೆ !

ಕಾನೂನು ಸುವ್ಯವಸ್ಥೆಗೆ ಜನರಿಂದ ಅತ್ಯಧಿಕ ಮೆಚ್ಚುಗೆ
ಸರ್ಕಾರದ ಕಾರ್ಯಕ್ಷಮತೆಯನ್ನು ಅಳೆಯಲು ಪರಿಶೀಲಿಸಲಾದ ಏಳು ಮಾನದಂಡಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಜನರಿಂದ ಅತ್ಯಧಿಕ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ರೀತಿಗೆ ಶೇ. 74ರಷ್ಟು ಜನರು ತೃಪ್ತಿ ಸೂಚಿಸಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಶೇ. 68.6ರಷ್ಟು ಮಂದಿ ತೃಪ್ತಿ ಹೊಂದಿದ್ದರೆ, ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಶೇ. 66.3ರಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬಿಜೆಪಿ/ಎನ್‌ಡಿಎ ಬೆಂಬಲಿಗರಲ್ಲಿ ಶೇ. 89.6ರಷ್ಟು ಮಂದಿ ಸರ್ಕಾರದ ಕಾನೂನು ಸುವ್ಯವಸ್ಥೆಯ ನಿರ್ವಹಣೆಯಿಂದ ತೃಪ್ತರಾಗಿದ್ದಾರೆ. ಇದಕ್ಕೆ ಹೋಲಿಸಿದರೆ, ಎಸ್‌ಪಿ–ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಬೆಂಬಲಿಗರಲ್ಲಿ ಈ ಪ್ರಮಾಣ ಸುಮಾರು ಶೇ. 43ರಷ್ಟಿದೆ.
ಕಾನೂನು ಸುವ್ಯವಸ್ಥೆಯು ಸರ್ಕಾರದ ಸಾಧನೆಯನ್ನು ಅಳೆಯುವ ಮಾನದಂಡ ಮಾತ್ರವಲ್ಲದೆ, ಮತದಾರರು ಮತ ಚಲಾಯಿಸುವಾಗ ಪರಿಗಣಿಸುವ ಅತ್ಯಂತ ಪ್ರಮುಖ ವಿಷಯವೂ ಆಗಿದೆ. ಸಮೀಕ್ಷೆಯಲ್ಲಿ ಶೇ. 33.4ರಷ್ಟು ಜನರು ಕಾನೂನು ಸುವ್ಯವಸ್ಥೆಯನ್ನು ತಮ್ಮ ಮತದಾನದ ನಿರ್ಧಾರವನ್ನು ಪ್ರಭಾವಿಸುವ ಪ್ರಮುಖ ವಿಷಯವೆಂದು ಹೇಳಿದ್ದಾರೆ.

ಹಿಂದಿನ ಮತದಾರರನ್ನು ಉಳಿಸಿಕೊಳ್ಳಲಿದೆಯೇ ಬಿಜೆಪಿ ?
ಹಿಂದಿನ ಚುನಾವಣೆಗಳಲ್ಲಿ ತಾವು ಚಲಾಯಿಸಿದ್ದ ಮತದ ನೆನಪಿನ ಆಧಾರದ ಮೇಲೆ ಪ್ರಸ್ತುತ ಮತದಾನದ ಒಲವನ್ನು ಹೋಲಿಸಿದಾಗ, ಬಿಜೆಪಿ ತನ್ನ ಬೆಂಬಲವನ್ನು ಗಣನೀಯವಾಗಿ ಉಳಿಸಿಕೊಂಡಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ. 2022ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾಗಿ ಹೇಳಿದವರಲ್ಲಿ ಸುಮಾರು ಶೇ. 91ರಷ್ಟು ಮಂದಿ ಈಗಲೂ ಬಿಜೆಪಿ ಪರ ಒಲವು ಹೊಂದಿದ್ದಾರೆ. ಎಸ್‌ಪಿ–ಕಾಂಗ್ರೆಸ್‌ ಮೈತ್ರಿಕೂಟವು ಹಿಂದಿನ ಮತದಾರರಲ್ಲಿ ಸುಮಾರು ಶೇ. 83ರಿಂದ 85ರಷ್ಟು ಬೆಂಬಲವನ್ನು ಉಳಿಸಿಕೊಂಡಿದೆ.
ಬಿಜೆಪಿಯ ಚುನಾವಣಾ ಮುನ್ನಡೆಗೆ ಹಿಂದಿನ ಬೆಂಬಲಿಗರನ್ನು ತನ್ನೊಂದಿಗೇ ಉಳಿಸಿಕೊಳ್ಳುತ್ತಿರುವುದು ಮಾತ್ರ ಕಾರಣವಲ್ಲ. ಈ ಹಿಂದೆ ಮತ ಚಲಾಯಿಸದವರನ್ನು ಹಾಗೂ ಇತರ ಪಕ್ಷಗಳಿಂದ ದೂರ ಸರಿಯುತ್ತಿರುವ ಮತದಾರರನ್ನು ತನ್ನತ್ತ ಸೆಳೆಯುವ ಸಾಮರ್ಥ್ಯವೂ ಬಿಜೆಪಿಯ ಬಲವನ್ನು ಹೆಚ್ಚಿಸಿದೆ ಎಂದು ಸಮೀಕ್ಷೆ ಸೂಚಿಸಿದೆ.
ಸರ್ಕಾರದ ಕಾರ್ಯಕ್ಷಮತೆಯ ಕುರಿತು ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರ ಅಭಿಪ್ರಾಯಗಳಲ್ಲಿ ಹೆಚ್ಚಿನ ಅಂತರ ಕಂಡುಬಂದಿಲ್ಲ. ಸಮೀಕ್ಷೆಯಲ್ಲಿ ಪರಿಶೀಲಿಸಲಾದ ಏಳು ಮಾನದಂಡಗಳಲ್ಲಿಯೂ ನಗರ ಮತ್ತು ಗ್ರಾಮೀಣ ಮತದಾರರ ತೃಪ್ತಿಯ ಮಟ್ಟಗಳು ಬಹುತೇಕ ಒಂದೇ ರೀತಿಯಲ್ಲಿವೆ.
ಬಿಜೆಪಿ ಬೆಂಬಲಿಗರಲ್ಲಿ ಯೋಗಿ ನಾಯಕತ್ವದ ಬಗ್ಗೆ ಭಾರಿ ವಿಶ್ವಾಸ
ಬಿಜೆಪಿ ನೇತೃತ್ವದ ಎನ್‌ಡಿಎಗೆ ಪ್ರಸ್ತುತ ಬೆಂಬಲ ಸೂಚಿಸಿರುವ ಮತದಾರರಲ್ಲಿ ಶೇ. 93.2ರಷ್ಟು ಮಂದಿ ಬಿಜೆಪಿಗೆ ಮೂರನೇ ಅವಧಿಗೂ ಅಧಿಕಾರ ಸಿಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ. 94.7ರಷ್ಟು ಜನರು ಯೋಗಿ ಸರ್ಕಾರದ ಕಾರ್ಯವೈಖರಿಯಿಂದ ತೃಪ್ತರಾಗಿದ್ದಾರೆ. ಶೇ. 93.3ರಷ್ಟು ಮಂದಿ ಯೋಗಿ ಆದಿತ್ಯನಾಥ ಅವರನ್ನೇ ಮುಂದಿನ ಮುಖ್ಯಮಂತ್ರಿಯಾಗಿ ಬಯಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು

ರಾಮಮಂದಿರ ದೇಣಿಗೆ ಕಳವು ಪ್ರಕರಣ
ರಾಮಮಂದಿರಕ್ಕೆ ಸಂಬಂಧಿಸಿದ ದೇಣಿಗೆ ಕಳವು ಪ್ರಕರಣದ ಬಗ್ಗೆಯೂ ಸಮೀಕ್ಷೆಯಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಮಾರು ಮೂರನೇ ಒಂದು ಭಾಗದಷ್ಟು, ಅಂದರೆ ಶೇ. 31.2ರಷ್ಟು ಮಂದಿ ದೇಣಿಗೆ ಕಳವಿಗೆ ದೇವಸ್ಥಾನದ ಟ್ರಸ್ಟ್‌ನ ಅಧಿಕಾರಿಗಳೇ ಹೊಣೆ ಎಂದು ಹೇಳಿದ್ದಾರೆ. ಶೇ. 20.6ರಷ್ಟು ಮಂದಿ ಸಿಬ್ಬಂದಿ ಅಥವಾ ಗುತ್ತಿಗೆದಾರರನ್ನು ಹೊಣೆಗಾರರೆಂದು ಹೇಳಿದ್ದರೆ, ಶೇ. 13.7ರಷ್ಟು ಮಂದಿ ರಾಜ್ಯ ಸರ್ಕಾರದ ಹೊಣೆಗಾರಿಕೆಯನ್ನೂ ಉಲ್ಲೇಖಿಸಿದ್ದಾರೆ.
ಉದ್ಯೋಗ ಸೃಷ್ಟಿ ಸರ್ಕಾರದ ದುರ್ಬಲ ಕೊಂಡಿ
ಯೋಗಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಒಟ್ಟಾರೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದರೂ, ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಇತರ ಮಾನದಂಡಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ತೃಪ್ತಿ ವ್ಯಕ್ತವಾಗಿದೆ. ಸಮೀಕ್ಷೆಯಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಸರ್ಕಾರದ ಕಾರ್ಯಕ್ಷಮತೆಯಿಂದ ಕೇವಲ ಶೇ. 58.3ರಷ್ಟು ಮಂದಿ ತೃಪ್ತಿ ಹೊಂದಿದ್ದಾರೆ. ಪರಿಶೀಲಿಸಲಾದ ಇತರ ಪ್ರಮುಖ ಮಾನದಂಡಗಳಿಗೆ ಹೋಲಿಸಿದರೆ ಇದು ಕಡಿಮೆ ಪ್ರಮಾಣವಾಗಿದೆ.
ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ನಿರುದ್ಯೋಗಿಗಳಲ್ಲಿ ಸರ್ಕಾರದ ಕಾರ್ಯವೈಖರಿಯಿಂದ ತೃಪ್ತಿಯಿದೆ ಎಂದು ಹೇಳಿರುವವರ ಪ್ರಮಾಣ ಕೇವಲ ಶೇ. 50.7ರಷ್ಟಿದೆ. ಭೂಹೀನರು ಮತ್ತು ಕೌಶಲರಹಿತ ಕಾರ್ಮಿಕರಲ್ಲಿಯೂ ಈ ಪ್ರಮಾಣ ಸುಮಾರು ಶೇ. 52ರಿಂದ 53ರಷ್ಟಿದೆ.
ಬಿಜೆಪಿ/ಎನ್‌ಡಿಎ ಬೆಂಬಲಿಗರಲ್ಲಿ ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ತೃಪ್ತಿಯ ಪ್ರಮಾಣ ಶೇ. 74.5ರಷ್ಟಿದೆ. ಕಾನೂನು ಸುವ್ಯವಸ್ಥೆ, ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ತೃಪ್ತಿಯ ಪ್ರಮಾಣಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ. ಹೀಗಾಗಿ ಉದ್ಯೋಗ ಸೃಷ್ಟಿಯು ಯೋಗಿ ಸರ್ಕಾರದ ಸ್ವಲ್ಪಮಟ್ಟಿನ ದುರ್ಬಲ ಅಂಶವಾಗಿ ಗುರುತಿಸಿಕೊಂಡಿದೆ.
2026ರ ಸೆಪ್ಟೆಂಬರ್‌ 17ರಿಂದ ಅಕ್ಟೋಬರ್‌ 2ರವರೆಗೆ ಈ ಸಮೀಕ್ಷೆಯ ಕ್ಷೇತ್ರಕಾರ್ಯ ನಡೆದಿದ್ದು, ಇದು ಆ ಅವಧಿಯ ಜನಾಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ. 2027ರ ವಿಧಾನಸಭಾ ಚುನಾವಣೆಯ ವೇಳೆಗೆ ರಾಜಕೀಯ ಪರಿಸ್ಥಿತಿ, ಪಕ್ಷಗಳ ಪ್ರಚಾರ, ಅಭ್ಯರ್ಥಿಗಳ ಆಯ್ಕೆ ಮತ್ತು ಜನರ ಆದ್ಯತೆಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement