ಇರಾನಿನ ನೂತನ ಸರ್ವೋಚ್ಚ ನಾಯಕನ ಸ್ಥಿತಿ ಗಂಭೀರ : ಪ್ರಜ್ಞಾಹೀನ ಸ್ಥಿತಿಯಲ್ಲಿ ಮೊಜ್ತಬಾ ಖಮೇನಿ ; ವರದಿ

ತೆಹ್ರಾನ್: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ವರದಿಯೊಂದು ಹೇಳಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ತಂದೆ ಅಲಿ ಖಮೇನಿ ಮೃತಪಟ್ಟರೆ, ಮೊಜ್ತಬಾ ತೀವ್ರವಾಗಿ ಗಾಯಗೊಂಡಿದ್ದರು. ಪ್ರಸ್ತುತ ಅವರು ‘ಕುಮ್’ನಲ್ಲಿ (Qom) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ‘ದಿ ಟೈಮ್ಸ್’ ವರದಿ ಮಾಡಿದೆ.
ಮೊದಲ ಬಾರಿಗೆ ಸುಪ್ರೀಂ ಲೀಡರ್ ಎಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ತೆಹ್ರಾನ್‌ನಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಶಿಯಾ ಮುಸ್ಲಿಮರ ಧಾರ್ಮಿಕ ಕೇಂದ್ರ ‘ಕುಮ್’ನಲ್ಲಿ ಮೊಜ್ತಬಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
 ರಾಜತಾಂತ್ರಿಕ ಪತ್ರವೊಂದನ್ನು ಉಲ್ಲೇಖಿಸಿರುವ  ವರದಿಯು, “ಮೊಜ್ತಬಾ ಖಮೇನಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ” ಎಂದು ತಿಳಿಸಿದೆ. ಈ ಮಾಹಿತಿಯನ್ನು ಅಮೆರಿಕ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆಗಳು ಗಲ್ಫ್ ರಾಷ್ಟ್ರಗಳೊಂದಿಗೆ ಹಂಚಿಕೊಂಡಿವೆ ಎನ್ನಲಾಗಿದೆ.
ಇರಾನ್ ಸರ್ಕಾರದ ಮೌನ  
ಇರಾನ್‌ನಲ್ಲಿ ಯುದ್ಧ ಆರಂಭವಾದ ಕಳೆದ ಐದು ವಾರಗಳಿಂದ ಮೊಜ್ತಬಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಅಥವಾ ಅವರ ಧ್ವನಿ ಕೇಳಿಬಂದಿಲ್ಲ. ಮಾರ್ಚ್ ಆರಂಭದಲ್ಲಿ ಅವರು ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದರೂ, ಅವರ ಹೆಸರಿನಲ್ಲಿ ಕೇವಲ ಲಿಖಿತ ಹೇಳಿಕೆಗಳನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ.
AI ವಿಡಿಯೋ ವಿವಾದ:
ಇತ್ತೀಚೆಗಷ್ಟೇ ಇರಾನ್ ಸರ್ಕಾರವು ಮೊಜ್ತಬಾ ಅವರು ಯುದ್ಧ ರೂಮ್ ಪ್ರವೇಶಿಸುತ್ತಿರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿತ್ತು. ಆದರೆ, ಅದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ವಿಡಿಯೋ ಎಂಬ ಸಂಶಯ ವ್ಯಕ್ತವಾಗಿದೆ. ನಾಯಕ ಸುರಕ್ಷಿತವಾಗಿದ್ದಾರೆ ಎಂದು ಬಿಂಬಿಸಲು ಇರಾನ್ ಈ ತಂತ್ರ ಹೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಫೆ.28ರಂದು ನಡೆದ ದಾಳಿಯಲ್ಲಿ ಮೊಜ್ತಬಾ ಅವರ ತಂದೆ ಅಲಿ ಖಮೇನಿ ಮಾತ್ರವಲ್ಲದೆ, ಅವರ ತಾಯಿ, ಪತ್ನಿ ಮತ್ತು ಪುತ್ರ ಕೂಡ ಮೃತಪಟ್ಟಿದ್ದಾರೆ ಎಂದು ಇರಾನ್ ಈಗಾಗಲೇ ಖಚಿತಪಡಿಸಿದೆ. ಅಮೆರಿಕದ ವರದಿಗಳ ಪ್ರಕಾರ, ಮೊಜ್ತಬಾ ಅವರ ಮುಖ ಮತ್ತು ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, ಅವರು ಕೋಮಾದಲ್ಲಿದ್ದಾರೆ ಎನ್ನಲಾಗಿದೆ.
ಈ ವರದಿಯ ಬಗ್ಗೆ ಅಮೆರಿಕದ ವೈಟ್ ಹೌಸ್ ಅಥವಾ ಇರಾನ್ ಅಧಿಕೃತವಾಗಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement