ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿಗೆ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ನವದೆಹಲಿ:  ಚುನಾವಣಾ ಆಯೋಗವು ಇಂದು, ಭಾನುವಾರ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕಗಳನ್ನು ಘೋಷಿಸಿದೆ. ಉಳಿದ ಎಲ್ಲಾ ರಾಜ್ಯಗಳಲ್ಲಿ ಚುನಾವಣೆಗಳು ಒಂದೇ ಹಂತದಲ್ಲಿ ನಡೆಯಲಿದ್ದರೆ, ಪಶ್ಚಿಮ ಬಂಗಾಳ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ.
ಅಸ್ಸಾಂ, ಕೇರಳ ಮತ್ತು ಪುದುಚೇರಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ತಮಿಳುನಾಡಿಗೆ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.  ಆದರೆ ಪಶ್ಚಿಮ ಬಂಗಾಳದಲ್ಲಿ  ಎರಡು ಹಂತದ ಚುನಾವಣೆ ನಡೆಯಲಿದ್ದು, ಮೊದಲನೇ ಹಂತದ ಮತದಾನ ಏಪ್ರಿಲ್ 23ರಂದು ನಡೆಯಲಿದ್ದು,  ಎರಡನೇ ಹಂತದ ಮತದಾನ ಏಪ್ರಿಲ್ 29 ರಂದು ನಡೆಯಲಿದೆ. ಈ ಎಲ್ಲಾ ರಾಜ್ಯಗಳ ಚುನಾವಣೆಯ ಮತ ಎಣಿಕೆ ಮೇ 4 ರಂದು ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರುತ್ತದೆ.
ಚುನಾವಣೆ ನಡೆಯುವ ರಾಜ್ಯಗಳು 
ಪಶ್ಚಿಮ ಬಂಗಾಳ: 294 ಕ್ಷೇತ್ರಗಳು – ಮತದಾನ ಏಪ್ರಿಲ್ 23 ಮತ್ತು 29
ತಮಿಳುನಾಡು: 234 ಕ್ಷೇತ್ರಗಳು – ಮತದಾನ ಏಪ್ರಿಲ್ 23
ಅಸ್ಸಾಂ: 126 ಕ್ಷೇತ್ರಗಳು – ಮತದಾನ ಏಪ್ರಿಲ್ 9
ಕೇರಳ: 140 ಕ್ಷೇತ್ರಗಳು – ಮತದಾನ ಏಪ್ರಿಲ್ 9
ಪುದುಚೆರಿ: 30 ಕ್ಷೇತ್ರಗಳು – ಮತದಾನ ಏಪ್ರಿಲ್ 9
ಈ ಚುನಾವಣೆಯ ಐದು ರಾಜ್ಯಗಳ ಒಟ್ಟು 824 ಕ್ಷೇತ್ರಗಳಲ್ಲಿ ನಡೆಯಲಿದೆ. ಒಟ್ಟಾರೆಯಾಗಿ ಸುಮಾರು 17.4 ಕೋಟಿ ಜನರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಸ್ಸಾಂನಲ್ಲಿ 2.50 ಕೋಟಿ, ಕೇರಳದಲ್ಲಿ 2.70 ಕೋಟಿ, ಪುದುಚೇರಿಯಲ್ಲಿ 9.44 ಲಕ್ಷ, ತಮಿಳುನಾಡಿನಲ್ಲಿ 5.67 ಕೋಟಿ ಮತ್ತು ಪಶ್ಚಿಮ ಬಂಗಾಳದಲ್ಲಿ 6.44 ಕೋಟಿ ಮತದಾರರು ಮತಚಲಾಯಿಸಲು ಅರ್ಹರಾಗಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement