“ನವೆಂಬರ್ 26, 2026ರ ವೇಳೆಗೆ ಪಾಕಿಸ್ತಾನ ವಿಶ್ವದ ಶ್ರೀಮಂತ ರಾಷ್ಟ್ರವಾಗಲಿದೆ…”: ಪಾಕ್‌ ಸೆನೆಟರ್ ವಿಚಿತ್ರ ಹೇಳಿಕೆ ವೀಡಿಯೊ ವೈರಲ್ !

 ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಪಾಕಿಸ್ತಾನದ ಬಗ್ಗೆ ಅಲ್ಲಿನ ಸೆನೆಟರ್ ಫೈಸಲ್ ರಜಾ ಅಬಿದಿ (Faisal Raza Abidi) ನೀಡಿರುವ ಅಚ್ಚರಿಯ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಿಟಿವಿ ನ್ಯೂಸ್ (GTV News) ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ತುಣುಕೊಂದು ವೈರಲ್ ಆಗಿದ್ದು, ಅದರಲ್ಲಿ ಅಬಿದಿ ಅವರು ಪಾಕಿಸ್ತಾನದ ಭವಿಷ್ಯದ ಬಗ್ಗೆ ಅತಿಶಯೋಕ್ತಿಯ ಭವಿಷ್ಯ ನುಡಿದಿದ್ದಾರೆ.
ಈಗ ವೈರಲ್‌ ಆಗಿರುವ ವಿಡಿಯೋದಲ್ಲಿ ಅಬಿದಿ ಅವರು, “ಪಾಕಿಸ್ತಾನದ ಬಗ್ಗೆ ಚಿಂತಿಸಬೇಡಿ. ನವೆಂಬರ್ 26, 2026 ರಂದು ಈ ಇಡೀ ವಿಶ್ವದಲ್ಲೇ ಕೇವಲ ಒಂದೇ ಒಂದು ಶ್ರೀಮಂತ ರಾಷ್ಟ್ರವಿರುತ್ತದೆ, ಅದರ ಹೆಸರು ‘ಪಾಕಿಸ್ತಾನ’. ಒಂದು ವೇಳೆ ಇದು ನಿಜವಾಗದಿದ್ದರೆ ಫೈಸಲ್ ರಜಾ ಅಬಿದಿ ಪಾಕಿಸ್ತಾನದ ಋಣ ತೀರಿಸಲಿಲ್ಲ ಎಂದು ಬೇಕಾದರೆ ಹೇಳಿ” ಎಂದು ಅತಿ ವಿಶ್ವಾಸದಿಂದ ನುಡಿದಿದ್ದಾರೆ.
ಪಾಕಿಸ್ತಾನವು ಪ್ರಸ್ತುತ ತೀವ್ರ ಹಣದುಬ್ಬರ ಮತ್ತು ಸಾಲದ ಸುಳಿಯಲ್ಲಿ ಸಿಲುಕಿರುವಾಗ, ಅಬಿದಿ ಅವರ ಈ ಹೇಳಿಕೆ ಕೇಳಿ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ತರಹದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.  ಈ ಕ್ಲಿಪ್ ವ್ಯಾಪಕವಾಗಿ ಪ್ರಸಾರವಾಗುತ್ತಲೇ ಇದೆ, ಪಾಕಿಸ್ತಾನಿ ಮತ್ತು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಮೀಮ್ಸ್ ಮತ್ತು ಟೀಕೆ-ಟಿಪ್ಪಣಿಗಳಿಗೆ ಕಾರಣವಾಗಿದೆ.
ಬಳಕೆದಾರರೊಬ್ಬರು “ಇವರು ಯಾವ ನಶೆಯಲ್ಲಿದ್ದಾರೆ? ತಿನ್ನಲು ಅನ್ನವಿಲ್ಲದಿದ್ದರೂ ಶ್ರೀಮಂತರಾಗುವ ಕನಸು ಕಾಣುತ್ತಿದ್ದಾರೆ” ಎಂದು ಕಾಮೆಂಟ್ ಮಾಡಿದ್ದಾರೆ. “ಮೊದಲು ಜಗತ್ತಿಗೆ ಕೊಡಬೇಕಾದ ಸಾಲವನ್ನಾದರೂ ತೀರಿಸಿ, ಆಮೇಲೆ ಶ್ರೀಮಂತರಾಗುವ ಬಗ್ಗೆ ಮಾತನಾಡಿ” ಎಂದು ಮತ್ತೊಬ್ಬರು ಕಿಚಾಯಿಸಿದ್ದಾರೆ.
 ಮತ್ತೊಬ್ಬರು ನವೆಂಬರ್ 26, 2026 ರ ಹೊತ್ತಿಗೆ ಪಾಕಿಸ್ತಾನವು ಎಷ್ಟು ಶ್ರೀಮಂತವಾಗುತ್ತದೆಯೆಂದರೆ ಅದು ಐಎಂಎಫ್‌(IMF)ನಿಂದ ಸಾಲ ಪಡೆಯುವ ಬದಲು ಅದಕ್ಕೆ ಸಾಲ ನೀಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ಅಬಿದಿ ಅವರನ್ನು ಕೇವಲ ‘ಮನರಂಜನೆ ನೀಡುವ ವ್ಯಕ್ತಿ’ ಎಂದು ಬಣ್ಣಿಸಿದ್ದಾರೆ.
 ಈ ವಿಡಿಯೋ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ವೈರಲ್ ಆದರೂ ಸಹ, ಮಾಜಿ ಸೆನೆಟರ್ ಆಗಲಿ ಅಥವಾ ಜಿಟಿವಿ ನ್ಯೂಸ್ ವಾಹಿನಿಯಾಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ತೀವ್ರ ಆರ್ಥಿಕ ಕುಸಿತ ಕಾಣುತ್ತಿರುವ ದೇಶವೊಂದು ಕೆಲವೇ ವರ್ಷಗಳಲ್ಲಿ ವಿಶ್ವದ ಏಕೈಕ ಶ್ರೀಮಂತ ರಾಷ್ಟ್ರವಾಗುವುದು ಅಸಾಧ್ಯದ ಮಾತು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement