ವಿಶ್ವದ ಅತ್ಯಂತ ಗೌರವಾನ್ವಿತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದ ರತನ್ ಟಾಟಾ ಕಳೆದ ವರ್ಷ ಅಕ್ಟೋಬರ್ನಲ್ಲಿ ಇಹಲೋಕ ತ್ಯಜಿಸಿದರೂ, ಅವರು ಬರೆದಿಟ್ಟ ಉಯಿಲು(will) ಈಗ ಮತ್ತೆ ಸುದ್ದಿಯಲ್ಲಿದೆ. ದಿವಂಗತ ರತನ್ ಟಾಟಾ ಅವರ ಉಯಿಲಿ(will)ನಲ್ಲಿ ಹೊರಹೊಮ್ಮಿರುವ ಮೋಹಿನಿ ಮೋಹನ ದತ್ತಾ ಎಂಬ ಹೆಸರು ಟಾಟಾ ಕುಟುಂಬ ಮತ್ತು ವ್ಯಾಪಾರ ಸಮುದಾಯದ ಅನೇಕರ ಅಚ್ಚರಿಗೆ ಕಾರಣವಾಗಿದೆ.
ರತನ್ ಟಾಟಾ ಅವರು ತಮ್ಮ ಉಯಿಲಿ(will)ನಲ್ಲಿ 74 ವರ್ಷದ ಟಾಟಾ ಗ್ರೂಪ್ನ ಮಾಜಿ ಉದ್ಯೋಗಿಯಾದ ಮೋಹಿನಿ ಮೋಹನ ದತ್ತಾ ಅವರಿಗೆ ತಮ್ಮ 500 ಕೋಟಿ ಮೌಲ್ಯದ ಆಸ್ತಿಯನ್ನು ಬರೆದಿದ್ದಾರೆ ಎಂದು ಹೇಳಲಾಗಿದೆ. ಮೋಹಿನಿ ಮೋಹನ ದತ್ತಾ ಅವರು ದಿವಂಗತ ರತನ್ ಟಾಟಾ ಅವರ ಕುಟುಂಬ ಅಥವಾ ಅವರ ಆಂತರಿಕ ವಲಯಕ್ಕೆ ಹೆಚ್ಚು ಪರಿಚಿತವಲ್ಲದ ವ್ಯಕ್ತಿ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ರತನ್ ಟಾಟಾ ಎಸ್ಟೇಟ್ನ 500 ಕೋಟಿ ರೂ.ಗಳ ಭಾಗ ಪಡೆಯಲು ಈಗ ಅವರು ಸಿದ್ಧರಾಗಿದ್ದಾರೆ.
ಉಯಿಲಿನಲ್ಲಿ ಮೋಹಿನಿ ಮೋಹನ ದತ್ತಾ ಅವರನ್ನು ರತನ್ ಟಾಟಾ ಅವರ ಸಂಪತ್ತಿನ ವಾರಸುದಾರರಲ್ಲಿ ಒಬ್ಬರು ಎಂದು ಉಲ್ಲೇಖಿಸಲಾಗಿದೆ, ರತನ್ ಟಾಟಾ ಅವರ ವಿಲ್ ಅನ್ನು ಹೈಕೋರ್ಟ್ ಪ್ರಮಾಣೀಕರಿಸಿದ ನಂತರ ಆಸ್ತಿಯನ್ನು ನೀಡಲಾಗುತ್ತದೆ. ಇದಕ್ಕೆ ಕನಿಷ್ಠ ಆರು ತಿಂಗಳು ಬೇಕಾಗುವ ಸಾಧ್ಯತೆ ಇದೆ.
ಅಕ್ಟೋಬರ್ 2024 ರಲ್ಲಿ ನಿಧನರಾದ ರತನ್ ಟಾಟಾ ತಮ್ಮ ಎಸ್ಟೇಟ್ನ ಮೂರನೇ ಒಂದು ಭಾಗವನ್ನು ದತ್ತಾ ಅವರಿಗೆ ಉಯಿಲು(will) ಬರೆದಿದ್ದಾರೆ ಎಂದು ಹೇಳಲಾಗಿದೆ. ಎಸ್ಟೇಟ್ ಉಳಿದ ಭಾಗವನ್ನು ರತನ್ ಟಾಟಾ ಮಲ-ಸಹೋದರಿಯರಾದ ಶಿರೀನ್ ಜೆಜೀಭೋಯ್ ಮತ್ತು ಡೀನಾ ಜೆಜೀಭೋಯ್ ಅವರಿಗೆ ಬರೆಯಲಾಗಿದೆ. ಅವರು ಉಯಿಲಿನ(will) ನಿರ್ವಹಣೆಯನ್ನೂ ಮಾಡುತ್ತಾರೆ. ಆದಾಗ್ಯೂ, ರತನ್ ಟಾಟಾ ತಮ್ಮ ಸಂಪತ್ತಿನ ಹೆಚ್ಚುನ ಪಾಲನ್ನು ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ ಮತ್ತು ರತನ್ ಟಾಟಾ ಎಂಡೋಮೆಂಟ್ ಟ್ರಸ್ಟ್ ಅನ್ನು ಸ್ಥಾಪಿಸಿದ ಎರಡು ಸಂಸ್ಥೆಗಳ ಮೂಲಕ ನಡೆಸುವ ದತ್ತಿ ಕಾರ್ಯಗಳಿಗೆ ಸಮರ್ಪಿಸಿದ್ದಾರೆ.
ಮೋಹಿನಿ ಮೋಹನ ದತ್ತಾ ಯಾರು?
ಮೋಹಿನಿ ಮೋಹನ ದತ್ತಾ ಅವರು ಜಮ್ಶೆಡ್ಪುರ ಮೂಲದ ಉದ್ಯಮಿ ಮತ್ತು ಟ್ರಾವೆಲ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರ ಕುಟುಂಬವು ಒಮ್ಮೆ ಸ್ಟಾಲಿಯನ್ ಎಂಬ ಟ್ರಾವೆಲ್ ಏಜೆನ್ಸಿಯನ್ನು ಹೊಂದಿತ್ತು, ಇದರಲ್ಲಿ ಟಾಟಾ ಇಂಡಸ್ಟ್ರೀಸ್ 20%ರಷ್ಟು ಪಾಲು ಹೊಂದಿತ್ತು. ಉಳಿದ 80%ರಷ್ಟು ಪಾಲನ್ನು ದತ್ತಾ ಅವರು ಹೊಂದಿದ್ದರು. 2013 ರಲ್ಲಿ, ಸ್ಟಾಲಿಯನ್ ಅನ್ನು ತಾಜ್ ಗ್ರೂಪ್ನ ಟ್ರಾವೆಲ್ ಸರ್ವಿಸ್ನಲ್ಲಿ ವಿಲೀನಗೊಳಿಸಲಾಯಿತು, ಇದು ಟಾಟಾ ಗ್ರೂಪ್ನ ಹಾಸ್ಪಿಟಾಲಿಟಿ (hospitality) ವಿಭಾಗವಾಗಿದೆ. ದತ್ತಾ ಅವರು ಥಾಮಸ್ ಕುಕ್ (ಭಾರತ)ಗೆ ಸಂಬಂಧಿಸಿದ ಕಂಪನಿಯಾದ ಟಿಸಿ ಟ್ರಾವೆಲ್ ಸರ್ವಿಸಸ್ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಅಕ್ಟೋಬರ್ 2024 ರಲ್ಲಿ ಟಾಟಾ ಅವರ ಅಂತ್ಯಕ್ರಿಯೆ ವೇಳೆ ದತ್ತಾ ಅವರು ರತನ್ ಟಾಟಾ ಹಾಗೂ ತಮ್ಮ ಬಾಂಧವ್ಯದ ಬಗ್ಗೆ ವಿವರಿಸಿದ್ದಾರೆ. ರತನ್ ಟಾಟಾ ಅವರೊಂದಿಗಿನ ದತ್ತಾ ಅವರ ಸ್ನೇಹ ಸುಮಾರು 60 ವರ್ಷಗಳಷ್ಟು ಹಿಂದಿನದು. ಅವರು ಮೊದಲು ಜೆಮ್ಶೆಡ್ಪುರದ ಡೀಲರ್ಸ್ ಹಾಸ್ಟೆಲ್ನಲ್ಲಿ (Dealers’ Hostel)ನಲ್ಲಿ ಭೇಟಿಯಾದ ನಂತರದಿಂದ ಆರಂಭವಾಯಿತು. ಆಗ ರತನ್ ಟಾಟಾ ಅವರಿಗೆ ಕೇವಲ 24 ವರ್ಷ. “ರತನ್ ಟಾಟಾ ಅವರು ನನಗೆ ಸಹಾಯ ಮಾಡಿದರು ಮತ್ತು ಜೀವನದಲ್ಲಿ ನನಗೆ ಬೆಳೆಯಲು ಸಹಾಯ ಮಾಡಿದರು. ಆರು ದಶಕಗಳಿಂದ ನಮಗೆ ಬಾಂಧವ್ಯವಿದೆ ಎಂದು ಹೇಳಿದ್ದರು.
ಟಾಟಾ ವಲಯದ ಕೆಲವರು ಮೋಹಿನಿ ಮೋಹನ ದತ್ತಾ ಅವರನ್ನು ರತನ್ ಟಾಟಾ ಅವರ “ದತ್ತು ಪುತ್ರ” ಎಂದು ಬಿಂಬಿಸಿದ್ದರೂ ಮದುವೆಯಾಗದ ರತನ್ ಟಾಟಾ ಮಕ್ಕಳನ್ನು ದತ್ತು ತೆಗೆದುಕೊಂಡಿಲ್ಲ ಎಂದು ಉಯಿಲು ಸ್ಪಷ್ಟವಾಗಿ ಹೇಳುತ್ತದೆ. ಎಸ್ಟೇಟ್ ಹಂಚಿಕೆಯ ಸುತ್ತ ಚರ್ಚೆಗಳು ಮುಂದುವರಿದಂತೆ ಈ ಸ್ಪಷ್ಟೀಕರಣವು ಕೇಂದ್ರಬಿಂದುವಾಗಬಹುದು.
ಟಾಟಾ ಗ್ರೂಪ್ಗೆ ದತ್ತಾ ಅವರ ಕುಟುಂಬದ ಸಂಬಂಧಗಳು ಗಾಢವಾಗಿದೆ. ದತ್ತಾ ಅವರ ಇಬ್ಬರು ಪುತ್ರಿಯರಲ್ಲಿ ಒಬ್ಬರು ಒಂಬತ್ತು ವರ್ಷಗಳ ಕಾಲ ಟಾಟಾ ಟ್ರಸ್ಟ್ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಈ ಹಿಂದೆ ತಾಜ್ ಹೋಟೆಲ್ನಲ್ಲಿ ಉದ್ಯೋಗಿಯಾಗಿದ್ದರು. 2024 ರ ಡಿಸೆಂಬರ್ನಲ್ಲಿ ಮುಂಬೈನಲ್ಲಿ ರತನ್ ಟಾಟಾ ಅವರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮಕ್ಕಾಗಿ ದತ್ತಾ ಅವರನ್ನು ಎನ್ಸಿಪಿಎಗೆ ಆಹ್ವಾನಿಸಲಾಯಿತು.ಈ ಸಮಾರಂಭದಲ್ಲಿ ನಿಕಟವರ್ತಿಗಳು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಇದು ರತನ್ ಟಾಟಾ ಅವರೊಂದಿಗೆ ದತ್ತಾ ಅವರ ನಿಕಟ ಸಂಬಂಧವನ್ನು ಒತ್ತಿಹೇಳುತ್ತದೆ.
ರತನ್ ಟಾಟಾ ಅವರ ಉಯಿಲು ಲೋಕೋಪಕಾರಕ್ಕೆ ಅವರ ಬದ್ಧತೆಯನ್ನು ಪುನರುಚ್ಚರಿಸುತ್ತದೆ, ಏಕೆಂದರೆ ಅವರ ಪ್ರಾಥಮಿಕ ಆಸ್ತಿಗಳನ್ನು ದತ್ತಿ ಸಂಸ್ಥೆಗಳಿಗೆ ವಹಿಸಲಾಗಿದೆ. ಆದಾಗ್ಯೂ, ಪ್ರಮುಖ ಫಲಾನುಭವಿಯಾಗಿ ಮೋಹಿನಿ ಮೋಹನ ದತ್ತಾ ಹೊರಹೊಮ್ಮುವಿಕೆಯು ಟಾಟಾ ಗ್ರೂಪ್ನಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ. ರತನ್ ಟಾಟಾ ಅವರ ಇಚ್ಛೆಗೆ ಅನುಗುಣವಾಗಿ ವಿತರಣಾ ಪ್ರಕ್ರಿಯೆಯನ್ನು ಹೇಗೆ ಕೈಗೊಳ್ಳಲಾಗುತ್ತದೆ ಎಂಬುದರ ಕುರಿತು ಕಾನೂನು ತಜ್ಞರು ಈಗ ಗಮನಹರಿಸಿದ್ದಾರೆ.
ಮರಣದ ಸರಿಸುಮಾರು ಎರಡು ವಾರಗಳ ನಂತರ ಸಾರ್ವಜನಿಕಗೊಳಿಸಲಾದ ರತನ್ ಟಾಟಾ ಅವರ ಉಯಿಲಿನಲ್ಲಿ, ಅವರ ಸಹೋದರ, ಮಲ-ಸಹೋದರಿಯರು, ಅವರ ಮನೆಯ ಸಿಬ್ಬಂದಿ ಮತ್ತು ಅವರ ಕಾರ್ಯನಿರ್ವಾಹಕ ಸಹಾಯಕ ಶಂತನು ನಾಯ್ಡು ಸೇರಿದಂತೆ ಹಲವಾರು ಜನರಿಗೆ ಸಂಪತ್ತನ್ನು ಹಂಚಿಕೆ ಮಾಡಲಾಗಿದೆ. ಟಾಟಾ ಅವರು ತಮ್ಮ ಸಾಕು ನಾಯಿ ಟಿಟೊ ನೋಡಿಕೊಳ್ಳಲು ಸಹ ಆಸ್ತಿ ಬಿಟ್ಟು ಹೋಗಿದ್ದಾರೆ. ಟಾಟಾ ಸನ್ಸ್ನಲ್ಲಿನ ಷೇರುಗಳನ್ನು ರತನ್ ಟಾಟಾ ಎಂಡೋಮೆಂಟ್ ಟ್ರಸ್ಟ್ಗೆ ನೀಡಿದ್ದಾರೆ.
ರತನ್ ಟಾಟಾ ಆಸ್ತಿಗಳಲ್ಲಿ ಅಲಿಬಾಗ್ನಲ್ಲಿ ಬೀಚ್ ಬಂಗಲೆ, ಜುಹುದಲ್ಲಿ ಎರಡು ಅಂತಸ್ತಿನ ಮನೆ, 350 ಕೋಟಿ ರೂ.ಗಿಂತ ಹೆಚ್ಚಿನ ಸ್ಥಿರ ಠೇವಣಿ ಮತ್ತು ಟಾಟಾ ಸನ್ಸ್ನಲ್ಲಿನ ಷೇರುಗಳು ಸೇರಿದೆ.
ನಿಮ್ಮ ಕಾಮೆಂಟ್ ಬರೆಯಿರಿ