ಗುರುವಾರ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು 68 ರನ್‌ಗಳಿಂದ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದ ಭಾರತ ಇದೇ ವೇಳೆ 2022ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಫೈನಲ್ ಪ್ರವೇಶಿಸಿದ ಭಾರತದ ಕ್ರಿಕೆಟ್ ತಂಡವು 2024 ರ ಟಿ20 ವಿಶ್ವಕಪ್ ಪ್ರಶಸ್ತಿಗಾಗಿ ಶನಿವಾರ (ಜೂನ್ ೨೯) ದಕ್ಷಿಣ ಆಫ್ರಿಕಾದ ಜೊತೆ ಸೆಣಸಲಿದೆ.
ಶನಿವಾರ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಪ್ರಶಸ್ತಿಗಾಗಿ ಅಂತಿಮ ಹಣಾಹಣಿ ನಡೆಯಲಿದ್ದು, 2014 ರ ನಂತರ ಭಾರತದ ಇದೇ ಮೊದಲ ಬಾರಿಗೆ ಮೊದಲ T20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತನ್ನ ಮೊದಲ ಟಿ 20 ವಿಶ್ವಕಪ್ ಫೈನಲ್ ಪ್ರವೇಶಿಸಿದ್ದು, ಗುರುವಾರ ಅಫ್ಘಾನಿಸ್ತಾನವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅಂತಿಮ ಹಂತ ಪ್ರವೇಶಿಸಿದೆ. ಟೂರ್ನಿಯಲ್ಲಿ ಅಜೇಯರಾಗಿ ಉಳಿದಿರುವ ಎರಡೂ ತಂಡಗಳು ಫೈನಲ್ ನಲ್ಲಿ ಸೆಣಸಲಿವೆ.
ನಿರಂತರ ಮಳೆ ಮತ್ತು ಟ್ರಿಕಿ ಪಿಚ್‌ನಲ್ಲಿ ಫೈನಲ್ ಪ್ರವೇಶಿಸಲು ರೋಹಿತ್ ಶರ್ಮಾ ನೇತೃತ್ವದ ಭಾರತದ ತಂಡಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಗುರುವಾರ ಮಳೆಯಿಂದ ಅಡ್ಡಿಯಾದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತ ನಂತರ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಆಟಗಾರರು ಉತ್ತಮ ಮೊತ್ತ ಕಲೆಹಾಕಿದರು ವಿರಾಟ್ ಕೊಹ್ಲಿ (1 ರನ್) ಹಾಗೂ ರಿಷಭ್ ಪಂತ (6)ಬೇಗನೆ ಔಟಾದ ನಂತರ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ ಯಾದವ್ ಅವರು ಭಾರತದ ತಂಡವನ್ನು ಮೇಲಕ್ಕೆತ್ತಿದರು.
ನಾಯಕ ರೋಹಿತ್ ಶರ್ಮಾ (57, 39 ಚೆಂಡು, 6×4, 2×6) ಮತ್ತು ಸೂರ್ಯಕುಮಾರ ಯಾದ (47, 34 ಚೆಂಡು, 4×4, 2×6) ಭಾರತಕ್ಕೆ ಮೂರನೇ ವಿಕೆಟ್‌ಗೆ 73 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು. ಸವಾಲಿನ ಪಿಚ್‌ನಲ್ಲಿ ಇಬ್ಬರೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮವಾಗಿ ಭಾರತದ ತಂಡವು 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಭಾರತ ಗಳಿಸಿದ 171 ರನ್ ಈ ಪಿಚ್‌ನಲ್ಲಿ ಉತ್ತಮ ಮೊತ್ತವೇ ಆಗಿತ್ತು.
ಪ್ರತ್ಯುತ್ತರವಾಗಿ, ಇಂಗ್ಲೆಂಡ್ ಆರಂಭದ ನಾಲ್ಕು ಓವರ್‌ಗಳಲ್ಲಿ ಉತ್ತಮ ಪ್ರತಿರೋಧ ತೋರಿದರೂ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರ ಸ್ಪಿನ್ ಮೋಡಿಗೆ ನಾಟಕೀಯ ಕುಸಿತ ಕಂಡಿತು.
ಇಂಗ್ಲೆಂಡ್ ಪರ ಬ್ರೂಕ್ 25, ಜೋಸ್ ಬಟ್ಲರ್ 25 ಹಾಗೂ ಜೋಪ್ರಾ ಆರ್ಚರ್ 21 ರನ್ ಗಳಿಸಿದ್ದೇ ಹೆಚ್ಚು ರನ್‌ಗಳಾಗಿದೆ. ಎಡಗೈ ಸ್ಪಿನ್ ಜೋಡಿ ಅಕ್ಷರ್ ಪಟೇಲ್ (23ಕ್ಕೆ3) ಮತ್ತು ಕುಲದೀಪ್ ಯಾದವ್ (19ಕ್ಕೆ3) ಮುಂದೆ ಇಂಗ್ಲೆಂಡ್ ತಂಡದ ಆಟ ನಡೆಯಲಿಲ್ಲ. ಇಂಗ್ಲೆಂಡ್ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಗುವ ಮೂಲಕ 68 ರನ್‌ಗಳಿಂದ ಸೋಲನುಭವಿಸಿತು.


ನಿಮ್ಮ ಕಾಮೆಂಟ್ ಬರೆಯಿರಿ