ಜಾಗತಿಕ ಭಯೋತ್ಪಾದಕ ಸಮೂಹ ಐಎಸ್‍ಐ ಮತ್ತು ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಲೆವೆಂಟ್- ಖೋರಾಸಾನ್ಸ್ (ಐಎಸ್‍ಐಎಲ್-ಕೆ) ನಾಯಕ ಶಿಹಾಬ್ ಅಲ್-ಮುಹಾಜಿರ್ ಭಾರತದಲ್ಲಿ ಉಗ್ರ ಕಾರ್ಯಾಚರಣೆಗಳ ಮುಖ್ಯಸ್ಥನಾಗಿ ನೇಮಕಗೊಂಡಿದ್ದಾನೆ ಎಂದು ವಿಶ್ವಸಂಸ್ಥೆ ಹೇಳಿದೆ.
ಈ ಹಿಂದಿನ ಹಕ್ಕಾನಿ ನೆಟ್‍ವರ್ಕ್‍ನೊಂದಿಗೆ ಶಿಹಾಬ್ ಅಲ್-ಮುಹಾಜಿರ್ ಸಂಬಂಧ ಹೊಂದಿರಬಹುದು ಎಂದು ವಿಶ್ವಸಂಸ್ಥೆ ಹೇಳಿದ್ದು, ಈತ ಭಾರತ ಸೇರಿದಂತೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಭಯೋತ್ಪಾದನೆ ಚಟುವಟಿಕೆ ತೀವ್ರಗೊಳಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾಗಿ ತಿಳಿದುಬಂದಿದೆ ಎಂದು ಯುಎನ್ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರ್ರಸ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಐಎಸ್‍ಐಎಲ್ (ಐಸಿಸ್ ಮತ್ತು ದಾಶ್ ಎಂದು ಕರೆಯುವ) ಬೆದರಿಕೆಯನ್ನು ಎದುರಿಸಲು ಸದಸ್ಯ ರಾಷ್ಟ್ರಗಳನ್ನು ಬೆಂಬಲಿಸುವಲ್ಲಿ ವಿಶ್ವಸಂಸ್ಥೆಯ ಪ್ರಯತ್ನಗಳ ಕುರಿತು 12ನೇ ವರದಿಯಲ್ಲಿ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ಅಲ್ಲದೆ, ಪ್ರಸ್ತುತ ಅಫ್ಘಾನಿಸ್ತಾನದ ಹಲವಾರು ಪ್ರಾಂತ್ಯಗಳಲ್ಲಿ ಐಎಸ್‍ಐಎಲ್-ಕೆ ಎರಡು ಸಾವಿರ ಉಗ್ರರಿದ್ದಾರೆ.ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಪಾಕಿಸ್ತಾನ ಶ್ರೀಲಂಕಾ ಹಾಗೂ ಮಧ್ಯ ಏಶಿಯಾ ದೇಶಗಳಲ್ಲಿ ತನ್ನ ಕಾರ್ಯಾಚರಣೆ ಹೆಚ್ಚಿಸುವ ಸಲುವಾಗಿ ಶಾಹಿಬ್ ಅಲ್-ಮುಹಾಜಿರ್‍ನನ್ನು 2020ರ ಜೂನ್‍ನಲ್ಲಿ ಐಎಸ್‍ಐಎಲ್ ಗುಂಪಿನ ಹೊಸ ಮುಖಂಡ ಎಂದು ಪ್ರಕಟಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ