ರೈತರ ಹೋರಾಟ: ಮೋದಿ ಸರ್ಕಾರಕ್ಕೆ ಉಗುಳಲೂ ಆಗದ ನುಂಗಲೂ ಆಗದ ತುತ್ತು

ಕೇಂದ್ರದ ಮೋದಿ ಸರ್ಕಾರವು ಕೃಷಿ ಕಾನೂನುಗಳ ಯುದ್ಧದಲ್ಲಿ ಕೆಲವಷ್ಟನ್ನು ಕಳೆದುಕೊಂಡಿದೆ, ಆದರೆ ಕಳೆದುಕೊಂಡಿದ್ದನ್ನು ಮರೆಮಾಚಲು ಮುಗಿದು ಹೋಗಿದ್ದ ಹಾಗೂ ಮುಗಿಯಲೇ ಬೇಕಾಗಿದ್ದ ಸಿಖ್ ಪ್ರತ್ಯೇಕತಾವಾದಿ ವಿಷಯವನ್ನುಮತ್ತೆ ಮುನ್ನೆಲೆಗೆ ತರುವ ದುಸ್ಸಾಹಸಕ್ಕೆ ಕೈ ಹಾಕಿದೆ. ಈಗ ರೈತರ ಪ್ರತಿಭಟನೆಗೆ ಮೂರು ತಿಂಗಳಾಗಿದೆ. ದೆಹಲಿಯ ಹೊರವಲಯದಲ್ಲಿ ರೈತರು ನಿರಂತರವಾಗಿ ಒಂದೇ ಸಮನೆ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಧೋರಣೆ ರೈತರೊಂದಿಗೆ ಕೃಷಿ ಕಾನೂನುಗಳ ವಿಷಯದಲ್ಲಿ ಅದಕ್ಕೇ ತಲೆನೋವಾಗಿ ಪರಿಣಮಸಿದೆ.
ಹಾಗೆಂದು ಒಟ್ಟಾರೆಯಾಗಿ ನೋಡಿದರೆ ಕೃಷಿ ಕಾನೂಗಳಲ್ಲಿ ರೈತರಿಗೆ ಮುಳುವಾಗುವಂಥ ವಿಷಯಗಳು ಅಷ್ಟಾಗಿ ಕಾಣುತ್ತಿಲ್ಲ. ಆದರೂ ಸರ್ಕಾರ ಯಾಕೆ ಎಡವಿದೆ ಎಂದು ಹೇಳುತ್ತಿದ್ದಾರೆ ಎಂದು ಅನ್ನಿಸಬಹುದು. ಪ್ರಜಾಪ್ರಭುತ್ವದಲ್ಲಿ ಕೇವಲ ನೀತಿ-ನಿರೂಪಣೆಯಿಂದ ಆಡಳಿತ ನಡೆಯುವುದಿಲ್ಲ. ಸಂಬಂಧಪಟ್ಟ ಪಕ್ಷಗಳ (ರಾಜಕೀಯ ಪಕ್ಷ ಅಲ್ಲ) ಜೊತೆ ಸಂವಹನ ನಡೆಸುವುದು ಹಾಗೂ ಮನವರಿಕೆ ಮಾಡುವುದು ಮುಖ್ಯ.ರೈತ ಹೋರಾಟದಲ್ಲಿ ಕೇವಲ ರೈತರ ಹಿತಾಸಕ್ತಿ ಮಾತ್ರ ಇಲ್ಲ, ಅದರಲ್ಲಿ ರಾಜಕಾರಣದ ಹಿತಾಸಕ್ತಿಯು ಸೇರಿದೆ ಎಂಬುದೂ ನಿರ್ವಿವಾದ. ಆದರೆ ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಬೇಕೇ ಬೇಕು. ರಾಜಕಾರಣವಿಲ್ಲದೆ ಪ್ರಜಾಪ್ರಭುತ್ವವಿಲ್ಲ. ಉದಾಹರಣೆಗೆ ಹಿಂದೆ ಎನ್ಡಿ‌ಎ ಪ್ರತಿಪಕ್ಷದಲ್ಲಿದ್ದಾಗ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ಎಷ್ಟೂ ಉತ್ತಮ ನೀತಿಗಳನ್ನು ಟೀಕಿಸಿತ್ತು, ವಿರೋಧಿಸಿತ್ತು. ಎನ್‌ಡಿಎ ಅಧಿಕಾರಕ್ಕೆ ಬಂದಾಗ ಅದೇ ನೀತಿಯನ್ನು ತಾನೇ ಜಾರಿಗೆ ತಂದಿತು. ಈಗ ಪ್ರತಿಪಕ್ಷದಲ್ಲಿದ್ದ ಯುಪಿಎ ಇದನ್ನು ವಿರೋಧಿಸಿತು. ಅದಕ್ಕೇ ಹೇಳಿದ್ದು ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಅನಿವಾರ್ಯ ಎಂದು.
ಹೀಗಾಗಿ ಕೆಲವೊಮ್ಮೆ ನಾವು ಜಾರಿಗೆ ತರುವ ಸುಧಾರಣೆಗಳು, ನೀತಿ-ನಿರೂಪಣೆಗಳು ಒಟ್ಟಾರೆಯಾಗಿ ಉತ್ತಮವಾಗಿದ್ದರೂ ಕೆಲವರು ಇದನ್ನು ಒಮ್ಮೆಗೇ ಒಪ್ಪುವುದಿಲ್ಲ. ಅವರಿಗೆ ಅನೇಕ ಸಂಶಯಗಳು ಇರುತ್ತವೆ. ಅವರ ಅಸಮಾಧಾನವನ್ನು ಮತ್ತಷ್ಟು ಅಸಮಾಧಾನಗೊಳಿಸಲು ರಾಜಕಾರಣವೂ ಅದರಲ್ಲಿ ಸೇರುತ್ತದೆ. ಆಗ ನಾವು ಅವರನ್ನು ಸಮಾಧಾನ ಪಡಿಸಲೇಬೇಕಾಗುತ್ತದೆ, ಅವರಿಗೆ ಮನವರಿಕೆ ಮಾಡಲೇ ಬೇಕಾಗುತ್ತದೆ. ಮನವರಿಕೆ ಮಾಡಲು ಸಾಧ್ಯವಾಗದಿದ್ದರೆ ನಾವು ಅದರಿದ ಹಿಂದೆ ಸರಿಯಬೇಕಾಗಿಯೂ ಬರಬಹದು. ಯಾಕೆಂದರೆ ಇದು ಪ್ರಜಾಪ್ರಭುತ್ವ.

ಇಲ್ಲಿ ಕೆಲವಷ್ಟು ಸಂಗತಿಗಳನ್ನು ಅವಲೋಕನ ಮಾಡಬಹುದು..
* ಕೃಷಿ ಕಾನೂನುಗಳು ಒಟ್ಟಾರೆಯಾಗಿ ನೋಡಿದರೆ ರೈತರಿಗೆ ಮತ್ತು ಭಾರತಕ್ಕೆ ಒಳ್ಳೆಯದು ಅನಿಸುತ್ತದೆ. ಇಂಥದ್ದೊಂದು ಸುಧಾರಣೆಯಾಗಬೇಕು ಎಂದು ವಿವಿಧ ಹಂತಗಳಲ್ಲಿ ಹೆಚ್ಚಿನ ಪ್ರಮುಖ ರಾಜಕೀಯ ಪಕ್ಷಗಳು ಮತ್ತು ನಾಯಕರು ಇಂಥ ಬದಲಾವಣೆ ಬಯಸಿದ್ದರು. ಆದರೂ ಒಂದಷ್ಟು ಜನ ಇದನ್ನು ಒಪ್ಪದವರೂ ಇದ್ದಾರೆ, ಇದು  ಪ್ರಾದೇಶಿಕತೆ, ಆಯಾ ರಾಜ್ಯಗಳ ಸ್ಥಿತಿ-ಗತಿ, ಬದಲಾವಣೆಯಿಂದ ನಮಗೆ ಏನೋ ಆಗಿಬಿಡುತ್ತದೆ ಎಂಬ ಭಯ, ಆತಂಕ.., ಹೀಗೆ ಇದನ್ನು ಒಪ್ಪದಿರಲು ಹಲವಾರು ಕಾರಣಗಳಿರುತ್ತವೆ. ಹೀಗಾಗಿ ದೇಶದ ನೀತಿ-ನಿರೂಪಕರು ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗುತ್ತದೆ.
*.ಪ್ರಮುಖವಾಗಿ ದೇಶದ ಉತ್ತರ ಭಾಗದ ರೈತರು ಇದನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ಹೆಚ್ಚಾಗಿ ಪಾಲ್ಗೊಂಡಿದ್ದಾರೆ. ಇಲ್ಲಿ ಈ ಕಾನೂನುಗಳು ರೈತನಿಗೆ ಒಳ್ಳೆಯದೋ ಕೆಟ್ಟದ್ದೋ ಎಂಬುದು ಮುಖ್ಯವಾಗುವುದಿಲ್ಲ. ಬದಲಾವಣೆ ಬಗ್ಗೆ ಆತಂಕವಿದ್ದವರಿಗೆ ಮನವರಿಕೆ ಮಾಡಬೇಕಾಗುತ್ತದೆ. ಅಲ್ಲಿ ವಿಫಲವಾದರೆ ಕಾನೂನು ಒಳ್ಳೆಯದೋ ಅಥವಾ ಅಲ್ಲವೋ ಎಂಬ ಸಂಗತಿಗಳು ಅಪ್ರಸ್ತುತವಾಗಿ ಬಿಡುತ್ತವೆ..
* ಕೃಷಿ ಕಾನುನುಗಳನ್ನು ವಿರೋಧಿಸುವವರಲ್ಲಿ ಯಾರೂ ಕನಿಷ್ಠ ಬೆಂಬಲ ಬೆಲೆ, ಸಬ್ಸಿಡಿಗಳು, ಎಪಿಎಂಸಿ ವ್ಯವಸ್ಥೆ ಬಗ್ಗೆ ಮಾತನಾಡುವುದಿಲ್ಲ. ಜೊತೆಗೆ ಒಳಿತು-ಕೆಡುಕುಗಳ ಬಗ್ಗೆಯೂ ಚರ್ಚಿಸುವುದಿಲ್ಲ. ಅವರು ಈ ಬದಲಾವಣೆಯನ್ನು ಒಪ್ಪುವುದಿಲ್ಲ, ಕಾರಣ ಈ ಮೊದಲು ಹೇಳಿದಂತೆ ಭ್ರಷ್ಟ ಆಡಳಿತ ವ್ಯವಸ್ಥೆ ಬಗ್ಗೆ ಅವರಿಗಿರುವ ಭಯ.ಇದನ್ನು ಜಾರಿಗೆ ತರುವ ಆಡಳಿತ ವರ್ಗದವರು ಏನಾದರೂ ಮಾಡಬಿಟ್ಟಾರು ಎಂಬ ಭಯ. ಅದನ್ನು ನಿವಾರಣೆ ಮಾಡಲೇಬೇಕು. ಅದು ಹೇಗೆ ಎಂಬುದು ಪ್ರಶ್ನೆ.
* ಕೇಂದ್ರ ಸರ್ಕಾರಕ್ಕೆ ರೈತರ ಹೋರಾಟಕ್ಕೆ ಅಂತ್ಯ ಹಾಡಲು ಕೆಲವು ಆಯ್ಕೆಗಳಿವೆ. ಒಂದೋ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಅಥವಾ ಕಾನೂನನ್ನು ಹಿಂತೆಗೆದುಕೊಳ್ಳುವುದು. ಈಗಾಗಲೇ ರೈತರ ಜೊತೆ ಸರ್ಕಾರ ೧೧ ಸುತ್ತಿನ ಮಾತುಕತೆ ನಡೆಸಿದೆ. ಆದರೆ ಫಲಪ್ರದವಾಗಿಲ್ಲ. ಅಂದರೆ ರೈತರ ಮನವೊಲಿಸುವುದರಲ್ಲಿ ಸರ್ಕಾರ ವಿಫಲವಾಗಿದೆ. ಈ ಹೋರಾಟ ಮೂರು ತಿಂಗಳ ವರೆಗೆ ಬೆಳೆಯಲು ಕಾರಣವೇನು ಎಂಬುದನ್ನೂ ನಾವು ಅವಲೋಕಿಸಬೇಕಿದೆ. ಇದಕ್ಕೆ ಪ್ರಮುಖ ಕಾರಣ ಎರಡೂ ಪಕ್ಷಗಳಲ್ಲಿಯೂ ಇದೆ, ಅದರಲ್ಲೂ ಸರ್ಕಾರಕ್ಕೆಇದು ಪ್ರೆಸ್ಟೀಜ್‌ ಪ್ರಶ್ನೆಯಾಗಿರುವುದು. ಜೊತೆಗೆ ಈ ಹಂತದಲ್ಲಿ ನಾವು ಹಿಂದೆ ಸರಿದರೆ ಮುಂದೆಯೂ ಸರ್ಕಾರ ತಮ್ಮ ಜೊತೆ ಸಂವಾದ ನಡೆಸದೆ ಇನ್ನೂ ಅನೇಕ ಕಾನೂನುಗಳನ್ನುಜಾರಿಗೆ ತಂದರೆ ಎಂಬ ಆತಂಕಕ್ಕೆ ರೈತ ಸಂಘಟನೆಗಳೂ ಹಿಂದೆ ಸರಿಯುತ್ತಿಲ್ಲ. ಹಿಂದೆ ಸರಿದರೆ ಪಂಜಾಬ್‌ನ ಸಿಖ್ಖರಿಗೆ ತಾವು ಮೂಲೆಗುಂಪಾಗುವ ಭಯ. ಸರ್ಕಾರ ಈ ಹೋರಾಟದಲ್ಲಿ ಕೆಲವಷ್ಟನ್ನು ಕಳೆದುಕೊಂಡಿದ್ದರೂ ಮೇಲ್ನೋಟಕ್ಕೆ ಸೋಲಲು ಸಿದ್ಧವಿಲ್ಲ. ಆಗೇನು ಮಾಡಬೇಕು? ಆಗ ಖುದ್ದಾಗಿ ಪ್ರಧಾನಿ ಮೋದಿಯವರೇ ರೈತರಿಗೆ ಮನವರಿಕೆ ಮಾಡಿಕೊಡಲು ಅವರ ಜೊತೆ ಸಂವಹನ ನಡೆಸಬೇಕು. ಅದೂ ಆಗದಿದ್ದರೆ ಸದ್ಯಕ್ಕೆ ಕಾನೂನನ್ನೇ ರದ್ದುಗೊಳಿಸದೇ ಬೇರೆ ಮಾರ್ಗ ಕಾಣುತ್ತಿಲ್ಲ.
ಈ ಹೋರಾಟ ಮುಂದುವರಿದರೆ ಬಿಜೆಪಿಗೆ ಯಾಕೆ ತಲೆನೋವು..?: ಈ ಕೃಷಿ ಕಾನೂನುಗಳ ಹೋರಾಟದಲ್ಲಿ ಮೋದಿ ಸರ್ಕಾರ ಕೆಲವಷ್ಟನ್ನು ಕಳೆದುಕೊಂಡಿದೆ ಎಂದು ಹೇಳಲು ಕಾರಣಗಳಿವೆ. ಅದನ್ನು ಪುರಾವೆ ಎಂದೂ ಅರ್ಥೈಸಬಹುದು.೧೮ ತಿಂಗಳ ಮಟ್ಟಿಗೆ ಈ ಕಾನೂನುಗಳನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿರುವುದು, ಜೊತೆಗೆ ಕಾನೂನಿಗೆ ತಿದ್ದುಪಡಿ ತಂದರೆ ಕಾನೂನು ಉತ್ತಮವಾಗಿಲ್ಲ ಎಂದು ಅರ್ಥವಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಶುಕ್ರವಾರ ಸಂತ್ತಿನಲ್ಲಿ ಮಾತನಾಡುವಾಗ ಹೇಳಿರುವುದು ಇದನ್ನು ಪುಷ್ಟೀಕರಿಸುತ್ತದೆ.
ಬಿಜೆಪಿ ಮಟ್ಟಿಗೆ ಹೇಳುವುದಾದರೆ ಇದು ಬೆಳೆಸುವ ಸಮಯವಲ್ಲ. ಯಾಕೆಂದರೆ ರೈತರ ಹೋರಾಟ ಕಾವು ಪಡೆದಿರುವ ದೇಶದ ಉತ್ತರ ಭಾಗದ ರಾಜ್ಯಗಳಲ್ಲಿ ಸಾಲು ಸಾಲು ಚುನಾವಣೆಗಳು ಸಮೀಪಿಸುತ್ತಿವೆ.. ಮುಖ್ಯವಾಗಿ ಈ ರಾಜ್ಯಗಳಲ್ಲಿ ಬಹುತೇಕ ಕಾಂಗ್ರೆಸ್‌ ಅಥವಾ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ಪಶ್ಚಿಮ ಬಂಗಾಳದಲ್ಲಿ ಸದ್ಯವೇ ಚುನಾವಣೆ ಎದುರಾಗಲಿದೆ. ಇನ್ನು ಒಂದು ವರ್ಷದಲ್ಲಿ ರಾಜಸ್ಥಾನ, ಛತ್ತೀಸ್‌ಗಡ, ಮಧ್ಯಪ್ರದೇಶಗಳಿಗೂ ಚುನಾವಣೆ ಬರಲಿದೆ. ಇಲ್ಲಿ ಮರಳಿ ಅಧಿಕಾರ ಪಡೆಯಲು ಬಿಜೆಪಿ ಯೋಜನೆ ರೂಪಿಸಿಕೊಂಡಿದ್ದು, ಇಲ್ಲಿ ಕೃಷಿಯೇ ಪ್ರಧಾನವಾಗಿರುವುದರಿಂದ ಸರ್ಕಾರದ ಈ ಧೋರಣೆ ಮುಂದುವರಿದರೆ ಅಲ್ಲಿ ಪಕ್ಷಕ್ಕೆ ಹಿನ್ನಡೆಯೂ ಆಗಬಹುದು. ಇದಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಿದ್ಧರಿಲ್ಲ. ಹೀಗಾಗಿ ಈ ಬಗ್ಗೆ ಕೇಂದ್ರ ಸರ್ಕಾರ ಈ ಸಂಸತ್ತಿನ ಅಧಿವೇಶನದ ಸಂದರ್ಭದಲ್ಲೋ ಅಥವಾ ಸನಿಹದಲ್ಲಿ ಪಕ್ಷಕ್ಕೆ ಹಾನಿಯಾಗದ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು.
೫೦ ಕೋಟಿಗಿಂತಲೂ ಹೆಚ್ಚು ಜನರ ಜೀವನದ ಮೇಲೆ ಪರಿಣಾಮ ಬೀರುವ ಬದಲಾವಣೆಯ ಭರವಸೆಯನ್ನು ಪಡೆಯಲು ಮೊದಲು ಆಲೋಚನೆಗಳನ್ನು ಜನರ ಮುಂದಿಡುವುದು ಸರಿಯಾದ ಮಾರ್ಗವಾಗಿದೆ. ಹೀಗಾಗಿ ಪ್ರಧಾನಿ ಮೋದಿಯವರು ಇದಕ್ಕಾಗಿ ಬೇಕಾದ ನೆಲವನ್ನು ಸಿದ್ಧಪಡಿಸದಿದ್ದುದಕ್ಕಾಗಿ ಈಗ ವಿಷಾದಿಸುತ್ತಿದ್ದಾರೆಯೇ ? ನಮಗೆ ಗೊತ್ತಿಲ್ಲ. ಇಂಥ ವಿಷಯದಲ್ಲಿ ಜನರೊಂದಿಗೆ ಮಾತನಾಡದಿದ್ದರೆ ಅವರು ಅನುಮಾನ ಪಡುತ್ತಾರೆ. ಇಲ್ಲಿ ರಾಜ್ಯಸಭೆ ಮೂಲಕ ಕಾನೂನುಗಳನ್ನು ಪಾಸು ಮಾಡಿದ ರೀತಿ ಅನುಮಾನಗಳಿಗೆ ಕಾರಣವಾಯಿತು. ಇದಕ್ಕೆ ಸಂಸದೀಯ ಕುಶಲತೆಯ ಅಗತ್ಯವಿತ್ತು. ಕಾನೂನು ಜಾರಿಗೆ ತರುವ ತರಾತುರಿಯಲ್ಲಿ ಕೇಂದ್ರ ಸರ್ಕಾರವು ಎನ್‌ಡಿಎ ಅಂಗಪಕ್ಷವಾದ ಅಕಾಲಿ ದಳವನ್ನೂ ಕಳೆದುಕೊಂಡಿತು. ಸರ್ಕಾರ ಪಂಜಾಬ್‌ ರಾಜಕಾರಣದ ಹಿನ್ನೆಲೆ-ಮುನ್ನೆಲೆ ಅರ್ಥವಾಗಿಲ್ಲ ಎಂಬಂತೆ ನಡೆದುಕೊಂಡಿತು.ಜೊತೆಗೆ ಹರ್ಯಾಣ ಹಾಗೂ ಪಶ್ಚಿಮ ಉತ್ತರ ಪ್ರದೇಶದ ಜಾಟ್‌ ಸಮುದಾಯದ ಹತಾಶೆಯನ್ನೂ ಅರ್ಥಮಾಡಿಕೊಳ್ಳಲು ವಿಫಲವಾಯಿತು. ಹೀಗಾಗಿ ಇದರಲ್ಲಿ ಚುನಾವಣಾ ರಾಜಕೀಯವೂ ಸೇರಿಕೊಂಡಿತು.
ಸರ್ಕಾರವು ಮಾತುಕತೆ ವೇಳೆ ಕೆಲವನ್ನು ತಕ್ಷಣವೇ ಒಪ್ಪಿಕೊಂಡಿತು. ಆದರೆ ರೈತ ಮುಖಂಡರು ಏನನ್ನೂ ಹೇಳಲಿಲ್ಲ. ತಮ್ಮ ನಿಲುವಿನಿಂದ ಹಿಂದೆ ಸರಿಯಲೂ ಇಲ್ಲ. ಹೀಗಾಗಿ ೩೦-೩೫ ವರ್ಷಗಳ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಅತ್ಯಂತ ಬಲಾಢ್ಯ ಸರ್ಕಾರ ಎಂದೇ ಕರೆಸಿಕೊಳ್ಳುವ ಮೋದಿ ಸರ್ಕಾರಕ್ಕೆ ಇದು ಉಗುಳಲೂ ಆಗದ-ನುಂಗಲೂ ಆಗದ ತುತ್ತಾಗಿ ಪರಿಣಮಿಸಿದೆ.
ಮುಖ್ಯವಾಗಿ ಪಂಜಾಬ್‌ ಹಾಗೂ ಹರ್ಯಾಣದಲ್ಲಿ ಬೆಳೆ ಬರಲು ಸುಮಾರು ಎರಡು ತಿಂಗಳಿದೆಯೆಂದು ಹೇಳುತ್ತಾರೆ. ಹೀಗಾಗಿ ಸರ್ಕಾರ ಬೆಳೆ ಬರುವುದನ್ನು ಅಥವಾ ಹೋರಾಟ ಮಾಡುತ್ತಿರುವ ರೈತರು ದಣಿಯುವುದನ್ನೇ ಕಾಯುತ್ತಿದೆಯೇ?
ದೆಹಲಿ ಹೊರವಲಯದಲ್ಲಿ ರೈತರು ದೆಹಲಿ ಪ್ರವೇಶಿಸದಂತೆ ಸರ್ಕಾರದ ವತಿಯಿಂದ  ಬ್ಯಾರಿಕೇಡ್‌‌ ಹಾಕುತ್ತಿರುವ ದೃಶ್ಯಗಳು ಮತ್ತು ರಸ್ತೆಗಳಲ್ಲಿ ಮೊಳೆ ಜೋಡಿಸುತ್ತಿರುವುದು ಹಾಗೂ ಈ ಕ್ರಮಗಳಿಂದ ಟ್ವೀಟ್‌ಗಳಲ್ಲಿ ಬಂದ ಕೆಲ ಸೆಲೆಬ್ರಿಟಿಗಳ ಪ್ರತಿಕ್ರಿಯೆಗಳಿಂದಾಗಿ ಕೃಷಿ ಕಾನೂನುಗಳು ರಾಷ್ಟ್ರೀಯ ಏಕತೆಗೆ ಮರು ವ್ಯಾಖ್ಯಾನದ ಬೆದರಿಕೆ ಹಾಕಿದಂತೆ ತೋರುತ್ತಿದೆ.ಕೃಷಿ ಪ್ರತಿಭಟನೆಯನ್ನು ಸಿಖ್ ಪ್ರತ್ಯೇಕತಾವಾದದ ಶೀರ್ಷಿಕೆಗೆ ಬದಲಾಯಿಸಿದರೆ, ಸರ್ಕಾರದ ಈ ನಡೆ ಸಮಂಜಸವಾದುದಲ್ಲ. ಸರ್ಕಾರ ಆದಷ್ಟು ಬೇಗ ಈ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಯಾಕೆಂದರೆ ಬಿಸಿಲು-ಗಾಳಿ- ಚಳಿಯೆನ್ನದೆ ಮೂರು ತಿಂಗಳಿಂದ ರಸ್ತೆಯಲ್ಲಿಯೇ ಊಟ-ಉಪಾಹಾರ ಮಾಡಿ ಹೋರಾಟ ಮಾಡುತ್ತಿರುವವರೆಲ್ಲ ನಮ್ಮವರೇ.
.

 

2 / 5. 1

ಶೇರ್ ಮಾಡಿ :

  1. ನಾರಾಯಣ ಶೇವಿರೆ

    ವಿಶ್ಲೇಷಣೆ ಚೆನ್ನಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement