ಭಾರತದೊಂದಿಗೆ ಉತ್ತಮ ಬಾಂಧವ್ಯ, ಪಾಕ್‌ ಬಯಕೆ ;ಮೋದಿಗೆ ಪಾಕ್‌ ಪ್ರಧಾನಿ ಪತ್ರ

ನವದೆಹಲಿ: ಪಾಕಿಸ್ತಾನ ಹಾಗೂ ಭಾರತದ ನಡುವಿನ ಎಲ್ಲಾ ಸಮಸ್ಯೆಗಳನ್ನು, ಬಹುಮುಖ್ಯವಾಗಿ ಜಮ್ಮು ಹಾಗೂ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ರಚನಾತ್ಮಕಸಂವಾದಕ್ಕೆ ಶಕ್ತವಾದ ವಾತಾವರಣ ನಿರ್ಮಿಸಬೇಕಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪಾಕಿಸ್ತಾನ ದಿನಕ್ಕೆ ಶುಭಾಶಯ ಕೋರಿ ಪತ್ರ ಬರೆದಿದ್ದಕ್ಕೆ ಧನ್ಯವಾದ. ಸಾರ್ವಭೌಮ ರಾಜ್ಯ ಸೃಷ್ಟಿಯಲ್ಲಿ ನಮ್ಮ ದೇಶದ ಸಂಸ್ಥಾಪಕರಿಗೆ ಗೌರವ ಸಲ್ಲಿಸಿ ಪಾಕ್ ಜನರು ಈ ದಿನವನ್ನು ಸ್ಮರಿಸುತ್ತಾರೆ” ಎಂದು ಖಾನ್ ಪತ್ರದಲ್ಲಿ ವಿವರಿಸಿದ್ದಾರೆ.
ಪಾಕಿಸ್ತಾನದ ಜನರು ಭಾರತ ಸೇರಿದಂತೆ ಎಲ್ಲಾ ನೆರೆಹೊರೆಯ ರಾಷ್ಟ್ರಗಳೊಂದಿಗೆ ಶಾಂತಿಯುತ ಸಂಬಂಧ ಬಯಸುತ್ತಾರೆ. ಹೀಗಾಗಿ ಪಾಕಿಸ್ತಾನ-ಭಾರತ ನಡುವಿನ ಎಲ್ಲಾ ಸಮಸ್ಯೆಗಳನ್ನು, ಅದರಲ್ಲೂ ಜಮ್ಮು ಕಾಶ್ಮೀರ ವಿವಾದವನ್ನು ಬಗೆಹರಿಸಿದರೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂಬುದನ್ನು ನಾವು ಒಪ್ಪಿದ್ದೇವೆ. ಸಂವಾದಕ್ಕೆ ಸೂಕ್ತ ವೇದಿಕೆ ಹಾಗೂ ಶಕ್ತ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದೇ ಸಂದರ್ಭ ಕೊರೊನಾ ವಿರುದ್ಧ ಭಾರತ ಹೋರಾಡುತ್ತಿರುವುದರ ರೀತಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದೇ ಮಾರ್ಚ್ 23ರಂದು ನರೇಂದ್ರ ಮೋದಿಯವರು ರಾಷ್ಟ್ರೀಯ ದಿನದ ಸಲುವಾಗಿ ಪಾಕ್‌ಗೆ ಪತ್ರ ಬರೆದಿದ್ದರು. ಪಾಕಿಸ್ತಾನದೊಂದಿಗೆ ಭಾರತವು ‘ಹೃತ್ಪೂರ್ವಕ ಬಾಂಧವ್ಯ’ ಹೊಂದಲು ಭಾರತ ಬಯಸಿದೆ. ಆದರೆ ಅದು ಸಾಧ್ಯವಾಗಲು ಭಯೋತ್ಪಾದನೆ ರಹಿತವಾದ ‘ವಿಶ್ವಾಸಾರ್ಹ ಪರಿಸರ’ ಬಹಳ ಅಗತ್ಯವಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement