ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ : ನನ್ನ ಹೋರಾಟ ಜಿಲ್ಲೆಯ ಲಕ್ಷಾಂತರ ಜನರ ಹಕ್ಕೊತ್ತಾಯದ ಧ್ವನಿ- ಅನಂತಮೂರ್ತಿ ಹೆಗಡೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂದು ನಾನು ಮಾಡುತ್ತಿರುವ ಹೋರಾಟದಲ್ಲಿ ಲಕ್ಷಾಂತರ ಜನರ ಒಳಿತು ಹಾಗೂ ಹಿತಾಸಕ್ತಿ ಅಡಗಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬುದು ಈ ಜಿಲ್ಲೆಯ ಜನರ ಭಾವನೆ ಹಾಗೂ ಬಹುದಿನಗಳ ಬೇಡಿಕೆ. ಜನರ ಭಾವನೆಯ ಪ್ರತೀಕವಾಗಿಯೇ ನಾನು ಹೋರಾಟ ಮಾಡುತ್ತಿದ್ದೇನೆಯೇ ಹೊರತು ಇದರಲ್ಲಿ ಉಳಿದ ಯಾವುದೇ ಪ್ರಶ್ನೆಗಳೂ ಇಲ್ಲಿ ಉದ್ಭವಿಸುವುದಿಲ್ಲ. ಇದಕ್ಕಾಗಿ ದೃಢ ಸಂಕಲ್ಪ ಮಾಡಿದ್ದೇನೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು ಹಾಕುವವರೆಗೂ ನನ್ನ ಹೋರಾಟ ಮುಂದುವರಿಯುತ್ತದೆ. ಇದು ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ  ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಬೇಡಿಕೆಯೊಂದಿಗೆ ಫೆಬ್ರವರಿ ೫ರಿಂದ ೭ರ ವರೆಗೆ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ನಿಗದಿಯಾಗಿರುವ ಜಾಗದಿಂದ ಭಟ್ಕಳದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಕಚೇರಿ ವರೆಗೆ ʼಸ್ವಾಭಿಮಾನಿ ಪಾದಯಾತ್ರೆʼ ಹಮ್ಮಿಕೊಂಡಿರುವ ಅವರು ತಮ್ಮ ಹೋರಾಟದ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಇದಕ್ಕಾಗಿ ಜಾಗ ನಿಗದಿ ಮಾಡಿ ಆದೇಶ ಹೊರಡಿಸಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ೯ ತಿಂಗಳಾಯಿತು. ಆದರೆ ಈ ನಿಟ್ಟಿನಲ್ಲಿ ಸಣ್ಣ ಕ್ರಮವೂ ಆಗಲಿಲ್ಲ. ಇದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಷಯ ಮುಂದಿಟ್ಟುಕೊಂಡೇ ಚುನಾವಣೆಯಲ್ಲಿ ಗೆದ್ದು ಬಂದ ಮಂಕಾಳ ವೈದ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಆದರೆ ಆಸ್ಪತ್ರೆ ಬಗ್ಗೆ ಯಾಕೆ ಆಸಕ್ತಿ ತೋರುತ್ತಿಲ್ಲ ಎಂಬುದು ನಮ್ಮ ಪ್ರಶ್ನೆ. ಈವರೆಗೆ ಆಸ್ಪತ್ರೆ ವಿಚಾರದಲ್ಲಿ ಸಣ್ಣದೊಂದು ಪ್ರಕ್ರಿಯೆಯೂ ನಡೆದಿಲ್ಲ. ಇದರ ಬಗ್ಗೆ ಒಂದು ಸಣ್ಣ ಸಭೆಯೂ ನಡೆದಿಲ್ಲ, ಸಲಹಾ ಸಮಿತಿಯೂ ರಚನೆಯಾಗಿಲ್ಲ. ಕುಮಟಾದಲ್ಲಿ ಮಾಡ್ತಾರೋ, ಅಥವಾ ಬೇರೆಲ್ಲಿ ಮಾಡ್ತಾರೋ ಎಂಬ ಬಗ್ಗೆ ಒಂದೇ ಒಂದು ಹೇಳಿಕೆಯೂ ಇಲ್ಲ. ಆಸ್ಪತ್ರೆ ವಿಚಾರ ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ವಿಷಯವಾಗಬಾರದು, ಅದು ಕಾರ್ಯರೂಪಕ್ಕೆ ಬರಬೇಕು ಎಂಬ ಕಾರಣಕ್ಕಾಗಿಯೇ ನಾನು ಹೋರಾಟ ಮಾಡುತ್ತಿದ್ದೇನೆ. ಜನರಿಗೆ ತುರ್ತು ಅಗತ್ಯವಾದ ಆಸ್ಪತ್ರೆ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ, ಇದರಲ್ಲಿ ಎಲ್ಲ ಪಕ್ಷಗಳು ಒಗ್ಗಟ್ಟಾಗಿ ಹೋರಾಡಿ ಸರ್ಕಾರದ ಗಮನಸೆಳೆಯಬೇಕು, ಇಂಥ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಅನಂತಮೂರ್ತಿ ಹೆಗಡೆಯವರು ಚುನಾವಣೆ ಹತ್ತಿರ ಬಂದಾಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ವಿಚಾರ ಮುಂದಿಟ್ಟುಕೊಂಡು ಗಿಮಿಕ್‌ ಮಾಡ್ತಾ ಇದ್ದಾರೆ ಎಂದು ಕೆಲವರು ಹೇಳ್ತಾರಲ್ಲ..?
ಇದು ಕೇವಲ ಅವರ ಅಭಿಪ್ರಾಯವಷ್ಟೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ನಿಟ್ಟಿನಲ್ಲಿ ಐದಾರು ತಿಂಗಳಿನಿಂದಲೂ ನಾನು ಗಟ್ಟಿಯಾಗಿಯೇ ಹೋರಾಟ ಮಾಡುತ್ತಿದ್ದೇನೆ. ಈ ʼಸ್ವಾಭಿಮಾನಿ ಪಾದಯಾತ್ರೆʼ ಆಸ್ಪತ್ರೆಗಾಗಿ ನಾನು ಸಂಘಟಿಸುತ್ತಿರುವ ನಾಲ್ಕನೇ ದೊಡ್ಡ ಅಭಿಯಾನವಾಗಿದೆ. ಈ ಹಿಂದೆ ನಾನು ಶಿರಸಿಯಿಂದ ಕಾರವಾರದ ವರೆಗೆ ಪಾದಯಾತ್ರೆ ಮಾಡಿದ್ದೆ. ಅದಕ್ಕೆ ಉತ್ತಮ ಜನಸ್ಪಂದನ ವ್ಯಕ್ತವಾಗಿತ್ತು. ಅನಂತರ ಶಿರಸಿಯಲ್ಲಿ ನನ್ನ ನೇತೃತ್ವದಲ್ಲಿಯೇ ಧರಣಿ ನಡೆದಿತ್ತು. ನಂತರದಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಸರ್ಕಾರದ ಗಮನಸೆಳೆಯಲು ಅಲ್ಲಿಗೂ ಹೋಗಿ ಹೋರಾಟ ನಡೆಸಿದ್ದೆ. ಈ ಬಗ್ಗೆ ಸರ್ಕಾರಕ್ಕೂ ಮನವಿ ಕೊಟ್ಟಿದ್ದೆ. ಆದರೂ ಸರ್ಕಾರದಿಂದ ಆಸ್ಪತ್ರೆ ನಿರ್ಮಾಣದ ನಿಟ್ಟಿನಲ್ಲಿ ಸಣ್ಣ ಪ್ರಕ್ರಿಯೆಯೂ ನಡೆದಿಲ್ಲ. ಹೀಗಾಗಿ ಹಿಂದೆ ಸರ್ಕಾರ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ನಿಗದಿ ಮಾಡಿದ್ದ ಸ್ಥಳದಿಂದಲೇ ʼಸ್ವಾಭಿಮಾನಿ ಪಾದಯಾತ್ರೆʼ ಹಮ್ಮಿಕೊಂಡಿದ್ದೇನೆ. ಜಿಲ್ಲೆಯ ಜನರ ದಶಕಗಳ ಬೇಡಿಕೆ ಬಗ್ಗೆ ಹೋರಾಟ ನಡೆಸಿದರೆ ಅದು ಗಿಮಿಕ್‌ ಹೇಗಾಗುತ್ತದೆ..? ಜಿಲ್ಲಾ ಉಸ್ತುವಾರಿ ಸಚಿವರು ಚುನಾವಣೆ ಸಂದರ್ಭದಲ್ಲಿ ಇದನ್ನೇ ಬಳಸಿಕೊಂಡು ಚುನಾವಣೆ ಗೆದ್ದು ಬಂದರು. ಅವರೀಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಅಧಿಕಾರದಲ್ಲಿರುವ ಅವರು (ಸರ್ಕಾರ) ಆಸ್ಪತ್ರೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರೆ ಹೋರಾಟ ಮಾಡುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಇದನ್ನು ಹೇಳುವವರು ಈ ಬಗ್ಗೆ ಸರ್ಕಾರಕ್ಕೆ ಕೇಳಲಿ, ಅಥವಾ ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲಿ. ಈ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ ಕೇಳುವ ಅಥವಾ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸುವ ಬದಲು ನಮ್ಮ ಹೋರಾಟದ ಬಗ್ಗೆ ಟೀಕಿಸಿದರೆ ಅದಕ್ಕೆ ನಾನು ಉತ್ತರಕೊಡಬೇಕಿಲ್ಲ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

ಈ ಪಾದಯಾತ್ರೆ ಮೂಲಕ ಹೋರಾಟ ರೂಪಿಸಲು ನೀವು ಜನಜಾಗೃತಿ, ಜನ ಸಂಘಟನೆ ಹೇಗೆ ಮಾಡುತ್ತಿದ್ದೀರಿ..?
ನಮಗೆ ನಮ್ಮದೇ ಆದ ಕಾರ್ಯಕರ್ತರ ಬಳಗವಿದೆ. ಅವರ ಮೂಲಕ ಸಂಘ-ಸಂಸ್ಥೆಗಳನ್ನು ಸಂಪರ್ಕ ಮಾಡುತ್ತಿದ್ದೇವೆ. ನಾವು ಸುಮಾರು ೩೦೦ ಸಂಘ-ಸಂಸ್ಥೆಗಳನ್ನು ಸಂಪರ್ಕ ಮಾಡುವ ಗುರಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಯ ಜನರ ತುರ್ತು ಅಗತ್ಯವಾಗಿದ್ದರಿಂದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕೋರಿ ವಿಶೇಷವಾಗಿ ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕನ್ನು ಕೇಂದ್ರೀಕರಿಸಿಕೊಂಡು ಪ್ರತಿ ಗ್ರಾಮ ಪಂಚಾಯತಕ್ಕೂ ಪತ್ರ ನೀಡಿ ಬೆಂಬಲ ಕೋರುತ್ತಿದ್ದೇವೆ. ಅಲ್ಲದೆ ಈ ತಾಲೂಕುಗಳ ಶಾಸಕರನ್ನೂ ಆಹ್ವಾನಿಸುತ್ತೇವೆ. ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಬೆಂಬಲವನ್ನೂ ಕೋರುತ್ತಿದ್ದೇವೆ. ಇದು ಪಕ್ಷಾತೀತವಾಗಿ ನಡೆಯುತ್ತಿದ್ದು, ಎಲ್ಲ ಪಕ್ಷದವರೂ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕೋರುತ್ತಿದ್ದೇವೆ. ಇದು ಜಿಲ್ಲೆಯ ಬಹುದಶಕಗಳ ಬೇಡಿಕೆಯಾಗಿದ್ದರಿಂದ ಎಲ್ಲರೂ ಇದಕ್ಕೆ ಬೆಂಬಲ ನೀಡಬೇಕು ಎಂಬುದು ನಮ್ಮ ಮನವಿ.

ನಿಮಗೆ ಈ ಹೋರಾಟ ಕೈಗೆತ್ತಿಕೊಳ್ಳುವ ಆಲೋಚನೆ ಹೇಗೆ ಮತ್ತು ಯಾಕೆ ಬಂತು..?
ನಾನು ಲೇ ಔಟ್‌ ವ್ಯವಹಾರ ಮಾಡಿಕೊಂಡು ಬೆಂಗಳೂರಲ್ಲಿ ಇದ್ದೆ. ಇದನ್ನು ನಮ್ಮ ಜಿಲ್ಲೆಯಲ್ಲಿಯೂ ಮಾಡಲು ಇಲ್ಲಿಗೆ ಬಂದೆ. ಇಲ್ಲಿಗೆ ಬಂದಾಗ ನನಗೆ ಇದರ ಬಗ್ಗೆ ಸ್ಪಷ್ಟವಾಗಿ ಅರಿವಾಯಿತು. ನಮ್ಮ ಜಿಲ್ಲೆಗೆ ಈ ವಿಷಯದಲ್ಲಿ ಏನಾದರೂ ಮಾಡಬೇಕು ಎಂದು ಅನ್ನಿಸಿತು. ಅದಕ್ಕಾಗಿಯೇ ಈ ವಿಷಯವನ್ನು ಕೈಗೆತ್ತಿಕೊಂಡಿದ್ದೇನೆ. ನೋಡಿ, ನಮ್ಮಲ್ಲಿ ಮನಸ್ಥಿತಿ ಹೇಗಿದೆಯೆಂದರೆ ಬೇರೆ ಜಿಲ್ಲೆಗಳಲ್ಲಿನ ಸುಸಜ್ಜಿತ ಆಸ್ಪತ್ರೆಗಳಿಗೆ ತೆರಳಲು ಬಸ್‌ ಬಿಡಲು ಕ್ರಮ ಕೈಗೊಳ್ಳುವುದೇ ಸಾಧನೆ ಎಂದು ನಮ್ಮ ಜನಪ್ರತಿನಿಧಿಗಳು ತಿಳಿದುಕೊಂಡಂತಿದೆ. ಪ್ರತಿದಿನ ಮಣಿಪಾಲಕ್ಕೋ ಅಥವಾ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಆಸ್ಪತ್ರೆಗಳಿಗೆ ಹೋಗುವ ಜನರನ್ನು ಗಮನಿಸಿದರೆ ಈ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎಷ್ಟು ಅಗತ್ಯ ಎಂಬುದು ಅರ್ಥವಾಗುತ್ತದೆ. ಅವರು ಅಲ್ಲಿಗೆ ಹೋದರೆ ಖರ್ಚು ಎಷ್ಟಾಗುತ್ತದೆ..? ಆಸ್ಪತ್ರೆ ಖರ್ಚಿಗಿಂತ ವಸತಿ ಹಾಗೂ ಓಡಾಟ ಹಾಗೂ ಇತರವುಗಳಿಗೆ ಹೆಚ್ಚು ವೆಚ್ಚವಾಗುತ್ತದೆ. ಜೊತೆಗೆ ತುರ್ತು ರೋಗಿಗಳಿಗೆ ಆಸ್ಪತ್ರೆ ತಲುಪಲು ಎಷ್ಟು ಸಮಯ ವ್ಯಕ್ತವಾಗುತ್ತದೆ..? ಬಡ ಹಾಗೂ ಮಧ್ಯಮ ವರ್ಗದವರೇ ಹೆಚ್ಚಾಗಿರುವ ಈ ಜಿಲ್ಲೆಯ ಜನ ಇದಕ್ಕಾಗಿ ಹಣ ಹೇಗೆ ಹೊಂದಿಸಬೇಕು..? ಆರೋಗ್ಯ ಹಾಗೂ ಆಸ್ಪತ್ರೆ ಎಂಬುದು ರಾಜಕೀಯ ಹಾಗೂ ಸ್ವ ಹಿತಾಸಕ್ತಿಯ ವಿಷಯ ಅಲ್ಲ, ಅದು ಆಗಲೂಬಾರದು. ಈ ಜಿಲ್ಲೆಯ ಜನರು ಸೀಬರ್ಡ್‌, ಕೈಗಾ, ಶರಾವತಿ, ಕೊಡಸಳ್ಳಿ ಸೇರಿದಂತೆ ಅನೇಕ ಯೋಜನೆಗಳಿಗಾಗಿ ತ್ಯಾಗ ಮಾಡಿದ್ದಾರೆ, ಸುಮಾರು ೭೫ರಷ್ಟು ಅರಣ್ಯವಿದೆ. ಜಿಲ್ಲೆಯು ವಿಸ್ತಾರವಾಗಿದೆ. ಇವರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೇಳಿದರೆ ಅದು ತಪ್ಪಾ..? ಬೇರೆಡೆಯ ಆಸ್ಪತ್ರೆಗಳಿಗೆ ಬಸ್‌ ವ್ಯವಸ್ಥೆ ಮಾಡುವುದನ್ನೇ ನಮ್ಮ ಸಾಧನೆ ಎಂದು ಅಂದುಕೊಳ್ಳುವ ಮನಸ್ಥಿತಿ ಇರುವಾಗ ಈ ಜಿಲ್ಲೆಯಲ್ಲಿಯೇ ಆಸ್ಪತ್ರೆ ನಿರ್ಮಾಣಕ್ಕೆ ಹೋರಾಟದ ಅಗತ್ಯವಿದೆ ಎಂದು ಅನ್ನಿಸಿತು. ಅದಕ್ಕಾಗಿಯೇ ಹೋರಾಟಕ್ಕೆ ಧುಮುಕಿದ್ದೇನೆ, ಈ ಹೋರಾಟ ಆಸ್ಪತ್ರೆಗೆ ಅಡಿಗಲ್ಲು ಆಗುವವರೆಗೂ ಮುಂದುವರಿಯಲಿದೆ. ಆಸ್ಪತ್ರೆ ವಿಷಯದಲ್ಲಿ ಇದು ರಾಜಕೀಯೇತರ-ಪಕ್ಷೇತರ ಹೋರಾಟ. ನಾನೊಬ್ಬನೇ ಹೋರಾಟ ಮಾಡುವ ಪರಿಸ್ಥಿತಿ ಬಂದರೂ ಆಸ್ಪತ್ರೆಗಾಗಿ ಹೋರಾಟ ಮಾಡುತ್ತೇನೆ. ಇದು ನನ್ನ ದೃಢ ಸಂಕಲ್ಪ.

ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗದಿರಲು ಮೆಡಿಕಲ್‌ ಲಾಬಿ ಇದೆ ಎಂದು ಅನ್ನಿಸುತ್ತದೆಯೇ…?
ಈ ಮಾತನ್ನು ಜನರು ಹೇಳುತ್ತಿದ್ದಾರೆ. ಆದರೆ ನನಗೆ ಈವರೆಗೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ.

ಜಿಲ್ಲೆಯಿಂದ ಪ್ರತಿ ದಿನ ಬೇರೆ ಜಿಲ್ಲೆಗಳ ಆಸ್ಪತ್ರೆಗಳಿಗೆ ಎಷ್ಟು ಜನ ತೆರಳುತ್ತಾರೆ ಎಂಬ ಮಾಹಿತಿ ಇದೆಯೇ..?
ನಿಖರವಾಗಿ ಹೇಳಲು ಆಗುವುದಿಲ್ಲ. ಆದರೆ ಬೇರೆ ಜಿಲ್ಲೆಗಳ ದೊಡ್ಡ ದೊಡ್ಡ ಆಸ್ಪತ್ರೆಗಳಿರುವಲ್ಲಿ ಈ ಜಿಲ್ಲೆಯಿಂದ ಬಸ್ಸುಗಳನ್ನು ಬಿಡುವುದನ್ನು ಲೆಕ್ಕ ಹಾಕಿದರೆ ಪ್ರತಿ ದಿನ ಕನಿಷ್ಠ ೬೦೦-೭೦೦ ಜನ ಬಸ್ಸಿನಲ್ಲಿ ಹೋಗುತ್ತಾರೆ ಎಂದು ಅಂದಾಜಿಸಿದ್ದೇವೆ. ಸ್ವಂತ ವಾಹನ ಹಾಗೂ ಬಾಡಿಗೆ ವಾಹನ ಮಾಡಿಸಿಕೊಂಡು ಹೋಗುವವರು ಇದರಲ್ಲಿ ಸೇರಿಲ್ಲ. ಅವರು ಸೇರಿದರೆ ಹತ್ತಿರ ಹತ್ತಿರ ಸಾವಿರದ ಆಸುಪಾಸು ಜನ ಪ್ರತಿದಿನ ಬೇರೆ ಜಿಲ್ಲೆಗಳ ಆಸ್ಪತ್ರೆಗಳಿಗೆ ಹೋಗಬಹುದು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌: ವೀಡಿಯೊ ನೀಡಿದ್ದು ನಾನೇ ಎಂದಿದ್ದ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ...!?

ಮಲ್ಟಿ ಆಸ್ಪತ್ರೆಯೊಂದೇ ಅಲ್ಲ, ವೈದ್ಯಕೀಯ ಕಾಲೇಜ್‌ ಬಗ್ಗೆಯೂ ನೀವು ಪ್ರಸ್ತಾಪಿಸುತ್ತಿದ್ದೀರಲ್ಲ..?
ಹೌದು, ಆ ಬೇಡಿಕೆಯೂ ಇದೆ. ಆಸ್ಪತ್ರೆ ಸಮೀಪವೇ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಬೆಳವಣಿಗೆ ದೃಷ್ಟಿಯಿಂದ ಉತ್ತಮ. ಯಾಕೆಂದರೆ ಉತ್ತಮ ವೈದ್ಯರು ಉತ್ತರ ಕನ್ನಡ ಜಿಲ್ಲೆಯಂತಹ ಪ್ರದೇಶಗಳಿಗೆ ಬರಲು ಹಿಂದೇಟು ಹಾಕಬಹುದು. ಆದರೆ ವೈದ್ಯಕೀಯ ಕಾಲೇಜೂ ಇದ್ದರೆ ಅವರಿಗೆ ಸಂಬಳವೂ ಜಾಸ್ತಿ ಸಿಗುತ್ತದೆ. ಅಲ್ಲದೆ, ವೈದ್ಯಕೀಯ ಕಾಲೇಜಿನಿಂದ ಆಸ್ಪತ್ರೆಗೆ ವೈದ್ಯರ ಕೊರತೆಯೂ ಆಗುವುದಿಲ್ಲ. ದೊಡ್ಡ ದೊಡ್ಡ ಹೆಸರಾಂತ ಆಸ್ಪತ್ರೆಗಳಲ್ಲಿ ವೈದ್ಯಕೀಯ ಕಾಲೇಜುಗಳು ಇರುವುದನ್ನು ನೋಡಬಹುದು. ನಮ್ಮ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಒಂದಿದೆ. ಆದರೆ ಅದು ಗೋವಾ ಗಡಿ ಪ್ರದೇಶದ ಸನಿಹದಲ್ಲಿದೆ. ನಮ್ಮ ಜಿಲ್ಲೆಯವರಿಗೆ ಅದರ ಲಾಭ ಕಡಿಮೆಯೇ. ಹೀಗಾಗಿಯೇ ಆ ಬೇಡಿಕೆಯನ್ನೂ ಮುಂದಿಟ್ಟಿದ್ದೇನೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಫ್ಟ್‌ವೇರ್‌ ಪಾರ್ಕ್‌ಅಥವಾ ಔದ್ಯೋಗಿಕ ಪಾರ್ಕ್‌ ಆಗಬೇಕೆಂಬ ಬೇಡಿಕೆಯೂ ತಮ್ಮ ಸ್ವಾಭಿಮಾನ ಪಾದಯಾತ್ರೆಯ ಹೋರಾಟದ ವಿಷಯವಾಗಿ ಇಟ್ಟಿದ್ದೀರಲ್ಲ..?
ಇದು ಕೂಡ ಈ ಜಿಲ್ಲೆಯ ಮತ್ತೊಂದು ಸಮಸ್ಯೆ. ನಮ್ಮ ಜಿಲ್ಲೆಯಲ್ಲಿ ಕೃಷಿ ಹೊರತಾಗಿ ಉದ್ಯೋಗ ಸೃಷ್ಟಿ ಬಹುತೇಕ ಆಗುತ್ತಿಲ್ಲ. ಈಗಿನ ವೆಚ್ಚದಲ್ಲಿ ಒಂದು ಕುಟುಂಬದವರು ಕೇವಲ ಕೃಷಿ ನಂಬಿಕೊಂಡು ಬದುಕುವುದು ಕಷ್ಟ. ಮೊದಲೆಲ್ಲ ಮನೆಯಲ್ಲಿ ನಾಲ್ಕೈದು ಮಕ್ಕಳು ಇರುತ್ತಿದ್ದರು. ಆದರೆ ಈಗ ಪರಿಸ್ಥಿ ಹಾಗಿಲ್ಲ. ಈಗ ಮನೆಯಲ್ಲಿ ಒಬ್ಬರೋ ಇಬ್ಬರೋ ಇರುತ್ತಾರೆ. ಅವರೂ ಉದ್ಯೋಗಕ್ಕೆ ಬೇರೆಡೆ ಹೋದರೆ ಇಡೀ ಕುಟುಂಬವೇ ಊರನ್ನು ತೊರೆದು ಅಲ್ಲಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಈ ಕಾರಣಕ್ಕೆ ಊರೆಲ್ಲ ಖಾಲಿಯಾಗುತ್ತಿದೆ. ಇದು ಜಿಲ್ಲೆಯಲ್ಲಿ ಉದ್ಯೋಗ ಇಲ್ಲದ ಕಾರಣಕ್ಕೆ ಹೀಗಾಗುತ್ತಿದೆ. ಹೀಗಾಗಿಯೇ ನಮ್ಮ ಜಿಲ್ಲೆಯಲ್ಲಿ ಪರಿಸರಕ್ಕೆ ಪೂರಕವಾದ ಔದ್ಯೋಗಿಕ ಪಾರ್ಕ್‌ ನಿರ್ಮಾಣ ಮಾಡಿ ಎಂಬ ಬೇಡಿಕೆಯೊಂದಿಗೆ ಹೋರಾಟ ಮಾಡುತ್ತಿದ್ದೇನೆ. ಜಿಲ್ಲೆಯ ಸಾಕಷ್ಟು ಸಾಫ್ಟ್‌ವೇರ್‌ ಉದ್ಯೋಗಿಗಳು ಹೊರಗಿದ್ದಾರೆ. ತದಡಿ ಬಂದರಿಗಾಗಿ ಕಾಯ್ದಿಟ್ಟ ೧೮೦೦ ಎಕರೆಯಷ್ಟು ಜಾಗ ಹಿರೇಗುತ್ತಿ ಸಮೀಪದಲ್ಲಿದೆ. ಸಾಫ್ಟ್‌ಫೇರ್‌ ಪಾರ್ಕ್‌ ಮಾಡಿದರೆ ಅವರಲ್ಲಿ ಬಹಳಷ್ಟು ಜನ ಬೇರೆ ಕಡೆ ಹೋಗುವುದಿಲ್ಲ. ಗಾರ್ಮೆಂಟ್‌ಪಾರ್ಕ್‌ ಮಾಡಬಹುದು. ಹೀಗೆ ಉದ್ಯೋಗ ಸೃಷ್ಟಿಗೆ ಬೇಕಾದದ್ದನ್ನು ಮಾಡಿದರೆ ಜಿಲ್ಲೆಯ ಭವಿಷ್ಯವೇ ಬದಲಾಗದಲಿದೆ.

ಉತ್ತರ ಕನ್ನಡದಲ್ಲಿ ಅರಣ್ಯ ಭೂಮಿಯೇ ಶೇ.೭೫ರಷ್ಟಿದೆ, ಜಾಗದ ಕೊರತೆ ಹಾಗೂ ಭೌಗೋಳಿಕ ಪರಿಸ್ಥಿತಿಯ ಕಾರಣಕ್ಕೆ ಈ ಜಿಲ್ಲೆಯಲ್ಲಿ ಔದ್ಯೋಗಿಕ ಬೆಳವಣಿಗೆಯಾಗಿಲ್ಲ ಎಂದು ಹೇಳ್ತಾರಲ್ಲ, ಅದು ನಿಜವೇ..?
ಸ್ವಲ್ಪಮಟ್ಟಿಗೆ ಹೌದು. ಆದರೆ ಅವರು ಹೇಳುವಷ್ಟು ಅಲ್ಲ. ಯಾಕೆಂದರೆ ಈಗ ಜಿಲ್ಲೆ ಯಾವುದೇ ನಗರಗಳ ಸುತ್ತಮುತ್ತ ನೋಡಿದರೆ ಅರಿವಿಗೆ ಬರುತ್ತದೆ. ಜಿಲ್ಲೆಯ ಪಟ್ಟಣ ಅಥವಾ ನಗರಗಳ ಸುತ್ತಮುತ್ತ ಈಗ ಸಾವಿರಾರು ಎಕರೆ ಜಾಗದಲ್ಲಿ ಖಾಸಗಿ ಲೇ ಔಟ್‌ಗಳು ನಿರ್ಮಾಣವಾಗುತ್ತಿವೆ. ನಗರದಿಂದ ಏಳೆಂಟು ಕಿಮೀ ದೂರದ ವರೆಗೆ ಜಾಗವೇ ಸಿಗದಷ್ಟು ಪ್ರಮಾಣದಲ್ಲಿ ನಿವೇಶನಗಳು ಆಗುತ್ತಿವೆ. ಅವೆಲ್ಲವುಗಳಿಗೂ ಜಾಗ ದೊರೆಯುವಾಗ ಉದ್ಯಮಕ್ಕೆ ಮಾತ್ರ ಯಾಕೆ ಜಾಗ ಸಿಗುತ್ತಿಲ್ಲ..? ಒಂದೇ ಕಡೆ ಜಾಗ ಇದ್ದರೆ ಅಲ್ಲಿಯೇ ಔದ್ಯೋಗಿಕ ಪಾರ್ಕ್‌ ಮಾಡಲಿ. ಸಿಗದಿದ್ದರೆ ೧೫-೨೦ ಎಕರೆ ಜಾಗದಲ್ಲಿ ಸಣ್ಣ ಸಣ್ಣ ಔದ್ಯೋಗಿಕ ಕ್ಲಸ್ಟರ್‌ ಮಾಡಲಿ. ಜಿಲ್ಲೆಯಲ್ಲಿ ಸಾಫ್ಟ್‌ವೇರ್‌ ಪಾರ್ಕ್‌ ಮಾಡಲು ತದಡಿ ಬಂದರಿಗಾಗಿ ಕಾಯ್ದಿಟ್ಟ ೧೮೦೦ ಎಕರೆಯಷ್ಟು ಜಾಗ ಹಿರೇಗುತ್ತಿ ಸಮೀಪದಲ್ಲಿದೆ. ಅದು ಹಾಗೆಯೇ ಬಿದ್ದುಕೊಂಡಿದೆ. ಅಲ್ಲಿಯೇ ಔದ್ಯೋಗಿಕ ಪಾರ್ಕ್‌ ಮಾಡಬಹುದಲ್ಲ. ಪ್ರತಿ ತಾಲೂಕುಗಳ ಹಂತದಲ್ಲಿ ಗಾರ್ಮೆಂಟ್ಸ್‌ ಫ್ಯಾಕ್ಟರಿ ಅಥವಾ ಪರಿಸರಕ್ಕೆ ಪೂರಕವಾದ ಇತರ ಉದ್ಯಮಕ್ಕೆ ಸಣ್ಣ ಸಣ್ಣ ಕ್ಲಸ್ಟರ್‌ಗಳನ್ನು ಮಾಡಬಹುದಲ್ಲ..? ಆದರೆ ಅದ್ಯಾವುದೂ ಆಗಿಲ್ಲ. ನಾವು ಅದನ್ನು ಮಾಡಿ ಜಿಲ್ಲೆಯ ಜನರಿಗೆ ಇಲ್ಲಿಯೇ ಉದ್ಯೋಗ ಇಲ್ಲಿಯೇ ಸಿಗುವಂತೆ ಮಾಡಿ ಎಂದು ಒತ್ತಾಯ ಮಾಡುತ್ತಿದ್ದೇವೆ.

 

 

 

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement