ರಾಯಪುರ (ಛತ್ತೀಸ್‌ಗಢ) :ಛತ್ತೀಸಗಢದ ಸುಕ್ಮಾ ಜಿಲ್ಲೆಯ ಕುಗ್ರಾಮವೊಂದರ ಜನತೆ ಈಗ ಸಂಭ್ರಮಿಸುತ್ತಿದ್ದಾರೆ. ಏಕೆಂದರೆ ಅಲ್ಲಿನ ಕೆರ್ಲಪೆಂಡಾ ಎಂಬ ಗ್ರಾಮದಲ್ಲಿ ಶ್ರೀರಾಮನ ದೇಗುಲಕ್ಕೆ ಬಿದ್ದಿದ್ದ ಬೀಗ ಮುದ್ರೆ 21 ವರ್ಷಗಳ ನಂತರ ಈಗ ತೆರವಾಗಿದೆ. ನಕ್ಸಲರ ಆಜ್ಞೆಯಂತೆ ಬಾಗಿಲು ಮುಚ್ಚಿದ ದೇಗುಲ 21 ವರ್ಷಗಳ ನಂತರ ಬಾಗಿಲು ತೆರೆದಿದೆ.
21 ವರ್ಷಗಳ ಹಿಂದೆ ಈ ಗ್ರಾಮದ ಮೇಲೆ ಭೀಕರ ದಾಳಿ ನಡೆಸಿದ್ದ ನಕ್ಸಲರು, ಗ್ರಾಮದಲ್ಲಿದ್ದ ಶ್ರೀರಾಮನ ದೇಗುಲವನ್ನು ಮುಚ್ಚಿಸಿದ್ದರು. ಅಂದಿನಿಂದ ಇಂದಿನವರೆಗೂ ಗ್ರಾಮಸ್ಥರು ಜೀವ ಭಯದಿಂದ ದೇಗುಲದ ಬಾಗಿಲು ತೆರೆಯಲು ಹೆದರಿದ್ದರು. ಈಗ ಭದ್ರತಾ ಪಡೆಗಳ ಸಾರಥ್ಯದಲ್ಲಿ ದೇಗುಲದ ಬಾಗಿಲು ತೆರೆಯಲಾಗಿದೆ. ಗ್ರಾಮಸ್ಥರು ಸುದೀರ್ಘ ಅವಧಿಯ ನಂತರ ಭಗವಾನ್ ಶ್ರೀರಾಮ, ಸೀತಾ ಮಾತೆ ಹಾಗೂ ಲಕ್ಷ್ಮಣರ ಸಮೇತ ಇರುವ ಹನುಮಂತನ ದರ್ಶನ ಪಡೆದರು.
ಈ ಗ್ರಾಮದಿಂದ ಕೇವಲ 10 ಕಿ.ಮೀ. ದೂರದಲ್ಲಿ ಇರುವ ತೆದ್ಮೆತ್ಲಾ ಎಂಬ ಗ್ರಾಮದಲ್ಲಿ 2010ರಲ್ಲಿ ನಕ್ಸಲರು ಅರೆಸೇನಾ ಪಡೆಯ 76 ಸೈನಿಕರನ್ನು ಹತ್ಯೆ ಮಾಡಿದ್ದರು. ಈ ಘಟನೆ ಇಂದಿಗೂ ಜನ ಮಾನಸದಿಂದ ಮರೆಯಾಗಿಲ್ಲ. ಈಗಲೂ ಸುತ್ತಮುತ್ತಲ ಗ್ರಾಮಗಳಲ್ಲಿ ನಕ್ಸಲ್ ಭೀತಿ ಹಾಗೆಯೇ ಉಳಿದುಕೊಂಡಿದೆ.
2021ರ ಏಪ್ರಿಲ್ ತಿಂಗಳಲ್ಲೂ ಈ ಗ್ರಾಮದ ಬಳಿಕ ತೇಕುಲ್‌ಗುಡ ಎಂಬ ಗ್ರಾಮದಲ್ಲಿ ನಕ್ಸಲರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 22 ಅರೆಸೇನಾ ಪಡೆಯ ಸಿಬ್ಬಂದಿ ಮೃತಪಟ್ಟಿದ್ದರು.ಈ ಭಾಗದಲ್ಲಿ ನಕ್ಸಲರ ಭಯ ಎಷ್ಟರ ಮಟ್ಟಿಗೆ ಇದೆ ಅಂದ್ರೆ ನಕ್ಸಲರು ಮಾಡಿದ ಯಾವುದೇ ಆದೇಶಕ್ಕೂ ಮಾರುತ್ತರ ನೀಡುವ ಧೈರ್ಯ ಗ್ರಾಮಸ್ಥರಿಗೆ ಇಲ್ಲ. ಹೀಗಾಗಿ ದೇಗುಲದ ಬಳಿಗೆ ಹೋಗಬಾರದು, ದೇಗುಲದ ಬಾಗಿಲು ತೆರೆಯಬಾರದು ಎಂಬ ನಕ್ಸಲರ ಆದೇಶವನ್ನು ಬರೋಬ್ಬರಿ 21 ವರ್ಷಗಳ ಕಾಲ ಗ್ರಾಮಸ್ಥರು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದರು. ಆದರೆ, ಪ್ರತಿದಿನ ದೇಗುಲಕ್ಕೆ ದೀಪ ಹಚ್ಚಲು ಅವಕಾಶ ನೀಡಬೇಕು ಎಂದು ಕೋರಿದ್ದರು. ಇದಕ್ಕೆ ಒಬ್ಬನೇ ಒಬ್ಬ ಗ್ರಾಮಸ್ಥ ಪ್ರತಿ ದಿನ ಸಂಜೆ ದೇಗುಲದ ಬಳಿ ಬಂದು ದೇಗುಲದ ಹೊರಗಿನಿಂದಲೇ ಒಳಗೆ ಇರುವ ದೀಪವನ್ನು ಹಚ್ಚಿ ವಾಪಸ್ ಹೋಗುವುದಕ್ಕೆ ಅವಕಾಶ ಸಿಕ್ಕಿತ್ತು.
ಆದರೆ ಕಳೆದ ಶನಿವಾರ ಏಪ್ರಿಲ್ 6 ರಂದು ದೇಗುಲದ ಬಳಿ ಜನರು ಜಮಾಯಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್‌ಪಿಎಫ್ ಯೋಧರು ಹಾಗೂ ಪೊಲೀಸರು ಇದ್ದರು. ಎಲ್ಲರ ಸಮ್ಮುಖದಲ್ಲಿ ದೇಗುಲದ ಬಾಗಿಲನ್ನು ಮತ್ತೆ ತೆರೆಯಲಾಯಿತು. 21 ವರ್ಷಗಳ ಬಳಿಕ ದೇಗುಲದ ಒಳಗೆ ಸೂರ್ಯ ರಶ್ಮಿಯ ಪ್ರವೇಶವೂ ಆಯ್ತು!
ಮೊದಲಿಗೆ ದೇಗುಲದ ಸ್ವಚ್ಛತಾ ಕಾರ್ಯ ಕೈಗೊಂಡ ಗ್ರಾಮಸ್ಥರು ಬಳಿಕ ಭಗವಾನ್ ರಾಮ, ಸೀತಾ ಮಾತೆ, ಲಕ್ಷ್ಮಣ ಹಾಗೂ ಹನುಮರ ಮೂರ್ತಿಗಳನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ