ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೊಲೀಸರಿಗೆ ನೂತನ ವಸ್ತ್ರಸಂಹಿತೆ : ಅರ್ಚಕರ ತರಹದ ಸಮವಸ್ತ್ರ…! ಅಖಿಲೇಶ ಯಾದವ್ ಆಕ್ಷೇಪ

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ಧಾಮ ಸಂಕೀರ್ಣದಲ್ಲಿ ನಿಯೋಜನೆಗೊಂಡಿರುವ ಪೊಲೀಸರು ಇನ್ನು ಮುಂದೆ ಧೋತಿ-ಕುರ್ತಾ ಧರಿಸಿ ʼಭಕ್ತ ಸ್ನೇಹಿʼ ವಾತಾವರಣ ಮೂಡಿಸಲಿದ್ದಾರೆ.
ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಹಣೆಯಲ್ಲಿ ತಿಲಕ ಅಥವಾ ವಿಭೂತಿ ಹಚ್ಚಿಕೊಂಡು, ಕಿತ್ತಳೆ ಬಣ್ಣದ ವಸ್ತ ಧರಿಸಿಕೊಂಡು ಥೇಟ್‌ ಅರ್ಚಕರಂತೆ ಇವರು ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯಲ್ಲಿ ಉತ್ತರಪ್ರದೇಶದ ಪೊಲೀಸ್‌ ಸಿಬ್ಬಂದಿ, ಭಕ್ತರು ದರ್ಶನಕ್ಕೆ ಬರುವ ವೇಳೆ ಕರ್ತವ್ಯ ನಿರ್ವಹಿಸಲಿದ್ದಾರೆ…! ದೇವಾಲಯದ ಅಧಿಕಾರಿಗಳ ಪ್ರಕಾರ, ಮಹಿಳಾ ಅಧಿಕಾರಿಗಳು ಸಲ್ವಾರ್ ಕುರ್ತಾ ಧರಿಸಲಿದ್ದಾರೆ. ವಿಶ್ವನಾಥನ ಗರ್ಭಗುಡಿಯ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್‌ ಸಿಬ್ಬಂದಿಗೆ ಮಾತ್ರ ಈ ಹೊಸ ವಸ್ತ್ರಸಂಹಿತೆ ಅನ್ವಯವಾಗಲಿದೆ.

ದೇವಾಲಯದ ಗರ್ಭಗುಡಿಯ ನಾಲ್ಕು ದ್ವಾರಗಳಲ್ಲಿ ಈ ತರಹದ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಖಾಕಿ ಸಮವಸ್ತ್ರದಲ್ಲಿರುವ ಪೊಲೀಸ್ ಸಿಬ್ಬಂದಿಯೂ ಅವರ ಜೊತೆಗಿರುತ್ತಾರೆ. ಖಾಕಿ ಸಮವಸ್ತ್ರದಲ್ಲಿರುವ ಸಿಬ್ಬಂದಿ ದೇವಾಲಯದ ಗರ್ಭಗುಡಿಯ ಗೇಟ್‌ನಿಂದ ಸುಮಾರು 15 ಮೀಟರ್ ದೂರದಲ್ಲಿ ಮೇಲ್ವಿಚಾರಣೆ ಮಾಡುತ್ತಾರೆ. ವಾರಾಣಸಿ ಪೊಲೀಸರ ಪ್ರಕಾರ, ಪ್ರತಿ ಪಾಳಿಯ ನಂತರ ಸರದಿ ಆಧಾರದ ಮೇಲೆ ಸಿಬ್ಬಂದಿ ಬದಲಾಗುತ್ತಾರೆ. ದೇವಾಲಯದಲ್ಲಿ ಈ ಹೊಸ ಪ್ರಯೋಗ ಬುಧವಾರದಿಂದ ಆರಂಭವಾಗಿದೆ ಎಂದು ವಾರಣಾಸಿ ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಭಕ್ತರ ಸೌಕರ್ಯ ಗಮನದಲ್ಲಿಟ್ಟುಕೊಂಡು ದೇವಾಲಯದಲ್ಲಿ ಸೌಹಾರ್ದ ವಾತಾವರಣ ಒದಗಿಸುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಪೊಲೀಸರು ಭಕ್ತರೊಂದಿಗೆ ಮೃದುವಾಗಿ ವ್ಯವಹರಿಸುವಂತೆ ಮಾಡಲು ದೇವಾಲಯದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಗೆ ಸಮಗ್ರ ಮೂರು ದಿನಗಳ ಸಂವಹನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಮತ್ತು ಕಟ್ಟುನಿಟ್ಟಾದ ನೋ-ಟಚ್ ನೀತಿಯನ್ನೂ ಜಾರಿಗೊಳಿಸಲಾಗುತ್ತಿದೆ.

ಪೊಲೀಸ್ ಕಮಿಷನರ್ ಮೋಹಿತ ಅಗರವಾಲ್ ಮಾತನಾಡಿ, ಪೊಲೀಸರು ಜನಸಂದಣಿಯನ್ನು ನಿಭಾಯಿಸುವಾಗ ತಮ್ಮೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ. ಅಗೌರವಯುತವಾಗಿ ನಡೆದುಕೊಳ್ಳುತ್ತಾರೆ ಎಂದು ಭಕ್ತರಿಂದ ದೂರುಗಳು ಬಂದಿವೆ. ಆದರೆ ಅದೇ ಮಾತನ್ನು ದೇವಾಲಯದ ಅರ್ಚಕರು ಹೇಳಿದರೆ ಭಕ್ತರು ಅವರ ಮಾತನ್ನು ಸುಲಭವಾಗಿ ಪಾಲಿಸುತ್ತಾರೆ. ಹೀಗಾಗಿ ಪೊಲೀಸರಿಗೆ ಈ ರೀತಿಯ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಭಕ್ತರನ್ನು ದರ್ಶನಕ್ಕಾಗಿ ದೀರ್ಘ ಸರತಿ ಸಾಲಿನಲ್ಲಿ ಕಾಯುವಂತೆ ಮಾಡಿದಾಗ ಒಂದು ಪ್ರಮುಖ ಸಮಸ್ಯೆ ಉದ್ಭವಿಸುತ್ತದೆ. ಇದು ಅವರ ದೇವರ ದರ್ಶನವನ್ನು ವಿಳಂಬಗೊಳಿಸುತ್ತದೆ ಮತ್ತು ಸರದಿಯಲ್ಲಿ ಕಾಯುತ್ತಿರುವವರನ್ನು ನಿರಾಶೆಗೊಳಿಸುತ್ತದೆ. ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸಲು ಹಾಗೂ ಭಕ್ತರಿಗೆ ಸೌಹಾರ್ದದ ವಾತಾವರಣ ಮೂಡುವಂತೆ ಮಾಡಲು ಅಧಿಕಾರಿಗಳು ಈ ತರಹದ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.
‘ಹೊಸ ವಸ್ತ್ರಸಂಹಿತೆಯಲ್ಲಿ’ ಪೊಲೀಸರು ಭಕ್ತರನ್ನು ‘ಹರ ಹರ ಮಹಾದೇವ್’ ಎಂಬ ಜೈಕಾರದೊಂದಿಗೆ ಸ್ವಾಗತಿಸಲಿದ್ದಾರೆ. ವಾರಾಣಸಿಯ ಇತರ ಪ್ರಮುಖ ಧಾರ್ಮಿಕ ಸ್ಥಳಗಳ ಬಗ್ಗೆಯೂ ಭಕ್ತರಿಗೆ ಮಾಹಿತಿ ನೀಡಲಿದ್ದಾರೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

ವಿಐಪಿ ಸಂಚಾರಕ್ಕೆ ಮಾರ್ಗದಲ್ಲಿ ಅಧಿಕಾರಿಗಳು ಭೌತಿಕವಾಗಿ ಭಕ್ತರನ್ನು ಮುಟ್ಟಿ ಅವರನ್ನು ಸರಿಸುವುದಿಲ್ಲ ಅಥವಾ ಸರತಿ ಸಾಲುಗಳಿಗೆ ಅಡ್ಡಿಪಡಿಸುವುದಿಲ್ಲ. ಬದಲಾಗಿ ಭಕ್ತರಿಗೆ ಬೇರೆ ಕಡೆಗೆ ಹೋಗುವಂತೆ ಸೂಚಿಸಲು ಯಾವುದೇ ದೈಹಿಕ ಸಂಪರ್ಕವಿಲ್ಲದೆ ಹಗ್ಗಗಳನ್ನು ಬಳಸಿ ಭಕ್ತರಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.
ಕೆಲವು ದಿನಗಳ ಹಿಂದೆ ಪ್ರಾರಂಭವಾದ ಉಪಕ್ರಮಗಳು 15 ದಿನಗಳ ಕಾಲ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ನಂತರ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ವಾರಾಣಸಿ ಪೊಲೀಸ್ ಕಮಿಷನರ್ ಮೋಹಿತ್ ಅಗರ್ವಾಲ್ ಹೇಳಿದರು.
ಈ ತಂತ್ರವನ್ನು ಆರಂಭದಲ್ಲಿ 2018 ರಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪರೀಕ್ಷಿಸಲಾಯಿತು. ಆದರೆ, ಕಾರಣಾಂತರಗಳಿಂದ ಅದನ್ನು ಸ್ಥಗಿತಗೊಳಿಸಲಾಗಿತ್ತು.

ಏತನ್ಮಧ್ಯೆ, ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್ ಈ ಕ್ರಮವನ್ನು ಟೀಕಿಸಿದರು. “ಯಾವ ‘ಪೊಲೀಸ್ ಮ್ಯಾನುಯಲ್’ ಪ್ರಕಾರ ಪೊಲೀಸರು ಪುರೋಹಿತರ ವೇಷ ಧರಿಸುವುದು ಸರಿ? ಅಂತಹ ಆದೇಶ ನೀಡುವವರನ್ನು ಅಮಾನತುಗೊಳಿಸಬೇಕು. ನಾಳೆ ಯಾವುದಾದರೂ ವಂಚಕ ಇದರ ಲಾಭ ಪಡೆದು ಅಮಾಯಕ ಸಾರ್ವಜನಿಕರನ್ನು ಲೂಟಿ ಮಾಡಿದರೆ ಉತ್ತರ ಪ್ರದೇಶ ಸರ್ಕಾರ ಮತ್ತು ಆಡಳಿತ ಏನು ಉತ್ತರಿಸುತ್ತದೆ? ಇದು ಖಂಡನೀಯ! ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಸರದಿ ಆಧಾರದ ಮೇಲೆ ಭದ್ರತೆಗಾಗಿ ವಿವಿಧ ಶ್ರೇಣಿಯ ಸುಮಾರು 800 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಲ್ಲ ಸಮಯದಲ್ಲೂ ಸರಿಸುಮಾರು 250 ಪೊಲೀಸರು ಇರುತ್ತಾರೆ. ಪ್ರಸ್ತುತ, ದೇವಾಲಯಕ್ಕೆ ಪ್ರತಿದಿನ ಸುಮಾರು ಐದು ಲಕ್ಷ ಭಕ್ತರು ಆಗಮಿಸುತ್ತಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement