ರೋಹಿತ್ ವೇಮುಲಾ ದಲಿತನಲ್ಲ : ಪೊಲೀಸರ ಅಂತಿಮ ವರದಿ ; ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್

ಹೈದರಾಬಾದ್: ತೆಲಂಗಾಣ ಪೊಲೀಸರು ರೋಹಿತ್ ವೇಮುಲ (Rohith Vemula) ಸಾವಿನ ಪ್ರಕರಣವನ್ನು ಶುಕ್ರವಾರ ಮುಕ್ತಾಯಗೊಳಿಸಿದ್ದಾರೆ. ಪ್ರಕರಣದಲ್ಲಿನ ಎಲ್ಲಾ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ.
ಪೊಲೀಸರು ಸಲ್ಲಿಸಿದ ಅಂತಿಮ ವರದಿಯಲ್ಲಿ ರೋಹಿತ್ ವೇಮುಲ ದಲಿತನೇ ಅಲ್ಲ. ಆತ ತನ್ನ ನಿಜವಾದ ಜಾತಿಯ ಗುರುತು ಪತ್ತೆಯಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಈ ಹೇಳಿಕೆಯನ್ನು ರೋಹಿತ್ ಅವರ ಸಹೋದರ ‘ಅಸಂಬದ್ಧ’ ಎಂದು ಟೀಕಿಸಿದ್ದಾರೆ.
ಭಾರೀ ಪ್ರತಿಭಟನೆಗಳು ಮತ್ತು ರಾಜಕೀಯ ವಿವಾದಗಳಿಗೆ ಕಾರಣವಾಗಿದ್ದ ರೋಹಿತ್‌ ವೇಮುಲ ಆತ್ಮಹತ್ಯೆಯ ಪ್ರಕರಣದ ಬಗ್ಗೆ ಎಂಟು ವರ್ಷಗಳ ನಂತರ ನೀಡಿದ ವರದಿಯಲ್ಲಿ, ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್‌ ವೇಮುಲ ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಮತ್ತು ಆತನ ಪ್ರಮಾಣಪತ್ರವನ್ನು ನಕಲಿ ಎಂದು ಹೇಳಿದ್ದಾರೆ. ಇದು ಬಹಿರಂಗಗೊಳ್ಳುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣದ ಆರೋಪಿಗಳಲ್ಲಿ ಆಗಿನ ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾ ರಾವ್ ಮತ್ತು ಬಿಜೆಪಿ ನಾಯಕರಾದ ಸಿಕಂದರಾಬಾದ್ ಸಂಸದ ಮತ್ತು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ, ಎಂಎಲ್‌ಸಿ ಎನ್ ರಾಮಚಂದ್ರ ರಾವ್ ಮತ್ತು ಆ ಸಮಯದಲ್ಲಿ ಶಿಕ್ಷಣ ಖಾತೆಯನ್ನು ಹೊಂದಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದ್ದಾರೆ. ವರದಿಯಲ್ಲಿ ಅವರೆಲ್ಲರನ್ನೂ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ.
ಜಾತಿ ಕಾರಣಕ್ಕೆ ಕಿರುಕುಳ ನೀಡಿದ್ದರಿಂದ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೋಹಿತ್ ಕುಟುಂಬ ಆರೋಪಿಸಿತ್ತು. ವಿದ್ಯಾರ್ಥಿಯ ಜಾತಿ ಸ್ಥಿತಿಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ನನ್ನ ಸಹೋದರನನ್ನು ಗುರಿಯಾಗಿಸಿ, ಕಿರುಕುಳ ನೀಡಿ ಮತ್ತು ಅಂತಿಮವಾಗಿ ಹೇಗೆ ಅದು ಆತನ ಸಾವಿಗೆ ಕಾರಣವಾಯಿತು ಎಂಬುದನ್ನು ತನಿಖೆ ಮಾಡುವ ಬದಲು, ಪೊಲೀಸರು ಆತನ ಜಾತಿ ಬಗ್ಗೆ ತನಿಖೆ ಮಾಡಿದರು” ಎಂದು ವೇಮುಲಾ ಸಹೋದರ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಮತದಾನದ ವೇಳೆ ಮತಗಟ್ಟೆಯಲ್ಲಿನ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಅಪ್ಪಳಿಸಿ ಧ್ವಂಸ ಮಾಡಿದ ಶಾಸಕ...!

“ಮೃತನಿಗೆ ಹಲವಾರು ಸಮಸ್ಯೆಗಳಿದ್ದವು, ಅದು ಆತನನ್ನು ಆತ್ಮಹತ್ಯೆಗೆ ಪ್ರೇರೇಪಿಸಿದೆ. ಆದರೆ ಆರೋಪಿಗಳು ಆತನ ಆತ್ಮಹತ್ಯೆಗೆ ಪ್ರೇರೇಪಿಸಿವೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ” ಎಂದು ವರದಿ ಹೇಳಿದೆ.
ಪ್ರಕರಣ ಮುಕ್ತಾಯಗೊಳಿಸಿದ ವರದಿಯನ್ನು ಮಾರ್ಚ್ 21 ರಂದು ಸಲ್ಲಿಸಲಾಯಿತು ಆದರೆ ತೆಲಂಗಾಣದ ಎಲ್ಲಾ 17 ಲೋಕಸಭಾ ಸ್ಥಾನಗಳಿಗೆ ಮೇ 13 ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿರುವ ಕೇವಲ 10 ದಿನಗಳ ಮೊದಲು ಬೆಳಕಿಗೆ ಬಂದಿದೆ. ತೆಲಂಗಾಣದಲ್ಲಿ ಈಗ ಕಾಂಗ್ರೆಸ್ ಸರ್ಕಾರವಿದೆ ಮತ್ತು ಅದಕ್ಕೂ ಮೊದಲು ಭಾರತ್ ರಾಷ್ಟ್ರ ಸಮಿತಿಯು ಆಡಳಿತವಿತ್ತು. ಸಂಶೋಧನಾ ವಿದ್ಯಾರ್ಥಿಯ ಸಾವಿನ ನಂತರ ನ್ಯಾಯ ಕೋರಿ ನಡೆದ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಿತ್ತು ಮತ್ತು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಕೂಡ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ರೋಹಿತ್ ವೇಮುಲ ದಲಿತ ಎಂಬ ಕಾರಣಕ್ಕೆ ಆತನನ್ನು ಸಾಯಿಸಲಾಯಿತು ಎಂದು ಹೇಳಿಕೆ ನೀಡಿದ್ದರು.

 

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement