ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರ ಅಪರಾಧ ತನಿಖಾ ಇಲಾಖೆ (ಸಿಐಡಿ) ಒಬ್ಬ ಶಂಕಿತನನ್ನು ಬಂಧಿಸಿದೆ. ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್ ಅವರು ಬುಧವಾರ ಕೋಲ್ಕತ್ತಾ ಬಳಿಯ ನ್ಯೂ ಟೌನ್‌ನಲ್ಲಿ ಬಾಡಿಗೆ ವಸತಿಗೃಹದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಗೌಪ್ಯ ಮೂಲಗಳ ಪ್ರಕಾರ, ಬಂಧಿತ ಶಂಕಿತನನ್ನು ಅವಾಮಿ ಲೀಗ್ ಸಂಸದರ ಸ್ನೇಹಿತ, ಅಮೆರಿಕದ ಪ್ರಜೆ ಅಖ್ತರುಝಾಮಾನ್ ಎಂಬವರು ನೇಮಿಸಿಕೊಂಡಿದ್ದರು ಹಾಗೂ ಅವರದ್ದೇ ಬಾಡಿಗೆ ವಸತಿಗೃಹದಲ್ಲಿ ಕೊಲೆ ಮಾಡಲಾಗಿದೆ. ಆರೋಪಿಯನ್ನು ಬಾಂಗ್ಲಾದೇಶದ ಜಿಹಾದ್ ಹವ್ಲಾದರ್ (24) ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಕಟುಕನಾಗಿದ್ದಾನೆ.
“ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ನಿವಾಸಿಯಾಗಿರುವ ಹವಾಲ್ದಾರ್ ಎಂಬಾತನನ್ನು ಎರಡು ತಿಂಗಳ ಹಿಂದೆ ಕೋಲ್ಕತ್ತಾಕ್ಕೆ ಸಂಸದರ ಸ್ನೇಹಿತ ಬಾಂಗ್ಲಾದೇಶ ಮೂಲದ ಅಮೇರಿಕಾ ಪ್ರಜೆ ಅಖ್ತರುಜ್ಜಮಾನ್ ಕರೆತಂದಿದ್ದ, ಆತನೇ ಈ ಯೋಜಿತ ಭೀಕರ ಹತ್ಯೆಯ ಮಾಸ್ಟರ್ ಮೈಂಡ್” ಎಂದು ಮೂಲಗಳು ತಿಳಿಸಿವೆ.
ಘೋರ ಹತ್ಯೆಯ ವಿವರಗಳು
ವಿಚಾರಣೆ ವೇಳೆ ಆರೋಪಿಯು ಅಖ್ತರುಜ್ಜಮಾನ್ ಆದೇಶದ ಮೇರೆಗೆ ತಾನು ಮತ್ತು ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳು ಅನ್ವರುಲ್ ಅಜೀಂ ಅನಾರ್ ಅವರನ್ನು ಫ್ಲಾಟ್‌ನಲ್ಲಿ ಕೊಚ್ಚಿ ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. “ಆನಂತರ ಅವರು ಫ್ಲಾಟ್‌ನಲ್ಲಿ ಸಂಸದರ ಸಂಪೂರ್ಣ ದೇಹವನ್ನು ತುಂಡರಿಸಿದರು, ಎಲ್ಲಾ ಮಾಂಸವನ್ನು ತೆಗೆದುಹಾಕಿದರು ಮತ್ತು ಗುರುತನ್ನು ನಾಶಮಾಡಲು ಮಾಂಸವನ್ನು ಕೊಚ್ಚಿದರು. ನಂತರ, ಅವರು ಎಲ್ಲವನ್ನೂ ಪಾಲಿಬ್ಯಾಗ್‌ನಲ್ಲಿ ಪ್ಯಾಕ್ ಮಾಡಿದರು, ಮೂಳೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅವುಗಳನ್ನೂ ಪ್ಯಾಕ್ ಮಾಡಿದರು. ಆರೋಪಿಗಳು ನಂತರ ಕೋಲ್ಕತ್ತಾ ಪ್ರದೇಶದ ವಿವಿಧ ಸ್ಥಳಗಳಲ್ಲಿ ಆ ಪ್ಯಾಕೆಟ್‌ಗಳನ್ನು ಎಸೆದರು. ಇದಕ್ಕಾಗಿ ಅವರು ವಿವಿಧ ಸಾರಿಗೆ ವಿಧಾನಗಳನ್ನು ಬಳಸಿದರು ಎಂದು ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಯನ್ನು ಇಂದು, ಶುಕ್ರವಾರ ಬರಾಸತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ಅಲ್ಲಿ ಪೊಲೀಸರು ಆತನ ಹೇಳಿಕೆಯನ್ನು ಪರಿಶೀಲಿಸಲು ಮತ್ತು ಕಾಣೆಯಾದ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲು ಆತನನ್ನು ವಶಕ್ಕೆ ಪಡೆಯಲಿದ್ದಾರೆ.
ಈವರೆಗೆ ಗೊತ್ತಾಗಿದ್ದು…
ಅನ್ವಾರುಲ್ ಅಜೀಮ್ ಅನಾರ್ ಅವರ “ಕೊಲೆ” ಯ ಆರಂಭಿಕ ತನಿಖೆಯಲ್ಲಿ ಅವರ ಆಪ್ತರಲ್ಲಿ ಒಬ್ಬರು, ಅಮೆರಿಕದ ಪ್ರಜೆ, ಅವರನ್ನು ಕೊಲ್ಲಲು ಸುಮಾರು 5 ಕೋಟಿ ರೂ.ಗಳನ್ನು ನೀಡಿದ್ದ. ಈ ಅವಾಮಿ ಲೀಗ್ ಸಂಸದರ ಸ್ನೇಹಿತ ಕೋಲ್ಕತ್ತಾದಲ್ಲಿ ಫ್ಲಾಟ್ ಹೊಂದಿದ್ದು, ಪ್ರಸ್ತುತ ಅಮೆರಿಕದಲ್ಲಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ಬಾಂಗ್ಲಾದೇಶ ಸಂಸದರು ಕೊನೆಯ ಬಾರಿಗೆ ಪ್ರವೇಶಿಸಿದ ಫ್ಲಾಟ್ ಅನ್ನು ಅದರ ಮಾಲೀಕ ಅಬಕಾರಿ ಇಲಾಖೆ ಉದ್ಯೋಗಿಯು ಸಂಸದರ ಸ್ನೇಹಿತರಿಗೆ ಬಾಡಿಗೆಗೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಇದು ಯೋಜಿತ ಕೊಲೆಯಾಗಿದೆ. ಬಾಂಗ್ಲಾ ಸಂಸದರ ಹಳೇ ಗೆಳೆಯನೊಬ್ಬ ಹತ್ಯೆ ಮಾಡಲು ಸುಮಾರು 5 ಕೋಟಿ ರೂ.ಗಳನ್ನು ನೀಡಿದ್ದಾನೆ . ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 13 ರಂದು ಕೋಲ್ಕತ್ತಾದಲ್ಲಿ ನಾಪತ್ತೆಯಾಗಿದ್ದ ಅನಾರ್ ಅವರನ್ನು ಹತ್ಯೆ ಮಾಡಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ ಗೃಹ ಸಚಿವ ಅಸಾದುಝಮಾನ್ ಖಾನ್ ಬುಧವಾರ ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳ ಸಿಐಡಿ ಕೈಗೆತ್ತಿಕೊಂಡಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ.
ಅನಾರ್ ಮೃತದೇಹ ಪತ್ತೆಯಾಗಿಲ್ಲ.
ಆದಾಗ್ಯೂ, ಸಿಐಡಿಯು ಕೋಲ್ಕತ್ತಾದ ಹೊರವಲಯದಲ್ಲಿರುವ ನ್ಯೂ ಟೌನ್‌ನಲ್ಲಿರುವ ಐಷಾರಾಮಿ ಕಾಂಡೋಮಿನಿಯಂನ ಅಪಾರ್ಟ್‌ಮೆಂಟ್‌ನಲ್ಲಿ ರಕ್ತದ ಕಲೆಗಳನ್ನು ಕಂಡುಹಿಡಿದಿದೆ, ಅಲ್ಲಿ ಮೇ 13 ರಂದು ಸಂಸದರು ಕೊನೆಯದಾಗಿ ಇದ್ದ ಸ್ಥಳವನ್ನು ಪತ್ತೆಹಚ್ಚಲಾಯಿತು. ಕೊಲೆ ಮಾಡಿದ ನಂತರ ಶವದ ಭಾಗಗಳನ್ನು ಎಸೆಯಲು ಬಳಸಿದ ಹಲವಾರು ಪ್ಲಾಸ್ಟಿಕ್ ಚೀಲಗಳನ್ನು ಸಹ ಅವರು ವಶಪಡಿಸಿಕೊಂಡಿದ್ದಾರೆ. ಸಾಂದರ್ಭಿಕ ಪುರಾವೆಗಳು ಸಂಸದರನ್ನು ಮೊದಲು ಕತ್ತು ಹಿಸುಕಿ ನಂತರ ಅವರ ಮೃತ ದೇಹವನ್ನು ಹಲವಾರು ಭಾಗಗಳಲ್ಲಿ ಕತ್ತರಿಸಲಾಗಿದೆ ಎಂದು ಸೂಚಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
“ದೇಹದ ಭಾಗಗಳನ್ನು ಬಹುಶಃ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಲಾಗಿದೆ ಮತ್ತು ವಿವಿಧ ಸ್ಥಳಗಳಲ್ಲಿ ಎಸೆಯಲಾಗಿದೆ. ಕೆಲವು ಭಾಗಗಳನ್ನು ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿದೆ ಎಂದು ನಾವು ಅನುಮಾನಿಸುತ್ತೇವೆ ಮತ್ತು ನಾವು ಮಾದರಿಗಳನ್ನು ಸಂಗ್ರಹಿಸಿದ್ದೇವೆ ಎಂದು ಅಧಿಕಾರಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ