ಮೈಸೂರು : ಖ್ಯಾತ ಸರೋದ್ ವಾದಕ ಪಂಡಿತ ರಾಜೀವ ತಾರಾನಾಥ (93) ಅವರು ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಮಂಗಳವಾರ (ಜೂನ್ 11) ನಿಧನರಾಗಿದ್ದಾರೆ.
ಕುವೆಂಪು ನಗರದ ಪಂಚಮಂತ್ರ ರಸ್ತೆಯಲ್ಲಿರುವ ನಿವಾಸದಲ್ಲಿ, ತಿಂಗಳ ಹಿಂದೆ ಕುಸಿದು ಬಿದ್ದು ಅವರ
ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಯಲ್ಲಿ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಚೇತರಿಸಕೊಳ್ಳುತ್ತಿದ್ದರು. ಆದರೆ ವಯೋಸಹಜವಾಗಿ ಇಂದು ಮಂಗಳವಾರ ಸಂಜೆ 7ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕುವೆಂಪು ನಗರದ ನಿವಾಸದಲ್ಲಿ ಬುಧವಾರ (ಜೂನ್ 12) ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಎನ್ನಲಾಗಿದೆ.
17 ಅಕ್ಟೋಬರ್ 1932 ರಂದು ಬೆಂಗಳೂರಿನಲ್ಲಿ ಜನಿಸಿದ ರಾಜೀವ ತಾರಾನಾಥರು ತಮ್ಮ ತಂದೆ ಪಂಡಿತ ತಾರಾನಾಥ ಅವರಿಂದ ಗಾಯನ ಸಂಗೀತದಲ್ಲಿ ಆರಂಭಿಕ ತರಬೇತಿಯನ್ನು ಪಡೆದರು ಪಂಡಿತ ತಾರಾನಾಥ ಅವರು ಸುಪ್ರಸಿದ್ಧ ತಬಲಾ ವಾದಕರೂ ಆಗಿದ್ದರು. ಒಂಬತ್ತು ವರ್ಷದವರಾಗಿದ್ದಾಗ ರಾಜೀವ ತಾರಾನಾಥ ತಮ್ಮ ಮೊದಲ ಸಾರ್ವಜನಿಕ ಗಾಯನ ಪ್ರದರ್ಶನ ನೀಡಿದ್ದರು ಅವರು ತಮ್ಮ ಇಪ್ಪತ್ತನೇ ವಯಸ್ಸಿಗಿಂತ ಮೊದಲು ಅವರು ಆಕಾಶವಾಣಿಗೆ ಹಾಡುತ್ತಿದ್ದರು.
ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದ ರಾಜೀವ ತಾರಾನಾಥರು, ತಿರುಚಿರಾಪಳ್ಳಿಯ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಅವರು ಕೆಲಕಾಲ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಆದರೆ ಸಂಗೀತದ ಮೇಲಿನ ಪ್ರೀತಿಯಿಂದಾಗಿ ತಮ್ಮ ಪ್ರಾಧ್ಯಾಪಕ ವೃತ್ತಿಯನ್ನು ತ್ಯಜಿಸಿ ಕೋಲ್ಕತ್ತಾಗೆ ತೆರಳಿ ಉಸ್ತಾದ್ ಅಲೀ ಅಕ್ಬರ್ ಖಾನ್ ಅವರ ಮಾರ್ಗದರ್ಶನದಲ್ಲಿ ಸರೋದ್ ವಾದನದ ತರಬೇತಿ ಪಡೆದಿದ್ದರು. 2009ರಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನರು ನಿಧನರಾಗುವವರೆಗೂ ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು. ಅಲ್ಲದೆ ಪಂಡಿತ್ ರವಿಶಂಕರ, ಶ್ರೀಮತಿ ಅನ್ನಪೂರ್ಣಾದೇವಿ, ಪಂಡಿತ ನಿಖಿಲ್ ಬ್ಯಾನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನರ ಮೊದಲಾದವರ ಮಾರ್ಗದರ್ಶನವನ್ನೂ ಪಡೆದಿದ್ದರು.
ರಾಜೀವ ತಾರನಾಥ ಅವರ ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸಂಗೀತ ರತ್ನ ಮೈಸೂರು ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ(1998), ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (1993), ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ(೧೯೯೩), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1996), ಕೆಂಪೇಗೌಡ ಪ್ರಶಸ್ತಿ (2006), ಗಾಯನ ಸಮಾಜದಿಂದ ಸಂಗೀತ ಕಲಾರತ್ನ ಜ್ಯೋತಿ ಸುಬ್ರಮಣ್ಯ ಪ್ರಶಸ್ತಿ, ವಿ. ಟಿ. ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿ, ಹಂಪಿ ಕನ್ನಡ ವಿವಿಯಿಂದ ‘ನಾಡೋಜ’ ಪ್ರಶಸ್ತಿ, ಹಾಗೂ ಭಾರತದ ಸರ್ಕಾರ ನೀಡುವ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದರು. ರಾಜೀವ ತಾರಾನಾಥರ ಜೀವನ ಮತ್ತು ಸಾಧನೆಗಳ ಕುರಿತಾದ ಪುಸ್ತಕ “ಸರೋದ್ ಮಾಂತ್ರಿಕ” ಕನ್ನಡದಲ್ಲಿ ಪುಸ್ತಕವೂ ಪ್ರಕಟಗೊಂಡಿದೆ.
ಪಂಡಿತ ರಾಜೀವ ತಾರಾನಾಥ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ