ಜಾವೆಲಿನ್ ಥ್ರೋದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಮ್, ಅಮೆರಿಕದಿಂದ ಭಯೋತ್ಪಾದಕ ಎಂದು ಗೊತ್ತುಪಡಿಸಿದ ಮೊಹಮ್ಮದ್ ಹ್ಯಾರಿಸ್ ಧರ್ ಅವರೊಂದಿಗೆ ಕಾಣಿಸಿಕೊಂಡ ವೀಡಿಯೊವೊಂದು ವೈರಲ್ ಆದ ನಂತರ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಆನ್ಲೈನ್ ಚರ್ಚೆಗೆ ಕಾರಣವಾಗಿರುವ ಈ ವೀಡಿಯೊ, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್ಇಟಿ) ಯ ರಾಜಕೀಯ ಫ್ರಂಟ್ ಮರ್ಕಝಿ ಮುಸ್ಲಿಂ ಲೀಗ್ (ಎಂಎಂಎಲ್) ನ ಜಂಟಿ ಕಾರ್ಯದರ್ಶಿಯಾಗಿರುವ ಮೊಹಮ್ಮದ್ ಹ್ಯಾರಿಸ್ ಧರ್ ಎಂಬಾತನೊಂದಿಗೆ ನದೀಮ್ ಸಂಭಾಷಣೆ ನಡೆಸುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ.
166 ಜನರನ್ನು ಕೊಂದ 2008 ರ ಮುಂಬೈ ದಾಳಿಯ ಮಾಸ್ಟರ್ಮೈಂಡ್ ಎಂದು ನಂಬಲಾದ ಹಫೀಜ್ ಸಯೀದ್ ರಚಿಸಿದ ರಾಜಕೀಯ ಪಕ್ಷವೇ ಮರ್ಕಝಿ ಮುಸ್ಲಿಂ ಲೀಗ್ (MML) ಆಗಿದೆ. 2018 ರಲ್ಲಿ, ಅಮೆರಿಕವು ಎಂಎಂಎಲ್ (MML) ಅಧ್ಯಕ್ಷ ಸೈಫುಲ್ಲಾ ಖಾಲಿದ್, ಮುಝಮ್ಮಿಲ್ ಇಕ್ಬಾಲ್ ಸಾಶಿಮಿ, ಹ್ಯಾರಿಸ್ ಧರ್, ತಬಿಶ್ ಕಯ್ಯುಮ್, ಫಯಾಜ್ ಅಹ್ಮದ್, ಫೈಸಲ್ ನದೀಮ್ ಮತ್ತು ಮುಹಮ್ಮದ್ ಎಹ್ಸಾನ್ ಈ ಏಳು ಜನರನ್ನು “ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕರು” ಎಂದು ಹೆಸರಿಸಿದೆ. ಅವರು ಎಲ್ಇಟಿ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಂಕಿಸಲಾಗಿದೆ.
ಮರ್ಕಝಿ ಮುಸ್ಲಿಂ ಲೀಗ್ ಅನ್ನು ಸಯೀದ್ 2017 ರಲ್ಲಿ ಸ್ಥಾಪಿಸಿದರು. 2018 ರ ಚುನಾವಣೆಯಲ್ಲಿ ಎಂಎಂಎಲ್ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದರು, ಆದರೆ ಅಮೆರಿಕದ ನಿರ್ಬಂಧಗಳ ನಂತರ ಅದನ್ನು ಎಂದಿಗೂ ರಾಜಕೀಯ ಪಕ್ಷವಾಗಿ ನೋಂದಾಯಿಸಲಾಗಿಲ್ಲ.
ಹಲವು ಪ್ರಶ್ನೆಗಳು…
ಜಾವೆಲಿನ್ ಥ್ರೋದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಮತ್ತು ಧರ್ ನಡುವಿನ ಭೇಟಿ ಯಾವಾಗ ನಡೆದಿತ್ತು ಎಂಬುದು ಪ್ರಸ್ತುತ ಪರಿಶೀಲನೆಯಲ್ಲಿದೆ. ನದೀಮ್ ಐತಿಹಾಸಿಕ ಒಲಿಂಪಿಕ್ ಗೆಲುವಿನ ನಂತರ ಪಾಕಿಸ್ತಾನಕ್ಕೆ ಮರಳಿದ ನಂತರ ಭೇಟಿ ಸಂಭವಿಸಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡರೆ, ಪ್ಯಾರಿಸ್ ಒಲಿಂಪಿಕ್ಸ್ ಮೊದಲು ಅಥವಾ ನಂತರ ಸಭೆ ನಡೆದಿದೆಯೇ ಎಂಬುದನ್ನು ಭಾರತೀಯ ಭದ್ರತಾ ಗ್ರಿಡ್ ಮೂಲಗಳು ಖಚಿತಪಡಿಸಿಲ್ಲ. 2008 ರ ಮುಂಬೈ ದಾಳಿಯ ಹಿಂದಿನ ʼಮಾಸ್ಟರ್ಮೈಂಡ್ʼ ಎಂದು ಹೇಳಲಾದ ಹಫೀಜ್ ಸಯೀದ್ಗೆ ಸಂಬಂಧಿಸಿದ ಮರ್ಕಝಿ ಮುಸ್ಲಿಂ ಲೀಗ್ (ಎಂಎಂಎಲ್) ಭಯೋತ್ಪಾದನೆ ಜೊತೆಗೆ ಅದರ ನಂಟಿನ ಕಾರಣಕ್ಕಾಗಿ ಅಂತಾರಾಷ್ಟ್ರೀಯವಾಗಿ ಪರಿಶೀಲನೆಗೆ ಒಳಪಟ್ಟಿದೆ. ಮರ್ಕಝಿ ಮುಸ್ಲಿಂ ಲೀಗ್ ವಿಶ್ವಸಂಸ್ಥೆಯ ಘೋಷಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ರಾಜಕೀಯ ವಿಭಾಗವಾಗಿದೆ. ಹ್ಯಾರಿಸ್ ಧರ್ ಲಷ್ಕರ್-ಎ-ತೊಯ್ಬಾದ ಚಟುವಟಿಕೆಗಳಿಗೆ ಧನಸಹಾಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ನದೀಮ್ ಆಗಸ್ಟ್ 8 ರಂದು ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 92.97 ಮೀಟರ್ಗಳಷ್ಟು ದೂರ ಎಸೆದು ಹೊಸ ಒಲಿಂಪಿಕ್ಸ್ ದಾಖಲೆ ಮಾಡಿ ಚಿನ್ನದ ಪದಕ ಗೆದ್ದ ಮೊದಲ ಪಾಕಿಸ್ತಾನಿ ಅಥ್ಲೀಟ್ ಎಂಬ ಇತಿಹಾಸವನ್ನು ನಿರ್ಮಿಸಿದರು. ಅವರ ಸಾಧನೆಯು ಪಾಕಿಸ್ತಾನಕ್ಕೆ 32 ವರ್ಷಗಳ ಸುದೀರ್ಘ ಒಲಿಂಪಿಕ್ ಪದಕದ ಬರವನ್ನು ಕೊನೆಗೊಳಿಸಿತು ಮತ್ತು ರಾಷ್ಟ್ರದಾದ್ಯಂತ ವ್ಯಾಪಕವಾಗಿ ಇದನ್ನು ಸಂಭ್ರಮಿಸಲಾಯಿತು. ಆದಾಗ್ಯೂ, ಅವರ ಇತ್ತೀಚಿನ ವೀಡಿಯೊದ ವಿವಾದವು ಅವರ ವಿಜಯವನ್ನು ಮಂಕುಗೊಳಿಸಿದೆ. ಘೋಷಿತ ಭಯೋತ್ಪಾದಕನೊಂದಿಗಿನ ಅವನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.
ವೈರಲ್ ವೀಡಿಯೋವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳ ಪ್ರಭಾವ ಮತ್ತು ವ್ಯಾಪ್ತಿಯ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪಂಜಾಬ್ನ ಮಿಯಾನ್ ಚುನ್ನುನಲ್ಲಿರುವ ತನ್ನ ಸ್ವಗ್ರಾಮಕ್ಕೆ ಹಿಂದಿರುಗಿದ ನದೀಮ್, ಈಗ ತನ್ನ ವಿಜಯದ ಕ್ಷಣದ ನಡುವೆ ಈ ವಿವಾದದ ಚರ್ಚೆಗೂ ಕಾರಣವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ