ವೀಡಿಯೊ..| ಖ್ಯಾತಿ ಪಡೆಯಲು ಜೀವಂತ ನಾಗರ ಹಾವಿನ ತಲೆ ಬಾಯಿಯೊಳಗೆ ಇಟ್ಟು ವೀಡಿಯೊ ಮಾಡಿದ ವ್ಯಕ್ತಿಯ ಪ್ರಾಣವೇ ಹೋಯ್ತು…!

ವೀಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿ ಖ್ಯಾತಿಗಳಿಸಲು ನಾಗರ ಹಾವಿನ ತಲೆಯನ್ನು ಬಾಯಿಗೆ ಹಾಕಿಕೊಂಡ ವ್ಯಕ್ತಿಯೊಬ್ಬ ಈ ದುಸ್ಸಾಹಸದ ವೇಳೆ ಸಾವಿಗೀಡಾಗಿದ್ದಾನೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು 20 ವರ್ಷದ ಶಿವರಾಜ ಎಂದು ಗುರುತಿಸಲಾಗಿದೆ. ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶಿವರಾಜ ರಸ್ತೆಯ ಮಧ್ಯದಲ್ಲಿ ನಿಂತು ನಾಗರಹಾವನ್ನು ಬಾಯಿಗೆ ಹಾಕಿಕೊಳ್ಳುತ್ತಿರುವುದು ಕಂಡುಬಂದಿದೆ. ಆತನ ಬಾಯಿಯಲ್ಲಿ ಸಿಕ್ಕಿಬಿದ್ದ ಹಾವು ತಪ್ಪಿಸಿಕೊಳ್ಳಲು ಒದ್ದಾಡುತ್ತಿರುವಂತೆ ಕಾಣುತ್ತದೆ. ಆತ ಮಾತ್ರ ಜೀವಂತ ನಾಗರಹಾವಿನ ತಲೆಯನ್ನು ಬಾಯಿಯಲ್ಲಿ ಹಾಕಿಕೊಂಡು ಕೈಮುಗಿದು ನಿಂತುಕೊಂಡು ಕ್ಯಾಮೆರಾವನ್ನು ನೋಡುವುದನ್ನು ಮುಂದುವರಿಸಿದ್ದಾನೆ.

ಹಾವಿನ ತಲೆಯು ಇನ್ನೂ ಆತನ ಬಾಯಿಯಲ್ಲಿರುವಾಗಲೇ ವೀಡಿಯೊ ಅಂತ್ಯಗೊಳ್ಳುತ್ತದೆ. ಅದು ಕೊನೆಗೊಳ್ಳುವ ಮೊದಲು ಆತ ಥಂಬ್ಸ್-ಅಪ್ ನೀಡುತ್ತಾನೆ.
ವರದಿಗಳ ಪ್ರಕಾರ, ಶಿವರಾಜ ಹಾಗೂ ಈತನ ತಂದೆ ಉರಗ ರಕ್ಷಕರಾಗಿದ್ದಾರೆ. ಅವರು ಈ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಅವರ ತಂದೆ ವೀಡಿಯೊ ರೆಕಾರ್ಡ್ ಮಾಡಿ ಅದನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲು ಹೇಳಿದ್ದಾರೆ. ಶಿವರಾಜ ಈ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಆದರೆ ದುರದೃಷ್ಟವಶಾತ್, ಈ ದುಸ್ಸಾಹಸ ಮಾಡುವಾಗ ನಾಗರ ಹಾವು ಆತನನ್ನು ಕಚ್ಚಿ ಸಾಯಿಸಿದೆ.

ಈ ವೀಡಿಯೊಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಯುವಕ ನಾಗರ ಹಾವನ್ನು ಬಾಯಿಗೆ ಹಾಕಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಈ ವೀಡಿಯೊವನ್ನು ಮಾಹಿತಿ ಹಾಗೂ ಜಾಗ್ರತೆ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ. ಪ್ರಸಿದ್ಧರಾಗಬೇಕೆಂದು ಯಾರೂ ಇಂತಹ ಸಾಹಸಗಳನ್ನು ಮಾಡಲು ಪ್ರಯತ್ನಿಸಬಾರದು ಎಂಬುದು ವಿನಂತಿ.

ಪ್ರಮುಖ ಸುದ್ದಿ :-   ವೀಡಿಯೊ..| ಪೊಲೀಸ್‌ ಕುಟುಂಬದ ಹತ್ಯೆಯ ಘಟನೆಯ ನಂತರ ಉಪವಿಭಾಗೀಯ ಅಧಿಕಾರಿಯನ್ನು ಬೆನ್ನಟ್ಟಿದ ಉದ್ರಿಕ್ತ ಗುಂಪು...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement