ಢಾಕಾ : ಬಾಂಗ್ಲಾದೇಶದ ಸತ್ಖಿರಾದಲ್ಲಿರುವ ಜೆಶೋರೇಶ್ವರಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಕೆ ನೀಡಿದ್ದ ಕಾಳಿ ದೇವಿಯ ಕಿರೀಟವನ್ನು ಕಳವು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಗುರುವಾರ ಮಧ್ಯಾಹ್ನ ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ ತೆರಳಿದ ಸ್ವಲ್ಪ ಹೊತ್ತಿನಲ್ಲೇ ಬೆಳ್ಳಿ, ಚಿನ್ನ ಲೇಪಿತ ಕಿರೀಟದ ಕಳ್ಳತನವಾಗಿದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶದ ದಿನಪತ್ರಿಕೆ ದಿ ಡೈಲಿ ಸ್ಟಾರ್ ಪ್ರಕಾರ, ಶುಚಿಗೊಳಿಸುವ ಸಿಬ್ಬಂದಿ ದೇವತೆಯ ತಲೆಯಿಂದ ಕಿರೀಟವು ನಾಪತ್ತೆಯಾಗಿರುವುದನ್ನು ನೋಡಿ ಮಾಹಿತಿ ನೀಡಿದ್ದಾರೆ. 2021ರ ಮಾರ್ಚ್‌ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಜೇಶೋರೇಶ್ವರಿ ದೇವಸ್ಥಾನಕ್ಕೆ ಕಿರೀಟವನ್ನು ಅರ್ಪಿಸಿದ್ದರು.
ತಲೆಮಾರುಗಳಿಂದ ದೇವಾಲಯವನ್ನು ನೋಡಿಕೊಳ್ಳುತ್ತಿರುವ ಕುಟುಂಬದ ಸದಸ್ಯರಾದ ಜ್ಯೋತಿ ಚಟ್ಟೋಪಾಧ್ಯಾಯ ಅವರು ಬಾಂಗ್ಲಾದೇಶದ ಮಾಧ್ಯಮಗಳಿಗೆ ಕಿರೀಟವನ್ನು ಬೆಳ್ಳಿಯಿಂದ ಮಾಡಲಾಗಿತ್ತು ಮತ್ತು ಚಿನ್ನದ ಲೇಪನದಿಂದ ಲೇಪಿಸಲಾಗಿದೆ ಎಂದು ಹೇಳಿದ್ದಾರೆ. ಕಳುವಾದ ಕಿರೀಟವು ಭಕ್ತರಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಹಿಂದೂ ಪುರಾಣಗಳಲ್ಲಿ, ಜೆಶೋರೇಶ್ವರಿ ದೇವಾಲಯವು ಭಾರತ ಮತ್ತು ನೆರೆಯ ದೇಶಗಳಾದ್ಯಂತ ಹರಡಿರುವ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಭಾರತ, ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮತ್ತು ಕದ್ದ ಕಿರೀಟವನ್ನು ಮರಳಿ ಪಡೆಯುವಂತೆ ಬಾಂಗ್ಲಾದೇಶವನ್ನು ಒತ್ತಾಯಿಸಿದೆ.
“ನಾವು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತೇವೆ ಮತ್ತು ಕಳ್ಳತನದ ಬಗ್ಗೆ ತನಿಖೆ ನಡೆಸುವಂತೆ ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸುತ್ತೇವೆ, ಕಿರೀಟವನ್ನು ವಶಪಡಿಸಿಕೊಳ್ಳಬೇಕು ಮತ್ತು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಢಾಕಾದಲ್ಲಿನ ಭಾರತೀಯ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.
ಸತ್ಖೈರಾದ ಈಶ್ವರಿಪುರದಲ್ಲಿರುವ ಈ ದೇವಾಲಯವನ್ನು 12 ನೇ ಶತಮಾನದ ಉತ್ತರಾರ್ಧದಲ್ಲಿ ಅನಾರಿ ಎಂಬವರಿಂದ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಅವರು ಜಶೋರೇಶ್ವರಿ ಪೀಠಕ್ಕೆ 100 ಬಾಗಿಲುಗಳೊಂದಿಗೆ ದೇವಾಲಯವನ್ನು ನಿರ್ಮಿಸಿದರು. ಇದನ್ನು ನಂತರ 13 ನೇ ಶತಮಾನದಲ್ಲಿ ಲಕ್ಷ್ಮಣ ಸೇನ್ ನವೀಕರಿಸಿದರು ಮತ್ತು ಅಂತಿಮವಾಗಿ, ರಾಜ ಪ್ರತಾಪಾದಿತ್ಯ 16 ನೇ ಶತಮಾನದಲ್ಲಿ ದೇವಾಲಯವನ್ನು ಪುನರ್ನಿರ್ಮಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ