ಅಕ್ಟೋಬರ್ 9ರ ರಾತ್ರಿ ನಿಧನರಾದ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ತಾವು ಅನುಸರಿಸಿದ ಅತ್ಯುತ್ತಮ ಕಾರ್ಪೊರೇಟ್ ಪದ್ಧತಿಗಳು ಮತ್ತು ಲೋಕೋಪಕಾರದ ದೊಡ್ಡ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರು ಹೆಚ್ಚು ಮಾನವೀಯ ವಿಧಾನದೊಂದಿಗೆ ಕಂಪನಿಗಳಲ್ಲಿ ಕೆಲಸ-ಕಾರ್ಯ ನಿರ್ವಹಿಸಿದ ರೀತಿ ಹಾಗೂ ನಿರ್ಧಾರ ತೆಗೆದುಕೊಂಡ ರೀತಿ ಅವರನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡಿದೆ. ಕಂಪನಿಗಳಲ್ಲಿ ಮಾನವೀಯ ವಿಧಾನ ಅನುಸರಿಸಿ ಅವರು ಹೇಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎಂಬುದಕ್ಕೆ 1990 ರ ದಶಕದಲ್ಲಿ ಟಾಟಾ ಸ್ಟೀಲ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಿದಾಗ ಅವರು ತೆಗೆದುಕೊಂಡ ನಿರ್ಧಾರವು ಒಂದು ಉದಾಹರಣೆಯಾಗಿದೆ. ಇದನ್ನು ಫಾರ್ಚೂನ್ ನಿಯತಕಾಲಿಕವು ವಿಶ್ವದ ಟಾಪ್ 10 ಅತ್ಯುತ್ತಮ ಕೈಗಾರಿಕಾ ನಿರ್ಧಾರಗಳಲ್ಲಿ ಒಂದು ಎಂದು ಪಟ್ಟಿ ಮಾಡಿದೆ.
1990 ರ ದಶಕದಲ್ಲಿ, ಟಾಟಾ ಸ್ಟೀಲ್ ಆರ್ಥಿಕ ಬಿಕ್ಕಟ್ಟು ಮತ್ತು ಹೆಚ್ಚಿನ ವೇತನ ಬಿಲ್‌ಗಳು, ಉದಾರೀಕರಣದ ಕಾರಣದಿಂದ ಜಾಗತಿಕ ಸ್ಪರ್ಧೆ ಮತ್ತು ಆರ್ಥಿಕ ಸುಧಾರಣೆಗಳ ನಂತರ ಪ್ರತಿಕೂಲ ಸನ್ನಿವೇಶದಿಂದಾಗಿ ತನ್ನ ಅಸ್ತಿತ್ವದ ಸಮಸ್ಯೆ ಎದುರಿಸಬೇಕಾಯಿತು ಒಂದೋ ಕಂಪನಿಯನ್ನು ಸಂಪೂರ್ಣವಾಗಿ ಮುಚ್ಚಬೇಕು ಅಥವಾ ಉದ್ಯೋಗಿಗಳ ಸಂಖ್ಯೆಯನ್ನು 80,000 ರಿಂದ 40,000 ಕ್ಕೆ ಇಳಿಸಬೇಕು ಎಂಬ ಎರಡು ಆಯ್ಕೆಗಳು ಮಾತ್ರ ಉಳಿದಿದ್ದವು.
ಉದ್ಯೋಗಿಗೆ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚು ಹಣ ಪಾವತಿಸುವ ಕಂಪನಿಯ ಪದ್ಧತಿಯಿಂದಾಗಿ ಟಾಟಾ ಸ್ಟೀಲ್ ಕಂಪನಿಯ ವೇತನದ ಬಿಲ್ ಅಧಿಕವಾಗಿತ್ತು. ಮಾನವೀಯ ವಿಧಾನ ಅನುಸರಿಸುವ ಅಂತಹ ಕಂಪನಿಗೆ, ಎರಡೂ ಆಯ್ಕೆಗಳು ಕಠಿಣ ಆಯ್ಕೆಗಳಾಗಿತ್ತು. ಆದರೆ ಅಂತಿಮವಾಗಿ, ಕಂಪನಿಯು ಉದ್ಯೋಗಿ ಬೇರ್ಪಡಿಕೆ ಯೋಜನೆ ಅಥವಾ ಸ್ವಯಂಪ್ರೇರಿತ ನಿವೃತ್ತಿ ಯೋಜನೆ ಜಾರಿಗೆ ತರಲು ಮುಂದಾಯಿತು. ಇದು ಕಂಪನಿಯ ಕೆಲಸದಿಂದ ವಜಾಗೊಳಿಸುವಿಕೆಗೆ ಮಾನವೀಯ ವಿಧಾನದ ಮಾನದಂಡ ಎಂದೇ ಪರಿಗಣಿತವಾಯಿತು.
ಹೇಗೆ ಜಾರಿಗೆ ತರಲಾಯಿತು..?
1) ಕಂಪನಿಯಲ್ಲಿ ನೌಕರರ ಕಡಿತ ಮಾಡುವಾಗ ಅಥವಾ ಅವರನ್ನು ವಜಾಗೊಳಿಸುವಾಗ ನೌಕರರ ಕಾಲ್ಪನಿಕ ನಿವೃತ್ತಿ ದಿನಾಂಕದ ವರೆಗೆ ಅವರಿಗೆ ಪೂರ್ಣ ಸಂಬಳ ನೀಡಲಾಯಿತು. 55 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳಿಗೆ ನಿವೃತ್ತಿ ವಯಸ್ಸನ್ನು ತಲುಪುವವರೆಗೆ ಅವರ ಪ್ರಸ್ತುತ ಸಂಬಳವನ್ನು ನೀಡಲಾಯಿತು. 45 ಮತ್ತು 55 ರ ನಡುವಿನ ಉದ್ಯೋಗಿಗಳಿಗೆ ನಿವೃತ್ತಿಯ ತನಕ ಅವರ ಸಂಬಳದ 1.2 ರಿಂದ 1.5 ಪಟ್ಟು ಹೆಚ್ಚು ಹಣ ಪಾವತಿಸಲಾಯಿತು.
2) ಉದ್ಯೋಗಿಗಳು ಮತ್ತು ಅವರ ಕುಟುಂಬದವರಿಗೆ ಅವರ ಜೀವಿತಾವಧಿಯ ವೈದ್ಯಕೀಯ ವಿಮೆ ನೀಡಲಾಯಿತು.
3) ಅವರು ವಾಸಿಸಲು ಹೊಸ ಸ್ಥಳವನ್ನು ಕಂಡುಕೊಳ್ಳುವವರೆಗೆ ಅವರಿಗೆ ತೊಂದರೆಯಾಗಬಾರದು ಎಂದು ಉದ್ಯೋಗಿಗಳಿಗೆ ಕಂಪನಿಯ ಕ್ವಾರ್ಟರ್ಸ್‌ನಲ್ಲಿ ಮೂರು ವರ್ಷಗಳ ಕಾಲ ಉಳಿಯಲು ಅವಕಾಶ ನೀಡಲಾಯಿತು.
4) ನೌಕರನು ನಿವೃತ್ತಿಯ ಮೊದಲು ಮರಣಹೊಂದಿದರೆ, ಅವರ ಕುಟುಂಬಕ್ಕೆ ನಿವೃತ್ತಿಯ ವರೆಗಿನ ಅವರ ಪೂರ್ಣ ವೇತನ ನೀಡುವುದನ್ನು ಕಂಪನಿ ಮುಂದುವರೆಸಿತು.
ಉದ್ಯಮದ ಪರಿಣತರು ರತನ್ ಟಾಟಾ ಅವರು ಯೋಜನೆ ಜಾರಿಗೆ ತರುವುದನ್ನು ಬಲವಾಗಿ ವಿರೋಧಿಸಿದರು ಮತ್ತು “ನೀವು ಹುಚ್ಚರಾಗಿದ್ದೀರಾ?” ಎಂದು ಪ್ರಶ್ನಿಸಿದ್ದರು. ವಿರೋಧದ ಹೊರತಾಗಿಯೂ, ರತನ್ ಟಾಟಾ ನೇತೃತ್ವದ ಟಾಟಾ ಸಮೂಹವು ಈ ಯೋಜನೆ ಜಾರಿಗೆ ಮುಂದಾಯಿತು. ಹಾಗೂ ಒಮ್ಮೆಲೇ ವಜಾಗೊಳಿಸುವ ಬದಲು ಕಂಪನಿಯು ಉದ್ಯೋಗಿಗಳಿಗೆ ಆರ್ಥಿಕವಾಗಿ ಬೆಂಬಲ ನೀಡಿತು. ನಂತರ ಫಾರ್ಚೂನ್ ನಿಯತಕಾಲಿಕವು ಈ ಯೋಜನೆಯನ್ನು ವಿಶ್ವದ ಟಾಪ್ 10 ಅತ್ಯುತ್ತಮ ಕೈಗಾರಿಕಾ ನಿರ್ಧಾರಗಳಲ್ಲಿ ಒಂದು ಎಂದು ಪಟ್ಟಿ ಮಾಡಿದೆ.
ಟಾಟಾ ಸನ್ಸ್‌ನಲ್ಲಿ ನೇರವಾಗಿ ಶೇ 0.83 ರಷ್ಟು ಪಾಲನ್ನು ಹೊಂದಿದ್ದ ರತನ್ ಟಾಟಾ ಅವರು 1991 ಮತ್ತು 2012 ರ ನಡುವೆ ಹೋಲ್ಡಿಂಗ್ ಕಂಪನಿಯ ಅಧ್ಯಕ್ಷರಾಗಿದ್ದರು.
ಅತ್ಯಂತ ದೊಡ್ಡ ಲೊಕೋಪಕಾರಿ ಉದ್ಯಮಿಯಾಗಿದ್ದ ಅವರು ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪುರಸ್ಕಾರಕ್ಕೆ ಭಜಾನರಾಗಿದ್ದಾರೆ.
ಅಕ್ರೋಬರ್ ೯ರಂದು ಅವರು ನಿಧನರಾದರು. ಅಕ್ಟೋಬರ್ 10 ರಂದು ಮುಂಬೈನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಕ್ರಿಯೆ ನಡೆಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ