ಎಂಆರ್ ಎಫ್ (MRF) ಲಿಮಿಟೆಡ್ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಯ ಷೇರು ಎಂದು ಭಾವಿಸಿದರೆ ಅದು ತಪ್ಪು.ಅಕ್ಟೋಬರ್ 29 ರಂದು ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್ ಹೋಲ್ಡಿಂಗ್ ಕಂಪನಿ ಎಂಆರ್‌ಎಫ್ (MRF) ಅನ್ನು ಹಿಂದಿಕ್ಕಿ ಭಾರತದ ಅತ್ಯಂತ ದುಬಾರಿ ಸ್ಟಾಕ್ ಆಗಿ ಹೊರಹೊಮ್ಮಿದೆ.
ಕೇವಲ 3.50 ರೂ. ಅಗ್ಗದ ದರದಲ್ಲಿ ಸಿಗುತ್ತಿದ್ದ ಎಲ್ಸಿಡ್ ಇನ್ವೆಸ್ಟ್‌ಮೆಂಟ್ಸ್ (Elcid investments) ಒಂದು ಷೇರು, ಇದೀಗ ಮುಂಬಯಿ ಷೇರು ಮಾರುಕಟ್ಟೆಯ ಇತಿಹಾಸದಲ್ಲಿಯೇ ವಿಸ್ಮಯಕಾರಿ ದಾಖಲೆ ಸೃಷ್ಟಿಸಿದೆ. ಎಲ್ಸಿಡ್ ಇನ್ವೆಸ್ಟ್‌ಮೆಂಟ್ಸ್ ಹಣಕಾಸು ವಲಯದ ಹೋಲ್ಡಿಂಗ್ ಕಂಪನಿಯ ಷೇರು ದರ ಅಕ್ಟೋಬರ್ 29ರಂದು ಒಂದೇ ದಿನ 66,92,535% ಏರಿಕೆ ದಾಖಲಿಸಿ ಕೇವಲ 3.53 ರೂ.ನಷ್ಟಿದ್ದ ಅದರ ಷೇರಿನ ದರ ಒಮ್ಮೆಲೇ 2,36,250 ರೂ.ಗಳಿಗೆ ನೆಗೆದಿದೆ…!
ಒಮ್ಮೆಗೇ ಈ ಪರಿ ದಾಖಲೆಯ ಪ್ರಮಾಣದ ಷೇರು ದರದ ಏರಿಕೆಯಿಂದ ಈಗ ಎಲ್ಸಿಡ್ ಇನ್ವೆಸ್ಟ್‌ಮೆಂಟ್ಸ್ ಭಾರತದ ಅತ್ಯಂತ ದುಬಾರಿ ಷೇರು ಎನ್ನಿಸಿದ್ದ ಎಂಆರ್‌ಎಫ್ ಅನ್ನೂ (MRF) ಹಿಂದಿಕ್ಕಿದೆ. ಎಂಆರ್‌ಎಫ್ ಷೇರಿನ ದರ 1,22,576 ರೂ.ನಷ್ಟಿತ್ತು.
ಈ ಸ್ಟಾಕ್‌ನಲ್ಲಿ 1 ಲಕ್ಷ ರೂ ಹೂಡಿಕೆಯು ಕೆಲವು ತಿಂಗಳ ಅವಧಿಯಲ್ಲಿ 670 ಕೋಟಿ ರೂ.ಗಳಷ್ಟು ಆದಾಯ ತರುತ್ತದೆ. ಈ ರೀತಿ ಷೇರು ದರ ಜಿಗಿದಿರುವುದಕ್ಕೆ ಕಾರಣವೂ ಇದೆ. ಬಾಂಬೆ ಸ್ಟಾಕ್ಸ್ ಎಕ್ಸ್‌ಚೇಂಜ್ (BSE) ಹೋಲ್ಡಿಂಗ್ ಕಂಪನಿಗಳ ಷೇರು ದರವನ್ನು ಕಂಡುಕೊಳ್ಳಲು ನಡೆಸಿದ ವಿಶೇಷ ಕಾಲ್ ಆಕ್ಷನ್‌ನಲ್ಲಿ (Special call aution) ಎಲ್ಸಿಡ್ ಷೇರಿನ ದರ 2.25 ಲಕ್ಷ ರೂ.ಗಳಿಗೆ ಏರಿಕೆಯಾಯಿತು. ಕಂಪನಿಯ ಬುಕ್ ವಾಲ್ಯೂ 5,85,225 ರೂ.ಗೆ ಏರಿಕೆಯಾಗಿದೆ.
ಮಾರುಕಟ್ಟೆ ನಿಯಂತ್ರಕ ಸೆಬಿಯು ಲಿಸ್ಟಡ್ ಇನ್ವೆಸ್ಟ್‌ಮೆಂಟ್ ಕಂಪನಿಗಳು ಮತ್ತು ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್ ಕಂಪನಿಗಳ ಷೇರು ದರವನ್ನು ನಿರ್ಧರಿಸಲು ಸಹಕಾರಿಯಾಗುವಂತೆ ಈ ವಿಶೇಷ ಟ್ರೇಡಿಂಗ್ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಈ ಅವಧಿಯಲ್ಲಿ ಷೇರಿಗೆ ಯಾವುದೇ ದರ ಶ್ರೇಣಿಯನ್ನು ನಿಗದಿಪಡಿಸಿರುವುದಿಲ್ಲ. ಇಂಥ ವಿಶೇಷ ಕಾಲ್ ಆಕ್ಷನ್ ಬಗ್ಗೆ ಸ್ಟಾಕ್ ಎಕ್ಸ್‌ಚೇಂಜ್‌ಗಳು ಮಾರುಕಟ್ಟೆಗೆ 14 ದಿನ ಮುಂಚಿತವಾಗಿ ಮಾಹಿತಿ ನೀಡಬೇಕಾಗುತ್ತದೆ. ಮುಖ್ಯವಾಗಿ ಹೋಲ್ಡಿಂಗ್ ಕಂಪನಿಗಳ ಷೇರುಗಳನ್ನು ನಿಗದಿಪಡಿಸಲು ಇಂಥ ವಿಶೇಷ ಟ್ರೇಡಿಂಗ್ ವ್ಯವಸ್ಥೆ ಅನುಕೂಲವಾಗುತ್ತದೆ. ಭಾರತದ ಷೇರು ಮಾರುಕಟ್ಟೆಯಲ್ಲಿ 70ಕ್ಕೂ ಹೆಚ್ಚು ಹೋಲ್ಡಿಂಗ್ ಕಂಪನಿಗಳಿವೆ. ಹೋಲ್ಡಿಂಗ್ ಕಂಪನಿ ಎಂದರೆ ಇತರ ಕಂಪನಿಗಳ ನಿಯಂತ್ರಣಾತ್ಮಕ ಷೇರುಗಳನ್ನು ಹೊಂದಿರುವ ಹಿಡುವಳಿ ಸಂಸ್ಥೆಯಾಗಿದೆ. ಈ ಸಂಸ್ಥೆಗಳು ತಾವಾಗಿಯೇ ಸರಕುಗಳು ಅಥವಾ ಸೇವೆಗಳನ್ನು ಮಾರಾಟ ಮಾಡುವುದಿಲ್ಲ.
ಎಲ್ಸಿಡ್ ಇನ್ವೆಸ್ಟ್‌ಮೆಂಟ್ಸ್ ತನ್ನ ಷೇರುದಾರರಿಗೆ 2023-4ರಲ್ಲಿ ಪ್ರತಿ ಷೇರಿಗೆ 25 ರೂ. ಡಿವಿಡೆಂಡ್ ಅನ್ನು ಘೋಷಿಸಿತ್ತು. ದಲಾಲ್ ಸ್ಟ್ರೀಟ್‌ನಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಎಲ್ಸಿಡ್ ಷೇರು ಈಗ ಸಂಚಲನ ಸೃಷ್ಟಿಸಿದೆ. ಇದರ ಮಾರುಕಟ್ಟೆ ಮೌಲ್ಯ 4,725 ಕೋಟಿ ರೂ. ಇದುವರೆಗೆ ಎಂಆರ್‌ಎಫ್ ಷೇರು ಮಾತ್ರ ಲಕ್ಷ ರೂ. ದಾಟಿದ ಷೇರು ಎಂಬ ಹೆಗ್ಗಳಿಕೆ ಪಡೆದಿತ್ತು. ಇದೀಗ ಎಲ್ಸಿಡ್ ಅದರ ಎರಡು ಪಟ್ಟು ಷೇರು ಬೆಲೆ ದಾಖಲಿಸಿ ಅಗ್ರ ಸ್ಥಾನಕ್ಕೇರಿದೆ.
ಎಲ್ಸಿಡ್ ಕಂಪನಿಯು ಏಷ್ಯನ್ ಪೇಂಟ್ಸ್‌ನಲ್ಲಿ 2.9% ಷೇರುಗಳನ್ನು ಒಳಗೊಂಡಿದೆ. ಇದರ ಮೌಲ್ಯ 8,500 ಕೋಟಿ ರೂ. ಕಂಪನಿಯ ಮೌಲ್ಯ ಏರಿಕೆಗೆ ಒಂದು ಕಾರಣ ಎನ್ನಲಾಗಿದೆ. ಎಲ್ಸಿಡ್ ಕಂಪನಿಯಲ್ಲಿ ಪ್ರವರ್ತಕರು 75% ಷೇರುಗಳನ್ನು ಹೊಂದಿದ್ದರೆ, ರಿಟೇಲ್ ಹೂಡಿಕೆದಾರರು 25% ಷೇರುಗಳನ್ನು ಹೊಂದಿದ್ದಾರೆ
ನಿಮ್ಮ ಕಾಮೆಂಟ್ ಬರೆಯಿರಿ