ಪಾಕಿಸ್ತಾನದಲ್ಲಿ ಹತ್ಯಾಕಾಂಡ | ಬಂದೂಕುಧಾರಿಗಳಿಂದ ಪ್ರಯಾಣಿಕರ ವಾಹನದ ಮೇಲೆ ಗುಂಡಿನ ದಾಳಿ ; ಕನಿಷ್ಠ 50 ಮಂದಿ ಸಾವು

ಕುರ್ರಂ (ಪಾಕಿಸ್ತಾನ) : ವಾಯವ್ಯ ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ವಾಹನಗಳ ಮೇಲೆ ಬಂದೂಕುಧಾರಿಗಳು ಗುರುವಾರ ಯದ್ವಾತದ್ವಾ ಗುಂಡು ಹಾರಿಸಿದ್ದರಿಂದ ಕನಿಷ್ಠ 50 ಜನರು ಸಾವಿಗೀಡಾಗಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಡೆದ ಅತ್ಯಂತ ಮಾರಣಾಂತಿಕ ದಾಳಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಸುನ್ನಿ ಮತ್ತು ಶಿಯಾ ಮುಸ್ಲಿಮರ ನಡುವೆ ಮಾರಣಾಂತಿಕ ಪಂಥೀಯ ಘರ್ಷಣೆಗೆ ಸಾಕ್ಷಿಯಾಗಿರುವ ಅಫ್ಘಾನಿಸ್ತಾನದ ಗಡಿಯಲ್ಲಿರುವ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಂ ಜಿಲ್ಲೆಯಲ್ಲಿ ಉಗ್ರರು ವಾಹನಗಳ ಮೇಲೆ ಹೊಂಚು ದಾಳಿ ನಡೆಸಿ ವಾಹನದಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾರೆ. ಇದುವರೆಗೂ ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಈ ವಾಹನಗಳು ಪರಾಚಿನಾರ್‌ನಿಂದ ಖೈಬರ್ ಪಖ್ತುಂಖ್ವಾದ ರಾಜಧಾನಿ ಪೇಶಾವರಕ್ಕೆ ಬೆಂಗಾವಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಎಂಟು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ 50 ಜನರು ಸಾವಿಗೀಡಾಗಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಹೆಚ್ಚಿನವರು ಶಿಯಾ ಸಮುದಾಯಕ್ಕೆ ಸೇರಿದವರು ಎಂದು ಅವರು ಹೇಳಿದರು.
ಬೆಂಗಾವಲಿನಲ್ಲಿ 200ಕ್ಕೂ ಹೆಚ್ಚು ವಾಹನಗಳಿದ್ದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಮುಖ ಸುದ್ದಿ :-   ಟೆಕ್‌ ದೈತ್ಯ ಮೈಕ್ರೋಸಾಫ್ಟ್‌ ನಿಂದ 6,000 ಉದ್ಯೋಗಿಗಳ ವಜಾ : ಎಐ (AI) ನಿರ್ದೇಶಕರಿಗೂ ಉದ್ಯೋಗ ನಷ್ಟ

ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಖಾನ್ ಗಂದಾಪುರ ದಾಳಿಯನ್ನು ಖಂಡಿಸಿದರು ಮತ್ತು ಪ್ರಾಂತೀಯ ಕಾನೂನು ಸಚಿವರು, ಪ್ರಾದೇಶಿಕ ಶಾಸಕರು ಮತ್ತು ಮುಖ್ಯ ಕಾರ್ಯದರ್ಶಿ ಸೇರಿದಂತೆ ನಿಯೋಗವು ಪರಿಸ್ಥಿತಿಯನ್ನು ನಿರ್ಣಯಿಸಲು ತಕ್ಷಣವೇ ಕುರ್ರಂಗೆ ಭೇಟಿ ನೀಡುವಂತೆ ಆದೇಶಿಸಿದರು. ಪ್ರಾಂತ್ಯದ ಎಲ್ಲಾ ರಸ್ತೆಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಾಂತೀಯ ಹೆದ್ದಾರಿ ಪೊಲೀಸ್ ಘಟಕವನ್ನು ಸ್ಥಾಪಿಸಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗಂದಾಪುರ ಅವರು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿದರು. “ಮುಗ್ಧ ನಾಗರಿಕರನ್ನು ಗುರಿಯಾಗಿಸುವುದು ಅತ್ಯಂತ ದುರಂತ ಮತ್ತು ಖಂಡನೀಯ. ಈ ಘಟನೆಯಲ್ಲಿ ಭಾಗಿಯಾದವರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement